ಓಎಫ್‌ಸಿ ಕೇಬಲ್‌; ರಿಲಯನ್ಸ್‌ ಜಿಯೋ ಕಂಪನಿಗೆ ಸಹಕಾರ, ಸರ್ಕಾರಕ್ಕೆ ನಷ್ಟ, 6 ವರ್ಷದ ನಂತರ ವಿಚಾರಣೆ

ಬೆಂಗಳೂರು; ಓಎಫ್‌ಸಿ ಕೇಬಲ್‌ ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ರಿಲಯನ್ಸ್‌ ಜಿಯೋ ಕಂಪನಿಯಿಂದ ತಡವಾಗಿ ಶುಲ್ಕ ಭರಿಸಿಕೊಂಡು ಸರ್ಕಾರಕ್ಕೆ ನಷ್ಟವಾಗಿರುವ ಪ್ರಕರಣವನ್ನ ಜಂಟಿ ಇಲಾಖೆ ವಿಚಾರಣೆ ನಡೆಸಲು ಸರ್ಕಾರವು ಮುಂದಾಗಿದೆ.

 

ಅಲ್ಲದೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸಹ ಸರ್ಕಾರವು ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.

 

ಜಂಟಿ ಇಲಾಖೆ ವಿಚಾರಣೆ ನಡೆಸಲು ಹೊರಡಿಸಿರುವ ಆದೇಶ ಮತ್ತು ಅಭಿಯೋಜನಾ ಮಂಜೂರಾತಿ ನೀಡಿ ಹೊರಡಿಸಿರುವ ಆದೇಶದ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2018ರಲ್ಲಿ ಓಎಫ್‌ಸಿ ಕೇಬಲ್‌ ಅಳವಡಿಸುವ ಕಾಮಗಾರಿಯಲ್ಲಿ ರಿಲಯನ್ಸ್‌ ಜಿಯೋ ಕಂಪನಿಯಿಂದ ಪರವಾನಿಗೆ ಶುಲ್ಕವನ್ನು ನಿಗದಿ ಅವಧಿಯಲ್ಲಿ ಭರಿಸಿಕೊಂಡಿರಲಿಲ್ಲ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿತ್ತು.

 

ಪರವಾನಿಗೆ ಶುಲ್ಕ ಭರಿಸಿಕೊಳ್ಳಲು ರಿಲಯನ್ಸ್‌ ಜಿಯೋ ಕಂಪನಿಗೆ 45ರಿಂದ 60 ದಿನಗಳ ಕಾಲಾವಕಾಶ ನೀಡಿ ತಡವಾಗಿ ಶುಲ್ಕ ಭರಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಪಾಲಿಕೆಯ ಹಿಂದಿನ ಕಾರ್ಯಪಾಲಕ ಅಭಿಯಂತರ (ಹಾಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಂದಾಪುರ ಪುರಸಭೆ) ಆದರ್ಶ, ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ ಬಿ ಇಂದುಶೇಖರ ಗೌಡ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಹಾಲಿ ಅಧೀಕ್ಷಕ ಅಭಿಯಂತರ ಇ ತಿಮ್ಮಪ್ಪ ಇವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಇಲಾಖೆಯು ಮಾಡಿದ್ದ ಆರೋಪಗಳನ್ನು ಆಪಾದಿತ ಅಧಿಕಾರಿ ಇಂದುಶೇಖರ ಗೌಡ ಅವರು ನಿರಾಕರಿಸಿದ್ದರು. ಆದರೆ ಪಾಲಿಕೆಗೆ ಆಗಿರುವ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಮತ್ತು ಸಮಂಜಸ ಉತ್ತರವನ್ನು ನೀಡಿರಲಿಲ್ಲ. ಈ ಪೈಕಿ ಇ ತಿಮ್ಮಪ್ಪ ಮತ್ತು ಆದರ್ಶ ಅವರು ಲಿಖಿತ ಸಮಜಾಯಿಷಿಯನ್ನೂ ನೀಡಿರಲಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯ ನೀಡಲಾಗಿತ್ತು.

 

ಈ ಹಿನ್ನೆಲೆಯಲ್ಲಿ ಆದರ್ಶ ಮತ್ತು ಇ ತಿಮ್ಮಪ್ಪ ಅವರ ವಿರುದ್ಧ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌ ಎಂ ಚನ್ನಪ್ಪನವರ್‍‌ ಅವರ ನೇತೃತ್ವದಲ್ಲಿ ವಿಚಾರಣೆಗೆ 2024ರ ಆಗಸ್ಟ್‌ 7ರಂದು ಆದೇಶ ಹೊರಡಿಸಿರುವುದು ಗೊತ್ತಾಗಿದೆ.

 

ಇದಲ್ಲದೇ ಬಳ್ಳಾರಿ ಮಹಾನಗರ ಪಾಲಿಕೆಯಿಂದ ಸಾಮಾನ್ಯ ನಿಧಿ ಅಡಿಯಲ್ಲಿ 2016ನೇ ಸಾಲಿನಲ್ಲಿ ಕೈಗೊಂಡಿದ್ದ ಕಾಮಗಾರಿಗಳಲ್ಲೂ ಅಕ್ರಮ ನಡೆದಿತ್ತು. ಬಳ್ಳಾರಿ ನಗರದ ವಾರ್ಡ್‌ಗಳಲ್ಲಿ 09 ಕಾಮಗಾರಿಗಳನ್ನು ನಿರ್ವಹಿಸದೇ ಇದ್ದರೂ ಸಹ 03 ಜನ ಗುತ್ತಿಗೆದಾರರಿಗೆ 36,70,887 ರು.ಗಳನ್ನು 9 ಚೆಕ್‌ ಮೂಲಕ ಪಾವತಿಸಲಾಗಿತ್ತು.

 

ಹಾಗೆಯೇ ಬಳ್ಳಾರಿ ನಗರದ ಗಾಂಧಿ ನಗರದ ವಾಟರ್‍‌ ಬೂಸ್ಟರ್‍‌ದಿಂದ ಕನಕ ದುರ್ಗಮ್ಮ ದೇವಸ್ಥಾನದವರೆಗೆ ಕುಡಿಯುವ ನೀರಿನ ಎಂಎಸ್‌ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಯಲ್ಲಿಯೂ ಅವ್ಯವಹಾರ ನಡೆದಿತ್ತು.

 

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್‌ ತಿಮ್ಮಪ್ಪ, ಮಂಜುನಾಥ ಕರಬಸಪ್ಪ ನಾಲವಾಡಿ, ಬಿ ಹೆಚ್‌ ನಾರಾಯಣಪ್ಪ, ಪಿ ಜಿ ರಮೇಶ್‌, ರಾಘವೇಂದ್ರ ಗುರು ಅವರನ್ನು ಆರೋಪಿತರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಸರ್ಕಾರವು ಅಭಿಯೋಜನಾ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.

 

ಆರೋಪಿತ ಅಧಿಕಾರಿಗಳ ವಿರುದ್ಧ ಅಂತಿಮ ತನಿಖಾ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಪ್ರಕರಣಗಳಲ್ಲಿ ಸರ್ಕಾರದ ಹಣವು ದುರುಪಯೋಗವಾಗಿದೆ ಎಂಬ ಆರೋಪವು ಮೇಲ್ನೋಟಕ್ಕೆ ದೃಢಪಟ್ಟಿತ್ತು ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.

 

ಈ ಪ್ರಕರಣದಲ್ಲಿ ಆಪಾದಿತ ಅಧಿಕಾರಿಗಳ ಪೈಕಿ ಕೆಲವರು ನಿವೃತ್ತರಾಗಿದ್ದಾರೆ. ಇವರ ವಿರುದ್ಧ ಐಪಿಸಿ 1860 ಕಲಂ 120(ಬಿ), 406, 419, 420, 464, 465, 468, 471, 474 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ತಿದ್ದುಪಡಿ ಕಾಯ್ದೆ ಅನ್ವಯವೂ ಪ್ರಕರಣ ದಾಖಲಾಗಿದೆ.

SUPPORT THE FILE

Latest News

Related Posts