ಬೆಂಗಳೂರು; ಕರ್ನಾಟಕ ರಾಜ್ಯ ಪೊಲೀಸ್ ಶ್ವಾನ ದಳವು ಅಪರಾಧಗಳ ಪತ್ತೆದಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರೂ ಸಹ ಕರ್ನಾಟಕ ವಿಧಾನಸಭೆ ಸಚಿವಾಲಯವು ಖಾಸಗಿ ಕಂಪನಿಯ ಶ್ವಾನ ದಳದ ಸೇವೆ ಪಡೆಯಲು ಮುಂದಾಗಿದೆ.
ಇದೇ 15ರಿಂದ ನಡೆಯಲಿರುವ ವಿಧಾನಮಂಡಲದ ಅಧಿವೇಶನಕ್ಕೆ ಖಾಸಗಿ ಕಂಪನಿಯ ಶ್ವಾನ ದಳದ ಸೇವೆ ಪಡೆಯುವ ಸಂಬಂಧ ವಿಧಾನಸಭೆ ಸಚಿವಾಲಯವು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ ಎಂದು ಗೊತ್ತಾಗಿದೆ.
ಖಾಸಗಿ ಕಂಪನಿಯಿಂದ ಶ್ವಾನ ದಳದ ಸೇವೆ ಪಡೆಯಲು ಅಂದಾಜು 4.00 ಲಕ್ಷ ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಕುರಿತು ವಿಧಾನಸಭೆ ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಮತ್ತು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರನ್ನು ‘ದಿ ಫೈಲ್’ ಸಂಪರ್ಕಿಸಿತ್ತು. ಖಾಸಗಿ ಕಂಪನಿಯ ಶ್ವಾನ ದಳ ಸೇವೆ ಪಡೆಯುವ ಸಂಬಂಧ ಪ್ರಸ್ತಾವನೆ ಇರುವುದನ್ನು ಖಚಿತಪಡಿಸಿದರು. ಆದರೆ ಇದುವರೆಗೂ ಯಾವುದೇ ತೀರ್ಮಾನವಾಗಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು. ಖಾಸಗಿ ಕಂಪನಿಯ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು.
ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಮಾತ್ರವಲ್ಲದೇ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಹಲವೆಡೆ ವಿಶೇಷ ಕಾರ್ಯಕ್ರಮ, ಸಮಾರಂಭ ಇದ್ದಾಗಲೆಲ್ಲಾ ಕರ್ನಾಟಕ ಪೊಲೀಸ್‌ನ ಶ್ವಾನ ದಳದಿಂದಲೇ ತಪಾಸಣೆ ನಡೆಸಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ವಿಧಾನಮಂಡಲದ ಅಧಿವೇಶನಕ್ಕೆ ಖಾಸಗಿ ಕಂಪನಿಯ ಶ್ವಾನ ದಳದ ಸೇವೆ ಪಡೆಯಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
‘ಕರ್ನಾಟಕ ಪೊಲೀಸ್ ಶ್ವಾನ ದಳವು ಅನೇಕ ಅಪರಾಧಿಗಳನ್ನು ಪತ್ತೆ ಹಚ್ಚಿದೆ. ಸಾಕಷ್ಟು ತರಬೇತಿಯನ್ನೂ ನೀಡಲಾಗಿದೆ. ಅತ್ಯಂತ ವಿಶ್ವಾಸಾರ್ಹ ದಳವೂ ಹೌದು. ಹೀಗಿದ್ದರೂ ಖಾಸಗಿ ಕಂಪನಿಯ ಶ್ವಾನ ದಳದ ಸೇವೆ ಪಡೆಯಲು ಮುಂದಾಗಿರುವುದು, ನಮ್ಮ ಕರ್ನಾಟಕ ಪೊಲೀಸ್ ಶ್ವಾನದಳದ ಕಾರ್ಯಕ್ಷಮತೆ ಬಗ್ಗೆ ವಿಧಾನಸಭೆ ಸಚಿವಾಲಯಕ್ಕೆ ವಿಶ್ವಾಸವಿಲ್ಲ ಎಂಬುದನ್ನು ಪರೋಕ್ಷವಾಗಿ ಸೂಚಿಸಿದಂತಾಗುತ್ತದೆ,’ ಎನ್ನುತ್ತಾರೆ ವಿಧಾನಸಭೆ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು.
ಸ್ಫೋಟಕ, ಮಾದಕ ವಸ್ತುಗಳು, ಅಪರಾಧಿಗಳ ಪತ್ತೆದಾರಿಕೆಯಲ್ಲಿ ಕರ್ನಾಟಕ ಪೊಲೀಸ್ ಶ್ವಾನ ದಳವು ಮಹತ್ವದ ಪಾತ್ರ ವಹಿಸುತ್ತಿದೆ. ಜರ್ಮನ್ ಶೆಪರ್ಡ್, ಲಾಬ್ರೆಡಾರ್, ಬೆಲ್ಜಿಯಂ ಮಾಲಿನೋಯಿಸ್, ಗೋಲ್ಡನ್ ರಿಟ್ರೇವರ್, ಡಾಬರ್‍ವುನ್ ತಳಿ ಸೇರಿದಂತೆ ಒಟ್ಟು 55ಕ್ಕೂ ಹೆಚ್ಚು ಶ್ವಾನಗಳಿವೆ.
ಸ್ಫೋಟಕ ವಸ್ತುಗಳ ಕುರಿತು ಹಾಗೂ ಕೊಲೆ, ಸುಲಿಗೆ, ದರೋಡೆ, ಕಳ್ಳತನ ಮತ್ತು ಗಾಂಜಾ, ಅಫೀಮುಳಂತಹ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶಿಷ್ಟ ಮತ್ತು ವಿನೂತನವಾದ ತರಬೇತಿ ಕೊಡಲಾಗುತ್ತದೆ.
ಇಲ್ಲಿ ಲ್ಯಾಬ್ರಿಡರ್, ಜರ್ಮನ್ ಶೆಪರ್ಡ್, ಡಾಬರ್ ಮನ್ ತಳಿಯ ಒಟ್ಟು 58 ಶ್ವಾನಗಳು ಇದ್ದು, ದೇಶ-ವಿದೇಶಗಳಿಂದ ಬರುವ ಗಣ್ಯ, ಅತಿ ಗಣ್ಯ ವ್ಯಕ್ತಿಗಳಿಗೆ ವಿಶೇಷ ಭದ್ರತೆ ಮತ್ತು ಸಿಎಂ ನಿವಾಸ, ರಾಜಭವನ, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ರೈಲ್ವೆ ನಿಲ್ದಾಣಗಳು, ಮೆಟ್ರೋ, ಬಸ್ ನಿಲ್ದಾಣಗಳು ಹಾಗೂ ರಾಜಧಾನಿಯ ಸೂಕ್ಷ್ಮ ಸ್ಥಳಗಳು, ಪ್ರವಾಸಿ ತಾಣಗಳು, ಮತ್ತು ರಾಜ್ಯಪಾಲರು, ಮುಖ್ಯಮಂತ್ರಿಗಳು ಭಾಗವಹಿಸುವ ಸ್ಥಳೀಯ ಕಾರ್ಯಕ್ರಮಗಳಲ್ಲಿ ವಿಶೇಷ ತಪಾಸಣಾ ಕಾರ್ಯವನ್ನು ರಾಜ್ಯ ಪೊಲೀಸ್ ಶ್ವಾನ ದಳ ಯಶಸ್ವಿಯಾಗಿ ನಿರ್ವಹಿಸುತ್ತಿರುವುದನ್ನು ಸ್ಮರಿಸಬಹುದು.