ಸಿಎಸ್‌ಆರ್‍‌ ಫಂಡ್‌ಗೂ ಶೇ.50ರಷ್ಟು ಲಂಚ!; ಶಿಕ್ಷಣ ಸಚಿವರ ಪಿಎ ವಿರುದ್ಧವೇ ಆರೋಪ

ಬೆಂಗಳೂರು; ಸರ್ಕಾರಿ ಶಾಲೆಗಳ ಅಭಿವೃದ್ದಿಗಾಗಿ ಕಾರ್ಪೋರೇಟ್‌ ಕಂಪನಿಗಳ ಸಿಎಸ್‌ಆರ್‍‌ ನಿಧಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮೊರೆ ಇಟ್ಟಿರುವ ನಡುವೆಯೇ ಈ ಸಿಎಸ್‌ಆರ್‍‌ ನಿಧಿಯನ್ನು ಶಾಲೆಗೆ ಬಿಡುಗಡೆ ಮಾಡಿಸಲೂ ಶೇ.40ರಿಂದ 50ರಷ್ಟು ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ  ಎಂಬ ಗುರುತರವಾದ ಆರೋಪವೊಂದು ಕೇಳಿ ಬಂದಿದೆ.

 

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ 2024ರ ಆಗಸ್ಟ್‌ 19ರಂದು ಸಿಎಸ್‌ಆರ್‍‌ ಶಿಕ್ಷಣ ಸಮಾವೇಶ ಸಂಪನ್ನಗೊಂಡ ಬೆನ್ನಲ್ಲೇ ಸಿಎಸ್‌ಆರ್‍‌ ನಿಧಿ ಮಂಜೂರು ಮಾಡಿಸಲು ಸಚಿವ ಮಧು ಬಂಗಾರಪ್ಪ ಅವರ ಪಿಎ ಶೇ. 40ರಿಂದ 50ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ  ಎಂಬ ಆಪಾದನೆಯು ಮುನ್ನೆಲೆಗೆ ಬಂದಿದೆ.

 

ಸಿಎಸ್‌ಆರ್‍‌ ಅನುದಾನವನ್ನು ಶಾಲೆಗೆ ಮಂಜೂರು ಮಾಡಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಂದಲೇ ಲಂಚಕ್ಕೆ ಬೇಡಿಕೆ ಇರಿಸಲಾಗುತ್ತಿದೆ. ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೆಂದು ಎಂದು ಹೇಳಿಕೊಂಡಿರುವ ಸತೀಶ್‌ ವರದರಾಜ್‌ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

 

ಸಿಎಸ್‌ಆರ್‍‌ ನಿಧಿ ಮಂಜೂರು ಮಾಡಿಸಲು ಏಜೆನ್ಸಿಗಳಿಂದ ಸಚಿವ ಮಧು ಬಂಗಾರಪ್ಪ ಅವರ ಪಿಎ ಅವರ ಹೆಸರು ಬಳಸಿವೆ ಈ ಪ್ರತಿಕ್ರಿಯೆಯಲ್ಲಿ ಸತೀಶ್‌ ವರದರಾಜ್‌ ಅವರು  ಹೇಳಿದ್ದಾರೆ.

 

ಸತೀಶ್‌ ವರದರಾಜ್‌ ಅವರ ಪ್ರತಿಕ್ರಿಯೆಯಲ್ಲೇನಿದೆ?

 

‘ನನ್ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದ್ತಾ ಇದ್ದಾರೆ. ನಾನು ಆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ. ಶಾಲೆಗೆ ಸಿಎಸ್‌ಆರ್‍‌ ಫಂಡ್‌ನ್ನು ತರುವ ಏಜೆನ್ಸಿಗಳು ಹೇಳ್ತಾರೆ, ಮಧು ಬಂಗಾರಪ್ಪನವರ ಪಿಎ 40% ಇಂದ 50% ಕೇಳುತ್ತಾರೆ ಒಂದು ಸಿಎಸ್‌ಆರ್‍‌ ಫಂಡ್‌ಗೆ ಸೈನ್‌ ಹಾಕಿಸಿಕೊಳ್ಳುವುದಕ್ಕೆ. ಶಾಲೆಯ ದುರಸ್ತಿಗೆ ಅಂತ 35ರಿಂದ 40 ಲಕ್ಷ ರು ಕೋಟ್‌ ಮಾಡಿಸಿಕೊಂಡು ಹೋದರು. ಅದು ಶಾಲೆ ತನಕ ಬರುವ ಹೊತ್ತಿಗೆ ಕೇವಲ 10 ಲಕ್ಷ. ಶಾಲೆಯ ಅಭಿವೃದ್ಧಿ ಸಿಎಸ್‌ಆರ್‍‌ ಫಂಡ್‌ನ್ನು ಬಳಸಿ ಅನ್ನೊದು ಇನ್ನೊಂದು ದಂದೆ. ಈ ವಿಚಾರದಲ್ಲಿ ಶಾಲೆಯ ಮುಖ್ಯ ಶಿಕ್ಷಕರಿಂದ ಹಿಡಿದು ಸಿಆರ್‍‌ಪಿ, ಬಿಆರ್‍ಪಿ ಬಿಇಒ ತನಕ ಕೂಡ ಹಣ ಕೊಡಬೇಕಾಗಿದೆ,’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿರುವುದು ಗೊತ್ತಾಗಿದೆ.

 

ಸತೀಶ್‌ ದೇವರಾಜ್‌ ಅವರ ಸಾಮಾಜಿಕ ಜಾಲತಾಣವನ್ನು ‘ದಿ ಫೈಲ್‌’ ಪರಿಶೀಲಿಸಿತು. ಆದರೆ ಅವರು ತಮ್ಮ ಪ್ರೊಫೈಲ್‌ನ್ನು ಲಾಕ್‌ ಮಾಡಿರುವುದು ಗೊತ್ತಾಗಿದೆ. ಅವರು ನೀಡಿದ್ದ ಪ್ರತಿಕ್ರಿಯೆನ್ನು ಖಚಿತಪಡಿಸಿಕೊಳ್ಳಲು ‘ದಿ ಫೈಲ್‌’ ಅವರ ಸಾಮಾಜಿಕ ಜಾಲತಾಣದಲ್ಲೇ ಪ್ರತಿಕ್ರಿಯೆ ಕೋರಿ ಸಂದೇಶ ರವಾನಿಸಲಾಗಿದೆ. ಅವರು ಪ್ರತಿಕ್ರಿಯೆ ನೀಡಿದ ನಂತರ ವರದಿಯನ್ನು ನವೀಕರಿಸಲಾಗುವುದು.

 

ಅದೇ ರೀತಿ ಮಧು ಬಂಗಾರಪ್ಪ ಅವರ ಆಪ್ತ ಕಾರ್ಯದರ್ಶಿ ಕಿಶೋರ್‍‌ ಅವರಿಗೂ ಸಹ ‘ದಿ ಫೈಲ್‌’ ಪ್ರತಿಕ್ರಿಯೆ ಕೋರಿ ಸಂದೇಶ ರವಾನಿಸಿದೆ. ಅವರು ಪ್ರತಿಕ್ರಿಯೆ ನೀಡಿದ ನಂತರ ವರದಿಯನ್ನು ನವೀಕರಿಸಲಾಗುವುದು.

 

2,000 ಗ್ರಾಮ ಪಂಚಾಯ್ತಿಗಳಲ್ಲಿ ಸಿಎಸ್‌ಆರ್‍‌ ಫಂಡ್‌ ಅಡಿ ಮಾದರಿ ಶಾಲೆ ನಿರ್ಮಾಣ ಮಾಡಲು 03 ಪಂಚಾಯ್ತಿಗಳಿಗೆ ಒಂದು ಮಾದರಿ ಶಾಲೆಯಂತೆ 1,000 ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಸರ್ಕಾರವು ಉದ್ದೇಶಿಸಿದೆ. ಇದಕ್ಕೆ ಬೇಕಾಗಿರುವ ಅನುದಾನವನ್ನು ಕಾರ್ಪೋರೇಟ್‌ ಕಂಪನಿಗಳ ಮೂಲಕ ಒದಗಿಸಲು ಕಾರ್ಯ ಯೋಜನೆ ರೂಪಿಸಿದೆ.

 

ಪ್ರತಿ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯ ಹಾಗೂ ಶಿಕ್ಷಕರ ಮಾಹಿತಿ ಸಂಗ್ರಹಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿರುವುದು ತಿಳಿದು ಬಂದಿದೆ.

 

2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರು 7,250 ಶಾಲಾ ಕೊಠಡಿಗಳ ನಿರ್ಮಾಣ ಗುರಿ ಹೊಂದಿತ್ತು. 2024ರಲ್ಲಿ 4,830 ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೆ 2055 ಕೊಠಡಿ ಕಾಮಗಾರಿಗಳು ಬಾಕಿ ಇವೆ. ಸರ್ಕಾರವು ಅನುದಾನ ಬಿಡುಗಡೆ ಮಾಡಿದ್ದರೂ ಸಹ 365 ಕೊಠಡಿಗಳ ಕಾಮಗಾರಿಗಳು ಆರಂಭವಾಗಿಲ್ಲ ಎಂದು ತಿಳಿದು ಬಂದಿದೆ.

 

‘ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮಹತ್ವಾಕಾಂಕ್ಷೆಯ ಯೋಜನೆಯೊಂದು ನಮ್ಮ ಮುಂದಿದ್ದು, ಸಿಎಸ್‌ಆರ್‌ ನಿಧಿಯ ಮೂಲಕ ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆಗೆ ಆಕರ್ಷಿಸಬೇಕಿದೆ. ಕಾರ್ಪೊರೇಟ್‌ ಕಂಪನಿಗಳು ಮನಸ್ಸು ಮಾಡಿದರೆ ಖಂಡಿತವಾಗಿಯೂ ಇಡೀ ರಾಜ್ಯದ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಂತೆ ಮಾಡಬಹುದು,’ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಸಮಾವೇಶದಲ್ಲಿ ಮಾತನಾಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts