ಸರ್ಕಾರಕ್ಕೆ ಜಮೆಯಾಗದ ಸೇವಾ ಶುಲ್ಕ; ರೈತ ಸಂಪರ್ಕ ಕೇಂದ್ರಗಳಲ್ಲಿ ಹಣ ದುರುಪಯೋಗ?

ಬೆಂಗಳೂರು; ರಾಜ್ಯದ 742ಕ್ಕೂ ಅಧಿಕ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವು ಸರ್ಕಾರಕ್ಕೆ ಜಮೆ ಆಗುತ್ತಿಲ್ಲ. ಅಲ್ಲದೇ ಆರ್ಥಿಕ ಇಲಾಖೆಯ ಅನುಮತಿ ಇಲ್ಲದೆಯೇ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಹೆಚ್ಚುವರಿ ಮಾರಾಟ ಮಳಿಗೆಗಳ ಗೋಡೌನ್‌ ಬಾಡಿಗೆ ಹಾಗೂ ತಾತ್ಕಾಲಿಕವಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಹೆಚ್ಚುವರಿ ಮಾರಾಟ ಮಳಿಗೆಗಳಲ್ಲಿ ನೇಮಿಸಿಕೊಳ್ಳುವ ಸಿಬ್ಬಂದಿ ಗೌರವ ಧನ ಪರಿಷ್ಕರಣೆ ಸಂಬಂಧ ಕೃಷಿ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸೇವಾ ಶುಲ್ಕವು ಸರ್ಕಾರಕ್ಕೆ ಜಮೆ ಆಗುತ್ತಿಲ್ಲ ಎಂಬುದನ್ನು ಪ್ರಸ್ತಾಪಿಸಲಾಗಿದೆ.

 

ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಈ ಸಂಬಂಧ 2024ರ ಮೇ 29ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡದಿರಲು ಕಾರಣಗಳೇನು ಎಂಬ ವಿವರಣೆಯನ್ನೂ ಇದೇ ಪತ್ರದಲ್ಲಿ ಕೇಳಿರುವುದು ಗೊತ್ತಾಗಿದೆ.

 

ಈ ಕುರಿತು ಕೃಷಿ ಇಲಾಖೆಯ ಆಯುಕ್ತರಾದ ವೈ ಎಸ್‌ ಪಾಟೀಲ್‌ ಅವರು ಸಚಿವ ಚೆಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಸರಬರಾಜುದದಾರಿಗೆ ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ರೈತರ ಭಾಗದ ಹಣವನ್ನು ಸಂಬಂಧಪಟ್ಟ ಸಂಸ್ಥೆಗೆ ಪಾವತಿಸಲಾಗುತ್ತಿದೆ. ಹೀಗೆ ಪಾವತಿಸುವಾಗ ಮಾರಾಟ ಮಾಡಿದ ಪ್ರಮಾಣದ ಒಟ್ಟು ಮೊಬಲಗಿಗೆ ಶೇ.2ರಂತೆ ಸೇವಾ ಶುಲ್ಕವನ್ನು ಪಡೆದು ಉಳಿದ ಹಣವನ್ನು ಪಾವತಿಸಲಾಗುತ್ತಿದೆ ಎಂದು ಗೊತ್ತಾಗಿದೆ.

 

ಶೇಂಗಾ ಮತ್ತು ಸೋಯಾ ಅವರೆ ಬೆಳೆಗಳಲ್ಲಿ ಸೇವಾ ಶುಲ್ಕವನ್ನು ಮಾರಾಟ ಮಾಡಿದ ಒಟ್ಟು ಪ್ರಮಾಣಕ್ಕೆ ಅನುಸಾರವಾಗಿ ಪ್ರತಿ ಕ್ವಿಂಟಾಲ್‌ಗೆ 25.00 ರು.ನಂತೆ ಪಡೆದುಕೊಳ್ಳಲಾಗುತ್ತಿದೆ. ಹೆಚ್ಚುವರಿ ಮಾರಾಟ ಕೇಂದ್ರಗಳು, ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಹಕಾರಿ ಸಂಘಗಳಲ್ಲಿ ಮಾರಾಟ ಮಾಡಲು ಗುರುತಿಸಿಕೊಂಡಾಗ ಆಯಾ ಕೇಂದ್ರಗಳಲ್ಲಿನ ಬಿತ್ತನೆ ಬೀಜ ಮಾರಾಟ ಮಾಡಿದ ನಂತರ ಸೇವಾ ಶುಲ್ಕ ಪಡೆಯಲಾಗುತ್ತದೆ.

 

ಅಲ್ಲದೇ ಬೀಜ ವಿತರಣೆಯಿಂದ ಪಡೆದ ರೈತರ ವಂತಿಕೆಯನ್ನು ಪ್ರತಿ ದಿನ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗೂ ಸಂಬಂಧಿಸಿದ ಸಂಸ್ಥೆಗಳಿಗೆ ರೈತರ ವಂತಿಕೆಯನ್ನು 15 ದಿನದೊಳಗೆ ಪಾವತಿಸಬೇಕು. ಇದು ಸಹಾಯಕ ಕೃಷಿ ನಿರ್ದೇಶಕಗಳು ಮತ್ತು ಉಪ ಕೃಷಿ ನಿರ್ದೇಶಕರಗಳ ಜವಾಬ್ದಾರಿಯಾಗಿದೆ.

 

ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಿದ್ದಲ್ಲಿ ಈ ಕೇಂದ್ರಗಳಲ್ಲಿ ಮಾರಾಟವಾದ ಪ್ರಮಾಣಕ್ಕೆ ಒಟ್ಟು ಮೌಲ್ಯದ ಸೇವಾ ಶುಲ್ಕವನ್ನು ರೈತ ಸಂಪರ್ಕ ಕೇಂದ್ರ ಮತ್ತು ಮಾರಾಟ ಮಳಿಗೆಗೆ 50;50ರ ಅನುಪಾತದಂತೆ ಹಂಚಿಕೊಳ್ಳಲಾಗುತ್ತದೆ.

 

ಬೆಳೆ ಆಯ್ಕೆ, ಬೆಳೆ ಉತ್ಪಾದನಾ ಕಾರ್ಯಕ್ರಮಗಳು, ಮಾರುಕಟ್ಟೆ ಮಾಹಿತಿ, ರೈತರಿಗೆ ಆಧುನಿಕ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರದ ಮೂಲಕ ನೀಡಲಾಗುತ್ತಿದೆ. ಬೀಜ, ರಸಗೊಬ್ಬರ, ಸಸ್ಯ ಸಂರಕ್ಷಣಾ ಔಷಧ, ಬೀಜ ಮೊಳಕೆ ಮತ್ತು ಗುಣಮಟ್ಟ, ಮಣ್ಣು ಪರೀಕ್ಷೆ ಸೇರಿದಂತೆ ಪರೀಕ್ಷಾ ಸೌಲಭ್ಯಗಳನ್ನು ಸ್ಥಳೀಯವಾಗಿ ಒದಗಿಸಲಾಗುತ್ತದೆ.

 

ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಬಿತ್ತನೆ ಮತ್ತು ಇತರೆ ಪರಿಕರಗಳ ಪ್ರಾತ್ಯಕ್ಷಿಕೆಗೆ ಸೌಲಭ್ಯ ಒದಗಿಸುವುದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ರಂಗಗಳ ಮೂಲಕ ತಂತ್ರಜ್ಞಾನ ಮತತು ಪರಿಕರಗಳ ತುಲನೆ, ಪರಿಶೀಲನೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

 

ಸರ್ಕಾರ ಕೋರಿರುವ ಮಾಹಿತಿಯಲ್ಲೇನಿದೆ?

 

ಹೆಚ್ಚುವರಿ ಮಾರಾಟ ಮಳಿಗೆಗಳ ಗೋಡೌನ್‌ ಬಾಡಿಗೆ ವೆಚ್ಚವನ್ನು ಹಾಗೂ ತಾತ್ಕಾಲಿಕವಾಗಿ ರೈತ ಸಂಪರ್ಕ ಕೇಂದ್ರ, ಹೆಚ್ಚುವರಿ ಮಾರಾಟ ಮಳಿಗೆಗಳಲ್ಲಿ ನೇಮಿಸಿಕೊಳ್ಳುವ ಸಿಬ್ಬಂದಿಗಳ ಗೌರವ ಧನವನ್ನು ಆರ್‍‌ಎಸ್‌ಕೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದಲ್ಲಿ ವೆಚ್ಚ ಭರಿಸಲು ಆರ್ಥಿಕ ಇಲಾಖೆ, ಸಕ್ಷಮ ಪ್ರಾಧಿಕಾರದ ಸಹಮತಿ ಪಡೆಯಲಾಗಿದೆಯೇ ಎಂಬ ಮಾಹಿತಿ ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

ರೈತ ಸಂಪರ್ಕ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಮತ್ತು ಹೆಚ್ಚುವರಿ ಮಾರಾಟ ಮಳಿಗೆಗಳಲ್ಲಿ ನೇಮಿಸಿಕೊಳ್ಳುವ ಪ್ರತಿ ಸಿಬ್ಬಂದಿಗೆ ಪ್ರಸ್ತುತ ಪಾವತಿಸುತ್ತಿರುವ ಮಾಹೆಯಾನ ಗೌರವ ಧನದ ವಿವರ, ಹೆಚ್ಚುವರಿಯಾಗಿ ನೇಮಿಸಿಕೊಳ್ಳುವ ಗರಿಷ್ಠ ಸಿಬ್ಬಂದಿಗಳ ಸಂಖ್ಯೆಯ ವಿವರವನ್ನೂ ಕೋರಿದೆ.

 

ಹೆಚ್ಚುವರಿ ಸಿಬ್ಬಂದಿಗಳ ಗೌರವ ಧನ ಹೆಚ್ಚಳದಿಂದ ವಾರ್ಷಿಕವಾಗಿ ತಗಲುವ ಒಟ್ಟಾರೆ ವೆಚ್ಚದ ಮಾಹಿತಿ, ನೇಮಕ ಮಾಡಿಕೊಳ್ಳುವಾಗ ಆರ್ಥಿಕ ಇಲಾಖೆಯ ಸಹಮತಿಯನ್ನು ಪಡೆಯದೇ ಯಾವ ಆರ್ಥಿಕ ಅಧಿಕಾರದನ್ವಯ ನೇಮಕ ಮಾಡಿಕೊಳ್ಳಲಾಗಿದೆ, ಹೆಚ್ಚುವರಿ ಸಬ್ಬಿಂದಿಗಳಿಗೆ 100 ರು.ಗ ಕೂಲಿ ದರವನ್ನು ಯಾವ ಸಕ್ಷಮ ಪ್ರಾಧಿಕಾರದ ಆದೇಶವನ್ನು ಅನ್ವಯಿಸಿಕೊಂಡು ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಕೇಳಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts