ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಪೂರ್ಣ ತಲುಪಿಲ್ಲ ಬರ ಪರಿಹಾರ

ಬೆಂಗಳೂರು; ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳಲ್ಲಿನ ರೈತರಿಗೂ 2023ನೇ ಸಾಲಿನ  ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರವು ದೊರೆತಿಲ್ಲ. ಹೀಗಾಗಿ ಹಲವು ಶಾಸಕರು ಬಹುಮಹಡಿ ಕಟ್ಟಡದಲ್ಲಿರುವ ಕಂದಾಯ ಇಲಾಖೆಗೆ ದಾಂಗುಡಿಯಿಡುತ್ತಿದ್ದಾರೆ.

 

ಬರ ಪೀಡಿತ ಪ್ರದೇಶಗಳ ರೈತರಿಗೆ ಮೊದಲ ಮತ್ತು ಎರಡನೇ ಕಂತಿನ ಪರಿಹಾರದ ಮೊತ್ತವನ್ನು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭರ್ಜರಿ ಪ್ರಚಾರ ತೆಗೆದುಕೊಂಡಿದ್ದರು.

 

ಅಲ್ಲದೇ 16 ಲಕ್ಷ ಸಣ್ಣ, ಅತೀ ಸಣ್ಣ ರೈತರಿಗೆ ತಲಾ 3,000 ರು ನಂತೆ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು.  ಆದರೇ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರದ ಮೊತ್ತವನ್ನು ಪಾವತಿಸಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

2023ರ ಬರ ಪರಿಹಾರವನ್ನು ರೈತರಿಗೆ ವಿತರಣೆ ಮಾಡುವ ಸಂಬಂಧ ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಎನ್‌ ಹೆಚ್‌ ಕೋನರೆಡ್ಡಿ ಅವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು. ಈ ಪತ್ರವನ್ನಾಧರಿಸಿ ವಿಪತ್ತು ನಿರ್ವಹಣೆ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಧಾರವಾಡ ಜಿಲ್ಲಾಧಿಕಾರಿಗೆ 2024ರ ಜನವರಿ 11ರಂದು ಪತ್ರ (ಸಂಖ್ಯೆ; ಕಂಇ 166 ಟಿಎನ್‌ಆರ್‍‌ 2024)  ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಎನ್‌ ಹೆಚ್‌ ಕೋನರೆಡ್ಡಿ ಅವರು ತಮ್ಮ ಕ್ಷೇತ್ರದ ಕೆಲವು ರೈತರಿಗೆ ಬರ ಪರಿಹಾರ ವಿತರಣೆಯಾಗಿಲ್ಲ ಎಂದು ತಿಳಿಸಿದ್ದು, ಶಾಸಕರ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರದ ಎಸ್‌ಡಿಆರ್‍‌ಎಫ್‌ ಮತ್ತು ಎನ್‌ಡಿಆರ್‍‌ಎಫ್‌ ಮಾರ್ಗಸೂಚಿಗಳನ್ವಯ ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗಿರುವ ಅಧಿಸೂಚನೆ, ಆದೇಶ, ಸುತ್ತೋಲೆಗಳ ಅನ್ವಯ ಸಂಬಂಧಿಸಿದವರಿಗೆ ಹಿಂಬರಹ ನೀಡಬೇಕು ಎಂದು ಕಂದಾಯ ಇಲಾಖೆಯು ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಧಾರವಾಡ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ.

 

 

ಮೊದಲ ಹಂತದ ಇನ್‌ಪುಟ್‌ ಸಬ್ಸಿಡಿ ಪೈಕಿ 33.58 ಲಕ್ಷ ರೈತರಿಗೆ 636.45 ಕೋಟಿ ರು. ಪರಿಹಾರ ಮೊತ್ತ ಪಾವತಿಸಿದೆ. ಆದರೆ ಇದೇ ಮೊದಲ ಹಂತದಲ್ಲಿ ಪೂರ್ಣ ಮೊತ್ತವನ್ನು ಪಡೆದ ರೈತರ ಸಂಖ್ಯೆ ಕೇವಲ 4.36 ಲಕ್ಷ ಮಾತ್ರ. ಪೂರ್ಣ ಮೊತ್ತದ ಪರಿಹಾರ 29.22 ಲಕ್ಷ ರೈತರಿಗೆ ದೊರೆಯಬೇಕಿತ್ತು.

 

ಜಿಲ್ಲಾವಾರು  ದತ್ತಾಂಶಗಳ ಪಟ್ಟಿ

 

ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಸಚಿವಾಲಯವು 2024ರ ಮೇ 9ರಂದು ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಈ ದತ್ತಾಂಶಗಳನ್ನು ಮಂಡಿಸಲಾಗಿತ್ತು.  ಈ ದತ್ತಾಂಶಗಳ ಪ್ರಕಾರ ಬೆಳಗಾವಿಯಲ್ಲಿ ಮೊದಲ ಹಂತದಲ್ಲಿ 3,52,205 ರೈತರಿಗೆ 65.47 ಕೋಟಿ ರು ಪಾವತಿಯಾಗಿದೆ. ಆದರೆ ಇದೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 70,587 ರೈತರಿಗೆ ಮಾತ್ರ 12.01 ಕೋಟಿ ರು.ನ ಪೂರ್ಣ ಮೊತ್ತ ಪಾವತಿಸಿದೆ. ಇನ್ನೂ 2.81 ಲಕ್ಷ ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ದತ್ತಾಂಶಗಳಿಂದ ಕಂಡುಬಂದಿದೆ.

 

ಕಲ್ಬುರ್ಗಿಯಲ್ಲಿ ಮೊದಲ ಹಂತದಲ್ಲಿ 2,68,722 ರೈತರಿಗೆ 53.33 ಕೋಟಿ ರು ಪಾವತಿಯಾಗಿತ್ತು. ಈ ಪೈಕಿ 4,561 ರೈತರಿಗಷ್ಟೇ 0.88 ಕೋಟಿ ಪೂರ್ಣ ಮೊತ್ತ ಪಾವತಿಯಾಗಿತ್ತು. ಇನ್ನೂ 2,64,161 ರೈತರಿಗೆ ಮೊದಲ ಹಂತದ ಪೂರ್ಣ ಮೊತ್ತ ಪಾವತಿಯಾಗಬೇಕಿತ್ತು. ವಿಜಯಪುರ ಜಿಲ್ಲೆಯ 2,52,901 ರೈತರಿಗೆ 50.39 ಕೋಟಿ ರು. ಪಾವತಿಯಾಗಿತ್ತು. ಈ ಪೈಕಿ ಕೇವಲ 2,805 ರೈತರಿಗೆ 0.47 ಕೋಟಿ ರು ಮಾತ್ರ ಪೂರ್ಣ ಮೊತ್ತ ಪಾವತಿಯಾಗಿತ್ತು. ಇನ್ನೂ 2,50,096 ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಇತ್ತು ಎಂಬುದು  ಗೊತ್ತಾಗಿದೆ.

 

ಹಾಸನ ಜಿಲ್ಲೆಯಲ್ಲಿ 2,03,963 ರೈತರಿಗೆ 37.31 ಕೋಟಿ ರು ಪಾವತಿಸಲಾಗಿತ್ತು. ಈ ಪೈಕಿ 41,737 ರೈತರಿಗಷ್ಟೇ 6.46 ಕೋಟಿ ರು ಪೂರ್ಣ ಮೊತ್ತ ದೊರೆತಿತ್ತು. ಇನ್ನೂ 1,62,226 ರೈತರಿಗೆ ಪೂರ್ಣ ಮೊತ್ತ ಪಾವತಿಯಾಗಬೇಕಿತ್ತು. ಹಾವೇರಿಯಲ್ಲಿ 1,87,092 ರೈತರಿಗೆ 35.59 ಕೋಟಿ ರು ಪಾವತಿಸಲಾಗಿದೆ. ಈ ಪೈಕಿ 24,172 ರೈತರಿಗಷ್ಟೇ ಪೂರ್ಣ ಮೊತ್ತ 4.02 ಕೋಟಿ ರು ಪಾವತಿಯಾಗಿತ್ತು. ಇನ್ನೂ 1,62,920 ರೈತರಿಗೆ ಪೂರ್ಣ ಮೊತ್ತ ಸಿಗಬೇಕಿತ್ತು.

 

ತುಮಕೂರು ಜಿಲ್ಲೆಯಲ್ಲಿ 1,86,193 ರೈತರಿಗೆ 33.53 ಕೋಟಿ ರು ಪಾವತಿಯಾಗಿದೆ. ಈ ಪೈಕಿ 41,890 ರೈತರಿಗಷ್ಟೇ ಪೂರ್ಣ ಮೊತ್ತದ ರೂಪದಲ್ಲಿ 6.46 ಕೋಟಿ ರು ಪಾವತಿಯಾಗಿದೆ.1,44,303 ರೈತರಿಗೆ ಪೂರ್ಣ ಮೊತ್ತ ಇನ್ನೂ ಪಾವತಿಯಾಗಬೇಕಿತ್ತು ಎಂಬುದು  ದತ್ತಾಂಶಗಳಿಂದ ತಿಳಿದು ಬಂದಿದೆ. ಬೀದರ್‍‌ನಲ್ಲಿ 1,47,085 ರೈತರಿಗೆ 28.31 ಕೋಟಿ ರು ಪರಿಹಾರ ಮೊತ್ತ ದೊರೆತಿತ್ತು. ಈ ಪೈಕಿ 14,220 ರೈತರಿಗೆ 2.79 ಕೋಟಿಯಷ್ಟೇ ಪೂರ್ಣ ಮೊತ್ತ ಪಾವತಿಯಾಗಿತ್ತು. ಇನ್ನೂ 1,32,865 ರೈತರಿಗೆ ಪೂರ್ಣ ಮೊತ್ತ ಪಾವತಿಸಬೇಕಿತ್ತು.

 

ಚಿತ್ರದುರ್ಗ ಜಿಲ್ಲೆಯಲ್ಲಿ 1,31,776 ರೈತರಿಗೆ 25,62 ಕೋಟಿ ರು ಪಾವತಿಯಾಗಿತ್ತು. ಇದೇ ಮೊದಲ ಹಂತದಲ್ಲಿ 9,585 ರೈತರಿಗೆ 1.58 ಕೋಟಿಯಷ್ಟೇ ಮೊದಲ ಹಂತ ಪಾವತಿಯಾಗಿತ್ತು. ಇನ್ನೂ 1,22,191 ರೈತರಿಗೆ ಪೂರ್ಣ ಪರಿಹಾರ ದೊರೆಯಬೇಕಿತ್ತು ಎಂಬುದು  ದತ್ತಾಂಶದಿಂದ ಗೊತ್ತಾಗಿದೆ. ರಾಯಚೂರಿನಲ್ಲಿ 1,21,928 ರೈತರಿಗೆ 24.19 ಕೋಟಿ ಪಾವತಿಯಾಗಿದೆ. ಇದರಲ್ಲಿ 2,549 ರೈತರಿಗಷ್ಟೇ 0.45 ಕೋಟಿ ಲೆಕ್ಕದಲ್ಲಿ ಪೂರ್ಣ ಮೊತ್ತ ಪಾವತಿಯಾಗಿದೆ. 1,19,379 ರೈತರಿಗೆ ಪೂರ್ಣ ಮೊತ್ತ  ಪಾವತಿಯಾಗಬೇಕಿತ್ತು.

 

ವಿಜಯನಗರ ಜಿಲ್ಲೆಯಲ್ಲಿ 1,17,676 ರೈತರಿಗೆ 23.18 ಕೋಟಿ ರು. ಮೊದಲ ಹಂತದ ಇನ್‌ಪುಟ್‌ ಸಬ್ಸಿಡಿ ನೀಡಲಾಗಿತ್ತು. ಈ ಪೈಕಿ 4,024 ರೈತರಷ್ಟೇ 0.74 ಕೋಟಿ ರು ಪೂರ್ಣ ಮೊತ್ತ ಪಡೆದಿದ್ದರು. ಗದಗ್‌ನಲ್ಲಿ 1,09,540 ರೈತರಿಗೆ 21.57 ಕೋಟಿ ರು ನೀಡಲಾಗಿದ್ದರೇ ಈ ಪೈಕಿ 4,480 ರೈತಷ್ಟೇ 0.75 ಕೋಟಿ ಪೂರ್ಣ ಮೊತ್ತ ಪಡೆದಿದ್ದರು. ಇನ್ನೂ 1,05,060 ರೈತರು ಹಣ ಪಾವತಿಯ ನಿರೀಕ್ಷೆಯಲ್ಲಿದ್ದರು. ಧಾರವಾಡ ಜಿಲ್ಲೆಯಲ್ಲಿ 1,02,325 ರೈತರಿಗೆ 19.24 ಕೋಟಿ ಪರಿಹಾರ ವಿತರಣೆಯಾಗಿದ್ದರೇ ಈ ಪೈಕಿ 6,481 ರೈತರಿಗಷ್ಟೇ 1.04 ಕೋಟಿ ಪೂರ್ಣ ಮೊತ್ತ ಪಾವತಿಯಾಗಿತ್ತು. 95,844 ರೈತರಿಗೆ ಪೂರ್ಣ ಮೊತ್ತ ಪಾವತಿಯಾಗಿರಲಿಲ್ಲ.

 

ಮೈಸೂರು ಜಿಲ್ಲೆಯಲ್ಲಿ 89,602 ರೈತರಿಗೆ 15.99 ಕೋಟಿ ರು ಪರಿಹಾರ ಪಾವತಿಯಾಗಿದೆ. ಇದರಲ್ಲಿ 21,602 ರೈತರಿಗೆ 3.24 ಕೋಟಿಯಷ್ಟೇ ಪೂರ್ಣ ಮೊತ್ತ ಪಾವತಿಯಾಗಿತ್ತು. ಇನ್ನೂ 68,000 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿದೆ. ದಾವಣಗೆರೆ ಜಿಲ್ಲೆಯಲ್ಲಿ 77,468 ರೈತರಿಗೆ 14.84 ಕೋಟಿ ರು ಪಾವತಿಯಾಗಿದೆ. ಈ ಪೈಕಿ 8,332 ರೈತರಿಗೆ 1.30 ಕೋಟಿಯಷ್ಟೇ ಪಾವತಿಯಾಗಿದೆ. ಇನ್ನೂ 69,136 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಿರಲಿಲ್ಲ.

 

ಶಿವಮೊಗ್ಗ ಜಿಲ್ಲೆಯಲ್ಲಿ 76,531 ರೈತರಿಗೆ 14.46 ಕೋಟಿ ರು ಪಾವತಿಯಾಗಿದ್ದರೇ 13,103 ರೈತರಿಗಷ್ಟೇ 2.12 ಕೋಟಿ ಮಾತ್ರ ಪೂರ್ಣ ಮೊತ್ತ ಪಾವತಿಯಾಗಿತ್ತು. 63,428 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿತ್ತು. ಮಂಡ್ಯ ಜಿಲ್ಲೆಯಲ್ಲಿ 75,306 ರೈತರಿಗೆ 13.27 ಕೋಟಿ ರು ಪಾವತಿಯಾಗಿದ್ದರೇ ಈ ಪೈಕಿ 23,917 ರೈತರಿಗೆ 3.55 ಕೋಟಿಯಷ್ಟೇ ದೊರೆತಿತ್ತು. 51,389 ರೈತರಿಗೆ ಇನ್ನೂ ಪರಿಹಾರದ ಪೂರ್ಣ ಮೊತ್ತ ಇನ್ನಷ್ಟೇ ದೊರೆಯಬೇಕಿತ್ತು ಎಂಬುದು ದತ್ತಾಂಶಗಳಿಂದ ತಿಳಿದು ಬಂದಿದೆ.

 

ಉತ್ತರ ಕನ್ನಡದಲ್ಲಿ 72,700 ರೈತರಿಗೆ 11.55 ಕೋಟಿ ರು ಪರಿಹಾರ ನೀಡಲಾಗಿದ್ದರೇ ಈ ಪೈಕಿ 32,824 ರೈತರಿಗೆ 4.13 ಕೋಟಿಯಷ್ಟೇ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಿತ್ತು. ಇನ್ನೂ 39,876 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿತ್ತು.  ರಾಮನಗರದಲ್ಲಿ 60,616 ರೈತರಿಗೆ ಈಗಾಗಲೇ 10.81 ಕೋಟಿ ರು ಪರಿಹಾರದ ಮೊತ್ತ ದೊರೆತಿತ್ತು. 16,124 ರೈತರಿಗೆ 2.33 ಕೋಟಿ ಮಾತ್ರ ಪೂರ್ಣ ಮೊತ್ತ ದೊರೆತಿತ್ತು. ಇನ್ನೂ 44,492 ರೈತರಿಗೆ ಪೂರ್ಣ ಮೊತ್ತ ಪಾವತಿಸಬೇಕಿತ್ತು ಎಂದು ಗೊತ್ತಾಗಿದೆ.

 

ಬೆಂಗಳೂರು ಗ್ರಾಮಾಂತರದಲ್ಲಿ 59,729 ರೈತರಿಗೆ 10.72 ಕೋಟಿ ರು ಪರಿಹಾರ ಪಾವತಿಸಲಾಗಿತ್ತು. ಈ ಪೈಕಿ 15,691 ರೈತರಿಗೆ ಪಾವತಿಯಾಗಿದ್ದರೇ 44,038 ರೈತರಿಗೆ ಪೂರ್ಣ ಪರಿಹಾರದ ಮೊತ್ತ ಪಾವತಿ ಮಾಡಲು ಬಾಕಿ ಇತ್ತು. ಕೋಲಾರ ಜಿಲ್ಲೆಯಲ್ಲಿ 50,577 ರೈತರಿಗೆ 8.98 ಕೋಟಿ ಈಗಾಗಲೇ ಪಾವತಿಯಾಗಿದ್ದರೇ ಈ ಪೈಕಿ 14,329 ರೈತರಿಗೆ 2.05 ಕೋಟಿ ಪೂರ್ಣ ಮೊತ್ತ ದೊರೆತಿತ್ತು. ಇನ್ನೂ 36,228 ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಇತ್ತು.

 

ಚಿಕ್ಕಮಗಳೂರಿನಲ್ಲಿ 48,607 ರೈತರಿಗೆ 9.10 ಕೋಟಿ ರು ಪಾವತಿಯಾಗಿತ್ತು. ಈ ಪೈಕಿ 7,943 ರೈತರಿಗೆ 1.20 ಕೋಟಿಯಷ್ಟು ಪೂರ್ಣ ಮೊತ್ತ ಪಾವತಿಯಾಗಿತ್ತು. ಇನ್ನೂ 40,664 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿತ್ತು ತಿಳಿದು ಬಂದಿದೆ.

 

ಚಾಮರಾಜನಗರ 45,159 ರೈತರಿಗೆ 8.45 ಕೋಟಿ ರು ಪಾವತಿಯಾಗಿದ್ದರೇ ಈ ಪೈಕಿ 7,133 ರೈತರಿಗೆ 1.20 ಕೋಟಿ ಪೂರ್ಣ ಮೊತ್ತ ಪಾವತಿಯಾಗಿತ್ತು. 38,026 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಯಾಗಬೇಕಿತ್ತು. ಉಡುಪಿ ಜಿಲ್ಲೆಯಲ್ಲಿ 18,613 ರೈತರಿಗೆ 2.61 ಕೋಟಿ ರು ಪರಿಹಾರ ಪಾವತಿಯಾಗಿತ್ತು. ಈ ಪೈಕಿ 12,170 ರೈತರಿಗೆ 1.45 ಕೋಟಿ ರು ಪೂರ್ಣ ಮೊತ್ತ ಪಾವತಿಯಾಗಿತ್ತು. ಇನ್ನೂ 6,443 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಸಲು ಬಾಕಿ ಇರಿಸಿಕೊಂಡಿತ್ತು ಎಂದು ಗೊತ್ತಾಗಿದೆ.

 

ಬೆಂಗಳೂರು ನಗರ ಜಿಲ್ಲೆಯಲ್ಲಿ 12,320 ರೈತರಿಗೆ 2.15 ಕೋಟಿ ರು ಪರಿಹಾರ ನೀಡಲಾಗಿದ್ದರೇ ಈ ಪೈಕಿ 3,965 ರೈತರಿಗಷ್ಟೇ 0.56 ಕೋಟಿ ರು ಪೂರ್ಣ ಪರಿಹಾರದ ಮೊತ್ತ ಪಾವತಿಸಲಾಗಿತ್ತು. ಇನ್ನೂ 8,355 ರೈತರಿಗೆ ಪರಿಹಾರದ ಪೂರ್ಣ ಮೊತ್ತ ದೊರೆಯಬೇಕಿತ್ತು. ಕೊಡಗು ಜಿಲ್ಲೆಯಲ್ಲಿ 10,982 ರೈತರಿಗೆ 1.77 ಕೋಟಿ ರು ಪರಿಹಾರ ನೀಡಲಾಗಿದ್ದರೇ 5,010 ರೈತರಿಗೆ 0.62 ಕೋಟಿ ಪೂರ್ಣ ಮೊತ್ತ ಲಭಿಸಿದೆ. ಇನ್ನೂ 5,972 ರೈತರಿಗೆ ಪರಿಹಾರದ ಪೂರ್ಣ ಮೊತ್ತ ಪಾವತಿಸಬೇಕಿತ್ತು ಎಂದು ತಿಳಿದು ಬಂದಿದೆ.

 

ದಕ್ಷಿಣ ಕನ್ನಡದಲ್ಲಿ 1,349 ರೈತರಿಗೆ ಈಗಾಗಲೇ 0.23 ಕೋಟಿ ಪರಿಹಾರ ನೀಡಲಾಗಿದೆ. 727 ರೈತರಿಗೆ 0.12 ಕೋಟಿಯಷ್ಟು ಪೂರ್ಣ ಮೊತ್ತ ಪಾವತಿಸಲಾಗಿತ್ತು. ಇನ್ನೂ 622 ರೈತರಿಗೆ ಪರಿಹಾರದ ಪೂರ್ಣ ಮೊತ್ತ ನೀಡಲು ಬಾಕಿ ಇರಿಸಿಕೊಂಡಿತ್ತು ಎಂದು  ಗೊತ್ತಾಗಿದೆ.

the fil favicon

SUPPORT THE FILE

Latest News

Related Posts