ವಿಧಾನ ಪರಿಷತ್‌ನಲ್ಲಿ ಕಾರ್ಯದರ್ಶಿ 2 ಹುದ್ದೆ; ಹಾಲಿ ಕಾರ್ಯದರ್ಶಿ ಅಸಮ್ಮತಿ, ಸಚಿವಾಲಯದಲ್ಲಿ ತಿಕ್ಕಾಟ?

ಬೆಂಗಳೂರು; ಅತ್ಯಂತ ಚಿಕ್ಕ ಸಚಿವಾಲಯವಾಗಿರುವ  ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ  ಎರಡು ಕಾರ್ಯದರ್ಶಿ ಹುದ್ದೆಗಳು ಅವಶ್ಯಕತೆ ಇಲ್ಲದಿದ್ದರೂ  ಕಾರ್ಯದರ್ಶಿ-2 ಹುದ್ದೆ ಸೃಜಿಸಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಅಲ್ಲದೇ ಕಾರ್ಯದರ್ಶಿ-2 ಹುದ್ದೆಯನ್ನು ಸೃಜಿಸುವುದಕ್ಕೆ ಸಂಬಂಧಿಸಿದಂತೆ ಹಾಲಿ ಕಾರ್ಯದರ್ಶಿ ಮತ್ತು ಅಪರ ಕಾರ್ಯದರ್ಶಿ ಮಧ್ಯೆ ತಿಕ್ಕಾಟವೂ   ಶುರುವಾಗಿದೆ. ಕಾರ್ಯದರ್ಶಿ-2 ಹುದ್ದೆ ಸೃಜನೆಗೆ ಹಾಲಿ ಕಾರ್ಯದರ್ಶಿ ಅವರು ಅಸಮ್ಮತಿ ವ್ಯಕ್ತಪಡಿಸಿದ್ದರೂ ಸಹ ಈ ಹುದ್ದೆಯನ್ನು  ಸೃಜಿಸಿ ಕಾರ್ಯಾದೇಶ ಹೊರಡಿಸಲು ಸಭಾಪತಿ ಅವರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ.

 

ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿಯೂ ಕಾರ್ಯದರ್ಶಿ-2 ಹುದ್ದೆ ಸೃಜಿಸಲು ಸಭಾಧ್ಯಕ್ಷ ಯು ಟಿ ಖಾದರ್‍‌ ಅವರು ಈಗಾಗಲೇ ಆರ್ಥಿಕ ಇಲಾಖೆಗೆ ಬರೆದಿರುವ ಪತ್ರದ ಕುರಿತು ಸಚಿವಾಲಯದ ನೌಕರರ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿತ್ತು.  ಇದರ ಬೆನ್ನಲ್ಲೇ  ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಸೃಜಿಸಲು ಮುಂದಾಗಿರುವ ಕಾರ್ಯದರ್ಶಿ-2 ಹುದ್ದೆಯು, ಸಚಿವಾಲಯದಲ್ಲಿ ಅಧಿಕಾರಿಗಳ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ.

 

ಅಲ್ಲದೇ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಜಿಸಲು ಸಹಮತಿ ನೀಡಿರುವ ಆರ್ಥಿಕ ಇಲಾಖೆಯು ಸಚಿವಾಲಯದಲ್ಲಿ ಗುಂಪುಗಾರಿಕೆ, ಸಂಘರ್ಷ, ಘರ್ಷಣೆ, ಗೊಂದಲ, ತಿಕ್ಕಾಟಗಳಿಗೂ ಕಾರಣವಾಗಲಿದೆ.

 

ಈ ಸಂಬಂಧ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ ನಿರ್ಮಲ ಅವರಿಗೆ ತಾತ್ಕಾಲಿಕವಾಗಿ ಕಾರ್ಯದರ್ಶಿ-2 ಹುದ್ದೆಯನ್ನು ಉನ್ನತೀಕರಿಸುವ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ಮಾಹಿತಿ ಮತ್ತು ಸ್ಪಷ್ಟನೆ ಕೋರಿ  2023ರ ಆಗಸ್ಟ್‌ 9ರಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಪತ್ರ ಬರೆದಿದ್ದರು.

 

ಈ ಪತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ  ವಿಧಾನ ಪರಿಷತ್ತಿನ ಸಚಿವಾಲಯದ ಹಾಲಿ ಕಾರ್ಯದರ್ಶಿ ಕೆ ಆರ್‍‌ ಮಹಾಲಕ್ಷ್ಮಿ ಅವರು ಕಾರ್ಯದರ್ಶಿ-2 ಹುದ್ದೆ ಸೃಜನೆಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ದ್ವಿ ಸದನ ಹೊಂದಿರುವ ರಾಜ್ಯಗಳಲ್ಲಿನ ಸಚಿವಾಲಯಗಳ ಹುದ್ದೆಗಳು ಮತ್ತು ಆಡಳಿತ ಕಾರ್ಯವೈಖರಿ ಕುರಿತು ಮಾಹಿತಿ ಒದಗಿಸಿದ್ದಾರೆ.

 

ಟಿಪ್ಪಣಿ ಹಾಳೆಯಲ್ಲೇನಿದೆ?

 

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಸೇವಾ ಷರತ್ತುಗಳು) ನಿಯಮಗಳು 2021 ಅನ್ವಯ ಎರಡು ಕಾರ್ಯದರ್ಶಿ ಹುದ್ದೆಗಳನ್ನು ಪರಿಗಣಿಸಲು ಅವಕಾಶವಿರುವುದಿಲ್ಲ.

 

ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ಸುಮಾರು 900 ಅಧಿಕಾರಿ, ನೌಕರರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಚಿವಾಲಯದಲ್ಲಿ 01 ಕಾರ್ಯದರ್ಶಿ ಹುದ್ದೆ ಮಾತ್ರ ಇದೆ. ಕಾರ್ಯದರ್ಶಿ ಹುದ್ದೆಯ ಕೆಳಗಿನ ಹುದ್ದೆಯಾಗಿ ಜಂಟಿ ಕಾರ್ಯದರ್ಶಿ ಹುದ್ದೆಯಿದ್ದು ವಿಧಾನಸಭೆ ಸಚಿವಾಲಯದಲ್ಲಿ ಅಪರ ಕಾರ್ಯದರ್ಶಿ ಹುದ್ದೆಯೂ ಇರುವುದಿಲ್ಲ ಎಂದು ಹಾಲಿ ಕಾರ್ಯದರ್ಶಿ ಕೆ ಆರ್‍‌ ಮಹಾಲಕ್ಷ್ಮಿ ಅವರು ಅಭಿಪ್ರಾಯ ನೀಡಿದ್ದಾರೆ ಎಂದು ಗೊತ್ತಾಗಿದೆ.

 

ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದೆ. ಈ ರಾಜ್ಯಗಳಲ್ಲಿಯೂ ಕಾರ್ಯದರ್ಶಿ-1, ಕಾರ್ಯದರ್ಶಿ 2 ಹುದ್ದೆಗಳು ಇವೆಯೇ ಎಂಬ ಬಗ್ಗೆ ಮಾಹಿತಿಯನ್ನೂ ಕೇಳಿತ್ತು. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ದ್ವಿಸದನಗಳಿಗೆ ಒಂದೇ ಸಚಿವಾಲಯವಿದೆ.

 

ಒಬ್ಬರೇ ಸೆಕ್ರೆಟರಿ ಜನರಲ್‌ ಇದ್ದಾರೆ.  ಇವರ ಕೆಳಗೆ ಅಪರ ಕಾರ್ಯದರ್ಶಿ ಹುದ್ದೆ ಇದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯು ಅಂಧ್ರ ವಿಧಾನಸಭೆಯಲ್ಇ ಮತ್ತು  ಜಂಟಿ ಕಾರ್ಯದರ್ಶಿಯು ವಿಧಾನ ಪರಿಷತ್ತಿನಲ್ಲಿ ಉಪಸ್ಥಿತರಿರುತ್ತಾರೆ. ಅವಶ್ಯಕ ಸಂದರ್ಭಗಳಲ್ಲಿ ಮಾತ್ರ ವಿಧಾನ ಪರಿಷತ್ತಿಗೆ ಪ್ರಧಾನ ಕಾರ್ಯದರ್ಶಿಯು ಹೋಗುತ್ತಾರೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಬಿಹಾರ ರಾಜ್ಯದಲ್ಲಿ ಒಂದೇ ಕಾರ್ಯದರ್ಶಿ ಹುದ್ದೆ ಇದೆ. ಕಾರ್ಯದರ್ಶಿ ಹುದ್ದೆ ಕೆಳಗೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಸಮನಾದ ಡೈರೆಕ್ಟರ್‍‌ ಹುದ್ದೆ ಇದೆ. ಮಹಾರಾಷ್ಟ್ರ ರಾಜ್ಯದಲ್ಲಿ ದ್ವಿಸದನಗಳಿಗೆ ಒಂದೇ ಸಚಿವಾಲಯವಿದೆ. ಎರಡೂ ಕಾರ್ಯದರ್ಶಿ ಹುದ್ದೆಗಳಿದೆ. ವಿಧಾನಸಭೆಗೆ ಕಾರ್ಯದರ್ಶಿ 1, ವಿಧಾನಪರಿಷತ್ತಿಗೆ ಕಾರ್ಯದರ್ಶಿ 2 ಹುದ್ದೆ ಇದೆ ಎಂಬ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

‘ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯವು 75 ಶಾಸಕರುಗಳನ್ನು ಹೊಂದಿದೆ. ಸಚಿವಾಲಯದಲ್ಲಿ 284 ಮಂಜೂರಾದ ಹುದ್ದೆಗಳಿವೆ. ಹೀಗಾಗಿ ಚಿಕ್ಕ ಸಚಿವಾಲಯಕ್ಕೆ ಎರಡು ಕಾರ್ಯದರ್ಶಿ ಹುದ್ದೆಗಳ ಅವಶ್ಯಕತೆ ಇಲ್ಲ. ಒಟ್ಟಾರೆಯಾಗಿ ವಿಧಾನ ಪರಿಷತ್ತು ಇರುವ ರಾಜ್ಯಗಳಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರುಗಳಿದ್ದು ಒಂದು ಕಾರ್ಯದರ್ಶಿ ಹುದ್ದೆ ಮಾತ್ರ ಇರುತ್ತದ. ಎಲ್ಲಿಯೂ ಸಹ ಎರಡು ಕಾರ್ಯದರ್ಶಿ ಹುದ್ದೆಗಳು ಇರುವುದಿಲ್ಲ,’ ಎಂದು ಉತ್ತರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಅಪರ ಕಾರ್ಯದರ್ಶಿ ಹುದ್ದೆಯು ಕಾರ್ಯದರ್ಶಿ ಹುದ್ದೆಯ ಕೆಳಗಿನ ಹಂತದ ಹುದ್ದೆಯಾಗಿರುತ್ತದೆ.  ಅಪರ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯದರ್ಶಿ -2 ಹುದ್ದೆಗೆ ಉನ್ನತೀಕರಿಸುವುದರಿಂದ ಎರಡು ಕಾರ್ಯದರ್ಶಿ ಹುದ್ದೆಗಳು ಸಮಾನಾಂತರ ಹುದ್ದೆಗಳಾಗುತ್ತವೆ.

 

‘ಆ ಮೂಲಕ ಎರಡೂ ಕಾರ್ಯದರ್ಶಿ ಹುದ್ದೆಗಳಿಗೆ ಕಾರ್ಯ ಹಂಚಿಕೆಗಳು ವಿಭಾಗವಾಗುವುದರ ಮೂಲಕ ಕಚೇರಿಯ ಆಡಳಿತದಲ್ಲಿ ವಿನಾ ಕಾರಣ ಗೊಂದಲ, ಘರ್ಷಣೆ, ಭಿನ್ನಾಭಿಪ್ರಾಯ, ತಿಕ್ಕಾಟಗಳು ಪ್ರಾರಂಭವಾಗಿ ಅಧಿಕಾರಿ, ನೌಕರರ ಶಿಸ್ತು ಮತ್ತು ಕೆಲಸದ ವಿಷಯದಲ್ಲಿ ಯಾರ ನಿಯಂತ್ರಣಕ್ಕೂ ಸಿಗದೇ ಕಚೇರಿಯಲ್ಲಿ ಗುಂಪುಗಾರಿಕೆಗಳು ಸೃಷ್ಟಿಯಾಗಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದಾಗಿ ಆಡಳಿತದ ಮೇಲೆ ಅತ್ಯಂತ ಪ್ರತಿಕೂಲ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಉನ್ನತೀಕರಣ ಪ್ರಕ್ರಿಯೆನ್ನು ದೀರ್ಘ ಕಾಲ ಒಂದೇ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸಿ ಮುಂಬಡ್ತಿ ಅವಕಾಶದಿಂದ ವಂಚಿತರಾದ ನೌಕರರುಗಳ ಜೇಷ್ಠತೆಯನ್ನು, ಸೇವಾ ಹಿರಿತನವನ್ನು ಕಾಪಾಡುವ ನಿಟ್ಟಿನಲ್ಲಿ ಉನ್ನತೀಕರಿಸುವ ಮೂಲಕ ಅವಕಾಶ ಕಲ್ಪಿಸುವುದಾಗಿದೆ. ನಿರ್ಮಲ ಅವರು ಅಪರ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿ 2 ವರ್ಷಗಳಾಗಿದ್ದು ದೀರ್ಘ ಕಾಲ ಅಪರ ಕಾರ್ಯದರ್ಶಿ ಹುದ್ದೆಯಲ್ಲಿಯೇ ಕಾರ್ಯನಿರ್ವಹಿಸಿರುವುದಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

 

‘ಕರ್ನಾಟಕ ವಿಧಾನಸಭೆಯಂತಹ ದೊಡ್ಡ ಸಚಿವಾಲಯದಲ್ಲಿ ಹಾಗೂ ವಿಧಾನ ಪರಿಷತ್ತನ್ನು ಹೊಂದಿರುವ ರಾಜ್ಯಗಳಲ್ಲಿ ಎಲ್ಲಿಯೂ ಸಹ ಎರಡು ಕಾರ್ಯದರ್ಶಿ ಹುದ್ದೆಗಳು ಇಲ್ಲದೇ ಇರುವುದರಿಂದ ಎರಡು ಕಾರ್ಯದರ್ಶಿ ಹುದ್ದೆಗಳ ಕಾರಣದಿಂದ ಆಡಳಿತದ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಉಂಟಾಗಲಿದೆ.  ಅಪರ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯದರ್ಶಿ -2 ಹುದ್ದೆಗೆ ಉನ್ನತೀಕರಿಸುವುದು ಸೂಕ್ತವಲ್ಲ,’  ಎಂದು ಹಾಲಿ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

 

ಕಾರ್ಯದರ್ಶಿ 2 ಹುದ್ದೆಯನ್ನು ಸೃಜಿಸುವಂತೆ ಕೇವಲ ಸಭಾಪತಿಯವರ ಕಚೇರಿ ಪತ್ರದ ಆಧಾರದ ಮೆಲೆ ಆರ್ಥಿಕ ಇಲಾಖೆಯು  ಅನಾಯಸವಾಗಿ ಹುದ್ದೆಯನ್ನು ಸೃಜಿಸಿದೆ.  ಆರ್ಥಿಕ ಇಲಾಖೆಯು ಕಾರ್ಯದರ್ಶಿ 2 ಹುದ್ದೆಯ ಸೃಜನತೆಯ ಅಗತ್ಯತೆ, ಕಾರ್ಯದ ಒತ್ತಡ, ಉದ್ದೇಶ ಹಾಗೂ ಹುದ್ದೆಯ ಸೃಜನೆಯಿಂದ ಆಗುವ ಆರ್ಥಿಕ ಹೊರೆ ಕುರಿತು ಸಚಿವಾಲಯದಿಂದ ಯಾವುದೇ ಸ್ಪಷ್ಟೀಕರಣ ಕೋರಿರುವುದಿಲ್ಲ ಎಂದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ವಿಧಾನ ಪರಿಷತ್ತಿನಂತಹ ಅತ್ಯಂತ ಚಿಕ್ಕ ಸಚಿವಾಲಯಕ್ಕೆ ಅನಗತ್ಯವಾದ ಕಾರ್ಯದರ್ಶಿ 2 ಹುದ್ದೆಯನ್ನು ಸೃಜಿಸುವುದರಿಂದ ಸರ್ಕಾರಕ್ಕೆ ಅನಾವಶ್ಯಕವಾಗಿ ಆರ್ಥಿಕ ಹೊರೆ ಬಿದ್ದಂತಾಗುತ್ತದೆ. ಸಚಿವಾಲಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಮನಿಸದೇ ಕಾರ್ಯದರ್ಶಿ-2 ಹುದ್ದೆಯನ್ನು ಕೇವಲ ಒಬ್ಬರ ವೈಯಕ್ತಿಕ ಹಿತಾಸಕ್ತಿಗಾಗಿ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಸೃಜಿಸಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

 

ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳು  ವಿವಿಧ ಕಾರ್ಯಚಟುವಟಿಕೆಗಳ ಅತೀವ ಹೊರೆಯಿಂದಾಗಿ ದಕ್ಷತೆಯನ್ನು ಕಾಯ್ದುಕೊಳ್ಳಲಾಗುತ್ತಿಲ್ಲ ಎಂದು ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಬರೆದಿರುವ ಟಿಪ್ಪಣಿಯು ಚರ್ಚೆಗೆ ಗ್ರಾಸವಾಗಿದ್ದನ್ನು ಸ್ಮರಿಸಬಹುದು.

ಕೆಲಸದ ಹೊರೆ, ಕಾಯ್ದುಕೊಳ್ಳದ ದಕ್ಷತೆ; ಕಾರ್ಯದರ್ಶಿ-2 ಹುದ್ದೆಗೆ ಸ್ಪೀಕರ್‌ ಸಮರ್ಥನೆ

ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆಯನ್ನು ಸೃಜಿಸುವ ಸಂಬಂಧ ಸಚಿವಾಲಯ ನೌಕರರ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿತ್ತು.

the fil favicon

SUPPORT THE FILE

Latest News

Related Posts