ಸುತ್ತೋಲೆ ಉಲ್ಲಂಘಿಸಿ ರಂಭಾಪುರಿ, ಫಲಿಮಾರು, ಸಿದ್ದಗಂಗಾ ಸೇರಿ ಮಠ, ದೇಗುಲಗಳಿಗೆ 39.78 ಕೋಟಿ

ಬೆಂಗಳೂರು; ಶಾಸಕರ ಭವನದಲ್ಲಿರುವ ಮುನೀಶ್ವರ ದೇವಸ್ಥಾನ, ಬಾಳೆಹೊನ್ನೂರಿನ ರಂಭಾಪುರಿ ಪೀಠ, ಉಡುಪಿಯ ಫಲಿಮಾರು, ಸಿದ್ದಗಂಗಾ ಮಠ ಸೇರಿದಂತೆ ರಾಜ್ಯದ ಹಲವು ಪ್ರಭಾವಿ ಮಠ, ಮುಜುರಾಯಿ, ಖಾಸಗಿ ದೇವಸ್ಥಾನಗಳಿಗೆ ಕಳೆದ 5 ವರ್ಷಗಳಲ್ಲಿ ಸುತ್ತೋಲೆ ಉಲ್ಲಂಘಿಸಿ 61 ಪ್ರಕರಣಗಳಲ್ಲಿ 39.78 ಕೋಟಿ ರು. ಮಂಜೂರಾಗಿತ್ತು.

 

ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಸಿಎಜಿಯು, ಹಲವು ಪ್ರಭಾವಿ ಮಠ, ದೇವಸ್ಥಾನಗಳಿಗೆ ಸುತ್ತೋಲೆ ಉಲ್ಲಂಘಿಸಿ ಕೋಟ್ಯಂತರ ರುಪಾಯಿಗಳನ್ನು ಮಂಜೂರು ಮಾಡಿರುವುದನ್ನು ಪತ್ತೆ ಹಚ್ಚಿದೆ.

 

ಧಾರ್ಮಿಕ ದತ್ತಿ ಇಲಾಖೆಯಲ್ಲಿ ಜಾರಿಗೊಂಡಿರುವ ಯೋಜನೆಗಳ ಕಾರ್ಯಗತಗೊಳಿಸಲು ಗರಿಷ್ಠ ಅನುದಾನ ಮತ್ತು ಇದಕ್ಕೆ ಅರ್ಹತೆಯ ಮಾರ್ಗಸೂಚಿಗಳನ್ನು ನಿರ್ದಿಷ್ಟಪಡಿಸಿತ್ತು. ಪ್ರವರ್ಗಗಳಡಿಯಲ್ಲಿ ಗರಿಷ್ಠ ಅನುದಾನವನ್ನು ಮಂಜೂರು ಮಾಡಲು 2010ರಲ್ಲೇ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಈ ಯಾವ ಮಾರ್ಗಸೂಚಿಗಗಳನ್ನೂ ಇಲಾಖೆಯು ಪಾಲಿಸಿರಲಿಲ್ಲ.

 

ಇದರ ಪ್ರಕಾರ ಮುಜುರಾಯಿ ದೇವಸ್ಥಾನಗಳಿಗೆ ಗರಿಷ್ಠ ಮಿತಿಯು 10 ಲಕ್ಷ ಇತ್ತು. ಖಾಸಗಿ ದೇವಸ್ಥಾನಗಳಿಗೆ 25 ಲಕ್ಷ ರು. ಗರಿಷ್ಠ ಹಾಗೂ ಮಠಗಳಿಗೆ ಗರಿಷ್ಠ 50 ಲಕ್ಷ ರು. ನಿಗದಿಪಡಿಸಿತ್ತು.  5 ಲಕ್ಷ ರು ಮೊತ್ತವನ್ನು ಮೀರಿರುವಂತಹ ಅನುದಾನಗಳನ್ನು ಎರಡು ಕಂತುಗಳಲ್ಲಿ ಬಿಡುಗಡೆಗೊಳಿಸಬೇಕಿತ್ತು.

 

ಎರಡನೇ ಕಂತನ್ನು ಸಂಬಂಧಿತ ಸಂಸ್ಥೆಯಿಂದ ಮೊದಲ ಕಂತಿಗೆ ಹಣ ಬಳಕೆ ಪ್ರಮಾಣ ಪತ್ರವನ್ನು ಪಡೆದುಕೊಂಡ ನಂತರವಷ್ಟೆ ಬಿಡುಗಡೆಗೊಳಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ಸೂಚಿಸಲಾಗಿತ್ತು.

 

 

ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಮತ್ತು ಖಾಸಗಿ ಮಠಗಳ ಪ್ರಭಾವ, ಒತ್ತಡಕ್ಕೆ ಮಣಿದ ಕಾರಣ ನಿಗದಿಪಡಿಸಿದ್ದಂತಹ ಅನುದಾನಕ್ಕಿಂತಲೂ ಹೆಚ್ಚುವರಿಯಾಗಿ ಬಿಡುಗಡೆ ಮಾಡಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

2017-18ರಿಂದ 2021-22ರವರೆಗೆ ಆಡಳಿತ ನಡೆಸಿದ್ದ ಸರ್ಕಾರಗಳ ಅವಧಿಯಲ್ಲಿ ಸುತ್ತೋಲೆ ಉಲ್ಲಂಘಿಸಿ ಕೋಟ್ಯಂತರ ರುಪಾಯಿಗಳನ್ನು ಮಂಜೂರು ಮಾಡಿರುವ ಪಟ್ಟಿಯನ್ನೂ ಸಿಎಜಿ ವರದಿಯಲ್ಲಿ ನೀಡಲಾಗಿದೆ.

 

ಶಾಸಕರ ಭವನದಲ್ಲಿರುವ ಮುನೀಶ್ವರ ದೇವಸ್ಥಾನಕ್ಕೆ (ಸಿ ವರ್ಗ) ರಿಪೇರಿ ಉದ್ದೇಶಕ್ಕೆ ಮಂಜೂರಾಗಿದ್ದು 10 ಲಕ್ಷ ಮಾತ್ರ. ಆದರೆ ಮಂಜೂರಾಗಿದ್ದು 25 ಲಕ್ಷ. ಅಂದರೆ ಮಂಜೂರಾಗಿದ್ದ ಅನುದಾನಕ್ಕಿಂತಲೂ ಹೆಚ್ಚುವರಿಯಾಗಿ 15 ಲಕ್ಷ ರು ಗಳನ್ನು ನೀಡಿತ್ತು.

 

ಸವದತ್ತಿ ತಾಲೂಕಿನ ಇಂಚಲ ಶಿವಯೋಗಿಶ್ವರ ಸಾಧು ದೇವಾಲಯಕ್ಕೆ ಅಭಿವೃದ್ಧಿಗೆ ಸುತ್ತೋಲೆ ಪ್ರಕಾರ 50.00 ಲಕ್ಷ ರು. ನೀಡಬೇಕಿತ್ತು. ಆದರೆ ನೀಡಿದ್ದು 1.00 ಕೋಟಿ ರು. ಅಂದರೆ ನಿಗದಿಪಡಿಸಿದ್ದ ಮಿತಿಗಿಂತಲೂ 50 ಲಕ್ಷ ರು. ಹೆಚ್ಚುವರಿಯಾಗಿ ಮಂಜೂರಾಗಿತ್ತು.

 

ಸವದತ್ತಿ ತಾಲೂಕಿನ ಸಾಂಬಯ್ಯನವರ ಮಠದ ಅಭಿವೃದ್ಧಿಗೆ 50 ಲಕ್ಷ ರು. ಬದಲಿಗೆ 2 ಕೋಟಿ ರು. ಮಂಜೂರಾಗಿತ್ತು. ಅಂದರೆ 1.50 ಕೋಟಿ ಹೆಚ್ಚುವರಿಯಾಗಿ ನೀಡಲಾಗಿತ್ತು. ಗೋಕಾಕದ ಕರ್ನಾಟಕ ಹಿಂದೂ ಕ್ಷತ್ರಿಯ ಸಂಘದ ಮಠಕ್ಕೆ 50 ಲಕ್ಷ ರು. ನೀಡಬೇಕಿತ್ತಾದರೂ 1 ಕೋಟಿ ರು. ಬಿಡುಗಡೆ ಆಗಿತ್ತು.

 

ಸುತ್ತೋಲೆ ಪ್ರಕಾರ ಬಾಳೆಹೊನ್ನೂರಿನ ರಂಭಾಪುರಿ ಮಠದ ಅಭಿವೃದ್ಧಿಗೆ 50 ಲಕ್ಷ ರು ನೀಡಬೇಕಿತ್ತು. ಆದರೆ 5 ಕೋಟಿ ರು. ಮಂಜೂರಾಗಿತ್ತು. ಅಂದರೆ 4.50 ಕೋಟಿ ರು. ಹೆಚ್ಚುವರಿಯಾಗಿ ಮಂಜೂರು ಮಾಡಿತ್ತು.
ತುಮಕೂರಿನಲ್ಲಿರುವ ರಂಭಾಪುರಿ ಮಠಕ್ಕೆ ಅಭಿವೃದ್ಧಿ ಹೆಸರಿನಲ್ಲಿ 50 ಲಕ್ಷ ರು. ಅರ್ಹತೆ ಇದ್ದರೂ 1 ಕೋಟಿ ರು (ಹೆಚ್ಚುವರಿ 50 ಲಕ್ಷ) ಮಂಜೂರಾಗಿತ್ತು.

 

ಕೊಪ್ಪದ ಆದಿ ಶಂಕರಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠದ ಅಭಿವೃದ್ದಿಗೆ ಸುತ್ತೋಲೆ ಪ್ರಕಾರ 50 ಲಕ್ಷ ರು ನೀಡಬೇಕಿತ್ತು. ಆದರೆ 50 ಲಕ್ಷ ರು ಹೆಚ್ಚುವರಿ ಅಂದರೆ 1 ಕೋಟಿ ರು ಮಂಜೂರಾಗಿತ್ತು.

 

ಉಡುಪಿ ತಾಲೂಕಿನ ಫಲಿಮಾರು ಮಠದ ಅಭಿವೃದ್ದಿಗೆ 50 ಲಕ್ಷ ರು. ಅರ್ಹವಾಗಿತ್ತು. ಆದರೆ 1 ಕೋಟಿ ರು. ಮಂಜೂರು ಮಾಡಿತ್ತು. 50 ಲಕ್ಷ ರು ಹೆಚ್ಚುವರಿಯಾಗಿ ಮಂಜೂರು ಆಗಿತ್ತು.

 

ತುಮಕೂರಿನ ಸಿದ್ದಗಂಗಾ ಮಠದ ಶಿವಸ್ವಾಮಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಅಭಿವೃದ್ಧಿ ಹೆಸರಿನಲ್ಲಿ 50 ಲಕ್ಷ ರು ನೀಡಲು ಅರ್ಹತೆ ಇತ್ತು. ಆದರೆ ಸುತ್ತೋಲೆ ಉಲ್ಲಂಘಿಸಿ 1.93 ಕೋಟಿ ರು ಮಂಜೂರಾಗಿತ್ತು. ಅಂದರೆ 1.43 ಕೋಟಿ ರು ಹೆಚ್ಚುವರಿಯಾಗಿ ಮಂಜೂರಾಗಿತ್ತು. ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ 50 ಲಕ್ಷ ರು ಅರ್ಹತೆ ಇತ್ತು. ಆದರೆ 1 ಕೋಟಿ ನೀಡಲಾಗಿದೆ.

 

‘ಕೊಡಗು ಜಿಲ್ಲೆಯಲ್ಲಿ ಸಾಮಾನ್ಯ ಅನುಧಾನಗಳನ್ನು ನಿರ್ದಿಷ್ಟ ಮೊತ್ತಗಳಿಗಿಂತ 1 ಲಕ್ಷ ರು ಮೊತ್ತದಿಂದ 3 ಕೋಟಿ ವರೆಗೆ ಅಧಿಕ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ರೀತಿ ಅಧಿಕ ಪ್ರಮಾಣದಲ್ಲಿ ಬಿಡುಗಡೆ ಮಾಡಿದ್ದ ಅನುದಾನದ ಮೊತ್ತವು 39.79 ಕೋಟಿ ರು. ಇತ್ತು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಬಾಗಲಕೋಟೆ ಜಿಲ್ಲೆಯಲ್ಲಿ 2018-19ರಲ್ಲಿ ಜಮಖಂಡಿಯ ದಾನಮ್ಮ ದೇವಸ್ಥಾನ ಮತ್ತು ಬೀಳಗಿಯ ಸೋಮಲಿಂಗೇಶ್ವರ ದೇವಸ್ಥಾನಕ್ಕೆ ಅಭಿವೃದ್ಧಿ ಹಾಗೂ ನವೀಕರಣದ ಹೆಸರಿನಲ್ಲಿ ಕ್ರಮವಾಗಿ 10 ಲಕ್ಷ ರು ಮಾತ್ರ ನೀಡಬೇಕಿತ್ತು. ಆದರೆ ದಾನಮ್ಮ ದೇವಸ್ಥಾನಕ್ಕೆ 40 ಲಕ್ಷ ರು ಹೆಚ್ಚುವರಿ ಅಂದರೆ 50 ಲಕ್ಷ ರು ಮಂಜೂರು ಮಾಡಿತ್ತು. ಅದೇ ರೀತಿ ಸೋಮಲಿಂಗೇಶ್ವರ ದೇವಸ್ಥಾನಕ್ಕೆ 20 ಲಕ್ಷ ರು ಹೆಚ್ಚುವರಿ ಅಂದರೇ 30 ಲಕ್ಷ ರು.ಗಳನ್ನು ಮಂಜೂರು ಮಾಡಲಾಗಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

2018-19ರಿಂದ 2021-22ರಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ, ಸವದತ್ತಿಯ ಉಡಚ ಪರಮೇಶ್ವರಿ, ಗೋಕಾಕ್‌ನ ಕರ್ನಾಟಕ ಹಿಂದೂ ಕ್ಷತ್ರೀಯ ಸಂಘ, ನಿಪ್ಪಾಣಿಯ ಡೊಂಗರಮಠದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಗಳಿಗೆ ಸುತ್ತೋಲೆ ಉಲ್ಲಂಘಿಸಿ 3.57 ಕೋಟಿ ರು ಮಂಜೂರು ಮಾಡಲಾಗಿತ್ತು.

 

ಕೊಪ್ಪಳದ ಕನಕಾಚಲಪತಿ ದೇವಸ್ಥಾನಕ್ಕೆ 15 ಲಕ್ಷ ರು., ರಾಮನಗರದ ದೊಡ್ಡಮರಳವಾಡಿಯ ಬಸವೇಶ್ವರ ದೇವಸ್ಥಾನಕ್ಕೆ 15 ಲಕ್ಷ ರು. ಹೆಚ್ಚುವರಿಯಾಗಿ ನೀಡಲಾಗಿತ್ತು. ಅದೇ ರೀತಿ ಹಾಸನ ತಾಲೂಕಿನ ಮಲ್ಲಪ್ಪನಹಳ್ಳಿಯ ಮಲ್ಲೇಶ್ವರ ಸ್ವಾಮಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ 1.80 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.

 

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠ, ಮೂಡಿಗೆರೆಯ ಆದಿಶಕ್ತಿ ವಸಂತ ಪರಮೇಶ್ವರಿ ದೇವಸ್ಥಾನ, ಎನ್‌ಆರ್‍‌ಪುರ ಬಾಳೆಹೊನ್ನೂರಿನ ರಂಭಾಪುರಿ ಮಠ, ಕೊಪ್ಪ ಜಯಪುರದ ದುರ್ಗಾ ಪರಮೇಶ್ವರಿ, ಹರಿಹರಪುರ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಸುತ್ತೋಲೆ ಉಲ್ಲಂಘಿಸಿ ಒಟ್ಟಾರೆ 5.55 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿದೆ ಎಂದು ಸಿಎಜಿ ವರದಿಯು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

ಉಡುಪಿಯ ಬ್ರಹ್ಮಾವರ ತಾಲೂಕಿನ ಚಂಡಿಕಾ ದುರ್ಗಾ ಪರಮೇಶ್ವರಿ, ವಿಶ್ವೇಶ್ವರ ದೇವಸ್ಥಾನ, ಸುಬ್ರಹ್ಮಣ್ಯ ಸಭಾಬವನ, ಮಹಾಲಿಂಗೇಶ್ವರ ದೇವಸ್ಥಾನ, ಫಲಿಮಾರು ಮಠ, ಬೇಲೆ ಮರಟು ಪಂಜುರ್ಲಿ ಬಂಟರಗಾರಡಿ, ಅಮೃತೇಶ್ವರ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಗಳಿಗೆ ನಿಗದಿಪಡಿಸಿದ್ದ ಅನುದಾನಕ್ಕಿಂತಲೂ ಒಟ್ಟಾರೆಯಾಗಿ 16.23 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿತ್ತು.

 

ತುಮಕೂರಿನ ಗೊಲ್ಲೂರಿನ ರಂಗನಾಥ ಸ್ವಾಮಿ, ಯಡಿಯೂರಿನ ಸಿದ್ದಲಿಂಗೇಶ್ವರಸ್ವಾಮಿ, ಶಿರಾ ತಾಲೂಕಿನ ಬರಗೂರಿನ ಈಶ್ವರ ದೇವರು, ಸಿರಾ ಪಟ್ಟಣದ ದುರ್ಗಮ್ಮ, ಸಿದ್ದಗಂಗಾ ಮಠದ ಶಿವಸ್ವಾಮಿಗಳ ಪುಣ್ಯಸ್ಮರಣೆ, ಟಿ ಗೊಲ್ಲಹಳ್ಳಿಯ ರಂಗನಾಥಸ್ವಾಮಿ, ಯೆತ್ತಿನಹಳ್ಳಿ ಗ್ರಾಮದ ಮಾರಮ್ಮ, ಬೆಳಗುಂಬದ ಸಿದ್ದರಾಮೇಶ್ವರ, ಕಾಡುಗೊಜ್ಜನಹಳ್ಳಿಯ ಬೈಲಾಂಜನೇಯ, ಹೊನ್ನವಳ್ಳಿಯ ಸಿದ್ದಲಿಂಗೇಶ್ವರಸ್ವಾಮಿ, ಸಾಗರಹಳ್ಳಿಯ ಚಂದ್ರಮೌಳೇಶ್ವರ, ಚಂದಿಗೆರೆಯ ಬಸವೇಶ್ವರ, ತುಳಸಿ ರಂಗನಾಥ ದೇವರು, ಬೆನಕನಕೆರೆಯ ಚೆನ್ನಕೇಶವ ದೇವರು, ತಾವರೆಕೆರೆಯ ಮರಡಿ ರಂಗನಾಥಸ್ವಾಮಿ, ಕೆ ಬಿ ಕ್ರಾಸ್‌ನ ಹತ್ಯಾಳು ನರಸಿಂಹ ದೇವರು, ಕುಪ್ಪೂರು ಗದ್ದಿಗೆ ಸಂಸ್ಥಾನ ಮಠ ಸೇರಿ ಒಟ್ಟಾರೆ 10.58 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts