ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಕೆ ವೆಂಕಟೇಶ್ ಮತ್ತು ಸಹಕಾರ ಸಚಿವ ಕೆ ಎನ್ ರಾಜಣ್ಣ ಮತ್ತು ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಅವರ ತವರು ಜಿಲ್ಲೆ ಸೇರಿದಂತೆ ಅವರ ತವರು ಜಿಲ್ಲೆಯಲ್ಲಿನ ಸಾಮಾನ್ಯ ವರ್ಗದ 8.92 ಲಕ್ಷ ಸಂಖ್ಯೆಯಲ್ಲಿನ ಹಾಲು ಉತ್ಪಾದಕರಿಗೆ 602.84 ಕೋಟಿ ರು ಪಾವತಿಸಿಲ್ಲ.
ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಅವರು ಕೇಳಿರುವ ಪ್ರಶ್ನೆಗೆ ಪಶುಸಂಗೋಪನೆ, ಹೈನುಗಾರಿಕೆ ಸಚಿವ ಕೆ ವೆಂಕಟೇಶ್ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಪಾವತಿಸಲು 602.84 ಕೋಟಿ ರು ಪಾವತಿಗೆ ಬಾಕಿ ಇರಲು ಅನುದಾನ ಕೊರತೆಯೇ ಕಾರಣ ಎಂಬುದನ್ನು ಸರ್ಕಾರವು ಲಿಖಿತ ಉತ್ತರದಲ್ಲೇ ಒಪ್ಪಿಕೊಂಡಿದೆ.
‘2023-24ನೇ ಸಾಲಿನಲ್ಲಿ ನಿಗದಿಯಾದ 1,300 ಕೋಟಿ ರು.ಅನುದಾನದಲ್ಲಿ 324.99 ಕೋಟಿ ರು ಮಾತ್ರ ಬಿಡುಗಡೆಯಾಗಿತ್ತು. ಈ ಅನುದಾನದಲ್ಲಿಯೇ 297.45 ಕೋಟಿ ರು ಪಾವತಿಸಲಾಗಿದೆ. ಅನುದಾನದ ಕೊರತೆ ಮತ್ತು ತಾಂತ್ರಿಕ ಅಡಚಣೆಯಿಂದಾಗಿ ಅಕ್ಟೋಬರ್ 2023ರಿಂದ ಫೆ.2024ರವರೆಗೆ ತಿಂಗಳಲ್ಲಿ ಪ್ರೋತ್ಸಾಹ ಧನ ಪಾವತಿಸಲು ಸಾಧ್ಯವಾಗಿಲ್ಲ,’ ಎಂದು ಸಚಿವ ಕೆ ವೆಂಕಟೇಶ್ ಅವರು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ಬಾಕಿ ವಿವರ
ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ 602.84 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಗುಣಮಟ್ಟದ ಹಾಲಿಗೆ 2024-25ನೇ ಸಾಲಿನಲ್ಲಿ ಸೆಪ್ಟಂಬರ್‍ನಲ್ಲಿ 39.18 ಕೋಟಿ ರು. ಪಾವತಿಸಿದ್ದು ಇನ್ನೂ 12.94 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಅಕ್ಟೋಬರ್‍ನಲ್ಲಿ 61.37 ಕೋಟಿ ರು. ಪಾವತಿಸಿದ್ದು 52.12 ಕೋಟಿ ರು. ಬಾಕಿ ಇರಿಸಿಕೊಂಡಿದೆ.
ನವೆಂಬರ್, ಡಿಸೆಂಬರ್ ಮತ್ತು 2024ರ ಜನವರಿ ಮತ್ತು ಫೆಬ್ರುವರಿಯಲ್ಲಿ ಬಿಡಿಗಾಸನ್ನೂ ಕೊಟ್ಟಿಲ್ಲ. ಹೀಗಾಗಿ ಈ ನಾಲ್ಕು ತಿಂಗಳಲ್ಲಿ ಒಟ್ಟು 426,38 ಕೋಟಿ ರು. ಪಾವತಿಗೆ ಬಾಕಿ ಇರುವುದು ಉತ್ತರದಿಂದ ತಿಳಿದು ಬಂದಿದೆ.
2024ರ ಮಾರ್ಚ್‌ನಲ್ಲಿ 101.64 ಕೋಟಿ ರು. ಪಾವತಿಸಬೇಕಿತ್ತು. ಆದರೆ ಈ ಪೈಕಿ ಕೇವಲ 1.60 ಕೋಟಿ ರು ಮಾತ್ರ ಪಾವತಿಸಲಾಗಿದೆ. ಏಪ್ರಿಲ್‌ನಲ್ಲಿ 95.25 ಕೋಟಿ ರು ಪಾವತಿಸಬೇಕಿತ್ತು. ಆದರೆ 2.83 ಕೋಟಿ ರು ಮಾತ್ರ ಪಾವತಿಸಲಾಗಿದೆ. 2024ರ ಮೇ ನಲ್ಲಿ ಬಿಡಿಗಾಸನ್ನೂ ನೀಡಿಲ್ಲ. ಈ ತಿಂಗಳಲ್ಲಿ 106.97 ಕೋಟಿ ರು ಪಾವತಿಗೆ ಬಾಕಿ ಇದೆ. ಒಟ್ಟಾರೆ 2023ರ ಸೆಪ್ಟಂಬರ್‍ನಿಂದ ಮೇ 2024ರವರೆಗೆ 297.44 ಕೋಟಿ ರು ಮಾತ್ರ ಪಾವತಿಯಾಗಿರುವುದು ಗೊತ್ತಾಗಿದೆ.
8.92 ಲಕ್ಷ ಸಂಖ್ಯೆಯ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಪಾವತಿ ಬಾಕಿ ಇದೆ. ರಾಜ್ಯದಲ್ಲಿ ಹಾಲು ಉತ್ಪಾದಕರ ಸಂಖ್ಯೆ ಹಾಗೂ ಕರ್ನಾಟಕ ಹಾಲು ಮಹಾಮಂಡಳ ಸಂಗ್ರಹ ಮಾಡುತ್ತಿರುವ ಹಾಲಿನ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗಿರುತ್ತದೆ. ಆದ್ದರಿಂದ ಹೆಚ್ಚುವರಿ ಅನುದಾನ ಬಿಡುಗಡೆಗೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಇಲಾಖೆಯು ಸದನಕ್ಕೆ ಮಾಹಿತಿ ಒದಗಿಸಿದೆ.
ಪರಿಶಿಷ್ಟ ಜಾತಿ ವರ್ಗದ ಹಾಲು ಉತ್ಪಾದಕರಿಗೆ ಫೆ.2024ರಿಂದ ಮೇ 2024ರವರಿಗೆ 17.51 ಕೋಟಿ ರು.ಗಳನ್ನು ಪರಿಶಿಷ್ಟ ಪಂಗಡದ ವರ್ಗದ ಹಾಲು ಉತ್ಪಾದಕರಿಗೆ ಡಿಸೆಂಬರ್ 2023ರಿಂದ ಏಪ್ರಿಲ್ 2024ರವರೆಗೆ 10.01 ಕೋಟಿ ರು ಪ್ರೋತ್ಸಾಹ ಧನ ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮೊದಲನೇ ಕಂತಿನಲ್ಲಿ ಬಿಡುಗಡೆಯಾಗಿದ್ದ 324.99 ಕೋಟಿ ರು. ಸಂಪೂರ್ಣ ಪಾವತಿಸಲಾಗಿದೆ. ಎರಡನೇ ಕಂತಿನ ಅನುದಾನವೂ ಬಿಡುಗಡೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಜಿಲ್ಲೆಯೊಂದರಲ್ಲೇ 1,02,696 ರೈತರಿಗೆ 45,30,7,045 ರು ಪಾವತಿಗೆ ಬಾಕಿ ಇದೆ.
ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ತವರು ಜಿಲ್ಲೆ ತುಮಕೂರಿನಲ್ಲಿ 80,812 ರೈತರಿಗೆ 71,07,73,523 ರು ಬಾಕಿ ಇದೆ. ಬಳ್ಳಾರಿ 1,212 ಹಾಲು ಉತ್ಪಾದಕರಿಗೆ 11, 65,52,667 ಕೋಟಿ ರು ಪಾವತಿಸಬೇಕಿದೆ.