1,494 ಕೋಟಿ ದುರುಪಯೋಗ ಆರೋಪ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಸಿಎಂ ವಜಾಕ್ಕೆ ಆಗ್ರಹಿಸಿ ದೂರು

ಬೆಂಗಳೂರು ; ಸಂಚಿತ ನಿಧಿಯಿಂದ ಹೊರಗಿರಿಸಿ 1,494 ಕೋಟಿ ರು ವ್ಯವಹಾರ ಮಾಡಲಾಗಿದೆ ಎಂದು ‘ದಿ ಫೈಲ್‌’ ದಾಖಲೆ ಸಹಿತ ವರದಿ ಮಾಡಿದ್ದರ ಬೆನ್ನಲ್ಲೇ ಇದೀಗ ಈ ಪ್ರಕರಣವನ್ನು ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ರಾಜಭವನ ಅಂಗಳಕ್ಕೆ ಕೊಂಡೊಯ್ದಿದ್ದಾರೆ.

 

ರಾಜ್ಯದ ಕ್ರೋಢೀಕೃತ ನಿಧಿಯ ಆರ್ಥಿಕ ಅಸಮರ್ಪಕ,  ದುರುಪಯೋಗ ಮತ್ತು ಸಾಂವಿಧಾನಿಕ ಬಾಧ್ಯತೆ ಉಲ್ಲಂಘನೆ ಬಗ್ಗೆ ತನಿಖೆ ನಡೆಸಬೇಕು. ಅಸಾಂವಿಧಾನಿಕ ಹಣಕಾಸು ವಹಿವಾಟು ನಡೆಸಿರುವ ಕಾರಣ  ತಕ್ಷಣವೇ ಸಿದ್ದರಾಮಯ್ಯ ಅವರನ್ನು ರಾಜ್ಯದ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅರುಣ್‌ ಅವರು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.

 

ಈ ಕುರಿತು ವಿಧಾನಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

 

 

ಈ ದೂರಿನಲ್ಲಿ ‘ದಿ ಫೈಲ್‌’ ಪ್ರಕಟಿಸಿದ್ದ ವರದಿ ಮತ್ತು ದಾಖಲೆಗಳ ಕುರಿತು ಪ್ರಸ್ತಾಪಿಸಿದ್ದಾರೆ.

 

ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವ ಬೆನ್ನಲ್ಲೇ ಇದೀಗ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಲ್ಲಿ ಬಾಕಿ ಉಳಿದಿರುವ 1,494 ಕೋಟಿ ರೂ.ಹಣ ದುರ್ಬಳಕೆ ಸಂಬಂಧ ರಾಜ್ಯಪಾಲರಿಗೆ ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ನೀಡಿರುವ ದೂರು ಮಹತ್ವ ಪಡೆದುಕೊಂಡಿದೆ.

 

‘ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ 1,494 ಕೋಟಿ ರೂ.ಹಣ ಎಲ್ಲಿದೆ. ರಾಜ್ಯ ಸರಕಾರದ ಖಜಾನೆಯಲ್ಲೂ ಇಲ್ಲ. ಸರಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು’ ಎಂದೂ ಆಗ್ರಹಿಸಿರುವುದು ಗೊತ್ತಾಗಿದೆ.

 

ಅಲ್ಲದೇ ‘ 2022-23ರ ಅವಧಿಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್‍ಗಳಲ್ಲಿ ಎಷ್ಟು ಹಣ ಬಳಕೆ ಆಗಿದೆ. ಉಳಿದ ಮೊತ್ತ ಯಾವುದಕ್ಕೆ ಉಪಯೋಗ ಮಾಡಿದೆ ಎಂದು ನಾನು ಪ್ರಶ್ನೆ ಮಾಡಿದ್ದೇನೆ. ಸರಕಾರ ಬಿಡುಗಡೆ ಮಾಡಿದ್ದ ಹಣವನ್ನು ಬಳಕೆ ಮಾಡದೆ ಉಳಿದರೆ ಆ ಹಣ ಸಂಚಿತ ನಿಧಿಗೆ ಹೋಗಬೇಕು. ಹೀಗೆ ಬಿಡುಗಡೆ ಮಾಡಿದ ಹಣ ಬಳಕೆ ಮಾಡಬೇಕಾದರೆ ಶಾಸಕರ ಒಪ್ಪಿಗೆಯನ್ನು ಪಡೆಯಬೇಕು. ಆದರೆ, ಮೇಲ್ಕಂಡ ಹಣ ಬಳಕೆಯ ಬಗ್ಗೆ ಹಾಗೂ ಎಲ್ಲಿದೆ ಎಂಬ ಮಾಹಿತಿ ಇಲ್ಲ,’ ಎಂದು ಡಿ ಎಸ್‌ ಅರುಣ್‌ ಅವರು ದೂರಿದ್ದಾರೆ.

ರಾಜ್ಯ ಖಜಾನೆಗೆ ಸ್ವೀಕೃತವಾಗದ 1,494 ಕೋಟಿ; ಸಂಚಿತ ನಿಧಿಯಿಂದ ಹೊರಗಿರಿಸಿ ವ್ಯವಹರಿಸಿದೆಯೇ ಸರ್ಕಾರ?

ಕರ್ನಾಟಕ ಸರ್ಕಾರವು ಭಾರತ ಸಂವಿಧಾನದ 202, 205 ಮತ್ತು 206ನೇ ವಿಧಿಗಳ ಅಡಿಯಲ್ಲಿ ಉಪಬಂಧಗಳನ್ನು ಉಲ್ಲಂಘಿಸಿದೆ. ಅಲ್ಲದೇ ಸಿದ್ದರಾಮಯ್ಯ ಅವರು ಸಂವಿಧಾನದ 164ನೇ ವಿಧಿ ವಿಶೇಷವಾಗಿ 164 (3) ವಿಧಿ ಅಡಿಯಲ್ಲಿ ಒಳಗೊಂಡಿರುವ ಉಪಬಂಧಗಳನ್ನೂ ಉಲ್ಲಂಘಿಸಿದ್ದಾರೆ. ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಸಂಚಿತ ನಿಧಿಯಿಂದ ಹೊರಗಿರಿಸಿ 1,494 ಕೋಟಿ ವ್ಯವಹಾರ!; ಸ್ಪಷ್ಟ ಉತ್ತರ ನೀಡದೇ ಸರ್ಕಾರದ ಕಳ್ಳಾಟ

ಅಲ್ಲದೇ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಖರ್ಚಾಗದೇ ಉಳಿಕೆ ಇರುವ ಮೊತ್ತ ಅನುದಾನದ ಕುರಿತು ವಿಧಾನ ಪರಿಷತ್‌ನಲ್ಲಿ ಸುಳ್ಳು ಉತ್ತರ ನೀಡಿದ್ದಾರೆ. ಅಲ್ಲದೇ 2023ರ ಡಿಸೆಂಬರ್ 8ರಂದು ನೀಡಿದ್ದ ಲಿಖಿತ ಉತ್ತರದಲ್ಲಿ ಕಾನೂನುಬಾಹಿರವಾದ ಕ್ರಮದ ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನೂ ನೀಡಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಸಂಚಿತ ನಿಧಿಯಿಂದ 1,494 ಕೋಟಿ ರು ಹೊರಗಿರಿಸಿ ವ್ಯವಹಾರ?; 30 ದಿನಗಳಾದರೂ ಉತ್ತರವಿಲ್ಲ

ಅಲ್ಲದೇ ಕರ್ನಾಟಕ ಖಜಾನೆ ಇಲಾಖೆಯು 1,494 ಕೋಟಿ ರು.ಗಳನ್ನು ಸ್ವೀಕರಿಸಿಲ್ಲ ಎಂದು 2024ರ ಏಪ್ರಿಲ್‌ 20ರಂದೇ ಉತ್ತರಿಸಿತ್ತು. ಈ ಮೂಲಕ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ವಸ್ತುನಿಷ್ಟವಾಗಿ ಸುಳ್ಳು ಅಥವಾ ತಪ್ಪು ದಾರಿಗೆಳೆಯುವ ಹೇಳಿಕೆಗಳನ್ನು ನೀಡಿದ್ದಾರೆ. ಈ ಮೂಲಕ ವಿಧಾನ ಪರಿಷತ್‌ ಮುಂದೆ ಸತ್ಯವನ್ನು ಮರೆಮಾಚಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

1,494 ಕೋಟಿ ರು ಜಮೆ; ಸಿಎಂ ಸಹಿಯೊಂದಿಗೆ ಉತ್ತರಿಸಿದ್ದ ಕಡತ ತೆರೆದಿಲ್ಲವೆಂದು ಸುಳ್ಳು ಹೇಳಿದ ಸರ್ಕಾರ

ರಾಜ್ಯದ ನಿಧಿಯ ಅಕ್ರಮ ವರ್ಗಾವಣೆ ಮತ್ತು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿರುವುದನ್ನು ಸಿದ್ದರಾಮಯ್ಯ ಅವರೇ ತಪ್ಪೊಪ್ಪಿಕೊಂಡಿದ್ದಾರೆ. ಈ ಪ್ರಕರಣವನ್ನು ಸರ್ವೋಚ್ಛ ನ್ಯಾಯಾಲಯ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಗಂಭೀರವಾದ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೋರಿರುವುದು ಗೊತ್ತಾಗಿದೆ.

 

‘ಈಗ ನಮ್ಮ ರಾಜ್ಯದಲ್ಲಿ ಕರ್ನಾಟಕ ಸರ್ಕಾರವನ್ನು ನಮ್ಮ ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲಾಗದ ಪರಿಸ್ಥಿತಿ ಉದ್ಭವಿಸಿದೆ. ರಾಜ್ಯದ ಕ್ರೋಢೀಕೃತ ನಿಧಿಯ ದುರುಪಯೋಗವು ನಮ್ಮ ರಾಜ್ಯದಲ್ಲಿ ಸಾಂವಿಧಾನಿಕ ವೈಫಲ್ಯಕ್ಕೆ ಕಾರಣವಾಗಿದೆ,’ ಎಂದು ಹೇಳಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts