ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ

ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮಧ್ಯಂತರ ಮತ್ತು ಬಿಡಿ ನಿವೇಶನಗಳನ್ನೇ ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡುತ್ತಿರುವುದರ ಹಿಂದಿನ ಕರಾಮತ್ತನ್ನು ಪತ್ತೆ ಹಚ್ಚಿರುವ ತಾಂತ್ರಿಕ ಸಮಿತಿಯು ಹಲವು ನಿಯಮಬಾಹಿರ ಕ್ರಮ, ಆದೇಶಗಳ ಉಲ್ಲಂಘನೆ, ಪ್ರಾಧಿಕಾರಕ್ಕೆ ಆಗಿರುವ ಆರ್ಥಿಕ ನಷ್ಟದ ಪ್ರಕರಣಗಳನ್ನು ದಾಖಲೆ ಸಮೇತ ಹೊರಗೆಡವಿದೆ.

 

ಮೂಡಾದಲ್ಲಿ ನಡೆದಿದೆ ಎನ್ನಲಾಗಿರುವ ಬಹು ಕೋಟಿ ಹಗರಣದ ಕುರಿತು ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್‌ ಅವರ ಮೇಲೆ ಮುಗಿಬಿದ್ದಿರುವ ಬೆನ್ನಲ್ಲೇ ತಾಂತ್ರಿಕ ಸಮಿತಿಯು ಅಕ್ರಮಗಳನ್ನು ಪತ್ತೆ ಹಚ್ಚಿ ಮೂಡಾದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ.

 

ತಾಂತ್ರಿಕ ಸಮಿತಿಯ ಅಧ್ಯಕ್ಷ ಟಿ ವಿ ಮುರುಳಿ ನೇತೃತ್ವದ ಸಮಿತಿಯು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2023ರ ನವೆಂಬರ್‍‌ 3ರಂದೇ ವರದಿ ಸಲ್ಲಿಸಿದೆ. ಈ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿ 6 ತಿಂಗಳಾಗಿದ್ದರೂ ಸಹ ಸರ್ಕಾರವು ಯಾವುದೇ ಕಠಿಣ ಕ್ರಮಕೈಗೊಂಡಿಲ್ಲ. ಅಲ್ಲದೇ ಇಡೀ ವರದಿಯು ತನ್ನ ಕೈಯಲ್ಲಿದ್ದರೂ ಮತ್ತೊಂದು ಸಮಿತಿಯನ್ನು ರಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ರಚಿಸಿರುವ ಹಲವು ಬಡಾವಣೆಗಳಲ್ಲಿ ಸಾರ್ವಜನಿಕ ಉದ್ಯಾನ, ನಾಗರಿಕ ಸೌಲಭ್ಯಕ್ಕೆ ನಿವೇಶನಗಳನ್ನೇ ಕಾಯ್ದಿರಿಸಿಕೊಂಡಿಲ್ಲ. ಬಡಾವಣೆಗಳ ದೃಢೀಕೃತ ವಿನ್ಯಾಸದ ನಕ್ಷೆಯೂ ಲಭ್ಯವಿಲ್ಲ. ಅಲ್ಲದೇ ಬಡಾವಣೆಗಳಿಗೆ ಅಧಿಕೃತವಾಗಿ ಪ್ರಾಧಿಕಾರದಿಂದ ಅನುಮೋದನೆಯನ್ನೂ ಪಡೆದುಕೊಂಡಿಲ್ಲ ಎಂಬ ಸಂಗತಿಯನ್ನು ತಾಂತ್ರಿಕ ಸಮಿತಿಯ ತನಿಖೆಯಿಂದ ಗೊತ್ತಾಗಿದೆ.

 

ಹಾಗೆಯೇ ಬಡಾವಣೆಗಳ ನಿರ್ಮಾಣಕ್ಕಾಗಿ ಎಷ್ಟು ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ಅನುಮತಿ ನೀಡಿತ್ತು, ಆ ಪೈಕಿ ಎಷ್ಟು ವಿಸ್ತೀರ್ಣವನ್ನು ಸ್ವಾಧೀನಪಡಿಸಿಕೊಂಡಿದೆ, ಎಷ್ಟು ವಿಸ್ತೀರ್ಣಕ್ಕೆ ಪರಿಹಾರ ನೀಡಿದೆ, ಎಷ್ಟು ವಿಸ್ತೀರ್ಣದಲ್ಲಿ ಬಡಾವಣೆ ರಚಿಸಿದೆ, ಭೂ ಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವ ಪ್ರಕರಣಗಳಲ್ಲಿ ಎಷ್ಟು ಪರಿಹಾರ ನೀಡಿದೆ ಎಂಬ ಯಾವ ವಿವರಗಳನ್ನೂ ಮೂಡಾ ವಿಶೇಷ ಭೂ ಸ್ವಾಧೀನಾಧಿಕಾರಿಯು ತಾಂತ್ರಿಕ ಸಮಿತಿಗೆ ಮಂಡಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

 

ಅಷ್ಟೇ ಅಲ್ಲ, ಅಭಿವೃದ್ಧಿಪಡಿಸಿದ ಹಳೇ ಬಡಾವಣೆಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಿ, ನಿವೇಶನಗಳ ಹಂಚಿಕೆಯನ್ನು ಪೂರ್ಣಗೊಳಿಸಿದ ಎಷ್ಟೋ ವರ್ಷಗಳ ನಂತರ ಭೂ ಪರಿಹಾರ ಮೊತ್ತವನ್ನು ನೀಡಲಾಗಿದೆ. ಆದರೆ ಇದರ ಮಾಹಿತಿಯೂ ಇಲ್ಲ ಮತ್ತು ಈ ಸಂಬಂಧ ಕಡತಗಳೂ ಲಭ್ಯವಿಲ್ಲ ಎಂದು ಮೂಡಾ ಅಧಿಕಾರಿಗಳು ಟಿಪ್ಪಣಿಯಲ್ಲಿ ಷರಾ ಬರೆದಿದ್ದಾರೆ. ಇದನ್ನೇ ನೆಪವಾಗಿರಿಸಿಕೊಂಡು ಬದಲಿ ನಿವೇಶನ ಮಂಜೂರಾತಿಗಾಗಿ ಅಧಿಕಾರಿಗಳು ನಿಯಮಬಾಹಿರವಾಗಿ ಶಿಫಾರಸ್ಸು ಮಾಡುತ್ತಿರುವುದನ್ನು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

 

ಪ್ರಾಧಿಕಾರವು ಅಭಿವೃದ್ದಿಪಡಿಸಿರುವ ಬಡಾವಣೆಗಳಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಿರುವ ಒಟ್ಟಾರೆ ಪ್ರದೇಶಕ್ಕೆ ವಿನ್ಯಾಸ ನಕ್ಷೆ ತಯಾರಿಸಬೇಕು. ಉದ್ಯಾನವನ (ಕನಿಷ್ಠ ಶೇ.15) ಮತ್ತು ನಾಗರಿಕ ಸೌಲಭ್ಯಕ್ಕೆ (ಕನಿಷ್ಠ ಶೇ 10) ಕಾಯ್ದರಿಸಬೇಕು. ಆ ನಂತರ ಡಿ ನೋಟಿಫೈ ಆದ ಅಥವಾ ಕೈಬಿಟ್ಟ ಜಮೀನುಗಳು ಮತ್ತು ಇನ್ನಿತರೆ ಕಾರಣಗಳಿಂದ ಯೋಜನೆಯಿಂದ ಕೈ ಬಿಡಲಾದ ಪ್ರದೇಶಗಳನ್ನು ಹೊರತುಪಡಿಸಬೇಕು ಎಂಬ ನಿಯಮವನ್ನೂ ಮೂಡಾ ಅನುಸರಿಸಿಲ್ಲ.

 

ಅಭಿವೃದ್ಧಿ ಯೋಜನೆವಾರು ಪ್ರತ್ಯೇಕವಾಗಿ ವಿನ್ಯಾಸ ನಕ್ಷೆಯನ್ನು ಸ್ಥಳದಲ್ಲಿ ಅನುಷ್ಠಾನಗೊಳಿಸದಂತೆ ಸಿದ್ಧಪಡಿಸಿ ಅಧಿಕೃತವಾಗಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವುದು ಕಂಡು ಬಂದಿರುವುದಿಲ್ಲ ಎಂದು ತಾಂತ್ರಿಕ ಸಮಿತಿಯು ವರದಿಯಲ್ಲಿ ವಿಶ್ಲೇಷಿಸಿದೆ.

 

ಕೆಲವು ಸಂದರ್ಭಗಳಲ್ಲಿ ಉದ್ಯಾನ ಮತ್ತು ನಾಗರಿಕ ಸೌಲಭ್ಯ ಜಾಗಗಳಿಗೆ ಕಾಯ್ದಿರಿಸಿದಂತಹ ಪ್ರದೇಶವನ್ನು ಕಾರಣಾಂತರಗಳಿಂದ ಭೂ ಸ್ವಾಧೀನ ಕೈಬಿಟ್ಟಿರುವುದು ಮತ್ತು ವಸತಿ ಅಭಿವೃದ್ಧಿ ಯೋಜನೆಯಲ್ಲಿ ಅಂತಹ ಸಾರ್ವಜನಿಕ ಪ್ರದೇಶಗಳು ಕಲಂ 16(ಡಿ)ರ ಅವಕಾಶದನ್ವಯ ತಾಳೆಯಾಗುವುದೇ, ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಲು ದೃಢೀಕೃತ ವಿನ್ಯಾಸ ನಕ್ಷೆಯೂ ಲಭ್ಯವಿಲ್ಲ ಎಂದು ತಾಂತ್ರಿಕ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

‘ಹೀಗಾಗಿ ಕರ್ನಾಟಕ ನಗರ ಯೋಜನೆ (ಕಾಯ್ದೆ ಕಂ 16(ಡಿ) ಅವಕಾಶವನ್ನು ಅನುಸರಿಸಿ ವಸತಿ ಅಭಿವೃದ್ಧಿ ಯೋಜನೆವಾರು ಕನಿಷ್ಠ ಶೇ. 15ರಷ್ಟು ಪ್ರದೇಶವನ್ನು ಸಾರ್ವಜನಿಕ ಉದ್ಯಾನಕ್ಕೆ ಮತ್ತು ಕನಿಷ್ಠ ಶೇ. 10ರಷ್ಟು ನಾಗರಿಕ ಸೌಲಭ್ಯ ನಿವೇಶನ ಕಾಯ್ದರಿಸಿರುವ ಬಗ್ಗೆ ಪರಿಶೀಲಿಸಿಕೊಂಡಿರುವುದು ಕಂಡುಬಂದಿರುವುದಿಲ್ಲ,’ ಎಂದು ವರದಿಯಲ್ಲಿ ಸಮಿತಿಯು ವಿವರಿಸಿದೆ.

 

 

ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು

 

ಮಧ್ಯಂತರ ಮತ್ತು ಬಿಡಿ ನಿವೇಶನಗಳನ್ನು ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡುತ್ತಿರುವುದನ್ನು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ. ಪ್ರಾಧಿಕಾರ ರಚನೆ ಆದಾಗಿನಿಂದ ಎಷ್ಟು ಪ್ರದೇಶವನ್ನು ಅಧಿಸೂಚಿಸಲು ಸರ್ಕಾರವು ಅನುಮತಿ ನೀಡಿತ್ತು, ಎಷ್ಟು ವಿಸ್ತೀರ್ಣ ಭೂ ಸ್ವಾಧೀನಪಡಿಸಿಕೊಂಡಿದೆ, ಎಷ್ಟು ವಿಸ್ತೀರ್ಣಕ್ಕೆ ಪರಿಹಾರ ನೀಡಿದೆ, ಎಷ್ಟು ವಿಸ್ತೀರ್ಣದಲ್ಲಿ ಬಡಾವಣೆ ರಚಿಸಿದೆ, ಭೂ ಸ್ಬಾಧೀನಪಡಿಸದೇ ಉಪಯೋಗಿಸಿಕೊಂಡಿರುವ ಪ್ರಕರಣಗಳಲ್ಲಿ ನೀಡಿರುವ ಪರಿಹಾರದ ವಿವರಗಳನ್ನು ವಿಶೇಷ ಭೂ ಸ್ವಾಧೀನಾಧಿಕಾರಿಯವರು ತಾಂತ್ರಿಕ ಸಮಿತಿಗೆ ಮಂಡಿಸಿಲ್ಲ ಎಂಬ ಸಂಗತಿಯು ವರದಿಯಿಂದ ಗೊತ್ತಾಗಿದೆ.

 

ಅನುಮೋದಿತ ಯೋಜನೆಯ ವ್ಯಾಪ್ತಿ ಮೀರಿ ಬಡಾವಣೆ ನಿರ್ಮಿಸಿರುವ ಸಮಗ್ರ ಮಾಹಿತಿಯನ್ನು ಪರಿಶೀಲಿಸಿ ಸಭೆಗೆ ಮಂಡಿಸಿಲ್ಲ. ಪ್ರಾಧಿಕಾರದಲ್ಲಿಯೇ ನಿವೇಶನ ಹಂಚಿಕೆ ಕುರಿತು ಪೂರ್ಣ ಮಾಹಿತಿಯು ಲಭ್ಯವಿದ್ದರೂ ಸಹ ಪರಿಶೀಲಿಸದೇ ನಿಯಮಬಾಹಿರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಕಾನೂನಾತ್ಮಕ ಗೊಂದಲಗಳಿಗೆ ಅವಕಾಶ ಕಲ್ಪಿಸಿರುವುದನ್ನು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

 

ಪ್ರಾಧಿಕಾರದ ವಸತಿ ಯೋಜನೆಗಳಲ್ಲಿ ನಿವೇಶನಗಳನ್ನು ರಚಿಸಿದ ನಂತರ ಒಟ್ಟಾರೆ ನಿವೇಶನಗಳನ್ನು ವಹಿಯಲ್ಲಿ ನಮೂದಿಸಿಲ್ಲ. ಬದಲಿಗೆ ಮಂಜೂರಾತಿಗಾಗಿ ಅಧಿಸೂಚಿಸಲಾದ ಮಧ್ಯಂತರ ನಿವೇಶನಗಳ ಹಂಚಿಕೆಯ ನಂತರ ವಹಿಯಲ್ಲಿ ಅಂತಹ ಮಂಜೂರಾದ ನಿವೇಶನಗಳ ವಿವರಗಳನ್ನು ನಮೂದಿಸುತ್ತಿದೆ. ಮೂಲೆ ನಿವೇಶನಗಳ ವಿವರಗಳನ್ನು ಮುಖ್ಯ ವಹಿಯಲ್ಲಿ ನಮೂದದಿಸದೇ ಇರುವುದನ್ನೂ ಸಮಿತಿಯು ಹೊರಗೆಡವಿದೆ.

 

ಹರಾಜು ಪ್ರಕ್ರಿಯೆ ಪ್ರತ್ಯೇಕವಾಗಿ ಕೈಗೊಂಡ ನಂತರ ಹರಾಜುಗೊಂಡ ನಿವೇಶನಗಳಿಗೆ ಸಂಬಂಧಿಸಿದಂತೆ ಮಾತ್ರ ಎಲ್ಲಾ ಪ್ರಕ್ರಿಯೆಗಳನ್ನು ವಹಿಯಲ್ಲಿ ನಮೂದಿಸಿರುವುದನ್ನು ಸಮಿತಿಯು ಪತ್ತೆ ಹಚ್ಚಿದೆ. ಆದರೆ ಹರಾಜಿಗಾಗಿ ಬಾಕಿ ಇರುವ ಮೂಲೆ, ಬಿಡಿ, ಮಧ್ಯಂತರ ನಿವೇಶನಗಳ ಮಾಹಿತಿಯು ಪ್ರತ್ಯೇಕವಾಗಿ ಯಾವುದೇ ವಹಿಗಳಲ್ಲಿ ನಮೂದಿಸಿಲ್ಲ ಮತ್ತು ಇದರ ಮಾಹಿತಿಯೂ ಲಭ್ಯವಿಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

ವಸತಿ ಯೋಜನೆವಾರು ಕೆಲವು ಮೂಲ ವಹಿಯಲ್ಲಿ ಹರಾಜಾದ ನಿವೇಶನಗಳನ್ನು ಈಗಾಗಲೇ ಹರಾಜು ಮಾಡಿರುವ ನಿವೇಶನವೆಂದು ಷರಾ ನಮೂದಿಸಿಲ್ಲ. ಹಾಗಾಗಿ ಹರಾಜಾಗದೇ ಬಾಕಿ ಇರುವ ಮೂಲೆ, ಬಿಡಿ, ಮಧ್ಯಂತರ ನಿವೇಶನಗಳ ವಸತಿ ಯೋಜನೆವಾರು ವಹಿಗಳನ್ನು ನಿರ್ವಹಿಸಿಲ್ಲ ಎಂದು ಶಾಖೆ ಅಧಿಕಾರಿಗಳು ಸಮಿತಿಗೆ ತಿಳಿಸಿರುವುದು ಗೊತ್ತಾಗಿದೆ.

 

ಕೆಲವು ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ನಿವೇಶನಸಂಖ್ಯೆ 1ರಿಂದ ಪ್ರಾರಂಭಿಸಿ ಅಂತಿಮ ನಿವೇಶನಗಳ ಸಂಖ್ಯೆಯನ್ನು ನಮೂದಿಸಿ ವಹಿಯಲ್ಲಿ ನಿರ್ವಹಿಸಲಾಗುತ್ತಿದೆ. ಉಳಿದ ಯೋಜನೆಗಳಲ್ಲಿ ಸದರಿ ಕ್ರಮವನ್ನು ಸರಿಯಾಗಿ ನಿರ್ವಹಿಸಿಲ್ಲ. ಹಾಗಾಗಿ ಹರಾಜಿಗಾಗಿ, ಹಂಚಿಕೆಗಾಗಿ ಬಾಕಿ ಇರುವ ನಿವೇಶನಗಳ ವಿವರಗಳು ವಹಿಗಳಿಂದ ಲಭ್ಯವಾಗುವುದಿಲ್ಲ ಎಂಬ ಅಂಶವನ್ನು ಸಮಿತಿಯು ಎತ್ತಿ ಹಿಡಿದಿದೆ.

 

ರದ್ದತಿ ನಿವೇಶನಗಳ ವಹಿ ಎಂಬ ಕಡತ ತೆರೆಯಲಾಗಿದೆ. ಬಡಾವಣೆವಾರು ರದ್ದತಿಯಾದ ನಿವೇಶನಗಳ ಅಳತೆ, ಸಂಖ್ಯೆ ನಮೂದಿಸಿ ವಹಿಯಲ್ಲಿ ವಿವರಗಳನ್ನು ದಾಖಲಿಸಲಾಗಿರುತ್ತದೆ. ಅದರೆ 2000ರ ನವೆಂಬರ್‍‌ 24ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿನ ಸೂಚನೆಗಳಂತೆ ಬಡಾವಣೆವಾರು ಯಾವುದೇ ವಹಿಗಳನ್ನು ನಿರ್ವಹಿಸಿಲ್ಲ.

 

ಅದೇ ರೀತಿ ಸುತ್ತೋಲೆಯಲ್ಲಿನ ಸೂಚನೆಯಂತೆ ವಾರ್ಷಿಕವಾಗಿ ಲಭ್ಯವಾಗುವ ಬಿಡಿ ನಿವೇಶನಗಳ ವಿವರಗಳ ಘೋಷವಾರು ಸಿದ್ಧಪಡಿಸಿರುವುದಿಲ್ಲ. ಮತ್ತು ಪ್ರಾದಿಕಾರದ ಪರಿಶೀಲನೆಗೆ ಒಳಪಡಿಸಿ ಅನುಮೋದನೆ ಪಡೆದಿಲ್ಲ.

 

‘ಸರ್ಕಾರದಿಂದ ನೀಡಲಾದ ಸೂಚನೆಗಳಂತೆ ಕ್ರಮವಹಿಸದೇ ವಿವಿಧ ಬಡಾವಣೆಗಳಲ್ಲಿರುವ ಬಿಡಿ ನಿವೇಶನಗಳನ್ನು ಬದಲಿ ನಿವೇಶನಗಳನ್ನಾಗಿ ನೀಡಲು ನಿಯಮಬಾಹಿರವಾಗಿ ಪ್ರಾಧಿಕಾರವು ನಿರ್ಣಯಿಸಿ ಹಂಚಿಕೆ ಮಾಡಲು ಕ್ರಮಕೈಗೊಳ್ಳುತ್ತಿದೆ. ಕಾಯ್ದೆ, ನಿಯಮಗಳು ಮತ್ತು ಸರ್ಕಾರದ ಸೂಚನೆಗಳಿಗೆ ವ್ಯತಿರಿಕ್ತವಾಗಿ ಕ್ರಮವಹಿಸುತ್ತಿದೆ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts