ಭೂಸ್ವಾಧೀನವಿಲ್ಲದೇ ರಿಂಗ್‌ ರೋಡ್‌ಗೆ ಜಮೀನು ಬಳಕೆ; ಸಿಎಂ ಆಪ್ತನ ದೊಡ್ಡಮ್ಮನಿಗೂ ಬದಲಿ ನಿವೇಶನ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಕೇಶ್‌ ಪಾಪಣ್ಣ ಅವರ ದೊಡ್ಡಮ್ಮ ನಾಗರತ್ನಮ್ಮ ಅವರಿಗೂ ನಿಯಮಬಾಹಿರವಾಗಿ ಬದಲಿ ನಿವೇಶನ ಮಂಜೂರು ಮಾಡಿದ್ದ ಪ್ರಕರಣವನ್ನು ತಾಂತ್ರಿಕ ಸಮಿತಿಯು ಬಯಲು ಮಾಡಿದೆ.

 

ರಾಕೇಶ್‌ ಎ ಪಾಪಣ್ಣ ಅವರ ತಂದೆ ಎ ಪಾಪಣ್ಣ ಅವರಿಗೆ ಮೈಸೂರಿನ ಹಿನಕಲ್‌ನಲ್ಲಿನ ಸರ್ವೆ ನಂಬರ್‍‌ 211ರಲ್ಲಿದ್ದ 3.5 ಎಕರೆ ಜಮೀನಿಗೆ ಸಂಬಂಧಿಸಿದಂತೆ ವಿಜಯನಗರ ಬಡಾವಣೆಯಲ್ಲಿ ಮಂಜೂರು ಮಾಡಲಾಗಿತ್ತು.

 

ಇದೀಗ ಇದೇ ಹಿನಕಲ್‌ನಲ್ಲಿನ ಸರ್ವೆ ನಂಬರ್‍‌ 326/5ರಲ್ಲಿನ 0.03 ಗುಂಟೆ ಮತ್ತು 326/6ರಲ್ಲಿನ 0-26 ಗುಂಟೆಗೆ ಬದಲಿಗೆ 50;50 ಅನುಪಾತದದಲ್ಲಿ ನಿವೇಶನ ಮಂಜೂರು ಮಾಡಲು ಸರ್ಕಾರದ ಪೂರ್ವಾನುಮೋದನೆಯನ್ನೇ ಪಡೆಯದೇ ತೀರ್ಮಾನಿಸಿತ್ತು ಎಂದು ತಾಂತ್ರಿಕ ಸಮಿತಿಯ ವರದಿಯಲ್ಲಿ ವಿವರಿಸಲಾಗಿದೆ.

 

ಪ್ರಕರಣದ ವಿವರ

 

ಹಿನಕಲ್‌ ಗ್ರಾಮ ಸರ್ವೆ ನಂಬರ್‍‌ 326/5ರಲ್ಲಿ 1 ಎಕರೆ 37 ಗುಂಟೆ ಮತ್ತು 326/6ರಲ್ಲಿ 0-26 ಗುಂಟೆ ಜಮೀನು ನಾಗರತ್ನಮ್ಮ ಕೋಂ ಎ ಪಾಪಣ್ಣ ಅವರ ಹೆಸರಿನಲ್ಲಿತ್ತು. ಈ ಜಮೀನುಗಳನ್ನು ಹೊರವರ್ತುಲ ರಸ್ತೆ ಪ್ಯಾಕೇಜ್‌ 2 ರ ಕಾಮಗಾರಿಗೆ ಮೂಡಾ ಉಪಯೋಗಿಸಿಕೊಂಡಿತ್ತು. ಆದರೆ ಭೂ ಪರಿಹಾರ ನೀಡಿರಲಿಲ್ಲ. ಹೀಗಾಗಿ ಪರಿಹಾರ ನೀಡಬೇಕು ಎಂದು ಮೂಡಾಕ್ಕೆ ಕೋರಿಕೆ ಸಲ್ಲಿಕೆಯಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

 

ಈ ಕೋರಿಕೆ ಕುರಿತು ಮೂಡಾದಲ್ಲಿ 2016ರ ಡಿಸೆಂಬರ್‍‌ 14ರಂದು ಸಭೆ ನಡೆದಿತ್ತು. ಸಭೆಯಲ್ಲಿ ಈ ಕೋರಿಕೆಯನ್ನು ಹೆಚ್ಚುವರಿ ವಿಷಯ ಸಂಖ್ಯೆ 52ರಲ್ಲಿ ಸೇರಿಸಲಾಗಿತ್ತು. ಸಭೆಯಲ್ಲಿ ‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 35ರಡಿ ಪರಸ್ಪರ ಒಪ್ಪಂದದ ಮೇರೆಗೆ ಭೂ ಸ್ವಾಧೀನಪಡಿಸಿಕೊಂಡು ಕಾನೂನು ಅಭಿಪ್ರಾಯ ಪಡೆದು ಭೂ ಮಾಲೀಕರಿಗೆ ಭೂ ಪರಿಹಾರ ನೀಡಲು ಕ್ರಮವಹಿಸಲು ತೀರ್ಮಾನಿಸಲಾಯಿತು,’ ಎಂದು ನಿರ್ಣಯಿಸಲಾಗಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

 

2017ರ ಫೆ.21ರಂದು ಪ್ರಾಧಿಕಾರದ ನಿರ್ಣಯದಂತೆ ಪ್ರಾಧಿಕಾರಕ್ಕೆ ಜಮೀನನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂದು ಭೂಮಾಲೀಕರಾದ ನಾಗರತ್ನಮ್ಮ ಕೋಂ ಎ ಪಾಪಣ್ಣ ಅವರು ಪತ್ರ ಬರೆದಿದ್ದರು. ಇದಕ್ಕೆ ಬದಲಿಯಾಗಿ 50;50 ರಡಿಯಲ್ಲಿ ನಿವೇಶನಗಳನ್ನು ನೀಡಬೇಕು ಎಂದು ಕೋರಿಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಅದೇ ರೀತಿ 2019ರ ಜನವರಿ 4 ಮತ್ತು 2021ರ ಜನವರಿ 15ರಂದು ಮನವಿ ಸಲ್ಲಿಸಿ ಬದಲಿ ನಿವೇಶನಗಳನ್ನು ನೀಡಬೇಕು ಎಂದು ಪ್ರಾಧಿಕಾರದ ಆಯುಕ್ತರಿಗೆ ಕೋರಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಈ ಕೋರಿಕೆಯಂತೆ ಪ್ರಾಧಿಕಾರದಲ್ಲಿ ಪರಿಶೀಲನೆ ನಡೆಸಲಾಗಿತ್ತು. ಪ್ರಶ್ನಿತ ಸರ್ವೆ ನಂಬರ್‍‌ 326/5ರ 1.37 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಇದೇ ಸರ್ವೆ ನಂಬರ್‍‌ನಿಂದ ವಿಭಜನೆ ಆಗಿ ಹೊಸ ಸರ್ವೆನಂಬರ್‍‌ 326/6ರಲ್ಲಿ 0.26 ಗುಂಟೆ ಜಮೀನನ್ನು ಅಂತಿಮ ಅಧಿಸೂಚನೆಯಿಂದಲೂ ಕೈಬಿಡಲಾಗಿದೆ ಎಂದು ಭೂ ಸ್ವಾಧೀನ ಶಾಖೆ ಅಧಿಕಾರಿಗಳು ವರದಿ ಮಾಡಿದ್ದರು.

 

ಹೊರ ವರ್ತುಲ ರಸ್ತೆಗಾಗಿ ಪ್ರಶ್ನಿತ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳದೆಯೇ ಉಪಯೋಗಿಸಿಕೊಂಡಿರುವುದಾಗಿ ಎಂದೂ ವರದಿ ಮಾಡಿದ್ದರು. ಪ್ರಾಧಿಕಾರದ ಭೂ ಮಾಪಕರು ಸರ್ವೆ ನಕ್ಷೆಯಲ್ಲಿ ಮತ್ತು ಇಂಜಿನಿಯರಿಂಗ್‌ ಶಾಖೆಯು ತಯಾರಿಸಿದ್ದ ನಕ್ಷೆಯಲ್ಲಿಯೂ ಸಹ ಹೊರ ವರ್ತುಲ ರಸ್ತೆಯು ಪ್ರಶ್ನಿತ ಜಮೀನುಗಳ ಮೂಲಕ ಹಾದು ಹೋಗುತ್ತಿರುವ ಬಗ್ಗೆಯೂ ನಕ್ಷೆಯಲ್ಲಿ ಗುರುತಿಸಿ ವರದಿ ಮಾಡಿದ್ದರು ಎಂದು ತಾಂತ್ರಿಕ ಸಮಿತಿಯಲ್ಲಿ ವಿವರಿಸಲಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಿಕೆ (64)ರಲ್ಲಿ ಎಲ್ಲಾ ವಿವರಗಳನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳು ಪ್ರಸ್ತಾಪಿಸಿದ್ದರು. 2016ರ ಡಿಸೆಂಬರ್‍‌ 14ರಂದೇ ಪ್ರಾಧಿಕಾರದ ಸಭೆಯ ನಿರ್ಣಯ ಅನುಷ್ಠಾನಗೊಳಿಸುವುದೋ ಅಥವಾ ಭೂ ಮಾಲೀಕರ ಕೋರಿಕೆಯಂತೆ ಸೇ.50;50ರ ಅನುಪಾತದಲ್ಲಿ ನಿವೇಶನ ಮಂಜೂರು ಮಾಡಲು ಸಭೆಗೆ ವಿಷಯ ಮಂಡಿಸುವುದೋ ಎಂಬ ಬಗ್ಗೆ ಆಯುಕ್ತರ ನಿರ್ದೇಶನ ಕೋರಿ ಕಡತ ಮಂಡಿಸಲಾಗಿತ್ತು.

 

ಈ ಕುರಿತು 2016ರ ಡಿಸೆಂಬರ್‍‌ 14ರಂದು ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ ಚರ್ಚಿತವಾಗಿತ್ತು. ‘ಈಗಾಗಲೇ ಹಿಂದಿನ 14.12.2-16ರ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಅನುಷ್ಠಾನಗೊಳಿಸದೇ ಇರುವುದರಿಂದ ಹಾಲಿ ಭೂ ಮಾಲೀಕರ ಕೋರಿಕೆಯಂತೆ ಶೇ 50;50ರ ಅನುಪಾತದಲ್ಲಿ ನಿವೇಶನ ನೀಡುವ ಸಂಬಂಧ ಕ್ರಮವಹಿಸಲು ತೀರ್ಮಾನಿಸಿರುವುದು ಕಂಡುಬಂದಿರುತ್ತದೆ,’ ಎಂದು ತಾಂತ್ರಿಕ ಸಮಿತಿಯ ವರದಿಯಿಂದ ಗೊತ್ತಾಗಿದೆ.

 

ಈ ಎಲ್ಲಾ ನಡವಳಿಗಳನ್ನು ತಾಂತ್ರಿಕ ಸಮಿತಿಯು ಪರಿಶೀಲಿಸಿದೆ.

 

ಪ್ರಶ್ನಿತ ಜಾಗವನ್ನು ಭೂ ಸ್ವಾಧೀನಪಡಿಸದೇ ಪ್ರಾದಿಕಾರವು ಹೊರ ವರ್ತುಲ ರಸ್ತೆಗಾಗಿ ಉಪಯೋಗಿಸಿಕೊಂಡಿರುವುದಾಗಿ ಪ್ರಾಧಿಕಾರದ ಭೂ ಮಾಪಕರು ವರದಿ ನೀಡಿದ್ದರು. ಮತ್ತು ಕಡತದ ಪರಿಶೀಲನೆಯಂತೆ ಪ್ರಶ್ನಿತ ಜಮೀನುಗಳು ಭೂ ಸ್ವಾಧೀನವಾಗಿರುವುದಿಲ್ಲ ಎಂದು ಸಭೆ ಟಿಪ್ಪಣಿಯಲ್ಲಿ ನಮೂದಿಸಲಾಗಿತ್ತು.

 

ಸಭೆಯ ನಿಯಮಾವಳಿಯಲ್ಲಿ ಅವಕಾಶವಿಲ್ಲದಿದ್ದರೂ ಬದಲಿ ನಿವೇಶನವನ್ನು ಮಂಜೂರು ಮಾಡಲು ಕೋರಿದ್ದ ವಿಷಯವನ್ನು ಮಂಡಿಸಲಾಗಿತ್ತು. ಸರ್ವೆ ನಂಬರ್‍‌ 326/5 ಮತ್ತು 326/6ರಲ್ಲಿನ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳದೇ ಪ್ರಾಧಿಕಾರವು ಉಪಯೋಗಿಸಿಕೊಂಡಿದ್ದಲ್ಲಿ ಅಂತಹ ಜಮೀನನ್ನು ಖರೀದಿಸಲು ಕಾಯ್ದೆ ಕಲಂ 35 ಅಥವಾ 36ರಂತೆ ಸರ್ಕಾರದ ಪೂರ್ವಾನುಮೋದನೆಯನ್ನು ಪಡೆಯಬೇಕು.

 

ಆದರೆ ಸರ್ಕಾರದ ಪೂರ್ವಾನುಮೋದನೆಯನ್ನು ಪಡೆಯದೇ ನೇರವಾಗಿ ಬದಲಿ ನಿವೇಶನ ಹಂಚಿಕೆ ಮಾಡಲು ಪ್ರಾಧಿಕಾರದ ಸಭೆಯಲ್ಲಿ ನಿಯಮಬಾಹಿರವಾಗಿ ತೀರ್ಮಾನಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಅಲ್ಲದೇ ಈಗಾಗಲೇ ಅಭಿವೃದ್ಧಿಪಡಿಸಿದ ಬಡಾವಣೆಗೆ ಶೇ.50;50ರ ಅನುಪಾತದ ನಿಯಮಗಳು ಅನ್ವಯವಾಗುವುದಿಲ್ಲ. ಹೀಗಾಗಿ ಪ್ರಾಧಿಕಾರವು ಕೈಗೊಂಡಿರುವ ಯಾವುದೇ ಕ್ರಮವು ನಿಯಮಬಾಹಿರವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

the fil favicon

SUPPORT THE FILE

Latest News

Related Posts