ಕೆಲಸದ ಹೊರೆ, ಕಾಯ್ದುಕೊಳ್ಳದ ದಕ್ಷತೆ; ಕಾರ್ಯದರ್ಶಿ-2 ಹುದ್ದೆಗೆ ಸ್ಪೀಕರ್‌ ಸಮರ್ಥನೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳು  ವಿವಿಧ ಕಾರ್ಯಚಟುವಟಿಕೆಗಳ ಅತೀವ ಹೊರೆಯಿಂದಾಗಿ ದಕ್ಷತೆಯನ್ನು ಕಾಯ್ದುಕೊಳ್ಳಲಾಗುತ್ತಿಲ್ಲ ಎಂದು ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಬರೆದಿರುವ ಟಿಪ್ಪಣಿಯು ಚರ್ಚೆಗೆ ಗ್ರಾಸವಾಗಿದೆ.

 

ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆಯನ್ನು ಸೃಜಿಸುವ ಸಂಬಂಧ ಸಚಿವಾಲಯ ನೌಕರರ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿದೆ. 2024ರ ಏಪ್ರಿಲ್‌ 29ರಂದು ಬರೆದಿದ್ದ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಧಾನಸಭೆ ಸಚಿವಾಲಯದಲ್ಲಿ ಹಲವು ವರ್ಷಗಳಿಂದಲೂ ಒಬ್ಬರೇ ಕಾರ್ಯದರ್ಶಿ ಇದ್ದರು. ಶಾಸಕಾಂಗದ ಸಮಿತಿಗಳು, ಜಂಟಿ ಸದನ ಸಮಿತಿ, ಅಧಿವೇಶನದ ಕಾರ್ಯಕಲಾಪಗಳನ್ನೂ ಒಬ್ಬರೇ ಕಾರ್ಯದರ್ಶಿ ನಿರ್ವಹಿಸುತ್ತಿದ್ದರು. ಆಗೆಲ್ಲೂ ಹೊರೆ ಎಂದು ಯಾವ ಕಾರ್ಯದರ್ಶಿಯೂ ಸಭಾಧ್ಯಕ್ಷರಿಗೆ  ಹೇಳಿರಲಿಲ್ಲ .

 

ಆದರೀಗ ಈಗಿನ ಕಾರ್ಯದರ್ಶಿಗಳಿಗೆ ಕಾರ್ಯಚಟುವಟಿಕೆಗಳ ಅತೀವ ಹೊರೆಯಾಗುತ್ತಿದೆ ಎಂಬ ಕಾರಣವನ್ನು ಮುಂದಿರಿಸಿರುವ ಸಭಾಧ್ಯಕ್ಷರು, ಹಾಲಿ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರಿಗೆ ಸಮಾನಾಂತರವಾಗಿ ಮತ್ತೊಂದು ಕಾರ್ಯದರ್ಶಿ 2 ಹುದ್ದೆಯನ್ನು ಸೃಜಿಸಿರುವುದಕ್ಕೆ ವಿಧಾನಸಭೆ ಸಚಿವಾಲಯದಲ್ಲಿ ವಿರೋಧ ವ್ಯಕ್ತವಾಗಿದೆ.

 

ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದ ಎಸ್‌ ಮೂರ್ತಿ ಅವರ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ಮೇರೆಗೆ ಅವರನ್ನು ಅಮಾನತಗೊಳಿಸಿದ ನಂತರ ಎಂ ಕೆ ವಿಶಾಲಾಕ್ಷಿ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.

 

ಪತ್ರದಲ್ಲೇನಿದೆ?

 

ವಿಧಾನಮಂಡಲದ ಅಧಿವೇಶನ, ಶಾಸನಸಭೆಯ ವಿವಿಧ ಸಮಿತಿಗಳು, ಜಂಟಿ ಸದನ ಸಮಿತಿ ಕಾರ್ಯ ಚಟುವಟಿಕೆಗಳ ನಿರ್ವಹಣೆ ಮತ್ತು ಇವುಗಳನ್ನು ಸುಗಮವಾಗಿ ನಡೆಸುವಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯವರ ಮೇಲೆ ಅತೀವ ಹೊರೆಯಿರುವ ಪರಿಣಾಮ ದಕ್ಷತೆಯನ್ನು ಕಾಯ್ದುಕೊಳ್ಳಲಾಗುತ್ತಿಲ್ಲ. ಹೀಗಾಗಿ ಕೆಲಸದ ಗುಣಮಟ್ಟವೂ ಹದಗೆಡುತ್ತಿದೆ ಎಂದು ಪತ್ರದಲ್ಲಿಉಲ್ಲೇಖಿಸಿರುವುದು ಗೊತ್ತಾಗಿದೆ.

 

ಶಾಸಕಾಂಗ ಸಭೆಯ ಸಚಿವಾಲಯದ ಸುಗಮ ಮತ್ತು ಸಮರ್ಥ ಕಾರ್ಯನಿರ್ವಹಣೆ, ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ದೈನಂದಿನ ಕೆಲಸವನ್ನು ತ್ವರಿತವಾಗಿ ವಿಲೇವಾರಿ ಮಾಡಲು ಚಾಲ್ತಿಯಲ್ಲಿರುವ ಕಾರ್ಯದರ್ಶಿ-2 ಹುದ್ದೆಯನ್ನು ಮರುಸೃಷ್ಟಿಸಬೇಕು ಎಂದು ಪತ್ರದಲ್ಲಿ ಸಮರ್ಥಿಸಿಕೊಂಡಿರುವುದು ತಿಳಿದು ಬಂದಿದೆ.

 

ಕಾರ್ಯದರ್ಶಿ -2 ಹುದ್ದೆ ಸೃಜಿಸಿದಲ್ಲಿ ಆರ್ಥಿಕವಾಗಿ ಹೆಚ್ಚುವರಿ ಹೊರೆಯಾಗುವುದಿಲ್ಲ. ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು 1,04,600 ರು-1,50,600 ರು. ವೇತನ ಶ್ರೇಣಿ ತಲುಪಿರುವ ಅಧಿಕಾರಿಯನ್ನೇ ಕಾರ್ಯದರ್ಶಿ-2 ಹುದ್ದೆ ಸೃಜಿಸಿ ಕಾರ್ಯಭಾರ ಹಂಚಿಕೆ ಮಾಡಲಾಗುವುದು. ಕಾರ್ಯದರ್ಶಿ-2 ಹುದ್ದೆಗೆ ಆರ್ಥಿಕ ಇಲಾಖೆ ಸಹಮತಿ ನೀಡಬೇಕು ಎಂದು ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ವಿಧಾನಸಭೆ ಸಚಿವಾಲಯದಲ್ಲಿ ಹಾಲಿ ಇರುವ ಕಾರ್ಯದರ್ಶಿಗೆ ಅಧಿವೇಶನದ ಕೆಲಸದ ಹೊರತಾಗಿ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವ ಗುರುತರವಾದ ಜವಾಬ್ದಾರಿ ಇದೆ. ಇದರಿಂದ ಕಾರ್ಯಭಾರ ಹೆಚ್ಚಿದೆ. ಅಧಿವೇಶನ ಇಲ್ಲದ ಅವಧಿಗಳಲ್ಲಿ 16ಕ್ಕೂ ಹೆಚ್ಚು ಶಾಸನಸಭೆಯ ಸಮಿತಿಗಳ ಕಾರ್ಯನಿರ್ವಹಣೆ, ಜಂಟಿ ಸದನ ಸಮಿತಿಗಳ ಚಟುವಟಿಕೆಗಳನ್ನು ನಿರ್ವಹಿಸಬೇಕಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

ಅದೇ ರೀತಿ ದೈನಂದಿನ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳು, ಸಚಿವಾಲಯದ ಲೆಕ್ಕಪತ್ರಗಳು, ಗ್ರಂಥಾಲಯ, ಸಂಶೋಧನೆ, ಭಾಷಾಂತರ, ಕಾರ್ಯಕಾರಿ, ಪ್ರಶ್ನೆಗಳ ಶಾಖೆ, ಮಾಹಿತಿ, ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳ ಕಾರ್ಯಚಟುವಟಿಕೆಗಳನ್ನೂ ನಿರ್ವಹಿಸಬೇಕಿದೆ.

 

ಈ ಎಲ್ಲಾ ಆಡಳಿತಾತ್ಮಕ ಕೆಲಸಗಳಿಗಾಗಿ ಕಾರ್ಯದರ್ಶಿಯು ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕು. ಆದರೆ ಈ ಕೆಲಸವನ್ನು ನಿರ್ವಹಿಸಲು ಕಾರ್ಯದರ್ಶಿಗೆ ಪ್ರಾಯೋಗಿಕವಾಗಿ ಅಸಾಧ್ಯ. ಅದಕ್ಕಾಗಿಯೇ ಹೆಚ್ಚುವರಿ ಕಾರ್ಯದರ್ಶಿ, ವಿಶೇಷ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ-2 ರ ಆರಂಭಿಕ ಅವಧಿಯಲ್ಲಿ ಮಂಜೂರು ಮಾಡಲಾಗಿತ್ತು ಪತ್ರದಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts