ಗೃಹಜ್ಯೋತಿ ನೋಂದಣಿಗೂ ಲಂಚ, ನೋಂದಾಯಿಸಿದ್ದರೂ ಬಿಲ್‌ ತೆತ್ತಿದ್ದ ಫಲಾನುಭವಿಗಳು; ಸಮೀಕ್ಷೆ ವರದಿ

ಬೆಂಗಳೂರು; ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಕೆಇಬಿ, ಹೆಸ್ಕಾಂ ಸಿಬ್ಬಂದಿ, ಅಧಿಕಾರಿಗಳಿಗೆ ಫಲಾನುಭವಿಗಳು ಲಂಚ ನೀಡಿದ್ದರು. ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೂ ಬಿಲ್‌ ತೆತ್ತಿದ್ದರು ಎಂಬುದನ್ನು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ನಡೆಸಿದ್ದ ಸಮೀಕ್ಷೆಯು ಬಹಿರಂಗಗೊಳಿಸಿದೆ.

 

ರಾಜ್ಯ ಕಾಂಗ್ರೆಸ್‌ ಸರ್ಕಾರವು 25 ಲಕ್ಷ ರು. ವೆಚ್ಚದಲ್ಲಿ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿ ಮೂಲಕ ನಡೆಸಿದ್ದ ಸಮೀಕ್ಷೆಯಲ್ಲಿ ಒಟ್ಟು ಫಲಾನುಭವಿಗಳ ಪೈಕಿ ಒಟ್ಟಾರೆ ಶೇ. 24.13ರಷ್ಟು ಮಂದಿ ಲಂಚವನ್ನು ತೆತ್ತಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಗೃಹ ಜ್ಯೋತಿ ಯೋಜನೆ ಕುರಿತಾಗಿ ಎಂ2ಎಂ ಕಂಪನಿ ನಡೆಸಿದ್ದ ಸಮೀಕ್ಷೆ ವರದಿಯನ್ನು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

 

‘ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳುವಾಗ ಕೆಇಬಿ/ಹೆಸ್ಕಾಂ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ಲಂಚ ನೀಡಿದ್ದೀರಾ? ಎಂದು ಸಮೀಕ್ಷೆಯಲ್ಲಿ ಕೇಳಿದ್ದ ಪ್ರಶ್ನೆಗೆ ಒಟ್ಟಾರೆ ಶೇ.24.13ರಷ್ಟು ಮಂದಿ ‘ಹೌದು’ ಎಂದು ಉತ್ತರಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಶೇ.70.71 ರಷ್ಟು ಮಂದಿ ಫಲಾನುಭವಿಗಳು ಈ ಮೇಲಿನ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದ್ದರೇ ಶೇ. 5.16ರಷ್ಟು ಮಂದಿ ‘ಗೊತ್ತಿಲ್ಲ’,  ‘ಹೇಳಲಾಗದು’ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.

 

ಕೆಇಬಿ, ಹೆಸ್ಕಾಂ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ಕರಾವಳಿ ಕರ್ನಾಟಕದಲ್ಲೇ ಶೇ. 47.53ರಷ್ಟು ಮಂದಿ ಫಲಾನುಭವಿಗಳು ಲಂಚ ನೀಡಿದ್ದಾರೆ. ಇದೇ ಕರಾವಳಿ ಕರ್ನಾಟಕದಲ್ಲಿ ಶೇ. 48.65ರಷ್ಟು ಮಂದಿ ಲಂಚ ನೀಡಿಲ್ಲ ಎಂದು ಉತ್ತರಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಉಳಿದಂತೆ ಬೆಂಗಳೂರು ಕರ್ನಾಟಕದಲ್ಲಿ ಶೇ. 71.80ರಷ್ಟು ಮಂದಿ ಲಂಚ ನೀಡಿಲ್ಲ ಎಂದು ಹೇಳಿದ್ದರೇ ಶೇ.19.48ರಷ್ಟು ಮಂದಿ ಲಂಚ ನೀಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಾಂಬೆ ಕರ್ನಾಟಕದಲ್ಲಿ ಶೇ. 67,16ರಷ್ಟು ಲಂಚ ನೀಡಿಲ್ಲವೆಂದು ಹೇಳಿದ್ದರೇ ಇದೇ ಭಾಗದಲ್ಲಿ ಶೇ. 28.44ರಷ್ಟು ಮಂದಿ ಲಂಚ ನೀಡಿದ್ದರು.

 

ಮಧ್ಯ ಕರ್ನಾಟಕದಲ್ಲಿ ಶೇ.71.45ರಷ್ಟು ಮಂದಿ ಲಂಚ ನೀಡಿಲ್ಲ. ಆದರೆ ಶೇ.22.41ರಷ್ಟು ಮಂದಿ ಲಂಚ ತೆತ್ತಿದ್ದಾರೆ. ಹೈದರಬಾದ್‌ ಕರ್ನಾಟಕದಲ್ಲಿ ಶೇ.72.18ರಷ್ಟು ಮಂದಿ ಲಂಚ ನೀಡಿಲ್ಲ ಎಂದು ಉತ್ತರಿಸಿದ್ದರೇ ಸಿಬ್ಬಂದಿಗೆ ಲಂಚ ನೀಡಲಾಗಿತ್ತು ಶೇ. 24.22ರಷ್ಟು ಮಂದಿ ಉತ್ತರಿಸಿರುವುದು ತಿಳಿದು ಬಂದಿದೆ.

 

ದಕ್ಷಿಣ ಕರ್ನಾಟಕದಲ್ಲಿ ಶೇ.73.14ರಷ್ಟು ಮಂದಿ ಲಂಚ ನೀಡಿಲ್ಲ ಎಂದು ಉತ್ತರಿಸಿದ್ದರೇ ಶೇ. 22.55ರಷ್ಟು ಮಂದಿ ಲಂಚ ನೀಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

 

ಇನ್ನು ಶೇ.5.75ರಷ್ಟು ಮಂದಿ ಫಲಾನುಭವಿಗಳು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೂ ಬಿಲ್‌ ಪಾವತಿಸಿದ್ದರು. ಬಾಂಬೆ ಕರ್ನಾಟಕದಲ್ಲಿ ಶೇ.7.63, ಮಧ್ಯ ಕರ್ನಾಟಕದಲ್ಲಿ ಶೇ 6.57, ದಕ್ಷಿಣ ಕರ್ನಾಟಕದಲ್ಲಿ ಶೇ.5.94ರಷ್ಟು ಮಂದಿ ಫಲಾನುಭವಿಗಳು ಈ ಯೋಜನೆಗೆ ನೋಂದಾಯಿಸಿದ್ದರೂ ಬಿಲ್‌ ಕಟ್ಟಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.

 

ಇನ್ನು ಈ ಯೋಜನೆಯಿಂದ ತಿಂಗಳಿಗೆ 1,500 ರು ಗೂ ಹೆಚ್ಚು ಉಳಿತಾಯವಾಗುತ್ತಿದೆ ಎಂದು ಉತ್ತರಿಸಿರುವ ಪ್ರಮಾಣ ಒಟ್ಟಾರೆ ಶೇ. 6.28ರಷ್ಟು ಮಾತ್ರ ಇದೆ. ತಿಂಗಳಿಗೆ 200 ರು.ಗಳಿಂದ 500 ರು. ವರೆಗೆ ಶೇ. 61.87ರಷ್ಟು, ತಿಂಗಳಿಗೆ 500-1,000 ರು ವರೆಗೆ ಶೇ.16.40, ತಿಂಗಳಿಗೆ 1,000ರಿಂದ 1,500 ರುವರೆಗೆ ಶೇ. 5.57ರಷ್ಟು ಮಂದಿ ಉಳಿತಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

 

ಅದೇ ರೀತಿ ಗೃಹ ಜ್ಯೋತಿ ಯೋಜನೆಯಿಂದ ಖರ್ಚು ವೆಚ್ಚದ ಹೊರೆ ತಗ್ಗಿಸಲು ಅನುಕೂಲವಾಗುತ್ತದೆ ಎಂದು ಶೇ. 68.42ರಷ್ಟು ಮಂದಿ ಉತ್ತರಿಸಿದ್ದರೇ, ಶೇ. 23.26ರಷ್ಟು ಮಂದಿ ಫಲಾನುಭವಿಗಳು ಖರ್ಚು ವೆಚ್ಚ ಹೊರೆ ತಗ್ಗಿಸಲು ಅನುಕೂಲವಾಗುವುದಿಲ್ಲ ಎಂದು ಉತ್ತರಿಸಿದ್ದಾರೆ.

 

ಶಕ್ತಿ ಯೋಜನೆ ಸಮೀಕ್ಷೆ; ಜಿಪಿಎಸ್‌ ದಾಖಲೆಗಳಿಲ್ಲ, ವಿಧಾನಸಭಾ ಕ್ಷೇತ್ರವಾರು ಫೋಟೋಗಳೂ ಇಲ್ಲ

ದಕ್ಷಿಣ ಕರ್ನಾಟಕದಲ್ಲಿ ಶೇ.73.97ರಷ್ಟು, ಬಾಂಬೆ ಕರ್ನಾಟಕದಲ್ಲಿ ಶೇ. 71.89ರಷ್ಟು ಮಂದಿಗೆ ಮಂದಿಗೆ ಈ ಯೋಜನೆಯಿಂದ ಖರ್ಚು ವೆಚ್ಚದ ಹೊರೆ ತಗ್ಗಿಸಲು ಅನುಕೂಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಉಳಿದಂತೆ ಬೆಂಗಳೂರು ಕರ್ನಾಟಕದಲ್ಲಿ ಶೇ. 57.06, ಮಧ್ಯ ಕರ್ನಾಟಕದಲ್ಲಿ ಶೇ 63.21, ಕರಾವಳಿ ಕರ್ನಾಟಕದಲ್ಲಿ ಶೇ. 68.16, ಹೈದರಾಬಾದ್‌ ಕರ್ನಾಟಕದಲ್ಲಿ ಶೇ. 69.21 ರಷ್ಟು ಮಂದಿಗೆ ಈ ಯೋಜನೆಯಿಂದ ಖರ್ಚು ವೆಚ್ಚದ ಹೊರೆ ತಗ್ಗಿಸಲು ಅನುಕೂಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

 

ಹಾಗೆಯೇ ಈ ಯೋಜನೆಯಿಂದ ಖರ್ಚು ವೆಚ್ಚದ ಹೊರೆ ತಗ್ಗಿಸಲು ಅನುಕೂಲವಾಗಿಲ್ಲ ಎಂದು ಬೆಂಗಳೂರು ಕರ್ನಾಟಕದಲ್ಲಿ ಶೇ.32.23ರಷ್ಟು ಮಂದಿ ಫಲಾನುಭವಿಗಳು ಉತ್ತರಿಸಿದ್ದಾರೆ.

 

ಬಾಂಬೆ ಕರ್ನಾಟಕದಲ್ಲಿ ಶೇ. 19.57, ಕರಾವಳಿ ಕರ್ನಾಟಕದಲ್ಲಿ ಶೇ. 26.01, ಮಧ್ಯ ಕರ್ನಾಟಕದಲ್ಲಿ ಶೇ.25.49, ಹೈದರಬಾದ್ ಕರ್ನಾಟಕದಲ್ಲಿ ಶೇ .20.03, ದಕ್ಷಿಣ ಕರ್ನಾಟಕದಲ್ಲಿ ಶೇ.20.03ರಷ್ಟು ಮಂದಿ ಫಲಾನುಭವಿಗಳೂ ಸಹ ಈ ಯೋಜನೆಯಿಂದ ಖರ್ಚು ವೆಚ್ಚದ ಹೊರೆ ತಗ್ಗಿಸಲು ಅನುಕೂಲವಾಗಿಲ್ಲ ಎಂದು ಉತ್ತರಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಉಚಿತವಾಗಿ ವಿದ್ಯುತ್‌ ನೀಡಬಾರದು ಎಂದು ಒಟ್ಟಾರೆ ಶೇ. 8.87ರಷ್ಟು ಮಂದಿ ಹೇಳಿದ್ದಾರೆ. ಬಾಂಬೆ ಕರ್ನಾಟಕದಲ್ಲಿ ಶೇ.10.68, ಮಧ್ಯ ಕರ್ನಾಟಕದಲ್ಲಿ ಶೇ. 13.32, ಕರಾವಳಿ ಕರ್ನಾಟಕದಲ್ಲಿ ಶೇ. 3.36, ಬೆಂಗಳೂರು ಕರ್ನಾಟಕದಲ್ಲಿ ಶೇ. 9.61, ಕರಾವಳಿ ಕರ್ನಾಟಕದಲ್ಲಿ ಶೇ. 3.36, ಹೈದರಬಾದ್‌ ಕರ್ನಾಟಕದಲ್ಲಿ ಶೇ.7.96, ದಕ್ಷಿಣ ಕರ್ನಾಟಕದಲ್ಲಿ ಶೇ.5.51ರಷ್ಟು ಮಂದಿ ಉಚಿತ ವಿದ್ಯುತ್‌ ನೀಡಬಾರದು ಎಂದು ಹೇಳಿದ್ದಾರೆ.

 

 

ಶೇ. 68.81ರಷ್ಟು ಮಂದಿ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ನೀಡಬೇಕು ಎಂದಿದ್ದರೇ ಶೇ 16.77ರಷ್ಟು ಮಂದಿ 100 ಯುನಿಟ್‌, ಶೇ. 5.56ರಷ್ಟು ಮಂದಿ 50 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ನೀಡಬೇಕು ಎಂದು ಉತ್ತರಿಸಿರುವುದು ವರದಿಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts