ಹೈಟೆಕ್‌ ಆಂಬುಲೆನ್ಸ್‌, ಇಸಿಜಿ ಯಂತ್ರ ಖರೀದಿಯಲ್ಲಿ ಅಕ್ರಮ; ಇಎಸ್‌ಐ ಆಸ್ಪತ್ರೆಗಳಲ್ಲಿ 16.32 ಕೋಟಿ ಅವ್ಯವಹಾರ?

ಬೆಂಗಳೂರು; ರಾಜ್ಯದ ಇಎಸ್‌ಐ ಆಸ್ಪತ್ರೆಗಳಿಗೆ 2023-24ನೇ ಸಾಲಿನಲ್ಲಿ 16.32 ಕೋಟಿ ರು. ವೆಚ್ಚದಲ್ಲಿ ಹೈಟೆಕ್‌ ಆಂಬ್ಯುಲೆನ್ಸ್‌, ಇಸಿಜಿ ಯಂತ್ರ ಸೇರಿದಂತೆ ವೈದ್ಯಕೀಯ ಸಲಕರಣೆ ಮತ್ತು ಔಷಧಗಳ ಖರೀದಿಯಲ್ಲಿ ಅಕ್ರಮದ ವಾಸನೆ ಬಡಿದಿದೆ.

 

ಹಾಗೆಯೇ ಸೂಕ್ತ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ಆಗದೇ ಇದ್ದರೂ ಸಹ ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಿದೆ.  ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗೆ ಖರೀದಿಯಾಗಿರುವ ಬಹುತೇಕ ವೈದ್ಯಕೀಯ ಸಲಕರಣೆಗಳು ಮತ್ತು ಪೀಠೋಪಕರಣಗಳು ಕಳಪೆಯಿಂದ ಕೂಡಿವೆ. ಈ ಕುರಿತು ಇಎಸ್‌ಐನ ವಿಚಕ್ಷಣಾ ದಳದ ತಪಾಸಣೆಯು ಬಹಿರಂಗಗೊಳಿಸಿದೆ.

 

ಅಲ್ಲದೇ ಈ ಕುರಿತು ರಾಜ್ಯ ಇಎಸ್‌ಐನ ನಿರ್ದೇಶಕರಿಗೂ 2024ರ ಜುಲೈ 8ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರಿಗೂ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.

 

ಪತ್ರದಲ್ಲೇನಿದೆ?

 

ಕಾರ್ಮಿಕ ವಿಮಾ ಆಸ್ಪತ್ರೆಗಳಿಗೆ 5.99 ಕೋಟಿ ರು. ವೆಚ್ಚದಲ್ಲಿ 8 ಹೈಟೆಕ್‌ (ಸಿ ಮಾದರಿ) ಆಂಬ್ಯುಲೆನ್ಸ್‌ ಗಳನ್ನು ಖರೀದಿ ಮಾಡಲಾಗಿದೆ. ಆದರೆ ಅದನ್ನು ಬಳಕೆ ಮಾಡಿಲ್ಲ. ಚಾಲಕರು ಮತ್ತು ಪ್ಯಾರಾ ಮೆಡಿಕಲ್‌ ಸಿಬ್ಬಂದಿ ನೇಮಕವಾಗಿರದ ಕಾರಣ ಈ ಆಂಬ್ಯಲೆನ್ಸ್‌ಗಳು ಬಳಕೆ ಮಾಡಿಲ್ಲ ಎಂದು ಪತ್ರದಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಇಸಿಜಿ ಯಂತ್ರಗಳು, ವಾಟರ್‍‌ ಕೂಲರ್ಸ್‌, ರೆಫ್ರಿರಿಜೇಟರ್‍‌ಗಳನ್ನು ಖರೀದಿ ಮಾಡಲಾಗಿದೆ. ಆದರೆ ಬಹುತೇಕ ಔಷಧಾಲಯಗಳಲ್ಲಿ ಧೂಳು ಹಿಡಿದು ಕೂತಿದೆ ಎಂಬುದು ಪತ್ರದಿಂದ ತಿಳಿದು ಬಂದಿದೆ.

 

ಔಷಧಾಲಯಗಳಿಗೆ 10.33 ಕೋಟಿ ರು ವೆಚ್ಚದಲ್ಲಿ ಖರೀದಿ ಮಾಡಲಾಗಿರುವ ಪೀಠೋಪಕರಣಗಳು ಕಳಪೆಯಾಗಿವೆ. ಹಲವು ಉಪಕರಣಗಳನ್ನು ಇನ್ನೂ ಅಳವಡಿಸಿಲ್ಲ. ಈ ಎಲ್ಲವನ್ನೂ ಪರಿಶೀಲಿಸಿ ಅಂಶವಾರು ಈ ಕಚೇರಿಗೆ ವಾಸ್ತವ ವರದಿಯನ್ನು ನೀಡಬೇಕು ಎಂದು 2024ರ ಜುಲೈ 8ರಂದು ಇಎಸ್‌ಐನ ಉಪ ನಿರ್ದೇಶಕರು (ವಿಚಕ್ಷಣಾ) ವಿನಯ್‌ ಕುಮಾರ್ ಶರ್ಮಾ ಅವರು ಕಾರ್ಮಿಕ ವಿಮಾ ಆಸ್ಪತ್ರೆಗಳ ರಾಜ್ಯ ನಿರ್ದೇಶಕರಿಗೆ ಸೂಚಿಸಿರುವುದು ಗೊತ್ತಾಗಿದೆ.

 

ಈ ಪತ್ರದ ಕುರಿತು ಮಾಹಿತಿ ಮತ್ತು ಸ್ಪಷ್ಟನೆ ಕೋರಿ ‘ದಿ ಫೈಲ್‌’, ರಾಜ್ಯದ ಇಎಸ್‌ಐ ನ ನಿರ್ದೇಶಕರಿಗೆ ವಾಟ್ಸಾಪ್‌ ಮೂಲಕ ಕೋರಿದೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರತಿಕ್ರಿಯೆ ಮತ್ತು ಮಾಹಿತಿ ಬಂದಲ್ಲಿ ಈ ವರದಿಯನ್ನು ನವೀಕರಿಸಲಾಗುವುದು.

 

ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ಕಾರ್ಮಿಕರ ರಾಜ್ಯ ವಿಮಾ ನಿಗಮದ ಆಸ್ಪತ್ರೆಗಳು ಪಾಳು ಬಿದ್ದಿವೆ. ಅನೇಕ ಆಸ್ಪತ್ರೆಗಳಲ್ಲಿ ಆಧುನಿಕ ವೈದ್ಯಕೀಯ ಸಲಕರಣೆ, ಉಪಕರಣಗಳ ಬಳಕೆ ಆಗುತ್ತಿಲ್ಲ. ಬೇಡಿಕೆ ಇರದೇ ಇದ್ದರೂ ಸಹ ಖರೀದಿ ಮಾಡಲಾಗಿದೆ ಎಂಬ ಆರೋಪಗಳೂ ಇವೆ.

 

ಕೋವಿಡ್‌ ಸಂದರ್ಭದಲ್ಲೇ ಹಿಂದಿನ ಸರ್ಕಾರವು ಕಾರ್ಮಿಕ ರಾಜ್ಯ ವಿಮಾ ನಿಗಮದ ಆಸ್ಪತ್ರೆಗಳ ಪುನರುಜ್ಜೀವನ ಮತ್ತು ನವೀಕರಣಕ್ಕೆ ಬಹುಕೋಟಿಗಳಷ್ಟು ಅನುದಾನ ನೀಡಿತ್ತು. ಆದರೆ ಹಲವು ಆಸ್ಪತ್ರೆಗಳಲ್ಲಿ ಸುಣ್ಣ ಬಣ್ಣ ಬಳಿದಿದ್ದು ಬಿಟ್ಟರೇ ಬೇರೆ ಯಾವುದೇ ಕಾಮಗಾರಿಯೂ ನಡೆದಿಲ್ಲ ಎಂಬ ಆಪಾದನೆಗಳಿವೆ.

 

ಅಗತ್ಯ ವೈದ್ಯಕೀಯ ಸಲಕರಣೆಗಳು ಇನ್ನೂ ಪೂರೈಕೆಯಾಗಿಲ್ಲ. ಅದೇ ರೀತಿ ಸರಬರಾಜು ಆಗಿರುವ ವೈದ್ಯಕೀಯ ಸಲಕರಣೆಗಳು ಕಳಪೆಯಿಂದ ಕೂಡಿವೆ. ಗುಣಮಟ್ಟದಿಂದ ಕೂಡಿರುವ ಸಲಕರಣೆಗಳಿದ್ದರೂ ಸಹ ಅದನ್ನು ಬಳಕೆ ಮಾಡದೇ ಹಾಳುಗೆಡವಲಾಗಿದೆ ಎಂಬ ಅನೇಕ ದೂರುಗಳು ದಾಖಲಾಗಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts