ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ವಿವಿಧ ಬಡಾವಣೆಗಳಲ್ಲಿ ಬಿಡುಗಡೆ ಮಾಡಿರುವ ನಿವೇಶನ ಪಡೆದುಕೊಳ್ಳುವುದು ಮತ್ತು ರದ್ದು ಮಾಡಲು ಪ್ರಾಧಿಕಾರದ ಅಧಿಕಾರಿಗಳೇ ನೇರವಾಗಿ ಲಕ್ಷಾಂತರ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಇದೀಗ ಬಹಿರಂಗವಾಗಿದೆ.
ಮೈಸೂರು ತಾಲೂಕು ಕಸಬಾ ಹೋಬಳಿ ಆಲನಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‍ಗಳಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಕೆಲ ನಿವೇಶನಗಳ ಆದೇಶ ರದ್ದುಗೊಳಿಸಲು ಪ್ರಾಧಿಕಾರದ ಆಧಿಕಾರಿಗಳೇ ನೇರವಾಗಿ ಅರ್ಜಿದಾರರ ಮುಂದೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ಸಲ್ಲಿಕೆಯಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಸರ್ಕಾರವು ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸುಮಾರು 17.21 ಎಕರೆ ವಿಸ್ತಿರ್ಣದ ಆಸ್ತಿಯಲ್ಲಿ ವಸತಿ ಬಡಾವಣೆ ನಿರ್ಮಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಭೂಗಳ್ಳರಿಗೆ 50;50 ಅನುಪಾತದಲ್ಲಿ ಕಾನೂನುಬಾಹಿರವಾಗಿ ಬದಲಿ ನಿವೇಶನ ಹಂಚಿಕೆ ಮಾಡಿರುವ ಕುರಿತು ದೂರಿನ ಬೆನ್ನಲ್ಲೇ ಪ್ರಾಧಿಕಾರದ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ಪ್ರಕರಣದ ವಿವರ
ಮೈಸೂರು ತಾಲೂಕು ಕಸಬಾ ಹೋಬಳಿ ಆಲನಹಳ್ಳಿ ಗ್ರಾಮದ ಸರ್ವೆ ನಂಬರ್ 116/3, 116/4, 116/5, 117/3, 4,5 118/1, 118/3ರಲ್ಲಿ (ಕಾವೇರಿ ಎನ್‌ಕ್ಲೈವ್)ನಲ್ಲಿ ಅಕ್ರಮವಾಗಿ ನಿವೇಶನಗಳನ್ನು ಬಿಡುಗಡೆ ಮಾಡಿತ್ತು. ಈ ಆದೇಶ ರದ್ದುಗೊಳಿಸಲು 3,00,000 ಲಕ್ಷ ರು.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೂಡಾದ ನಗರ ಯೋಜನಾಧಿಕಾರಿ ರೂಪ ಎಂ ಮತ್ತು ಪ್ರ ದ ಸ/ಇಂಜಿನಿಯರ್/ಯೋಜನಾಧಿಕಾರಿಯಾದ ಸುರೇಶ್ ಎಂಬುವರು 3 ಲಕ್ಷ ರು.ಕ್ಕೆ ಬೇಡಿಕೆ ಇರಿಸಿದ್ದರು ಎಂದು ರಾಜು ಎಂಬುವರು ಮೈಸೂರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.

ಈ ದೂರನ್ನಾಧರಿಸಿ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು 2023ರ ಮೇ 15ರಂದೇ ಮೈಸೂರು ಜಿಲ್ಲಾಧಿಕಾರಿ ಮೂಡಾ ಆಯುಕ್ತರಿಗೆ ನಿರ್ದೇಶಿಸಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.
ಸುಮಾರು 17.21 ಎಕರೆ ವಿಸ್ತಿರ್ಣದ ಆಸ್ತಿಯಲ್ಲಿ ವಸತಿ ಬಡಾವಣೆ ನಿರ್ಮಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಭೂಗಳ್ಳರಿಗೆ 50;50 ಅನುಪಾತದಲ್ಲಿ ಕಾನೂನುಬಾಹಿರವಾಗಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಈ ಕುರಿತು ಎನ್ ಗಂಗರಾಜ್ ಎಂಬುವರು ಮೈಸೂರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ನಗರಾಭಿವೃದ್ಧಿ ಇಲಾಖೆಯಾಗಲೀ, ಈಗಿನ ಸಚಿವ ಬೈರತಿ ಸುರೇಶ್ ಅವರಾಗಲೀ ಯಾವುದೇ ಕ್ರಮವಹಿಸಿರಲಿಲ್ಲ.
ಮೈಸೂರು ತಾಲೂಕು ಕಸಬಾ ಹೋಬಳಿ ದಟ್ಟಗಳ್ಳಿ ಸರ್ವೆ ನಂಬರ್ 17, 18, 27/1, 111, 112,114 ಹಾಗೂ ಇತರೆ 17 ಎಕರೆ 21 ಗುಂಟೆ ವಿಸ್ತೀರ್ಣದ ಬೆಲೆಬಾಳುವ ಜಮೀನಿನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ವಸತಿ ಬಡಾವಣೆ ನಿರ್ಮಿಸಿ ಭೂಗಳ್ಳರಿಗೆ 50;50 ಅನುಪಾತದಲ್ಲಿ ಕಾನೂನುಬಾಹಿರವಾಗಿ ವಿತರಿಸಲು ಸಿದ್ಧತೆ ನಡೆದಿದೆ. ಇದರಿಂದ ಕೋಟ್ಯಂತರ ರುಪಾಯಿ ಆರ್ಥಿಕ ನಷ್ಟ ಉಂಟಾಗಲಿದ್ದು ಇದನ್ನು ತಕ್ಷಣವೇ ತಡೆದು ಪ್ರಾಧಿಕಾರವು 2023ರ ಮಾರ್ಚ್ 13ರಂದು ಕೈಗೊಂಡಿರುವ ನಿರ್ಣಯದಂತೆ ಬಹಿರಂಗ ಹರಾಜಿನಲ್ಲಿ ವಿಲೇವಾರಿ ಮಾಡುವ ಸಂಬಧ ಮನವಿ ಸಲ್ಲಿಕೆಯಾಗಿತ್ತು.
ವಸತಿ ಬಡಾವಣೆಯಲ್ಲಿ ಭೂಗಳ್ಳರದ್ದೇ ಪಾರುಪತ್ಯ; ಒತ್ತಡಕ್ಕೆ ಮಣಿದ ಆಯುಕ್ತ, ಕೋಟ್ಯಂತರ ಆರ್ಥಿಕ ನಷ್ಟ
ಕಾನೂನುಬಾಹಿರವಾಗಿ ಆಸ್ತಿಗಳ ಹಂಚಿಕೆ, ಇದರಿಂದ ಸಂಭವಿಸಿರುವ ಆರ್ಥಿಕ ನಷ್ಟದ ಕುರಿತು ಉನ್ನತ ಮಟ್ಟದ ತನಿಖಾ ತಂಡದ ರಚನೆ, ಪ್ರತಿ ಆರೋಪಗಳ ಕುರಿತು ಸಮಗ್ರವಾಗಿ ತನಿಖೆ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮೈಸೂರು ಜಿಲ್ಲಾಧಿಕಾರಿ 7 ತಿಂಗಳ ಹಿಂದೆಯೇ ಪತ್ರ ಮತ್ತು ವಿಚಾರಣೆ ವರದಿ ಸಲ್ಲಿಸಿದ್ದರು.
ಬದಲಿ ನಿವೇಶನ, ತುಂಡು ಜಾಗ ಮಂಜೂರಾತಿ, 50;50 ಅನುಪಾತದಡಿಯಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ವಿವಿಧ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಬರೆದಿದ್ದ ಪತ್ರ ಮತ್ತು ನೀಡಿದ್ದ ವಿಚಾರಣೆ ವರದಿಯನ್ನು ನಗರಾಭಿವೃದ್ಧಿ ಇಲಾಖೆಯು ಕಸದ ಬುಟ್ಟಿಗೆ ಎಸೆದಿತ್ತು.
ಸಾವಿರ ಕೋಟಿ ಅಕ್ರಮ; ವಿಚಾರಣೆ ವರದಿ ಕೈಯಲ್ಲಿದ್ದರೂ ಕ್ರಮವಿಲ್ಲ, ಕಸದಬುಟ್ಟಿಗೆ ಎಸೆದಿದ್ದ ಸರ್ಕಾರ
ಮೂಡಾದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಚಿವ ಬೈರತಿ ಸುರೇಶ್ ಅವರು ಒಂದಷ್ಟು ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಸೂಚನೆ ನೀಡಿರುವ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ಕಳೆದ 7 ತಿಂಗಳ ಹಿಂದೆಯೇ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿದೆ. ಮೈಸೂರು ಜಿಲ್ಲಾಧಿಕಾರಿ ಬರೆದಿದ್ದ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಪ್ರಾಧಿಕಾರದ ಆಯುಕ್ತರ ವಿರುದ್ಧ ಮಾಡಲಾಗಿರುವ ಪ್ರತಿ ಆರೋಪಗಳ ಕುರಿತು ವಿಚಾರಣೆ ಮತ್ತು ಪರಿಶೀಲನೆ ಅತ್ಯವಶ್ಯಕ. ಪ್ರತಿ ಆರೋಪಗಳನ್ನು ಪರಾಮರ್ಶಿಸಲು ಮತ್ತು ಉಂಟಾಗಿರುವ ನಷ್ಟದ ಸಂಬಂಧ ಕ್ರಮ ಕೈಗೊಳ್ಳಲು ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ ಪ್ರತಿ ಆರೋಪಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಸೂಕ್ತ,’ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯಿಸಿದ್ದರು. ಆದರೆ 7 ತಿಂಗಳವರೆಗೂ ನಗರಾಭಿವೃದ್ಧಿ ಇಲಾಖೆಯು ಈ ಪತ್ರದ ಮೇಲೆ ಕಠಿಣ ಕ್ರಮ ಕೈಗೊಂಡಿರಲಿಲ್ಲ.
ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆಯೇ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆಯೇ ಇರುವ ಪ್ರಕರಣಗಳಲ್ಲಿ ಪ್ರಾಧಿಕಾರವು ಭೂ ಮಾಲೀಕರಿಗೆ 50;50 ರ ಅನುಪಾತದಲ್ಲಿ ಪರಿಹಾರವನ್ನು ನೀಡುವ ಸಲುವಾಗಿ ಮೂಡಾ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ಮೇಲೆ ಭೂ ಮಾಲೀಕರಿಗೆ ಪರಿಹಾರವನ್ನು ನೀಡುವ ಸಲುವಾಗಿ ಕ್ರಮ ಜರುಗಿಸಿತ್ತು. ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ ನಿಯಮ 13(2ಎ) ನಿರ್ಣಯವನ್ನು ಕಾರ್ಯಗತಗೊಳಿಸಬೇಕಾಗಿರುತ್ತದೆ ಎಂದು ಆಯುಕ್ತರು ಸಮಜಾಯಿಷಿ ನೀಡಿದ್ದರು.
ಮೂಡಾ ಅಕ್ರಮಗಳ ಕುರಿತು ಸಲ್ಲಿಕೆಯಾಗಿದ್ದ ಹಲವು ದೂರುಗಳ ಕುರಿತು ಮೈಸೂರು ಜಿಲ್ಲಾಧಿಕಾರಿ ಅವರು ಅಂದಿನ ಆಯುಕ್ತರುಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದರು. ಈ ನೋಟೀಸ್‌ಗಳಿಗೆ ಆಯುಕ್ತರುಗಳು ಉತ್ತರ, ವಿವರಣೆ ನೀಡಿದ್ದಾರದಾರೂ ಹಲವು ಅಂಶಗಳ ಕುರಿತು ಸ್ಪಷ್ಟತೆಯೇ ಇರಲಿಲ್ಲ ಎಂಬುದನ್ನು ಸ್ಮರಿಸಬಹುದು.





