ಸಿದ್ದರಾಮಯ್ಯ ಅವಧಿಯೂ ಸೇರಿ ಅಭಿವೃದ್ದಿ ನಿಗಮಗಳಲ್ಲಿ 400 ಕೋಟಿಗೂ ಅಧಿಕ ಅಕ್ರಮ

ಬೆಂಗಳೂರು; ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ  ಅಂಬೇಡ್ಕರ್‍‌ ಅಭಿವೃದ್ದಿ ನಿಗಮದಲ್ಲಿ 4.95 ಕೋಟಿ ರು. ದುರುಪಯೋಗವಾಗಿತ್ತು. ಅಲ್ಲದೇ ಈ ಮೊತ್ತವು ಫಲಾನುಭವಿಗಳ ಖಾತೆಗೆ ಜಮೆಯೇ ಆಗಿರಲಿಲ್ಲ ಎಂದು ಈಗಿನ ಕಾಂಗ್ರೆಸ್‌ ಸರ್ಕಾರವೇ ಉತ್ತರ ಒದಗಿಸಿದೆ.  ಇಲಾಖೆ ನೀಡಿದ್ದ ಉತ್ತರವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪುನರುಚ್ಛರಿಸಿದ್ದಾರೆ.

 

ವಿಧಾನ ಪರಿಷತ್‌ನ ಸದಸ್ಯ ತಿಪ್ಪಣ್ಣ ಕಮಕನೂರು ಅವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ (ಸಂಖ್ಯೆ 475 (311) ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಉತ್ತರ ಒದಗಿಸಿದ್ದಾರೆ. ಈ ಉತ್ತರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ನಗರ ಜಿಲ್ಲೆಯಲ್ಲಿ  2017ರ ಜೂನ್‌ 27 ಮತ್ತು 2018ರ ಜೂನ್‌ 30ರವರೆಗೆ ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸಿದ್ದ ಸ್ವಯಂ ಉದ್ಯೋಗ ಮತ್ತು ಐಎಸ್‌ಬಿ ಯೋಜನೆಗಳಡಿಯಲ್ಲಿ ಸಲ್ಲಿಸಿದ್ದ ಅರ್ಜಿಯಗಳನ್ನು ಸರಿಯಾಗಿ ಪರಿಶೀಲನೆ ನಡೆಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

 

ಅರ್ಜಿದಾರರ ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಮತ್ತು ಬ್ಯಾಂಕ್‌ನ ನಿಯಮ, ಮಾರ್ಗಸೂಚಿಗಳನ್ನು ಅನುಸರಿಸಿರಲಿಲ್ಲ. ಆದರೆ ಕೆನರಾ ಬ್ಯಾಂಕ್‌ನ ಕಲ್ಕೆರೆ ಶಾಖೆಗೆ ಎಲ್ಲಾ ಅರ್ಜಿಗಳನ್ನು ಸಾಲ ಮಂಜೂರಾತಿಗಾಗಿ  ಅಧಿಕಾರಿಗಳು  ಕಳಿಸಿದ್ದರು. ಬ್ಯಾಂಕ್‌ನಿಂದ ಕ್ಲೈಂ ಬಂದ ನಂತರ ಒಂದೇ ಬ್ಯಾಂಕ್‌ಗೆ 4,94,57,000 ರು ಸಹಾಯ ಧನ ಬಿಡುಗಡೆ ಮಾಡಲಾಗಿತ್ತು. ಏಕ ಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಅರ್ಜಿದಾರರಿಗೆ ಆದೇಶ ಹೊರಡಿಸಲಾಗಿತ್ತು.

 

ಆದರೆ ಈ ಹಣವು ಫಲಾನುಭವಿಗಳ ಖಾತೆಗೆ ಜಮೆಯಾಗದೇ 10ಜನ ಮಧ್ಯವರ್ತಿಗಳ ಖಾತೆಗೆ ಜಮೆ ಮಾಡಲಾಗಿತ್ತು ಎಂಬ ಆರೋಪದ ವಿವರವನ್ನು ಉತ್ತರದಲ್ಲಿ ಒದಗಿಸಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ಅಂದಿನ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಜಿ ಪದ್ಮನಾಭ ಮತ್ತು ಅರುಣ್‌ ಕುಮಾರ್‍‌ ಎಂಬುವರ ವಿರುದ್ಧ ಮಾಗಡಿ ರಸ್ತೆಯ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ  (0191/2019) (ಸಿಸಿ ನಂ 7075/2021) ದಾಖಲಾಗಿತ್ತು. ಮತ್ತು ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಮಾಹಿತಿ ಒದಗಿಸಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ ಅಧಿಕಾರಿಗಳು 4,94,57,000 ರು.ಗಳನ್ನು 2021ರ ಮಾರ್ಚ್‌ 24ರಂದು ನಿಗಮದ ಖಾತೆಗೆ ಹಿಂದಿರುಗಿಸಿದ್ದರು. ನಿಗಮದ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಇಲಾಖೆ ವಿಚಾರಣೆ ಕೈಗೊಳ್ಳಲಾಗಿತ್ತು. ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನಡೆದಿದ್ದ ವಿಚಾರಣೆಯಲ್ಲಿ ಅಧಿಕಾರಿ, ಸಿಬ್ಬಂದಿಗಳ ವಿರುದ್ಧದ ಆರೋಪಗಳು ಸಾಬೀತಾಗಿರಲಿಲ್ಲ. ಹೀಗಾಗಿ ಅಧಿಕಾರಿ, ಸಿಬ್ಬಂದಿಗಳನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿತ್ತು ಎಂಬುದು ಉತ್ತರದಿಂದ ಗೊತ್ತಾಗಿದೆ.

 

ಹೀಗಾಗಿ ಆಪಾದಿತ ಅಧಿಕಾರಿಗಳನ್ನು ಕರ್ತವ್ಯಕ್ಕೆ ಪುನರ್‍‌ ಸ್ಥಾಪಿಸಲಾಗಿದೆ. ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ಆರೋಪಿ ಎಂದು ದೂಷಿಸಲಾಗಿದ್ದ ಪದ್ಮನಾಭ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೆ ಅವರು ತಪ್ಪಿತಸ್ಥರು ಎಂದು ಸಾಬೀತಾಗದ ಕಾರಣ ಅವರನ್ನು 2022ರ ನವೆಂಬರ್‍‌ 10ರಂದು ಕರ್ತವ್ಯಕ್ಕೆ ಪುನರ್‍‌ ಸ್ಥಾಪಿಸಲಾಗಿತ್ತು ಎಂದು ತಿಳಿದು ಬಂದಿದೆ.

 

ವಿಶೇಷವೆಂದರೇ  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮವೆಸಗಿ ಬಂಧನಕ್ಕೊಳಗಾಗಿರುವ ಜೆ ಜಿ ಪದ್ಮನಾಭ ಅವರು ಈ ಹಿಂದೆ 2017-18ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಇದೇ ಮಾದರಿಯಲ್ಲಿ ಸುಮಾರು ರೂ.5 ಕೋಟಿ ಅಕ್ರಮ‌ ಎಸಗಿ ಅಮಾನತ್ತುಗೊಂಡು, ಇಲಾಖಾ ವಿಚಾರಣೆ ಎದುರಿಸುತ್ತಿದ್ದರು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

 

‘ಇಂದು ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಿರುವ ಇದೇ ಬಿಜೆಪಿ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲಿ ಪದ್ಮನಾಭ ಅವರನ್ನು ಆರೋಪಮುಕ್ತಗೊಳಿಸಿ, ಅವರ ಭ್ರಷ್ಟಾಚಾರದ ಪ್ರಯತ್ನಗಳಿಗೆ ಅಧಿಕೃತ ಬೆಂಬಲದ ಮುದ್ರೆ ಒತ್ತಿದ್ದರು. ಆತ ಮಾಡಿದ ತಪ್ಪಿಗೆ ಹಿಂದಿನ ಬಿಜೆಪಿ ಸರ್ಕಾರ ಕ್ಲೀನ್ ಚಿಟ್ ಕೊಡುವ ಬದಲು ಶಿಕ್ಷೆ ಕೊಟ್ಟಿದ್ದರೆ ಇಂದು ಆತ ನೂರಾರು ಕೋಟಿ ಅವ್ಯವಹಾರ ಮಾಡುವಷ್ಟು ಬಲಿತುಕೊಳ್ಳುತ್ತಿರಲಿಲ್ಲ. ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು ಎನ್ನುವುದಕ್ಕೆ ಇನ್ನೂ ಪುರಾವೆ ಬೇಕಾ,’ ಎಂದೂ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

 

ಅದೇ ರೀತಿ ತುಮಕೂರು ಜಿಲ್ಲೆಯಲ್ಲಿಯೂ ಹಣ ದುರುಪಯೋಗವಾಗಿತ್ತು. ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಜಯಣ್ಣ ಎಂಬುವರ ಅವಧಿಯಲ್ಲಿ (2019-20, 2020-21) ಉದ್ಯಮ ಶೀಲತಾ ಯೋಜನೆ, ನೇರ ಸಾಲ ಯೋಜನೆ, ಮೈಕ್ರೋ ಕ್ರೆಡಿಟ್‌ ಪ್ರೇರಣಾ ಯೋಜನೆ, ಸಮೃದ್ಧಿ, ಐರಾವತ ಯೋಜನೆಗಳಲ್ಲಿಯೂ 4,20,23,872 ರು.ಗಳನ್ನು ದುರುಪಯೋಗಪಡಿಸಿಕೊಂಡಿದ್ದರು. ಇದು ತನಿಖೆಯಲ್ಲಿ ದೃಢಪಟ್ಟಿತ್ತು ಎಂದು ಸರ್ಕಾರವು ಉತ್ತರಿಸಿದೆ.

 

ಈ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಸಂಬಂಧ ಜಿಲ್ಲಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಲಾಖೆ ವಿಚಾರಣೆ ಪೂರ್ಣಗೊಂಡಿದೆ. ಇದನ್ನಾಧರಿಸಿ ಆರೋಪಿ ಅಧಿಕಾರಿಗೆ 2ನೇ ಬಾರಿಗೆ ಕಾರಣ ಕೇಳುವ ನೋಟೀಸ್‌ ಜಾರಿಯಾಗಿದೆ ಎಂದು ತಿಳಿದು ಬಂದಿದೆ.

 

ಕರ್ನಾಟಕ  ಭೋವಿ ಅಭಿವೃದ್ದಿ  ನಿಗಮದಲ್ಲಿ 2021-22ನೇ ಸಾಲಿನಲ್ಲಿ  ಅಕ್ರಮವಾಗಿ ಸರ್ಕಾರದ 88.74  ಕೋಟಿ ರುಗ.ಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಆಗಿದೆ. ಈ ಪ್ರಕರಣದಲ್ಲಿ ಯೆಸ್‌ ಬ್ಯಾಂಕ್‌ ಭಾಗಿಯಾಗಿದೆ. ಸಿಐಡಿ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವೂ ಸೇರಿದಂತೆ ವಿವಿಧ ಸಮುದಾಯ ಅಭಿವೃದ್ಧಿ ನಿಗಮಗಳು, ಮಂಡಳಿಗಳಲ್ಲಿನ 401.54 ಕೋಟಿ ರು.ಗಳಷ್ಟು ಮೊತ್ತವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಿರುವ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

 

ಇದರ ಬೆನ್ನಲ್ಲೇ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ವಿವಿಧ ಸಮುದಾಯ ಅಭಿವೃದ್ಧಿ ನಿಗಮಗಳು, ಮಂಡಳಿಗಳಲ್ಲಿನ ಕೋಟ್ಯಂತರ ರುಪಾಯಿಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡುತ್ತಿರುವುದು ಬೆಳಕಿಗೆ ಬಂದಿವೆ.

 

ಈ ಅಭಿವೃದ್ಧಿ ನಿಗಮಗಳಲ್ಲಿನ ಬಹುಕೋಟಿಗಳಷ್ಟು ಹಣವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿರುವ ಪ್ರಕರಣಗಳಲ್ಲಿ ಖಾಸಗಿ ಬ್ಯಾಂಕ್‌ಗಳು ಶಾಮೀಲಾಗಿವೆ ಎಂದು ಗೊತ್ತಾಗಿದೆ.

 

ಅಕ್ರಮ ಹಣ  ವರ್ಗಾವಣೆ ಪ್ರಕರಣಗಳ ಪಟ್ಟಿ

 

ಕೃಷಿ ಮಾರುಕಟ್ಟೆ ಮಂಡಳಿಯಲ್ಲಿ 47.17 ಕೋಟಿ ಗಳ ಸ್ಥಿರ ಠೇವಣಿಯನ್ನು ಚಾಲ್ತಿ ಖಾತೆಗಳಿಗೆ ವರ್ಗಾವಣೆ ಮಾಡಿ ನಂತರ ಖಾಸಗಿ ವ್ಯಕ್ತಿಗಳಿಗೆ ಸಂದಾಯ ಮಾಡಲಾಗಿದೆ ಎಂದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಭಾಗಿಯಾಗಿದೆ ಎಂಬ ಆರೋಪವಿದೆ. ಸಿಸಿಬಿಯು ಈ ಪ್ರಕರಣದ ಕುರಿತು ತನಿಖೆ ನಡೆಸಿದೆ. ಬ್ಯಾಂಕ್‌ ನವರು ಆ ನಂತರ ಹಣವನ್ನು ಮರು ಪಾವತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮವು ವಿಜಯಾ ಬ್ಯಾಂಕ್‌ನಲ್ಲಿದ್ದ 22.43 ಕೋಟಿ ರು.ಗಳ ಸ್ಥಿರ ಠೇವಣಿಯನ್ನು ಎಸ್‌ಬಿಐ ಬ್ಯಾಂಕ್‌ನ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಖಾಸಗಿ ವ್ಯಕ್ತಿಗಳಿಗೆ ಸಂದಾಯ ಮಾಡಲಾಗಿದೆ ಎಂಬ ಆರೋಪವಿದೆ. ಈ ಕುರಿತು ತನಿಖೆ ಮಾಡಿರುವ ಸಿಐಡಿಯು ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಇದರಲ್ಲಿ 2.5 ಕೋಟಿ ರು ಮೌಲ್ಯದ ಚರಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

 

ವಿಶೇಷವೆಂದರೇ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ 94 ಕೋಟಿ ರು.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿಯೂ ಇದೇ ಪದ್ಮನಾಭ್‌ ಅವರನ್ನು ಬಂಧಿಸಲಾಗಿದೆ.

 

ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್‌ ನಿಗಮವು 2021-22ರಿಂದ 2022-23 ರಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಕಾರಣ 47 ಕೋಟಿ ರು. ನಷ್ಟವಾಗಿದೆ. 3. ಕೋಟಿ ರುಗ.ಳನ್ನು ನಿಗಮದ ಮಾಜಿ ಅಧ್ಯಕ್ಷ ವೀರಯ್ಯ ಅವರ ಸ್ವಂತ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಡಿ ಎಸ್‌ ವೀರಯ್ಯ ಅವರನ್ನು ಬಂಧಿಸಲಾಗಿದೆ.

 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಇಲಾಖೆಯ ಗಮನಕ್ಕೆ ತರದೇ 10 ಕೊಟಿ ರು.ಗಳನ್ನುಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಎಸ್‌ಬಿಎಂ ಬ್ಯಾಂಕ್ ಭಾಗಿಯಾಗಿದೆ ಎಂಬ ಆರೋಪವಿದೆ. ಈ ಪ್ರಕರಣದ ಕುರಿತು ಪೊಲಿಸ್‌ ತನಿಖೆ ನಡೆದಿತ್ತು. ನಂತರ ಇದನ್ನು ಸಿಐಡಿಗೆ ವರ್ಗಾವಣೆ ಆಗಿದೆ. ನಂತರ ಸಿಬಿಐ ವರ್ಗಾವಣೆ ಆಗಿದೆ ಎಂದು ಗೊತ್ತಾಗಿದೆ.

 

ಕೆಐಎಡಿಬಿ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಬೆಂಗಳೂರು ಶಾಖೆಯಿಮದ ಸೇಲಂ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಭಾಗಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 

ಸಮುದಾಯ ಅಭಿವೃದ್ದಿ ನಿಗಮಗಳೂ ಸೇರಿದಂತೆ ಇನ್ನಿತರೆ ಮಂಡಳಿಗಳಲ್ಲಿ ಕಳೆದ ವರ್ಷಗಳಲ್ಲಿ ಒಟ್ಠಾರೆ 400 ಕೋಟಿ ರು ಅಧಿಕ ಮೊತ್ತವನ್ನು ಅಕ್ರಮವಾಗಿ ಅನಧಿಕೃತ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಫಲಾನುಭವಿಗಳಿಗೆ ಸೇರಬೇಕಿದ್ದ ಹಣವು ದುರುಪಯೋಗವಾಗಿತ್ತು. ಈ ಅವಧಿಯಲ್ಲಿ ಜಗದೀಶ್‌ ಶೆಟ್ಟರ್‍‌, ಬಿ ಎಸ್‌ ಯಡಿಯೂರಪ್ಪ, ಹೆಚ್‌ ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಅವರೂ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts