ಖಜಾನೆಯಲ್ಲಿರುವ ನಿಗಮಗಳ ಸಾವಿರಾರು ಕೋಟಿ ರುಪಾಯಿ ಮೇಲೆ ಸರ್ಕಾರದ ಕಣ್ಣು; ಮಾರ್ಗಪಲ್ಲಟಕ್ಕೆ ರಹದಾರಿ?

ಬೆಂಗಳೂರು; ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಮಂಡಳಿಗಳು  ಖಾಸಗಿ ಬ್ಯಾಂಕ್‌ಗಳಲ್ಲಿ ಇರಿಸಿರುವ ಕೋಟ್ಯಂತರ ರುಪಾಯಿ ಮೊತ್ತವನ್ನು ಹಿಂಪಡೆದು ರಾಜ್ಯ ಹುಜೂರ್‍‌ ಖಜಾನೆಯಲ್ಲಿರಿಸಬೇಕು ಎಂದು ಸರ್ಕಾರವು ನೀಡಿರುವ ಸೂಚನೆಯು ನಿಗಮಗಳು ಅನುಷ್ಠಾನಗೊಳಿಸಿರುವ ಯೋಜನೆ ಮತ್ತು ಫಲಾನುಭವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

 

ಅಲ್ಲದೇ ಈ ಪ್ರಕರಣವನ್ನು ಮುಂದಿಟ್ಟುಕೊಂಡು ವಿವಿಧ ಇಲಾಖೆಗಳ ಅಧೀನದಲ್ಲಿನ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿರುವ ಸಾವಿರಾರು ಕೋಟಿ ರುಪಾಯಿ ಮೇಲೆ ಕಣ್ಣಿಟ್ಟಿದೆ.

 

ವಾಲ್ಮೀಕಿ ಪರಿಶಿಷ್ಟ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಆರ್ಥಿಕ ಅಪರಾಧ ಪ್ರಕರಣವು ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಾಲಿಗೆ ರೋಗಿ ಹೇಳಿದ್ದು  ಹಾಲು ಅನ್ನ, ವೈದ್ಯ ಬಯಸಿದ್ದೂ ಹಾಲು ಅನ್ನ ರೀತಿಯಂತಾಗಿದೆ. ವಿವಿಧ ಯೋಜನೆಗಳಿಗೆ  ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಏದುಸಿರು ಬಿಡುತ್ತಿರುವ ಹೊತ್ತಿನಲ್ಲೇ  ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಪ್ರಕರಣವನ್ನೇ ವರವನ್ನಾಗಿಸಿಕೊಂಡಿದೆ.

 

ಅಲ್ಲದೇ ನಿಗಮಗಳಿಗೆ ಹಂಚಿಕೆಯಾಗಿರುವ  1,731.16 ಕೋಟಿ ರು.ಗಳನ್ನೂ ತನ್ನ ವಶದಲ್ಲಿರಿಸಿಕೊಳ್ಳಲು ಹವಣಿಸಿದೆ ಎಂಬ ಮಾತುಗಳು ನಿಗಮಗಳ ಅಧಿಕಾರಿಶಾಹಿಯಿಂದಲೇ ಕೇಳಿ ಬಂದಿವೆ.

 

ಸಮುದಾಯಗಳ ಅಭಿವೃದ್ಧಿ ನಿಗಮಗಳು ಇಲಾಖೆಗಳ ಅಧೀನದಲ್ಲಿ ಬರುತ್ತವೆಯಾದರೂ ಹಣಕಾಸು ಅಧಿಕಾರ ನೇರವಾಗಿ ನಿಗಮಗಳಿಗೆ ನೀಡಲಾಗಿತ್ತು. ಈ ಮೂಲಕ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಜಾರಿಗೊಳಿಸಿದ್ದ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು ಎಂಬ ಆಶಯವೂ ಇದರಲ್ಲಿತ್ತು.

 

ಆದರೀಗ ನಿಗಮಗಳು ಬ್ಯಾಂಕ್‌ಗಳಲ್ಲಿ ಇರಿಸಿದ್ದ ಹಣವನ್ನು ಖಜಾನೆಯಲ್ಲಿರಿಸಿಕೊಳ್ಳುವ ಮೂಲಕ  ನಿಗಮಗಳ ಇಡೀ ಹಣಕಾಸು ವ್ಯವಸ್ಥೆಯನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಂತಾಗಿದೆ. ಖಜಾನೆಗೆ ಸೇರುವ ನಿಗಮಗಳ  ಕೋಟ್ಯಂತರ ರುಪಾಯಿಗಳನ್ನು ಸರ್ಕಾರವು ತನಗೆ ಬೇಕಾದ ಹಾಗೇ ಮಾರ್ಗಪಲ್ಲಟಗೊಳಿಸಬಹುದು ಅಥವಾ ನಿಗಮಗಳಿಗೆ ಗೊತ್ತೇ ಇಲ್ಲದಂತೆ ಬೇರೆ ಉದ್ದೇಶಕ್ಕೂ  ಖರ್ಚು ಮಾಡಬಹುದು ಎಂಬ ಆತಂಕವೂ ನಿಗಮಗಳಿಗೆ ಎದುರಾಗಿದೆ.

 

‘ನಿಗಮಗಳ ಕೋಟ್ಯಂತರ ರುಪಾಯಿಗಳು ಒಮ್ಮೆ ಖಜಾನೆಗೆ ಸೇರಿದರೇ ಈ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲು ನಿಗಮಗಳು ಏದುಸಿರುಬಿಡಬೇಕು. ಅಥವಾ ಹಣ ಬಿಡುಗಡೆ ಮಾಡಿಸಿಕೊಳ್ಳಲು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ನಂತರ ಈ ಬಗ್ಗೆ ಸಭೆಗಳು ನಡೆಯಬೇಕು, ನಂತರ ಸರ್ಕಾರ ಅಥವ ಸಚಿವ ಸಂಪುಟವು ಹಣ ಬಿಡುಗಡೆಗೆ ಅನುಮೋದನೆ ನೀಡಬೇಕು. ಇದಾದ ನಂತರವೂ   ರಾಜ್ಯ ಹುಜೂರ್‍‌ ಖಜಾನೆಯ ಮುಂದೆ ನಿಗಮಗಳು  ಸಾಲುಗಟ್ಟಿ ನಿಲ್ಲಬೇಕಿದೆ,’ ಎನ್ನುತ್ತಾರೆ ನಿಗಮವೊಂದರ ಅಧಿಕಾರಿಯೊಬ್ಬರು.

 

ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಲ್ಲಿನ  ನಡೆದಿರುವ ಬಹುಕೋಟಿ ಹಗರಣವು ಇನ್ನಿತರೆ ನಿಗಮಗಳಲ್ಲಿ ಮರುಕಳಿಸಬಾರದು ಎಂದಾದರೇ ನಿಗಮಗಳ ಹಣಕಾಸಿನ ಆಡಳಿತ ಬಗ್ಗೆ ನಿರಂತರವಾಗಿ ನಿಗಾ ಇಡಬೇಕು. ಆಡಳಿತಾತ್ಮಕವಾಗಿ ದಕ್ಷತೆ ಇರುವಂತೆ ನೋಡಿಕೊಳ್ಳಬೇಕು. ಎಲ್ಲಕ್ಕೂ ಮಿಗಿಲಾಗಿ ದಕ್ಷ ಅಧಿಕಾರಿಗಳನ್ನು ನಿಗಮಗಳಿಗೆ ನಿಯೋಜಿಸಬೇಕು. ಆಗ ಮಾತ್ರ ಹಣಕಾಸಿನ ಆಡಳಿತದಲ್ಲಿ ಶಿಸ್ತನ್ನು ತರಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

 

ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಮತ್ತು ಮಂಡಳಿಗಳು ಸರ್ಕಾರದ ಖಜಾನೆಯಲ್ಲಿಯೇ ಖಾತೆಗಳನ್ನು ತೆರೆದು ಅಲ್ಲಿಯೇ ಜಮೆ ಮಾಡಬೇಕು ಮತ್ತು ನಿರ್ವಹಿಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶವನ್ನೂ ಉಲ್ಲಂಘಿಸಿವೆ ಎಂದು ಆರ್ಥಿಕ ಇಲಾಖೆ ತನ್ನ ಇತ್ತೀಚಿನ ಪತ್ರದಲ್ಲಿ ಹೇಳಿತ್ತು.   ಖಾಸಗಿ ಬ್ಯಾಂಕ್‌ಗಳಲ್ಲಿ ವಿವಿಧ ನಿಗಮಗಳು  1,731.16 ಕೋಟಿ ರು.ಗಳನ್ನು ಠೇವಣಿ ಇರಿಸಿದ್ದರ ಕುರಿತು ಪಟ್ಟಿಯನ್ನೂ ಬಿಡುಗಡೆ ಮಾಡಿತ್ತು.

 

 

2024ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಪುನರುಚ್ಛರಿಸಿರುವ ಇಲಾಖೆಯು, ಸಮುದಾಯಗಳ ಅಭಿವೃದ್ಧಿ ನಿಗಮ, ಮಂಡಳಿಗಳು ಖಾಸಗಿ ಬ್ಯಾಂಕ್‌ಗಳಲ್ಲಿ ತೆರೆದಿರುವ ಎಲ್ಲಾ ಬಗೆಯ ಖಾತೆಗಳನ್ನೂ ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚಿಸಿತ್ತು.

ನಿಗಮಗಳಿಂದ ಆದೇಶ ಉಲ್ಲಂಘನೆ; ಬಿಒಬಿ ಸೇರಿ ಖಾಸಗಿ ಬ್ಯಾಂಕ್‌ಗಳಲ್ಲಿ 1,731.16 ಕೋಟಿ ರು ಠೇವಣಿ

ಆರ್ಥಿಕ ಇಲಾಖೆಯು ಮಾಡಿರುವ ಪಟ್ಟಿಯ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಬಹುತೇಕ ನಿಗಮಗಳು ಬ್ಯಾಂಕ್‌ ಆಫ್‌ ಬರೋಡಾದಲ್ಲಿಯೇ ಖಾತೆ ತೆರೆದಿವೆ.

 

ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಗಳಲ್ಲಿ ಈ ನಿಗಮಗಳು ಕೋಟ್ಯಂತರ ರುಪಾಯಿಗಳನ್ನು ಇರಿಸಿವೆ.  ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೊಂದೇ ಬ್ಯಾಂಕ್‌ ಆಫ್‌ ಬರೋಡಾ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ 310.99 ಕೋಟಿ ರು.ಗಳನ್ನು ಇರಿಸಿತ್ತು. ಇದೀಗ ಸರ್ಕಾರದ ಸೂಚನೆಯಂತೆ ಈ ಬ್ಯಾಂಕ್‌ನಲ್ಲಿ ಖಾತೆಗಳಲ್ಲಿದ್ದ ಇಷ್ಟೂ ಮೊತ್ತವನ್ನು ಹಿಂಪಡೆದು ರಾಜ್ಯ ಸರ್ಕಾರ ಖಜಾನೆಯಲ್ಲಿನ ಖಾತೆಗಳಿಗೆ ವರ್ಗಾಯಿಸಿದೆ ಎಂದು ಗೊತ್ತಾಗಿದೆ.

 

 

ಉಪ್ಪಾರ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ 7.40 ಕೋಟಿ ರು.,   ವೀರಶೈವ ಲಿಂಗಾಯುತ ಅಭಿವೃದ್ಧಿ ನಿಗಮವು ಸಹ  61.52 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌ನಲ್ಲಿ 10.51 ಕೋಟಿ ರು.ಗಳನ್ನು ಇರಿಸಿದೆ. ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ70.73 ಕೋಟಿ ರು.ಗಳನ್ನು ಇರಿಸಿದೆ.

 

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌ನಲ್ಲಿ 15.40 ಲಕ್ಷ ರು.ಗಳನ್ನು ಇರಿಸಿದೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ 8.42 ಕೋಟಿ ರು.ಗಳನ್ನು ಇರಿಸಿದೆ. ಬಾಬು ಜಗಜೀವನ್‌ ಚರ್ಮೋದ್ಯಮ ಅಭಿವೃದ್ಧಿ ಮಂಡಳಿಯು ಯೂನಿಯನ್‌ ಬ್ಯಾಂಕ್‌ನಲ್ಲಿ 1.14 ಕೋಟಿ ರು. ಮೊತ್ತವನ್ನು ಇರಿಸಿದೆ.

 

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ 1,123.57 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಯೂನಿಯನ್‌, ಕೆನರಾ ಬ್ಯಾಂಕ್‌ನಲ್ಲಿ 110.64 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌, ಐಡಿಬಿಐ, 12.85 ಲಕ್ಷ ರು., ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಐಸಿಐಸಿಐ ಮತ್ತು ಎಸ್‌ಬಿಐನಲ್ಲಿ 25.93 ಕೋಟಿ ರು.ಗಳನ್ನು ಇರಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts