‘ನೀಟ್‌’ ತರಬೇತಿ ಸಂಸ್ಥೆ ಆಯ್ಕೆಯ ಟೆಂಡರ್‍‌ನಲ್ಲಿ ಅಕ್ರಮ; ‘ದಿ ಫೈಲ್‌’ ವರದಿ ಬೆನ್ನಲ್ಲೇ ದನಿ ಎತ್ತಿದ ಯತ್ನಾಳ್‌

ಬೆಂಗಳೂರು; ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ  ನೀಟ್‌, ಜೆಇಇ ಮತ್ತು ಸಿಇಟಿ ಪರೀಕ್ಷೆ ಸಂಬಂಧ ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಬೇತಿ ನೀಡಲು ಸಂಸ್ಥೆಗಳ ಆಯ್ಕೆ ಮಾಡಲು ಕರೆದಿದ್ದ ಟೆಂಡರ್‍‌ನಲ್ಲಿಯೇ ನಡೆದಿದೆ ಎನ್ನಲಾಗಿರುವ ಅಕ್ರಮ ಪ್ರಕರಣ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ದನಿ ಎತ್ತಿದ್ದಾರೆ.

 

ಈ ಪ್ರಕರಣ ಕುರಿತು ಸರ್ಕಾರವು  ಕೂಡಲೇ ಕ್ರೈಸ್‌ನಲ್ಲಿರುವ   ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ಎಲ್ಲಾ ಮಾಹಿತಿಗಳನ್ನು ಹೊಂದಿದ್ದರೂ ಇದನ್ನು ನಿರ್ಲಕ್ಷಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಂದ ವಿವರವಾದ ವಿವರಣೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಟ್ವೀಟ್‌ ಮಾಡಿದ್ದಾರೆ.

 

ಕ್ರೈಸ್‌ ವ್ಯಾಪ್ತಿಯಲ್ಲಿನ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್‌, ಜೆಇಇ ಮತ್ತು ಸಿಇಟಿ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲು ಸಂಸ್ಥೆಗಳ ಆಯ್ಕೆಗಾಗಿ ಕರೆದಿದ್ದ ಟೆಂಡರ್‍‌ನಲ್ಲೇ ಅಕ್ರಮ ನಡೆದಿತ್ತು ಎಂಬುದನ್ನು ‘ದಿ ಫೈಲ್‌’ ದಾಖಲೆ ಸಹಿತ ಬಯಲಿಗೆಳೆದಿತ್ತು. ವರದಿಯಲ್ಲಿನ ಅಂಶಗಳನ್ನೇ ಎತ್ತಿ ಹಿಡಿದಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಇಡೀ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಪ್ರತಿಪಾದಿಸಿದ್ದಾರೆ.

 

ಟ್ವೀಟ್‌ನಲ್ಲೇನಿದೆ?

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯು ತನ್ನ ಪ್ರಥಮ ಪಿಯು, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನೀಟ್, ಜೆಇಇ ಮತ್ತು ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಕೋಚಿಂಗ್ ಸಂಸ್ಥೆಗಳ ಆಯ್ಕೆಗೆ ಟೆಂಡರ್‍‌  ಆಹ್ವಾನಿಸಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ  ಅಕ್ರಮಗಳನ್ನು ಉಲ್ಲೇಖಿಸಿದ್ದ ಬಿಡ್‌ದಾರರೊಬ್ಬರು  ದಾಖಲೆಗಳೊಂದಿಗೆ ಡಿಸೆಂಬರ್ 29, 2023 ರಂದು ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ್ದರು.ಈ ದೂರನ್ನು ಗಮನದಲ್ಲಿಟ್ಟುಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು  ಹೊಸದಾಗಿ ಟೆಂಡರ್‌ ನಡೆಸಬೇಕು ಎಂದು ಸೂಚಿಸಿದ್ದರು.

 

ಆದರೆ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಸೂಚನೆಯ ಹೊರತಾಗಿಯೂ ಇಲಾಖೆ ಅಧಿಕಾರಿಗಳು ತಾಂತ್ರಿಕ ತೊಂದರೆಗಳನ್ನು ಉಲ್ಲೇಖಿಸಿ ಟೆಂಡರ್ ಪ್ರಕ್ರಿಯೆ ಮುಂದುವರಿಸಲು ಕೆಆರ್‌ಇಐಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

 

ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್ ಮೂಲಕ ರೂ 12 ಕೋಟಿ ವೆಚ್ಚದಲ್ಲಿ ತರಬೇತಿ ನೀಡಲು ಪ್ರಸ್ತಾವನೆಯಿತ್ತು.  ಮೊದಲ ಹಂತದಲ್ಲಿ 2023 ರ ಡಿಸೆಂಬರ್ 21 ರಂದು ರೂ 7.15 ಕೋಟಿ ವೆಚ್ಚದಲ್ಲಿ ಆನ್‌ಲೈನ್ ಮೂಲಕ ತರಬೇತಿ  ನೀಡಬೇಕಿತ್ತು. ಟೆಂಡರ್‌ನಲ್ಲಿನ ನಿಯಮಗಳು ಮತ್ತು ಷರತ್ತುಗಳು ದುರುದ್ದೇಶಪೂರಿತವಾಗಿವೆ ಎಂಬ ಆರೋಪವಿದೆ.  ಬಿಡ್ಡಿಂಗ್ ಪೂರ್ವ ಸಭೆಯಲ್ಲಿ ಬಿಡ್‌ದಾರರೊಬ್ಬರು  ಇದನ್ನು ಗಮನಕ್ಕೆ ತಂದಿದ್ದರು. ಆದಾಗ್ಯೂ, ಜಂಟಿ ನಿರ್ದೇಶಕ ನಾಗೇಶ್ ಅವರು ‘ನಿರ್ದಿಷ್ಟ’ ಕಂಪನಿಗೆ ಒಲವು ತೋರಿದ್ದರು ಎಂಬ ಅಂಶವನ್ನು ಯತ್ನಾಳ್‌ ಅವರು ಪ್ರಸ್ತಾಪಿಸಿದ್ದಾರೆ.

 

ನಿಯಮಗಳು ಮತ್ತು ಷರತ್ತುಗಳು ಗುಣಮಟ್ಟ ಮತ್ತು ವೆಚ್ಚ ಆಧಾರಿತ ಮೌಲ್ಯಮಾಪನ ವಿಧಾನದ (QCBS)  ಪ್ರಕಾರ ಇರಲಿಲ್ಲ. ಕೋಚಿಂಗ್ ಇನ್‌ಸ್ಟಿಟ್ಯೂಟ್,  ನುರಿತ ಪರಿಣತಿ, ಅನುಷ್ಠಾನ ಜ್ಞಾನ, ಸರಿಯಾದ ಅರ್ಹತೆ ಮತ್ತು ಸ್ಥಳೀಯ (ಕನ್ನಡ) ಭಾಷೆಯಲ್ಲಿ ತರಬೇತಿಯ ಜ್ಞಾನವನ್ನು ಹೊಂದಿರಬೇಕು ಎಂದು  ಸ್ಪಷ್ಟವಾಗಿ ಹೇಳುತ್ತದೆ. ಟೆಂಡರ್‌ಗಳ ಬಿಡ್ಡರ್‌ಗಳಿಗೆ ಅನುಗುಣವಾಗಿ ಶ್ರೇಯಾಂಕ ನೀಡಬೇಕು. ಈ  ನಿಬಂಧನೆಗಳು/ಅವಶ್ಯಕತೆಗಳ ಪ್ರಕಾರ ಟೆಂಡರ್ ದಾಖಲೆಗಳನ್ನು ರೂಪಿಸಬೇಕು. ಆದರೆ, ಈ ಯಾವುದೇ ಷರತ್ತುಗಳು, ಅವಶ್ಯಕತೆಗಳನ್ನು ಪೂರೈಸಲಾಗಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

 

ಹಣಕಾಸು ಇಲಾಖೆಯು (ಎಫ್‌ಡಿ 18 ಎಕ್ಸ್‌ಪಿ-12/2021 ಬೆಂಗಳೂರು ದಿನಾಂಕ 01/09/2021 ಸರ್ಕಾರಿ ಅಧಿಸೂಚನೆ ಸಂಖ್ಯೆ ಎಫ್‌ಡಿ 218/ಎಕ್ಸ್‌ಪಿ-12/2022) ಅಂಗೀಕರಿಸಿದ ಆದೇಶದ ಪ್ರಕಾರ ಈ ಆದೇಶವು ಹಿಂದಿನ ಟೆಂಡರ್‌ನಲ್ಲಿ ಸ್ಟಾರ್ಟಪ್ ಕಂಪನಿಗಳಿಗೆ ಅನುಕೂಲಕರವಾಗಿತ್ತು. ಆದರೆ, ಕೆಆರ್‌ಇಐಎಸ್‌ ಕರೆದ ಟೆಂಡರ್‌ನಲ್ಲಿ ಸ್ಟಾರ್ಟಪ್‌ಗಳಿಗೆ ಅವಕಾಶ ನೀಡಿಲ್ಲ ಮತ್ತು  ಉಳಿದವರು ಯಾರೂ ಬಹಿರಂಗವಾಗಿ ಭಾಗವಹಿಸದ ರೀತಿಯಲ್ಲಿ ಟೆಂಡರ್ ರೂಪಿಸಲಾಗಿದೆ. ಕೆಟಿಪಿಪಿ  ಕಾಯಿದೆ ಮತ್ತು ನಿಯಮಗಳ ಪ್ರಕಾರ ಟೆಂಡರ್ ನಿಯಮಗಳು ನ್ಯಾಯೋಚಿತ, ಪಾರದರ್ಶಕ ಮತ್ತು ಎಲ್ಲಾ ಭಾಗವಹಿಸುವವರಿಗೆ ಮುಕ್ತವಾಗಿರಬೇಕು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರಬೇಕು. ಪ್ರಧಾನ ಕಾರ್ಯದರ್ಶಿ  ಮೇಜರ್ ಮಣಿವಣ್ಣನ್ ಅವರು ಮರು ಟೆಂಡರ್‌ಗೆ ಆದೇಶ ನೀಡಿದ್ದರೂ ಇಲಾಖೆ ಅಧಿಕಾರಿಗಳು ಅನುಕೂಲಕರವಾಗಿ ಆದೇಶವನ್ನು ನಿರ್ಲಕ್ಷಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಯತ್ನಾಳ್‌ ಅವರು ಆರೋಪಿಸಿದ್ದಾರೆ.

 

2024 ರ ಜನವರಿ 19 ಮತ್ತು ಫೆಬ್ರವರಿ 15 ರಂದು ಪ್ರಧಾನ ಕಾರ್ಯದರ್ಶಿಗಳ ಕಚೇರಿ ಸಮಾಜ ಕಲ್ಯಾಣ ಇಲಾಖೆಯಿಂದ ಕಳುಹಿಸಲಾದ ಮತ್ತು ಶಾಖಾಧಿಕಾರಿ  ಸುಭಾಷ್ ಚಲವಾದಿ ಅವರು ಸಹಿ ಮಾಡಿದ ಪತ್ರಗಳಲ್ಲಿ ಸಾಕಷ್ಟು ವಿರೋಧಾಭಾಸ ಮತ್ತು ಗೊಂದಲಗಳಿವೆ. ಮೊದಲ ಪತ್ರದಲ್ಲಿ, ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಷರಾವನ್ನು ಅನುಸರಿಸಬೇಕಿತ್ತು.

 

ಎರಡನೆಯದರಲ್ಲಿ, ಟೆಂಡರ್ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ನಿಲ್ಲಿಸಲು ಸಾಧ್ಯವಿಲ್ಲದ ಕಾರಣ ಅದನ್ನು ಮುಂದುವರಿಸಬೇಕು ಎಂದು ಹೇಳಲಾಗಿದೆ. ಕ್ರೈಸ್‌  ತನ್ನ  ಪತ್ರದ ಮೂಲಕ ಸ್ಪಷ್ಟಪಡಿಸಿದ ನಂತರ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಪ್ರಧಾನ ಕಾರ್ಯದರ್ಶಿಗಳ ಕಚೇರಿ ಒಪ್ಪಿಕೊಂಡಿದೆ.  ವಿಚಿತ್ರವೆಂದರೆ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಯಾವುದೇ ಆಂತರಿಕ ವಿಚಾರಣೆ ನಡೆದಿಲ್ಲ ಎಂದೂ ಯತ್ನಾಳ್‌ ಅವರು ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

 

ಇಷ್ಟೆಲ್ಲಾ ಆಗುತ್ತಿರುವಾಗ  ಸಚಿವ  ಹೆಚ್.ಸಿ.ಮಹದೇವಪ್ಪ ಅವರನ್ನು ಕತ್ತಲಲ್ಲಿಡಲಾಗಿದೆ. ಈ ಪ್ರಕ್ರಿಯೆಯಲ್ಲಿ ನಡೆದಿರಬಹುದಾದ   ಭ್ರಷ್ಟಾಚಾರವನ್ನು ಗಮನಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸರಕಾರ ಕೂಡಲೇ ಕ್ರೈಸ್ ನಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ಎಲ್ಲಾ ಮಾಹಿತಿಗಳನ್ನು ಹೊಂದಿದ್ದರೂ ಇದನ್ನು ನಿರ್ಲಕ್ಷಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಂದ ವಿವರವಾದ ವಿವರಣೆ ಪಡೆಯಬೇಕು ಎಂದು ಯತ್ನಾಳ್‌ ಅವರು ಒತ್ತಾಯಿಸಿದ್ದಾರೆ.

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌)ದ ವ್ಯಾಪ್ತಿಯಲ್ಲಿರುವ ವಸತಿ ಶಾಲೆ, ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ  ನೀಟ್‌, ಜೆಇಇ ಮತ್ತು ಸಿಇಟಿ ಪರೀಕ್ಷೆ ಸಂಬಂಧ ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಬೇತಿ ನೀಡಲು ಸಂಸ್ಥೆಗಳ ಆಯ್ಕೆ ಮಾಡುವ   ಕರೆದಿದ್ದ ಟೆಂಡರ್‍‌ನಲ್ಲಿಯೇ ಅಕ್ರಮದ ವಾಸನೆ ಬಡಿದಿತ್ತು.

ನೀಟ್‌, ಜೆಇಇ, ಸಿಇಟಿ ತರಬೇತಿ ನೀಡುವ ಸಂಸ್ಥೆ ಆಯ್ಕೆಯಲ್ಲಿ ಅಕ್ರಮ ವಾಸನೆ; ನಿರ್ದಿಷ್ಟ ಸಂಸ್ಥೆಯ ಪಾಲಾದ 12 ಕೋಟಿ?

ನೀಟ್‌ ಫಲಿತಾಂಶದಲ್ಲಿ ಭಾರೀ ಅಕ್ರಮ ನಡೆದಿದೆ ಮತ್ತು ಇದಕ್ಕೆ ಕೇಂದ್ರದ ಮೋದಿ ಸರ್ಕಾರವಾಗಲೀ ಉತ್ತರಿಸದೇ ಲಕ್ಷಾಂತರ ಯುವಜನರ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಕ್ರೈಸ್‌ ವ್ಯಾಪ್ತಿಯ ವಸತಿ ಶಾಲೆ, ಕಾಲೇಜುಗಳಲ್ಲಿ ನೀಟ್‌ ಸೇರಿದಂತೆ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲು ಸಂಸ್ಥೆಗಳ ಆಯ್ಕೆಯ ಟೆಂಡರ್‍‌ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆದಿದೆ ಎಂದು ಕೇಳಿ ಬಂದಿರುವ  ಆರೋಪಗಳೂ ಮುನ್ನೆಲೆಗೆ ಬಂದಿದ್ದವು.

the fil favicon

SUPPORT THE FILE

Latest News

Related Posts