ಬೆಂಗಳೂರು: 2006ರಿಂದ 2010ರವರೆಗೆ ರಾಜ್ಯದ ರೈಲ್ವೇ ಸೈಡಿಂಗ್‌ಗಳಿಂದ ಅಕ್ರಮವಾಗಿ 35 ಕೋಟಿ ಟನ್ ಅದಿರು ಸಾಗಾಣಿಕೆಯಾಗಿತ್ತು. ಈ ತನಿಖೆಯ ಆಯಾಮಗಳು ಇಡೀ ರಾಷ್ಟ್ರಾದಾದ್ಯಂತ ವ್ಯಾಪಿಸಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಘಟನೆಗಳು ಇಂತಹ ಅಕ್ರಮದಲ್ಲಿ ಪಾಲ್ಗೊಂಡಿವೆ. ವ್ಯಾಪಕ ಸಂಘಟಿತ ಅಪರಾಧ ಇದರಲ್ಲಿ ಸೇರ್ಪಡೆಗೊಂಡಿದ್ದರಿಂದ ಈ ಪ್ರಕರಣಗಳನ್ನು ವಿಸ್ತೃತವಾಗಿ ತನಿಖೆ ನಡೆಸಬೇಕು ಎಂದು ಹೆಚ್ ಕೆ ಪಾಟೀಲ್ ಅವರು ಕೊಟ್ಟಿದ್ದ ಮಹತ್ವದ ವರದಿಯತ್ತ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯುದ್ದಕ್ಕೂ ಕಣ್ಣೆತ್ತಿಯೂ ನೋಡಿರಲಿಲ್ಲ!
ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿದ್ದ ಅಕ್ರಮ ಗಣಿಗಾರಿಕೆ ಕುರಿತಾದ ವರದಿಯನ್ನೇ ಮುಂದಿರಿಸಿಕೊಂಡು ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡಿದ್ದರು. ನಂತರ 2013ರಲ್ಲಿ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಹಿಡಿದರು.
2013ರಿಂದ 2018ರವರೆಗಿನ 5 ವರ್ಷದ ಅಧಿಕಾರವಾಧಿಯಲ್ಲಿ ಎಸ್‌ಐಟಿ ರಚನೆ ಮತ್ತು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿದ್ದನ್ನು ಹೊರತುಪಡಿಸಿದರೇ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ ಎಂದು ಸಾಬೀತಾಗಿರುವ ಪ್ರಕರಣಗಳಲ್ಲಿ ಯಾರೊಬ್ಬರನ್ನೂ ಜೈಲಿಗೆ ಅಟ್ಟಲಿಲ್ಲ. ಪೂರ್ಣ ಪ್ರಮಾಣದಲ್ಲಿ ನಷ್ಟವನ್ನು ವಸೂಲಿ ಮಾಡಲಿಲ್ಲ.
ನಷ್ಟ ವಸೂಲಾಗದಂತೆ ಆರೋಪಿತ ಕಂಪನಿಗಳು, ಉದ್ಯಮಿಗಳು ನ್ಯಾಯಾಲಯಗಳಲ್ಲಿ ತಂದಿದ್ದ ತಡೆಯಾಜ್ಞೆಗಳನ್ನೂ ತೆರವುಗೊಳಿಸಲಿಲ್ಲ. ಲೋಕಾಯುಕ್ತ ವಿಶೇಷ ತನಿಖಾ ತಂಡದ ಕಾರ್ಯಾಚರಣೆಯೂ ಚುರುಕುಗೊಳಿಸಲಿಲ್ಲ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ಪಿ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿಯೂ ವಿಶೇಷ ತನಿಖಾ ತಂಡವೂ ಸಹ ಚುರುಕಿನಿಂದ ಕಾರ್ಯನಿರ್ವಹಿಸಲಿಲ್ಲ.
ಹೀಗಾಗಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಕುರಿತಾದ ಪ್ರಕರಣಗಳ ಪೈಕಿ ತಾರ್ಕಿಕ ಅಂತ್ಯ ಕಂಡಿದ್ದು ಕಡಿಮೆ.
ಅಕ್ರಮ ಗಣಿಗಾರಿಕೆ ಕುರಿತಾದ ಪ್ರಕರಣವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧದ ವಿಚಾರಣೆಗೆ ಲೋಕಾಯುಕ್ತ ವಿಶೇಷ ತನಿಖಾ ತಂಡವು ಎರಡೆರಡು ಬಾರಿ ಪತ್ರ ಬರೆದಿದೆ ಎಂದು ಹೇಳಲಾಗಿದ್ದರೂ ಸಹ ರಾಜ್ಯಪಾಲರು ಈ ಕುರಿತು ಕಣ್ಣೆತ್ತಿಯೂ ನೋಡಿಲ್ಲ ಎಂಬ ಆರೋಪಗಳಿವೆ. ಇದನ್ನೇ ಮುಂದಿರಿಸಿಕೊಂಡು ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಎಲ್ಲಾ ಸಚಿವರೂ ರಾಜ್ಯಪಾಲರತ್ತ ಕಿಡಿ ಕಾರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಹೆಚ್ ಕೆ ಪಾಟೀಲ್ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಸಚಿವ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಚಿವ ಸಂಪುಟ ಉಪ ಸಮಿತಿಯು 2013ರ ಡಿಸೆಂಬರ್ 20ರಿಂದ 2017ರ ನವೆಂಬರ್ 14ವರೆಗೆ 11 ಸಭೆಗಳನ್ನು ನಡೆಸಿದೆ. ಸಚಿವ ಸಂಪುಟ ಉಪ ಸಮಿತಿಯು ನಡೆಸಿದ್ದ 11 ಸಭೆಗಳ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಈ 11 ಸಭೆಗಳಲ್ಲಿ ತುಂಬಾ ಮುಖ್ಯವಾಗಿ 2015ರ ಅಕ್ಟೋಬರ್ 16ರಂದು ನಡೆದಿದ್ದ ಸಭೆಯಲ್ಲಿ ಆಘಾತಕಾರಿ ಅಂಶಗಳ ಕುರಿತು ಚರ್ಚೆಯಾಗಿವೆ.
ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ವರದಿಯು ಅಂದಾಜಿಸಿದ್ದ ನಷ್ಟದ ಮೊತ್ತವನ್ನೂ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಯ ವರದಿಯು ಊಹೆಗೂ ಮೀರಿ ಲೆಕ್ಕಚಾರ ಮಾಡಿದೆ.
ಕಬ್ಬಿಣ ಅದಿರು ಅಕ್ರಮ ಸಾಗಾಣಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟದ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ವರದಿಯಲ್ಲಿ ನೀಡಿದ್ದ ಅಂದಾಜು ಮೊತ್ತಕ್ಕೂ ರೈಲ್ವೆ ಇಲಾಖೆ ದಾಖಲೆಗಳಿಂದ ಅಂದಾಜಿಸಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಇರುವ ಹೊಸ ಅಂಶವನ್ನು ಸಂಪುಟ ಉಪ ಸಮಿತಿಯು ಹೊರಗೆಡವಿತ್ತು.
ಲೋಕಾಯುಕ್ತರು ಮಾಡಿದ್ದ ಎಲ್ಲಾ ಅಂದಾಜುಗಳನ್ನು ಪರಿಶೀಲಿಸಿದ್ದರಲ್ಲದೆ ಅವುಗಳನ್ನು ಒರೆಗೆ ಹಚ್ಚಿದ್ದರು. ಇದರ ನಡುವೆಯೇ ರೈಲ್ವೆ ಇಲಾಖೆ ದಾಖಲೆಗಳನ್ನಿಟ್ಟುಕೊಂಡು ಮಾಡಿದ್ದ ಹೊಸ ಲೆಕ್ಕಾಚಾರಗಳನ್ನು ಕಂಡು ಸ್ವತಃ ಎಚ್ ಕೆ ಪಾಟೀಲ್ ಅವರು ಆಘಾತ ವ್ಯಕ್ತಪಡಿಸಿದ್ದರು ಎಂಬುದು ಸಭೆಗಳ ನಡವಳಿಯಿಂದ ಗೊತ್ತಾಗಿದೆ.
2015ರ ಅಕ್ಟೋಬರ್ 16ರಂದು ನಡೆದಿದ್ದ ಸಭೆಯಲ್ಲಿ ಹೊರಬಿದ್ದಿದ್ದ ದಾಖಲೆಗಳು ಲೋಕಾಯುಕ್ತರು ಮಾಡಿದ್ದ ನಷ್ಟದ ಅಂದಾಜನ್ನು ಹಲವು ಪಟ್ಟು ವಿಸ್ತರಿಸಿದೆ. 2006ರಿಂದ 2010ರ ಅವಧಿಯಲ್ಲಿ ಕರ್ನಾಟಕದ 10, ಗೋವಾ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ 2.98 ಕೋಟಿ ಟನ್ ಅದಿರು ರಫ್ತಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 12,228 ಕೋಟಿ ರೂ.ನಷ್ಟವಾಗಿದೆ (ಟನ್ಗೆ 4,103 ರೂ.ಲೆಕ್ಕಚಾರದಲ್ಲಿ) ಎಂದು ಸುಂಕ ಇಲಾಖೆ ನೀಡಿದ್ದ ಅಂಕಿ ಸಂಖ್ಯೆ ಆಧರಿಸಿ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಈ ಮೊತ್ತವನ್ನು ಅಂದಾಜಿಸಿದ್ದರು. ಇದು ಸುಂಕ ಇಲಾಖೆ ನೀಡಿದ್ದ ಅಂಕಿ ಅಂಶಗಳ ಆಧರಿಸಿದ ಲೆಕ್ಕಾಚಾರಕ್ಕಷ್ಟೇ ಸೀಮಿತವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಬಳ್ಳಾರಿಯಿಂದ ಹೊರಗಡೆ 6 ರೈಲ್ವೆ ನಿಲ್ದಾಣಗಳಿಂದ ಮತ್ತು 14 ರೈಲ್ವೆ ಸೈಡಿಂಗ್‌ಗಳಿಂದ 2006ರಿಂದ 2010ರವರೆಗೆ ಒಟ್ಟು 20 ಕೋಟಿ ಟನ್ ಅಕ್ರಮ ಅದಿರು ರಫ್ತಾಗಿದೆ. ರೈಲ್ವೆ ಹಾಗೂ ಇತರೆ ಮೂಲಗಳ ಮೂಲಕ ಸಾಗಣೆ ಮಾಡಿರುವ ಒಟ್ಟು 35 ಕೋಟಿ ಟನ್ ಅಕ್ರಮ ಅದಿರು ರಫ್ತಾಗಿದೆ. 2009ರ ಸೆಪ್ಟಂಬರ್ನಿಂದ ಜೂನ್ 2010ರವರೆಗೆ ಕೇವಲ 9 ತಿಂಗಳ ಅವಧಿಯಲ್ಲಿ 14 ಕೋಟಿ ಟನ್ ಕಬ್ಬಿಣದ ಅದಿರು ಪ್ರತಿನಿತ್ಯ 20 ಸಾವಿರ ಟ್ರಕ್‌ಗಳ ಮೂಲಕ ಸಾಗಣೆಯಾಗಿದೆ ಎಂದು ರೈಲ್ವೆ ಇಲಾಖೆ ನೀಡಿದ್ದ ದಾಖಲೆಗಳು ಬಹಿರಂಗಪಡಿಸಿದ್ದವು. ಇವೆಲ್ಲವೂ ಕರ್ನಾಟಕಕ್ಕೆ ಆಘಾತಕಾರಿ ಘಟನೆಗಳು ಎಂದು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸಭೆಯಲ್ಲಿ ವಿವರಿಸಿದ್ದರು ಎಂಬುದು ನಡವಳಿಯಿಂದ ತಿಳಿದು ಬಂದಿದೆ.
ಆದರೆ ರೈಲ್ವೆ ಇಲಾಖೆ ದಾಖಲೆಗಳನ್ನು ಪಡೆದು ಚರ್ಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯು 2006ರಿಂದ 2010ರ ಅವಧಿಯಲ್ಲಿ ಒಟ್ಟು 35 ಕೋಟಿ ಟನ್ ಅಕ್ರಮವಾಗಿ ಅದಿರು ಸಾಗಣೆಯಾಗಿದೆ ಎಂದು ಹೇಳಿತ್ತು. ಆದರೆ ನಷ್ಟದ ಮೊತ್ತವನ್ನು ಉಪ ಸಮಿತಿ ಅಂದಾಜಿಸಿರಲಿಲ್ಲ. ಲೋಕಾಯುಕ್ತರು ಮಾಡಿದ್ದ ಸರಾಸರಿ ಅಂದಾಜು 4,103 ರೂ.ಗಳನ್ನು 35 ಕೋಟಿ ಟನ್ಗೆ ಅನ್ವಯಿಸಿ ಅಂದಾಜಿಸಿದಲ್ಲಿ ನಷ್ಟದ ಮೊತ್ತ 1 ಲಕ್ಷ 43 ಸಾವಿರ ಕೋಟಿ ರೂಪಾಯಿ ಆಗಲಿದೆ.
‘ರೈಲ್ವೆಯ ವ್ಯಾಗನ್ಗಳು ಮತ್ತು ಟ್ರಕ್‌ಗಳ ಮೂಲಕ ರಾಜಕಾರಣಿಗಳು ತೋಳ್ಬಲದ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಣೆ ಆಗಿದೆ. ಸುಪ್ರೀಂ ಕೋರ್ಟ್ ನೇರ ಉಸ್ತುವಾರಿಯಲ್ಲಿ ಈ ಪ್ರಕರಣದ ಮೇಲ್ವಿಚಾರಣೆ ಆಗುತ್ತಿದೆ. ಸಾರ್ವಜನಿಕ ಆಸ್ತಿ ರಕ್ಷಣೆಯಂತಹ ಕ್ರಮಗಳಿಗೆ ಅಧಿಕಾರಿಗಳು ಮುಂದಾಗದಿರುವುದು ಆತಂಕ ಸೃಷ್ಟಿಸುತ್ತಿದೆ,’ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ಹೇಳಿದ್ದರು. ಆದರೆ ಇವರ ಮಾತನ್ನು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಭಾರತ್ ಮೈನ್ಸ್ ಎಂಬ ಕಂಪನಿಯನ್ನು ಉದಾಹರಿಸಿರುವ ಎಚ್.ಕೆ.ಪಾಟೀಲ್ ಅವರು, 2009ರಿಂದ 2010ರ ಅವಧಿಯಲ್ಲಿ 2,11,422 ಮೆ.ಟನ್ ಅದಿರು ರಫ್ತು ಮಾಡಿತ್ತು. ಈ ಪ್ರಕರಣದಲ್ಲಿ ಅದಿರಿನ ರಫ್ತು ಪ್ರಮಾಣ ತಿಳಿದಿರುವ ಕಾರಣ ಇಂತಹ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಇದರ ಅಧಾರದ ಮೇಲೆ ವಸೂಲಾತಿಗೆ ಕ್ರಮ ಕೈಗೊಂಡಿರಲಿಲ್ಲ.
‘ರೈಲ್ವೆಯ ವ್ಯಾಗನ್‌ಗಳ ಮೂಲಕ ಮತ್ತು ಟ್ರಕ್‌ಗಳ ಮೂಲಕ ಅಧಿಕಾರಸ್ತ ರಾಜಕಾರಿಣಿಗಳ ತೋಳ್ಬಲದ ಹಿನ್ನೆಲೆಯಲ್ಲಿ ಸಾಗಣೆಯಾಗಿದೆ ಎಂಬ ವಿಷಯವು ಬಹಿರಂಗಕ್ಕೆ ಬಂದಿದ್ದರಿಮದ ಮತ್ತು ಡಜನ್‌ಗಟ್ಟಲೇ ಪ್ರಮುಖ ರಾಜಕಾರಣಿಗಳು, ಶಾಸಕರು ಮತ್ತು ಸಚಿವರು ಬಂಧನಕ್ಕೊಳಗಾಗಿ ಸರ್ವೋಚ್ಛ ನ್ಯಾಯಾಲಯವೇ ನೇರ ಉಸ್ತುವಾರಿಯಲ್ಲಿ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿರುವಾಗ ಸಾರ್ವಜನಿಕ ಆಸ್ತಿಯ ರಕ್ಷಣೆಯಂತಹ ಕ್ರಮಗಳಿಗೆ ಮುಂದಾಗದ ವಿಷಯವು ಆತಂಕ ಸೃಷ್ಟಿಸುತ್ತಿದೆ,’ ಎಂದು ಹೇಳಿದ್ದರು.
ರಾಷ್ಟ್ರದ ಸಂಪತ್ತು ಕೆಲವು ಬಲಾಢ್ಯ ವ್ಯಕ್ತಿಗಳ ಪಾಲಾಗಿದ್ದು, ಈ ನಷ್ಟವನ್ನು ವಸೂಲು ಮಾಡಲು ಹಾಗೂ ಸ್ಥಿರಾಸ್ತಿ-ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ಹಣದಿಂದ ಗಳಿಸಿದ ಅಕ್ರಮ ಆಸ್ತಿಯನ್ನು ಮನಿ ಲ್ಯಾಂಡ್ರಿಂಗ್ ಕಾಯ್ದೆ ಅಥವಾ ಸೂಕ್ತ ಕಾಯ್ದೆ ಅಡಿಯಲ್ಲಿ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಚ್.ಕೆ.ಪಾಟೀಲ್ ಅವರು ಹೇಳಿದ್ದ ಮಾತುಗಳನ್ನು ಸಿದ್ದರಾಮಯ್ಯ ಅವರು ಕಿವಿ ಮೇಲೆ ಹಾಕಿಕೊಂಡಿರಲಿಲ್ಲ ಎಂದು ಗೊತ್ತಾಗಿದೆ.
ಲೋಕಾಯುಕ್ತ ಸಂಸ್ಥೆ ಮಾಡಿದ್ದ ಎಲ್ಲಾ ಅಂದಾಜುಗಳನ್ನು ಪರಿಗಣಿಸಲಾಗದು ಎಂದು ಸಂಸದೀಯ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನೀಡಿದ್ದ ಅಭಿಪ್ರಾಯಕ್ಕೆ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಉಪ ಕಾರ್ಯದರ್ಶಿ, ಇದೇ ಸಭೆಯಲ್ಲಿ ಆಕ್ಷೇಪ ಎತ್ತಿದ್ದರು.
ಲೋಕಾಯುಕ್ತ ಸಂಸ್ಥೆ ಅಂದಾಜಿಸಿರುವ ನಷ್ಟದ ಮೊತ್ತ ಆಧರಿಸಿ ಸಿಇಸಿ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿದೆ. ಹೀಗಾಗಿ ಮತ್ತೊಮ್ಮೆ ನಷ್ಟ ಅಂದಾಜಿಸಬಹುದೇ ಎಂದು ಅರಣ್ಯ, ಕಾನೂನು ಇಲಾಖೆಯ ಅಧಿಕಾರಿಗಳು ಪ್ರಶ್ನಿಸುವ ಮೂಲಕ ಅಕ್ರಮ ಗಣಿಗಾರಿಕೆಯಿಂದಾಗಿರುವ ನಷ್ಟವನ್ನೂ ಮರೆ ಮಾಚಲು ಯತ್ನಿಸಿದ್ದರು ಎಂಬುದು ವರದಿಯಿಂದ ತಿಳಿದು ಬಂದಿದೆ.
‘ಕಾಂಗ್ರೆಸ್ ಸರ್ಕಾರ ತನ್ನ 5 ವರ್ಷಗಳ ಅಧಿಕಾರದಲ್ಲಿ ಎಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿದ್ದ ಸಚಿವ ಸಂಪುಟ ಉಪ ಸಮಿತಿ ವರದಿಯತ್ತ ಕಣ್ಣಾಡಿಸಿದ್ದರೆ ಬೊಕ್ಕಸವೂ ತುಂಬುತ್ತಿತ್ತು. ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಸಂಪತ್ತನ್ನು ಲೂಟಿಗೈದ ಗಣಿ ದಂಧೆಕೋರರನ್ನು ಮಟ್ಟಹಾಕಲು ಮತ್ತು ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ವಸೂಲು ಮಾಡುವ ಎಲ್ಲಾ ಅವಕಾಶಗಳಿದ್ದರೂ ಅದನ್ನು ಕಾಂಗ್ರೆಸ್ ಸರ್ಕಾರ ಕೈ ಚೆಲ್ಲಿ ಕುಳಿತಿತ್ತು,’ ಎನ್ನುತ್ತಾರೆ ಶಾಸಕರೊಬ್ಬರು.