ಅರೆಕಾಲಿಕ ಉಪನ್ಯಾಸಕರ ವೇತನದಲ್ಲೂ ಕತ್ತರಿ; ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಹಣ ಖಾಲಿಯಾಯಿತೇ?

ಬೆಂಗಳೂರು; ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ನಿಗದಿಪಡಿಸಿರುವ ಮಾಸಿಕ ವೇತನದಲ್ಲಿಯೇ ಅರ್ಧಕ್ಕರ್ಧ ಕಡಿತಗೊಳಿಸಿ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಸುಮಾರು 1,400 ಮಂದಿ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಇಂತಿಷ್ಟೇ ಗಂಟೆಗಳ ಕಾರ್ಯಭಾರವನ್ನೂ ವಹಿಸಲಾಗಿದೆ. ಅರೆಕಾಲಿಕ ಉಪನ್ಯಾಸಕರು ತಮಗೆ ವಹಿಸಿರುವ ಕಾರ್ಯಭಾರವನ್ನು ನಿಭಾಯಿಸಿದ್ದರೂ ನಿಗದಿತ ವೇತನದಲ್ಲಿಯೇ ಕಡಿತಗೊಂಡಿದೆ.

 

ಈ ಬಗ್ಗೆ ಅಖಿಲ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್‌ ಅರೆಕಾಲಿಕ ಉಪನ್ಯಾಸಕರ ಸಂಘವು ಸ್ಥಳೀಯ ಪ್ರಾಂಶುಪಾಲರು ಮತ್ತು ಉನ್ನತ ಶಿಕ್ಷಣ ಸಚಿವ  ಡಾ ಎಂ ಸಿ ಸುಧಾಕರ್‌ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮವಹಿಸಿಲ್ಲ.

 

ದಕ್ಷಿಣ ಕನ್ನಡದ ಬಂಟ್ವಾಳದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ 2023ರ ಜೂನ್‌, ಆಗಸ್ಟ್‌ ತಿಂಗಳ ಸಂಬಳದಲ್ಲೇ ಅರ್ಧಕ್ಕರ್ಧ ಕಡಿತಗೊಳಿಸಿ ನೀಡಿದೆ. ಈ ಸಂಬಂಧ ಸಂಘವು ಸರ್ಕಾರಕ್ಕೆ ಮತ್ತು ಪ್ರಾಂಶುಪಾಲರಿಗೆ ಬರೆದಿದ್ದ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪಾಲಿಟೆಕ್ನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರು ತಿಂಗಳಲ್ಲಿ ಗರಿಷ್ಠ 32 ಗಂಟೆಗಳ ಕಾಲ ಪಾಠ ಮಾಡಿದ್ದರೂ ಪೂರ್ಣ ವೇತನ ನೀಡಿಲ್ಲ. ವೇತನ ಕಡಿತಗೊಳಿಸಿರುವುದಕ್ಕೆ ಪ್ರಾಂಶುಪಾಲರೂ ಸಹ ಯಾವುದೇ ಕಾರಣ ನೀಡಿಲ್ಲ. ಹೀಗಾಗಿಯೇ ಅರೆಕಾಲಿಕ ಉಪನ್ಯಾಸಕರು ಸರ್ಕಾರದ ಮೆಟ್ಟಿಲೇರಿದ್ದಾರೆ ಎಂದು ಗೊತ್ತಾಗಿದೆ.

 

‘2022-23ನೇ ಶೈಕ್ಷಣಿಕ ವರ್ಷದಲ್ಲಿ ಸಮ ಸೆಮಿಸ್ಟರಿನ ಜೂನ್‌ ತಿಂಗಳ ಸಂಬಳ ಕಡಿಮೆ ಸಿಕ್ಕಿರುವ ಸಂದರ್ಭದಲ್ಲಿ ತಮ್ಮಲ್ಲಿ ಸ್ಪಷ್ಟೀಕರಣ ಕೋರಿರುತ್ತೇವೆ. ಮತ್ತು ನಮಗೆ ಜೂನ್‌ 2023ರ ಬಾಕಿ ಇರುವ ಸಂಬಳವನ್ನೂ ಕೊಡಿಸಿ,’ ಎಂದು ಅರೆಕಾಲಿಕ ಉಪನ್ಯಾಸಕರ ಸಂಘವು ಪ್ರಾಂಶುಪಾಲರಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

 

ಎಂ ಪ್ರಶಾಂತ (ಯಾಂತ್ರಿಕ ವಿಭಾಗ) ಇವರು 2023ರ ಜೂನ್‌ ತಿಂಗಳಿನಲ್ಲಿ 24 ಗಂಟೆಗಳು ಕಾರ್ಯನಿರ್ವಹಿಸಿದ್ದರು. ನಿಗದಿತ ವೇತನದ ಪ್ರಕಾರ ಇವರಿಗೆ 8,333 ರು. ನೀಡಬೇಕಿತ್ತು. ಆದರೆ ಜೂನ್‌ ತಿಂಗಳಲ್ಲಿ ಇವರಿಗೆ ನೀಡಿದ್ದು 6,250 ರು. ಮಾತ್ರ. ಜೂನ್‌ ತಿಂಗಳಲ್ಲಿ 2,083 ರು ಬಾಕಿ ಇತ್ತು ಎಂಬುದು ಸಂಘದ ಪತ್ರದಿಂದ ಗೊತ್ತಾಗಿದೆ.

 

ಅದೇ ರೀತಿ ಶಾಂತಾ ಕೆ (ಎಲೆಕ್ಟ್ರಾನಿಕ್ಸ್‌ ಕಮ್ಯುನಿಕೇಷನ್ಸ್‌) ಅವರು ಜೂನ್‌ ತಿಂಗಳಿನಲ್ಲಿ 32 ಗಂಟೆಗಳ ಕಾಲ ಕಾರ್ಯನಿರ್ವಹಿಸಿದ್ದರು. ಇದರ ಪ್ರಕಾರ ಇವರಿಗೆ 11,111 ರು. ನೀಡಬೇಕಿತ್ತು. ಆದರೆ ಇವರಿಗೆ ದೊರೆತಿದ್ದು 6,250 ರು. ಮಾತ್ರ. ಇದೇ ತಿಂಗಳಿನಲ್ಲಿ ಇವರಿಗೆ 4,861 ರು ಮಾತ್ರ ಪಾವತಿಯಾಗಿದೆ.

 

ಅಶ್ವಿನಿ ರೈ ಎಂ (ಗಣಕ ಯಂತ್ರ) ಅವರು 22 ಗಂಟೆಗಳ ಕಾಲ ಪಾಠ ಮಾಡಿದ್ದರು. ಇವರಿಗೆ 7,638 ರು. ಪಾವತಿಸಬೇಕಿತ್ತು. ಆದರೆ ಇವರಿಗೂ 6,250 ರು. ನೀಡಲಾಗಿದೆ. ಇನ್ನೂ 1,388 ರು.ಗಳನ್ನು ಬಾಕಿ ಇರಿಸಿಕೊಂಡಿತ್ತು. ಸಂಧ್ಯಾ (ಯಾಂತ್ರಿಕ) ಅವರೂ ಸಹ 22 ಗಂಟೆಗಳ ಕಾಲ ಬೋಧನೆ ಮಾಡಿದ್ದರು. ಇವರಿಗೆ 7,638 ರು. ಬದಲಿಗೆ 6,250 ರು., ಅದೇ ರೀತಿ ಲತಾ ಡಿ (ಎಲೆಕ್ಟ್ರಾನಿಕ್‌ ಕಮ್ಯುನಿಕೇಷನ್‌) ಅವರು 37 ಗಂಟೆಗಳ ಕಾಲ ಮಾಡಿದ್ದ ಪಾಠಕ್ಕೆ 12,500 ರು. ನೀಡಬೇಕಿತ್ತು. ಆದರೆ ಇವರಿಬ್ಬರಿಗೂ ತಲಾ 6,250 ರು. ಪಾವತಿಸಿರುವುದು ತಿಳಿದು ಬಂದಿದೆ.

 

ಪ್ರಜ್ಞಾಶ್ರೀ (ಗಣಕ ಯಂತ್ರ) ಅವರು 25 ಗಂಟೆಗಳ ಕಾಲ ಪಾಠ ಮಾಡಿದ್ದರು. ಇವರಿಗೆ 8,680 ರು. ಬದಲಿಗೆ 6,250 ರು. ನೀಡಲಾಗಿತ್ತು. ಇವರಿಗೆ 2,430 ರು. ಇನ್ನೂ ಪಾವತಿಸಬೇಕಿದೆ. ರಶ್ಮಿತಾ (ಎಲೆಕ್ಟ್ರಾನಿಕ್‌ ಕಮ್ಯುನಿಕೇ‍ಷನ್‌) ಇವರು 36 ಗಂಟೆಗಳ ಕಾಲ ಬೋಧಿಸಿದ್ದರು. ಇದರ ಪ್ರಕಾರ ಇವರಿಗೆ 12,500 ರು.ನೀಡಬೇಕಿತ್ತು. ಆದರೆ ಇವರಿಗೆ ಪಾವತಿಯಾಗಿದ್ದು 6,250 ರು. ಮಾತ್ರ. ಇನ್ನೂ 6,250 ರು ಬಾಕಿ ಇದೆ.

 

ಗೌತಮಿ ಶರಣ್‌ ಪಿ ಆರ್‍‌ (ವಿಜ್ಞಾನ) ಇವರೂ ಸಹ 32 ಗಂಟೆಗಳ ಕಾಲ ಬೋಧಿಸಿದ್ದರು. ಇವರಿಗೆ 11,111 ರು. ವೇತನ ನೀಡಬೇಕಿತ್ತು. ಆದರೆ ನೀಡಿದ್ದು 6,850 ರು ಮಾತ್ರ. ಇನ್ನೂ 4,861 ರು ಬಾಕಿ ಇದೆ. ಅದೇ ರೀತಿ ರಶ್ಮಿ ಕೆ (ಇಂಗ್ಲೀಷ್‌) ಇವರು 30 ಗಂಟೆಗಳ ಕಾಲ ಪಾಠ ಮಾಡಿದ್ದರು. ಇದರ ಪ್ರಕಾರ ಇವಿರಗೆ 10,416 ರು ಪೈಕಿ 6,250 ರು ಮಾತ್ರ ಪಾವತಿಯಗಿದೆ. ಇನ್ನೂ 4,166 ರು ನೀಡಬೇಕಿದೆ.

 

ಹಾಗೆಯೇ ಆಗಸ್ಟ್‌ ತಿಂಗಳಿನಲ್ಲಿಯೂ ಕಡಿಮೆ ವೇತನ ನೀಡಲಾಗಿತ್ತು.

 

ಸಂಧ್ಯಾ (ಮೆಕ್ಯಾನಿಕಲ್‌) ಅವರು 36 ಗಂಟೆಗಳ ಕಾಲ ಪಾಠ ಮಾಡಿದ್ದರು. ಇವರಿಗೆ ನಿಗದಿಪಡಿಸಿದ್ದ 12,500 ರು ಪೈಕಿ 3,125 ರು ಮಾತ್ರ ನೀಡಿ, 9,375 ರು. ಬಾಕಿ ಉಳಿಸಿಕೊಂಡಿದೆ. ಶತಾ ಕೆ (ಮೆಕ್ಯಾನಿಕಲ್‌) ಇವರು 36 ಗಂಟೆಗಳ ಕಾಲ ಬೋಧಿಸಿದ್ದರು. ಇವರಿಗೂ 12,500 ರು ಪಾವತಿಸಬೇಕಿತ್ತು. ಆದರೆ 8,333 ರು ನೀಡಿ ಇನ್ನೂ 4,167 ರು ಮಾತ್ರ ನೀಡಲಾಗಿದೆ ಎಂದು ಸಂಘವು 2023ರ ನವೆಂಬರ್‍‌ 28ರಂದು ಬರೆದಿದ್ದ ಪತ್ರದಿಂದ ಗೊತ್ತಾಗಿದೆ. ಇದುವರೆಗೂ ಬಾಕಿ ವೇತನ ಪಾವತಿಯಾಗಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts