ಬೆಂಗಳೂರು; ಮೂವತ್ತು ವರ್ಷಗಳ ಹಿಂದೆಯೇ ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ ವ್ಯಕ್ತಿಯ ಪರವಾಗಿ ಸಿದ್ದರಾಮಯ್ಯ ಅವರು ಟಿಪ್ಪಣಿ ಹೊರಡಿಸಿದ್ದರು. ನಂತರ ಪ್ರಭಾವ ಬೀರಿ ಡಿ ನೋಟಿಫಿಕೇಷನ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು ಎಂಬ ಹೊಸ ಆರೋಪಕ್ಕೆ ಸಿದ್ದರಾಮಯ್ಯ ಅವರು ಗುರಿಯಾಗಿದ್ದಾರೆ.
ಮೈಸೂರಿನ ವರುಣ ಹೋಬಳಿಯಲ್ಲಿನ ಬಡ ಕುಟುಂಬಗಳಿಗೆ ಸೇರಿದ್ದ ಜಮೀನಿಗೆ ವ್ಯಕ್ತಿಯೊಬ್ಬರು ಸುಳ್ಳು ದಾಖಲೆ ಸೃಷ್ಟಿಸಿದ್ದರು. ಈ ದಾಖಲೆಗಳನ್ನು ಪರಿಶೀಲಿಸದೆಯೇ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಡಿ ನೋಟಿಫಿಕೇಷನ್‌ಗೆ ಟಿಪ್ಪಣಿ ಹೊರಡಿಸಿದ್ದರು. ಇದನ್ನಾಧರಿಸಿ ಮೈಸೂರಿನ ಅಂದಿನ ಜಿಲ್ಲಾಧಿಕಾರಿ ಈ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲು ಅಧಿಸೂಚನೆ ಹೊರಡಿಸಿದ್ದರು ಎಂಬ ಆಪಾದನೆಯು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿದೆ.
ಈ ಪ್ರಕರಣದ ಕುರಿತು ದಾಖಲೆಗಳ ಸಮೇತ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ 12 ಪುಟಗಳ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿ ಮತ್ತು ಅದರೊಂದಿಗೆ ಲಗತ್ತಿಸಿರುವ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನ ನೀಡಿರುವ ಪ್ರಕರಣವು ರಾಜಕೀಯಕರಣಗೊಂಡಿದೆ. ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಸಂಬಂಧ ರಾಜ್ಯಪಾಲರು ಶೋಕಾಸ್ ನೋಟೀಸ್ ನೀಡಿದ್ದಾರೆ. ಈ ಮಧ್ಯೆ ಮೂಡಾ ಪ್ರಕರಣವನ್ನು ಮುಂದಿರಿಸಿಕೊಂಡು ಬೆಂಗಳೂರಿನಿಂದ ಮೈಸೂರಿನವರೆಗೆ ಪ್ರತಿಪಕ್ಷಗಳು ಪಾದಯಾತ್ರೆ ನಡೆಸಿವೆ. ಇದೇ ಹೊತ್ತಿನಲ್ಲಿಯೇ ವರುಣ ಹೋಬಳಿಯ ಈ ಪ್ರಕರಣವು ಮುನ್ನೆಲೆಗೆ ಬಂದಿದೆ.
ವರುಣ ಹೋಬಳಿಯ ಸರ್ಕಾರಿ ಉತ್ತನಹಳ್ಳಿ ಗ್ರಾಮದ ಸರ್ವೆ ನಂಬರ್ 205/2ರಲ್ಲಿನ 1.39 ಎಕರೆ ಜಮೀನಿಗೆ ಡಿ ನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಕಾನೂನುಬಾಹಿರವಾಗಿ ಡಿ ನೋಟಿಫಿಕೇಷನ್ ಅಧಿಸೂಚನೆ ಹೊರಡಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಿಶೇಷವೆಂದರೇ 1979ರಲ್ಲಿಯೇ ಈ ಜಮೀನು ಭೂ ಸ್ವಾಧೀನಕ್ಕೆ ಒಳಗಾಗಿತ್ತು. 1979ರ ನವೆಂಬರ್ 24ರಂದು ಹೊರಡಿಸಿರುವ ರಾಜ್ಯಪತ್ರದ ಪ್ರಕಾರ ಸರ್ಕಾರಿ ಉತ್ತನಹಳ್ಳಿ ಗ್ರಾಮದ ಸರ್ವೆ ನಂಬರ್ 42/3, 44/1, 44/2, 205/2ರಲ್ಲಿನ ಒಟ್ಟು 07.01 ಎಕರೆ ಜಮೀನನ್ನು ವಶಪಡಿಸಿಕೊಂಡಿತ್ತು.
ಈ ಆದೇಶದ ಅನುಸಾರ ಜಮೀನಿನ ಮಾಲೀಕರುಗಳಿಗೆ ಪರಿಹಾರವನ್ನು ನೀಡಿ ಸದರಿ ಜಮೀನುಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿತ್ತು ಎಂಬುದು ಕೃಷ್ಣ ಅವರು ದೂರಿನೊಂದಿಗೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದು ಬಂದಿದೆ.
ಆದರೆ ಈ ಜಮೀನಿನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿರಲಿಲ್ಲ. ಹೀಗಾಗಿ ಫಲಾನುಭವಿಗಳು ಮನೆಗಳನ್ನು ಕಟ್ಟಿಕೊಂಡಿರಲಿಲ್ಲ. ಇಂತಹ ಸಂದರ್ಭವನ್ನೇ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಮೈಸೂರು ತಾಲೂಕು ಡಿ ಸಾಲುಂಡಿಯ ನಿವಾಸಿ ರಾಮೇಗೌಡರ ಮಗ ಮರಪ್ಪ ಎಂಬುವವರು (ಸರ್ಕಾರ ವಶಪಡಿಸಿಕೊಳ್ಳುವ ಮುನ್ನ) ಕುಂಡ ಬೀರಯ್ಯ ಮತ್ತು ಕಾಳಯ್ಯನವರಿಗೆ ಸೇರಿದ್ದ ಸದರಿ ಸರ್ವೇ ನಂಬರ್ 205/2ರಲ್ಲಿನ 1.39 ಎಕರೆ ಜಮೀನಿನಲ್ಲಿನ ಮಣ್ಣನ್ನು ತೆಗೆದುಕೊಂಡು ಇಟ್ಟಿಗೆಗಳನ್ನು ತಯಾರು ಮಾಡುತ್ತಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದರು.
ಅಲ್ಲದೇ ಫಲಾನುಭವಿಗಳಿಗೆ ಅನುಕೂಲ ಮಾಡಿಸಿಕೊಡುವುದಾಗಿ ನಂಬಿಸಿದ್ದರು. ಮೂಲ ಹಕ್ಕು ಪತ್ರಗಳನ್ನು ನೀಡುವಂತೆ ಹೇಳಿ ಹಕ್ಕುಪತ್ರಗಳನ್ನು ಪಡೆದು ಅವುಗಳನ್ನು ನಾಶಪಡಿಸಿದ್ದರು. ನಂತರ ಈ ಜಮೀನು ತಮಗೆ ಸೇರಬೇಕೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು ಎಂದು ಕೃಷ್ಣ ಅವರು ದೂರಿನಲ್ಲಿ ಆಪಾದಿಸಿದ್ದಾರೆ.
ರಾಜ್ಯಪತ್ರದಲ್ಲಿ ಉಲ್ಲೇಖಿಸಿರುವ ಜಮೀನುಗಳಲ್ಲಿ ನಿವೇಶನಗಳನ್ನು ಯಾವ ವರ್ಷದಲ್ಲಿ ರಚಿಸಲಾಗಿತ್ತು, ಈ ಜಮೀನುಗಳ ಸಂಬಂಧ ಯಾರ್‍ಯಾರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ, ಈ ಜಮೀನುಗಳಿಗೆ ಸಂಬಂಧಿಸಿದಂತೆ ಪರಿಹಾರದ ಹಣವನ್ನು ಮಾಲೀಕರಿಗೆ ನೀಡಿರಲಿಲ್ಲವೇ, ಈ ಜಮೀನಿನಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿ ರಸ್ತೆ, ಒಳಚರಂಡಿ, ನೀರು ವಿದ್ಯುತ್ ವಿದ್ಯುತ್ ಸೌಕರ್ಯಗಳನ್ನು ನೀಡಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿರಲಿಲ್ಲವೇ, ಅಭಿವೃದ್ಧಿ ಕೆಲಸಗಳನ್ನು ಮಾಡಿ ರಸ್ತೆ, ಒಳಚರಂಡಿ, ನೀರು, ವಿದ್ಯುತ್ ಸೌಕರ್ಯಗಳನ್ನು ನೀಡದಿರಲು ಕಾರಣವೇನು ಎಂದು ಕೃಷ್ಣ ಅವರು ಪ್ರಶ್ನಿಸಿರುವುದು ತಿಳಿದು ಬಂದಿದೆ.
ಈ ಜಮೀನುಗಳಿಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮತ್ತು ಪ್ರಶ್ನೆಗಳು ಇರುವಾಗಲೇ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇದೇ ಜಮೀನನ್ನು ಮೂವತ್ತು ವರ್ಷಗಳ ನಂತರ ಭೂ ಸ್ವಾಧೀನದಿಂದ ಕೈಬಿಡಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.
ಸಿದ್ದರಾಮಯ್ಯ ಅವರ ಟಿಪ್ಪಣಿಯಲ್ಲೇನಿತ್ತು?
ಮೈಸೂರು ತಾಲೂಕಿನ ಸರ್ಕಾರಿ ಉತ್ತನಹಳ್ಳಿ ಮರಪ್ಪ ಬಿನ್ ಲೇಟ್ ಬೀರಮ್ಮ ಇವರು ನನಗೆ ಸಲ್ಲಿಸಿರುವ ಮನವಿಯನ್ನು ಈ ಪತ್ರಕ್ಕೆ ಲಗತ್ತಿಸಿದೆ. ಸದರಿಯವರಿಗೆ ಸೇರಿದ ಸರ್ಕಾರಿ ಉತ್ತನಹಳ್ಳಿ ಗ್ರಾಮದ ಸರ್ವೆ ನಂಬರ್ 205/2ರಲ್ಲಿ 1.39 ಗುಂಟೆ ಜಮೀನಿನಲ್ಲಿ ಸದರಿಯವರು ವ್ಯವಸಾಯ ಮಾಡುತ್ತಿದ್ದಾರೆ. ಜೀವನ ಸಾಗಿಸಲು ಸದರಿ ಕುಟುಂಬದವರಿಗೆ ಬೇರೆ ಯಾವುದೇ ರೀತಿಯಲ್ಲಿ ಆದಾಯವಿಲ್ಲದ ಕಾರಣ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಿಸಿ ಕೊಡುವಂತೆ ಕೋರಿರುತ್ತಾರೆ.
ಆದ್ದರಿಂದ ಸದರಿಯವರ ಮನವಿಯನ್ನು ಪರಿಶೀಲಿಸಿ ಸದರಿಯವರಿಗೆ ಸೇರಿದ ಸರ್ವೆ ನಂಬರ್ 205/2ರಲ್ಲಿ 1.39 ಗುಂಟೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ತಮ್ಮಲ್ಲಿ ಕೋರಲಾಗಿದೆ ಎಂದು ಮೈಸೂರಿನ ಜಿಲ್ಲಾಧಿಕಾರಿಗೆ 2008ರ ಆಗಸ್ಟ್ 10ರಂದು ಪತ್ರ ಬರೆದಿದ್ದರು.
ಈ ಟಿಪ್ಪಣಿಯನ್ನಾಧರಿಸಿ ಅಂದಿನ ಜಿಲ್ಲಾಧಿಕಾರಿ (2009ರಲ್ಲಿ) ಅವರು ಜಮೀನಿನ ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸಿ ಆದೇಶ ಹೊರಡಿಸಿದ್ದರು.
ಸಿದ್ದರಾಮಯ್ಯ ಅವರು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಕೃಷ್ಣ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
‘ಈ ಪತ್ರದಲ್ಲಿ ಮರಪ್ಪ ಬಿನ್ ಬೀರಮ್ಮ ಎಂದು ಉಲ್ಲೇಖಿಸಿರುವುದು ಏಕೆ, ಮರಪ್ಪನವರ ತಂದೆಯ ಹೆಸರನ್ನು ಉಲ್ಲೇಖಿಸದಿರಲು ಕಾರಣವೇನು, ಈ ಪತ್ರವನ್ನು ನೀಡುವ ಮುನ್ನ ಮರಪ್ಪನವರು ತಮಗೆ ತಿಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಿ ಆ ನಂತರ ಸದರಿ ಪತ್ರವನ್ನು ಬರೆಯಲಾಗಿರುತ್ತದೆಯೇ, ಜೀವನ ಸಾಗಿಸಲು ಸದರಿ ಕುಟುಂಬದವರಿಗೆ ಬೇರೆ ಯಾವುದೇ ರೀತಿಯಲ್ಲಿ ಆದಾಯವಿಲ್ಲದ ಕಾರಣ ಎಂಬ ವಿಚಾರವನ್ನು ಯಾವ ದಾಖಲಾತಿಯನ್ನು ಆಧರಿಸಿ ಉಲ್ಲೇಖಿಸಿರುತ್ತೀರಿ,’ ಎಂದು ಪ್ರಶ್ನಿಸಿರುವುದು ಗೊತ್ತಾಗಿದೆ.