ಕರಾವಳಿ ನಿಯಂತ್ರಣ ವಲಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಶೇಖರಣೆ; ಸಲ್ಲಿಕೆಯಾಗದ ವರದಿ

ಬೆಂಗಳೂರು;  ಕರಾವಳಿ ನಿಯಂತ್ರಣ ವಲಯದಲ್ಲಿ ಕಾರ್ಬನ್ ಬ್ಲ್ಯಾಕ್ ಫೀಡ್ ಸ್ಟಾಕ್ ಮತ್ತು ಎನ್-ಪ್ಯಾರಾಫಿನ್ ಉತ್ಪನ್ನಗಳನ್ನು  ಶೇಖರಣೆ ಮಾಡಲು ವಿಧಿಸಿರುವ ನಿರ್ಬಂಧ ತೆರವುಗೊಳಿಸುವ ಸಂಬಂಧ ಪ್ರಾದೇಶಿಕ ನಿರ್ದೇಶಕರುಗಳು ಏಳೆಂಟು  ತಿಂಗಳಾದರೂ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ.

 

ನಿರ್ಬಂಧ ತೆಗೆದುಹಾಕಬೇಕು ಎಂದು ಅದಾನಿ ಪೋರ್ಟ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಯು ಕೇಂದ್ರಕ್ಕೆ ಮನವಿ  ಸಲ್ಲಿಸಿತ್ತು. ಇದನ್ನಾಧರಿಸಿ  ವರದಿ ಸಲ್ಲಿಸಲು ಸಕ್ಷಮ ಪ್ರಾಧಿಕಾರಗಳಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು 2023ರ ಸೆ.2ರಂದು   ನಿರ್ದೇಶನ ನೀಡಿತ್ತು. ಇದುವರೆಗೂ ವರದಿ ನೀಡದ ಕಾರಣ 2024ರ ಜನವರಿ 17ರಂದು ಮತ್ತೊಂದು ಪತ್ರವನ್ನು ಬರೆದಿದೆ.

 

ಈ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಕಡತವನ್ನು ಪಡೆದುಕೊಂಡಿದೆ.

 

‘ಪೆಟ್ರೋಲಿಯಂ ಉತ್ಪನ್ನಗಳಾದ ಕಾರ್ಬನ್ ಬ್ಲ್ಯಾಕ್ ಫೀಡ್ ಸ್ಟಾಕ್ ಮತ್ತು ಎನ್-ಪ್ಯಾರಾಫಿನ್ ಉತ್ಪನ್ನಗಳನ್ನು ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಶೇಖರಣೆಗಾಗಿ ಅಧಿಸೂಚನೆಯಲ್ಲಿ ಸೇರ್ಪಡೆಗೊಳಿಸುವ ಕುರಿತು ಅಭಿಪ್ರಾಯ/ವರದಿ ಸಲ್ಲಿಸಬೇಕು ಎಂದು 2023ರ ಸೆ.2ರಂದು ಸೂಚಿಸಲಾಗಿತ್ತು. ಆದರೆ ಸರ್ಕಾರಕ್ಕೆ ಇದುವರೆಗೂ ಸ್ಪಷ್ಟ ಅಭಿಪ್ರಾಯ, ವರದಿಯು ಸ್ವೀಕೃತವಾಗಿಲ್ಲ. ಆದ್ದರಿಂದ ಈ ವಿಷಯದ ಕುರಿತು ಆದ್ಯತೆ ಮೇರೆಗೆ ಪರಿಗಣಿಸಿ ಅಪೇಕ್ಷಿತ ಅಭಿಪ್ರಾಯ, ವರದಿಯನ್ನು ಸರ್ಕಾರಕ್ಕೆ ಕೂಡಲೇ ಸಲ್ಲಿಸಬೇಕು,’ ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2024ರ ಜನವರಿ 17ರಂದು  ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ಅದಾನಿ ಕಂಪನಿ ಮತ್ತು ಅದಾನಿ ಚಟುವಟಿಕೆಗಳನ್ನು ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಬಲವಾಗಿ ಟೀಕಿಸುತ್ತಿರುವ ನಡುವೆಯೇ ಅದಾನಿ ಕಂಪನಿಯ ಮನವಿ ಆಧರಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ತಾಂತ್ರಿಕ ವರದಿ ಕೇಳಿರುವುದು ಚರ್ಚೆಗೆ ಗ್ರಾಸವಾಗಿತ್ತು.   ಈ ಕುರಿತು ‘ದಿ ಫೈಲ್‌’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಕಾರ್ಬನ್ ಬ್ಲ್ಯಾಕ್ ಫೀಡ್, ಪ್ಯಾರಾಫಿನ್ ಉತ್ಪನ್ನ ಶೇಖರಣೆ; ನಿರ್ಬಂಧ ತೆರವಿಗೆ ಅದಾನಿ ಮನವಿ, ವರದಿಗೆ ನಿರ್ದೇಶನ

 

ಪೆಟ್ರೋಲಿಯಂ ಉತ್ನನ್ನಗಳಾದ ಕಾರ್ಬನ್‌ ಬ್ಲಾಕ್‌ ಫೀಡ್‌ ಸ್ಟಾಕ್‌ ಮತ್ತು ಎನ್‌ ಫ್ಯಾರಾಫಿನ್‌ಗಳ ಶೇಖರಣೆಗಾಗಿ ಕರಾವಳಿ ನಿಯಂತ್ರಣ ವಲಯದ 2019ರ ಅಧಿಸೂಚನೆಯಲ್ಲಿ ಸೇರ್ಪಡೆಗೊಳಿಸಲು ಅದಾನಿ ಕಂಪನಿಯು ಸದರನ್‌ ಗುಜರಾತ್‌ ಛೇಂಬರ್‌ ಆಫ್‌ ಕಾಮರ್ಸ್‌ ಇಂಡಸ್ಟ್ರೀಸ್‌ ಮೂಲಕ ಕೇಂದ್ರ ಸರ್ಕಾರದ ಮೊರೆ ಹೊಕ್ಕಿತ್ತು.

 

 

ಅದಾನಿ- ಸದರನ್‌ ಗುಜರಾತ್‌ ಛೇಂಬರ್‌ ಆಫ್‌ ಕಾಮರ್ಸ್‌ ಇಂಡಸ್ಟ್ರೀಸ್‌ ಪತ್ರದಲ್ಲೇನಿದೆ?

 

ಕಾರ್ಬನ್ ಬ್ಲ್ಯಾಕ್ ಫೀಡ್ ಸ್ಟಾಕ್ ಮತ್ತು ಎನ್-ಪ್ಯಾರಾಫಿನ್ ಕೆಲವು ಉತ್ಪನ್ನಗಳಾಗಿದ್ದು, ಇವುಗಳನ್ನು ಶೇಖರಿಸಲು ಸಿಆರ್‌ಝಡ್‌ ಅಧಿಸೂಚನೆಯ ಅಡಿಯಲ್ಲಿ ನಿರ್ಬಂಧಿಸಲಾಗಿದೆ. ಫೋ ಮತ್ತು ಬಿಟುಮೆನ್ ನಂತಹ ಇತರ ರೀತಿಯ ಉತ್ಪನ್ನಗಳನ್ನು ಅನುಮತಿಸಲಾಗಿದೆ. ಇವು ಬಹುತೇಕ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿವೆ. ಪೆಟ್ರೋಲಿಯಂನ ಹಲವು ಉತ್ಪನ್ನಗಳನ್ನು ಈಗಾಗಲೇ ಸಿಆರ್‌ಝಡ್‌ ಅಡಿಯಲ್ಲಿ ಶೇಖರಿಸಲು ಅನುಮೋದಿಸಲಾಗಿದೆ.

 

ಭಾರತದಲ್ಲಿ ಉತ್ಪಾದನೆಯಾಗದ ಹೆಚ್ಚಿನ ರಾಸಾಯನಿಕ ಉತ್ಪನ್ನಗಳನ್ನು ನಮ್ಮ ಪ್ರದೇಶದ ಕೈಗಾರಿಕೆಗಳಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ಈ ಆಮದುಗಳು ಪ್ರದೇಶದ ಅತಿದೊಡ್ಡದಾದ ಅದಾನಿ ಬಂದರಿನಲ್ಲಿ ನಡೆಯುತ್ತದೆ. ಆದರೆ ಸಿಆರ್‌ಝಡ್‌ ಅಧಿಸೂಚನೆ ಪ್ರಕಾರ ಅವುಗಳಿಗೆ ಕೆಲವು ಮಿತಿಗಳನ್ನು ಹೇರಲಾಗಿದೆ. ನಮ್ಮ ಪ್ರದೇಶದಲ್ಲಿ ಪ್ರಾಮುಖ್ಯತೆ ಹೊಂದಿರುವ ಕೆಲವು ಸರಕುಗಳು ಅವರ ಬಂದರು ಅಂತಹ ವರ್ಗದ ಅಡಿಯಲ್ಲಿ ಬರುವುದರಿಂದ ಅವುಗಳನ್ನು ಸಾಗಿಸಲು ಬದ್ಧವಾಗಿಲ್ಲ.

 

 

ಈ ನಿಟ್ಟಿನಲ್ಲಿ ಸ್ಥಳೀಯ ಉದ್ಯಮವು ಹಜಿರಾ ಬಂದರು ಅಧಿಕಾರಿಗಳೊಂದಿಗೆ ನಮ್ಮನ್ನು ಸಂಪರ್ಕಿಸಿದೆ. ಆದ್ದರಿಂದ ಈ ಉತ್ಪನ್ನಗಳನ್ನು ಸಿಆರ್‌ಝಡ್ ಅಧಿಸೂಚನೆಯಲ್ಲಿ ಸೇರಿಸಬೇಕು. ಕಾರ್ಬನ್ ಕಪ್ಪು ಫೀಡ್‌ನ್ನು ಪ್ರಾಥಮಿಕವಾಗಿ ಟೈರ್ ಉದ್ಯಮದಲ್ಲಿ ಕಾರ್ಬನ್ ಕಪ್ಪು ತಯಾರಿಸಲು ಬಳಸಲಾಗುತ್ತದೆ. ರಬ್ಬರ್ ಪ್ರಕ್ರಿಯೆ ತೈಲ, ಅಗರಬತ್ತಿ ಎಣ್ಣೆ ತಯಾರಿಸಲಾಗುತ್ತದೆ.

 

ಮೇಲಿನ ಎಲ್ಲಾ ರಾಸಾಯನಿಕ ದ್ರವಗಳು ಆರೋಗ್ಯಕ್ಕೆ ಕಡಿಮೆ ಅಪಾಯಕಾರಿ. ಕಡಿಮೆ ಬಾಷ್ಪಶೀಲ ಮತ್ತು ಈಗಾಗಲೇ ಅನುಮೋದಿತ ದ್ರವಗಳಿಗಿಂತ ಕಡಿಮೆ ದಹನಕಾರಿ. ಪ್ರಸ್ತಾವಿತ ದ್ರವಗಳು ಮೇಕ್ ಇನ್ ಇಂಡಿಯಾವನ್ನು ಬೆಂಬಲಿಸಲು ಪ್ರಮುಖವಾಗಿವೆ.

 

ದೇಶೀಯ ಉತ್ಪಾದನೆ ಮತ್ತು ಬಳಕೆಯಲ್ಲಿ ದೊಡ್ಡ ಅಂತರವಿದೆ. ಇತರ ಅನುಮೋದಿತ ದ್ರವಗಳಿಗೆ ಸಿಆರ್‌ಝಡ್‌ನಲ್ಲಿ ಅಭಿವೃದ್ಧಿಪಡಿಸಿದ ಟ್ಯಾಂಕ್‌ಗಳಲ್ಲಿನ ಶೇಖರಿಸಿದರೆ ಆಮದುದಾರರಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts