ಶಾಲಾ ಮಕ್ಕಳಿಗೆ ಸರಬರಾಜಾಗಿರುವ ಸಮವಸ್ತ್ರ ಬಟ್ಟೆಗಳೇ ಕಳಪೆ; ಕೇಂದ್ರ ರೇಷ್ಮೆ ಮಂಡಳಿ ವರದಿ

ಬೆಂಗಳೂರು; ವಿದ್ಯಾ ವಿಕಾಸ ಯೋಜನೆ ಯೋಜನೆಯಡಿಯಲ್ಲಿ 2024-25ನೇ ಸಾಲಿಗೆ  ಶಾಲಾ ಮಕ್ಕಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳೇ ಕಳಪೆಯಿಂದ ಕೂಡಿವೆ. ಕಲ್ಬುರ್ಗಿ ವಿಭಾಗ ಸೇರಿದಂತೆ ರಾಜ್ಯದ ಇನ್ನಿತರೆ ವಿಭಾಗಗಳ ಜಿಲ್ಲೆಗಳಿಗೆ ಸರಬರಾಜು ಮಾಡಿರುವ ಸಮವಸ್ತ್ರ ಬಟ್ಟೆಗಳ ಮಾದರಿಗಳನ್ನು ಪರಿಶೀಲಿಸಿರುವ  ಕೇಂದ್ರೀಯ ರೇಷ್ಮೆ ಮಂಡಳಿಯು ಈಗಾಗಲೇ ಹಲವು ಜಿಲ್ಲೆಗಳಿಗೆ  ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳನ್ನು ತಿರಸ್ಕರಿಸಿದೆ.

 

ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್‍‌ ಸಿಂಗ್‌ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ ಅವರಿಗೆ ಪತ್ರ (ಅ.ಸ.ಪ. ಸಂ; ಇಪಿ 170 ಯೋಸಕ 2024)  ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಸಮವಸ್ತ್ರ  ಹೊಲಿಗೆ ವೆಚ್ಚವನ್ನೂ ಪೋಷಕರಿಂದಲೇ ಭರಿಸಿಕೊಂಡಿರುವ ಸರ್ಕಾರವು ಇದೀಗ ಪೂರೈಕೆ ಮಾಡಿರುವ ಸಮವಸ್ತ್ರವು ಕಳಪೆಯಿಂದ ಕೂಡಿದೆ ಎಂದು ಕೇಂದ್ರೀಯ ರೇಷ್ಮೆ ಮಂಡಳಿಯು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ. ಈ ವರದಿಯ ಕುರಿತು ಸಚಿವ ಮಧು ಬಂಗಾರಪ್ಪ ಅವರೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಬರಾಜು ಮಾಡುವ ಸಂಬಂಧ 2023ರ ಡಿಸೆಂಬರ್‍‌ 8 ಮತ್ತು 2024ರ ಮಾರ್ಚ್‌ 15ರಂದು ಆದೇಶ ಹೊರಡಿಸಿದ್ದರು. 1ರಿಂದ 10ನೇ ತರಗತಿಯ ಗಂಡು ಹಾಗೂ 1ರಿಂದ 5ನೇ ತರಗತಿಯ ಹೆಣ್ಣು ಮಕ್ಕಳಿಗೆ ಒಟ್ಟು 22.60 ಲಕ್ಷ  ಮೀಟರ್‍‌ ಸಮವಸ್ತ್ರ ಸರಬರಾಜು ಮಾಡಬೇಕು ಎಂದು ಸರ್ಕಾರವು ಆದೇಶದಲ್ಲಿ ನಿರ್ದೇಶನ ನೀಡಿತ್ತು.

 

ಅಲ್ಲದೇ ಸಮವಸ್ತ್ರ ಸರಬರಾಜಿಗೂ ಮುನ್ನ ಅಂದರೆ 2024ರ ಮಾರ್ಚ್‌ 30ರಂದೇ ಸಮವಸ್ತ್ರಗಳ ಸ್ಯಾಂಪಲ್‌ಗಳನ್ನು ಪರಿಶೀಲನೆಗೆ ಸಲ್ಲಿಸಲಾಗಿತ್ತು. ಈ ಸ್ಯಾಂಪಲ್‌ಗಳನ್ನು ಪರಿಶೀಲಿಸಿದ್ದ ಕೇಂದ್ರೀಯ ರೇಷ್ಮೆ ಮಂಡಳಿಯು 2024ರ ಮೇ 8ರಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂಬುದು ಪತ್ರದಿಂದ ತಿಳಿದು ಬಂದಿದೆ.

 

ಸಮವಸ್ತ್ರಗಳ ಗುಣಮಟ್ಟ ಪರೀಕ್ಷೆ ಸಂಬಂಧ ಕರಾರು ಒಪ್ಪಂದದ ಕ್ರಮ ಸಂಖ್ಯೆ 4ರ ಪ್ರಕಾರ ಸರಬರಾಜಿಗೂ ಮುನ್ನ ತಯಾರಾಗಿರುವ ಸಮವಸ್ತ್ರ ಬಟ್ಟೆಗಳಲ್ಲಿ ಪ್ರತಿ 25000 ಮೀಟರ್‍‌ಗೆ ಒಂದು ಸ್ಯಾಂಪಲ್‌ನಂತೆ 2024ರ ಮಾರ್ಚ್‌ 30ರಂದು ಷರ್ಟಿಂಗ್‌ 46, ಶೂಟಿಂಗ್‌ 14 ಹಾಗೂ ಸ್ಕರ್ಟಿಂಗ್‌ 20 ಸ್ಯಾಂಪಲ್‌ಗಳನ್ನು ಪಡೆದಿತ್ತು. ಅಲ್ಲದೇ ಈ ಸ್ಯಾಂಪಲ್‌ಗಳ ಗುಣಮಟ್ಟ ಪರಿಶೀಲಿಸಲು 2024ರ ಏಪ್ರಿಲ್‌ 2ರಂದು ಕೇಂದ್ರ ರೇಷ್ಮೆ ಮಂಡಳಿಗೆ ಸಲ್ಲಿಸಿತ್ತು ಎಂಬುದು ಗೊತ್ತಾಗಿದೆ.

 

‘ಷರ್ಟಿಂಗ್‌ ಬಟ್ಟೆಯ ಎಲ್ಲಾ 46 ಸ್ಯಾಂಪಲ್‌ಗಳು ಕಾಂಪೋಸಿಷನ್‌ನಲ್ಲಿ ತಿರಸ್ಕೃತವಾಗಿರುತ್ತವೆ. ಹಾಗೂ ಇಲಾಖೆಯು ನಿಗದಿಪಡಿಸಿದ್ದ ಮಾನದಂಡಗಳಿಗಿಂತಲೂ  ಜಿಎಸ್‌ಎಂ ಕಡಿಮೆ ಇರುತ್ತದೆ. ಸ್ಕರ್ಟಿಂಗ್‌ನ 20 ಸ್ಯಾಂಪಲ್‌ಗಳಲ್ಲಿ 12 ಸ್ಯಾಂಪಲ್‌ಗಳ ಕಾಂಪೋಸಿಷನ್‌, ಇಲಾಖೆ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಇರುವುದಿಲ್ಲ,’ ಎಂದು ಕೇಂದ್ರ ರೇಷ್ಮೆ ಮಂಡಳಿಯು ತನ್ನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಸದ್ಯ ಸರಬರಾಜಾಗಿರುವ ಸಮವಸ್ತ್ರಗಳು ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೋದಾಮಿನಲ್ಲಿವೆ. ಈ ಸಮವಸ್ತ್ರಗಳ ಎಲ್ಲಾ ಷರ್ಟಿಂಗ್‌ ಬಟ್ಟೆಗಳನ್ನು 30 ದಿನದೊಳಗೇ ಮರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತ ರಿತೇಶ್‌ ಕುಮಾರ್‍‌ ಸಿಂಗ್‌ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ರಿಚರ್ಡ್‌ ವಿನ್ಸೆಂಟ್‌  ಡಿಸೋಜಾ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

 

ಕಳೆದ ಶೈಕ್ಷಣಿಕ ಸಾಲಿನಲ್ಲಿ  ಸರ್ಕಾರವು ಶಾಲಾ ವಿದ್ಯಾರ್ಥಿಗಳ ಎರಡನೇ ಜೊತೆ ಸಮವಸ್ತ್ರ ಬಟ್ಟೆಯನ್ನಷ್ಟೇ ನೀಡಿ ಕೈತೊಳೆದುಕೊಂಡಿತ್ತು.  1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳ ಸಮವಸ್ತ್ರದ ಹೊಲಿಗೆ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ಇಲಾಖೆಯು ಹೊರಡಿಸಿದ್ದ  ಸುತ್ತೋಲೆಯು ಹೈಕೋರ್ಟ್ ಆದೇಶವನ್ನು ನೇರಾ ನೇರ ಉಲ್ಲಂಘಿಸಿದಂತಾಗಿತ್ತು.

 

‘ಸಮವಸ್ತ್ರದ ಬಟ್ಟೆಯನ್ನು ಮಾತ್ರ ಸರ್ಕಾರದಿಂದ ಉಚಿತವಾಗಿ ನೀಡುತ್ತಿದ್ದು ಹೊಲಿಗೆ ವೆಚ್ಚವನ್ನು ಫಲಾನುಭವಿ ಮಕ್ಕಳ ಪೋಷಕರೇ ಭರಿಸಬೇಕು,’ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಶಿಕ್ಷಣ ಇಲಾಖೆಯು ಹೊರಡಿಸಿರುವ ಈ ಸುತ್ತೋಲೆಯನ್ನು ಸಚಿವ ಮಧು ಬಂಗಾರಪ್ಪ ಅವರು ಅನುಮೋದಿಸಿದ್ದರು.

 

ಶಾಲಾ ಮಕ್ಕಳ ಸಮವಸ್ತ್ರ ಹೊಲಿಗೆ ವೆಚ್ಚಕ್ಕೂ ಪೋಷಕರ ಜೇಬಿಗೆ ಕೈ ಹಾಕಿದೆ ಸರ್ಕಾರ; ಬೊಕ್ಕಸದಲ್ಲಿ ಹಣವಿಲ್ಲವೇ?

 

 

ಬಟ್ಟೆಯ ಬೆಲೆಗಿಂತ ಹೊಲಿಗೆ ವೆಚ್ಚ ಹೆಚ್ಚಾಗಿದೆ. ಒಂದು ಸೆಟ್ ಶರ್ಟ್ ಮತ್ತು ಪ್ಯಾಂಟ್‌ಗೆ ಹೊಲಿಗೆ ವೆಚ್ಚ ಕನಿಷ್ಠ 350 ರು.ನಿಂದ 800 ರು.ವರೆಗೆ ಖರ್ಚು ಮಾಡಿದ್ದರು.

 

ಮಾಸ್ಟರ್ ಮಂಜುನಾಥ್ ಪ್ರಕರಣದಲ್ಲಿ ಎರಡನೇ ಸೆಟ್‌ಗೆ ಹೊಲಿಗೆ ಹಾಕಿದ ಸಮವಸ್ತ್ರವನ್ನು ಸರ್ಕಾರ ನೀಡುವಂತೆ ರಾಜ್ಯ ಉಚ್ಛ ನ್ಯಾಯಾಲಯವು ಆದೇಶಿಸಿತ್ತು. ಆದರೀಗ ಹೊಲಿಗೆ ಹಾಕದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.

 

ರಾಜ್ಯದ ಹಲವು ಶಾಲೆಗಳು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ಪೂರ್ಣ ಪ್ರಮಾಣದಲ್ಲಿ  ವಿತರಿಸಿರಲಿಲ್ಲ. ಸ್ವೀಕರಿಸಿದ್ದ ಉಚಿತ ಸಮವಸ್ತ್ರಗಳನ್ನು ದೀರ್ಘಕಾಲದವರೆಗೂ ಗೋದಾಮಿನಲ್ಲಿಡಲಾಗುತ್ತಿದೆಯೇ ವಿನಃ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುತ್ತಿಲ್ಲ  ಎಂಬುದು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ತಪಾಸಣೆಯು ಬಹಿರಂಗಗೊಳಿಸಿತ್ತು.

 

ಗೋದಾಮಿನಲ್ಲೇ ಧೂಳು, ಶೇ.17ರಷ್ಟು ವಿದ್ಯಾರ್ಥಿಗಳಿಗೆ ಇನ್ನೂ ತಲುಪಿಲ್ಲ ಸಮವಸ್ತ್ರ; ತಪಾಸಣೆ

 

ವಿದ್ಯಾವಿಕಾಸ ಯೋಜನೆಯಡಿ 2022-23ನೇ ಸಾಲಿನ 2ನೇ ಜೊತೆ ಸಮವಸ್ತ್ರವನ್ನು 2023-24ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಸರಬರಾಜು ಮಾಡಲು ಸರ್ಕಾರವು ಆದೇಶಿಸಿತ್ತು.

 

ಆದರೆ  ಪ್ರಸಕ್ತ ಶೈಕ್ಷಣಿಕ ವರ್ಷದ ಒಂದು ತಿಂಗಳು ಪೂರ್ಣಗೊಂಡಿದ್ದರೂ ಇನ್ನೂ ಶೇ.17ರಷ್ಟು ಮಕ್ಕಳಿಗೆ ಸಮವಸ್ತ್ರ ತಲುಪಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಅವರು ವಿಧಾನಪರಿಷತ್‌ನಲ್ಲಿ ಮಂಜುನಾಥ ಭಂಡಾರಿ ಅವರು ಕೇಳಿದ್ದ ಪ್ರಶ್ನೆಗೆ ಉತ್ತರವನ್ನೂ ನೀಡಿದ್ದರು.

 

ಅದರಂತೆ ಸರಬರಾಜಾಗಿದ್ದ   ಸಮವಸ್ತ್ರಗಳನ್ನು ಫಲಾನುಭವಿ ಮಕ್ಕಳಿಗೆ ಹಂಚಿಕೆ ಮಾಡಬೇಕಿದ್ದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಅಧಿಕಾರಿಗಳು ಅದನ್ನು ದೀರ್ಘಕಾಲದವರೆಗೂ ಗೋದಾಮಿನಲ್ಲೇ ಇಟ್ಟಿದ್ದರು.

 

‘ಸ್ವೀಕರಿಸಿದ ಸಮವಸ್ತ್ರಗಳನ್ನು ಯಾವುದೇ ಕಾರಣಗಳಿಂದ ದೀರ್ಘಕಾಲ ಗೋದಾಮಿನಲ್ಲಿ ಶೇಖರಿಸದೆ ಶಾಲಾ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮ ತ್ವರಿತವಾಗಿ ನಿರ್ವಹಿಸಬೇಕು. ಈ ಬಗ್ಗೆ ಹಲವಾರು ಬಾರಿ ಸುತ್ತೋಲೆ ನೀಡಿದ್ದರೂ ಸಹ ಮೇಲಾಧಿಕಾರಿಗಳು ತಪಾಸಣೆಗೆ ಬಂದಂತಹ ಸಂದರ್ಭದಲ್ಲಿ ಕೆಲವು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮವಸ್ತ್ರಗಳು ಹಂಚಿಕೆ ಆಗದೇ ಗೋದಾಮಿನಲ್ಲಿರುವುದನ್ನು ಈ ಹಿಂದೆ ಗಮನಿಸಲಾಗಿದೆ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿಂದಿನ  ಆಯುಕ್ತ ಡಾ ವಿಶಾಲ್‌ ಅವರು 2023ರ ಜೂನ್‌ 22ರಂದು  ಹೊರಡಿಸಿರುವ ಸುತ್ತೋಲೆಯಲ್ಲಿ ವಿವರಿಸಿದ್ದರು.

 

ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸಲು ಅತ್ಯಾಸಕ್ತಿ ವಹಿಸಿದ್ದ ರಾಜ್ಯ ಸರ್ಕಾರವು 2022-23ನೇ ಶೈಕ್ಷಣಿಕ ವರ್ಷವು ಆರಂಭವಾಗಲು ಇನ್ನು ಐದು ದಿನಗಳು ಬಾಕಿ ಇದ್ದರೂ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ಮೂರು ಲಕ್ಷ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಪೂರೈಕೆ ಮಾಡಿರಲಿಲ್ಲ.  ಸಮವಸ್ತ್ರ ಖರೀದಿ ಮತ್ತು ಪೂರೈಕೆ ಸಂಬಂಧ ಸರ್ಕಾರವು  ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಕಾಲಹರಣ ಮಾಡಿತ್ತು.

 

2021-22ನೇ ಸಾಲಿನ ಮೊದಲನೇ ಜೊತೆ ಸಮವಸ್ತ್ರ ಖರೀದಿ ಮತ್ತು ಪೂರೈಕೆಗೆ ಕರೆದಿದ್ದ ಇ- ಟೆಂಡರ್‌ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ್ದ ದರವು ಎರಡನೇ ಜೊತೆಗೆ ನಮೂದಿಸಿದ್ದ ಅಂದಾಜು ದರದಲ್ಲಿ ಶೇ.30ರಷ್ಟು ಹೆಚ್ಚಾಗಿತ್ತು.  2021-22ನೇ ಸಾಲಿನ ವಿದ್ಯಾವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ 1-10ನೇ ತರಗತಿ ವಿದ್ಯಾರ್ಥಿಗಳಿಗೆ 2ನೇ ಜೊತೆ ಸಮವಸ್ತ್ರ ಸರಬರಾಜು ಸಂಬಂಧಿಸಿದಂತೆ ಮೂಲ ದರಗಳನ್ನು ಪುನರ್‌ ನಿಗದಿ ಮಾಡಿ ಅಲ್ಪಾವಧಿಗೆ ಮರು ಟೆಂಡರ್‌ ಆಹ್ವಾನಿಸಿತ್ತು.

 

ಬಿಡ್‌ದಾರರೊಂದಿಗೆ ನಡೆದ ದರ ಸಂಧಾನ ನಂತರ ಅಂತಿಮವಾಗಿ 99.15 ಕೋಟಿ ರು.ಗೆ ಅಂತಿಮಗೊಳಿಸಿದ್ದ ಸರ್ಕಾರವು ಈ ಅನುದಾನವನ್ನು ಮಂಜೂರು ಮಾಡಿತ್ತು. ಆದರೆ ಹಿಂದಿನ ಟೆಂಡರ್‌ಗೆ ಹೋಲಿಸಿದರೆ 7.3 ಕೋಟಿ ರು. ಅಧಿಕವಾಗಿತ್ತು.

 

ಈ ಹಿಂದಿನ ಟೆಂಡರ್‌ ಮೊತ್ತ ಮತ್ತು ಹೊಸದಾಗಿ ಕರೆದಿರುವ ಟೆಂಡರ್ ಮೊತ್ತ ಅಧಿಕವಾಗಲು ಇಂಧನ ಬೆಲೆ ಸೇರಿದಂತೆ ಇನ್ನಿತರೆ ಕಾರಣಗಳನ್ನು ಇಲಾಖೆಯು ಒದಗಿಸಿದೆ. ‘ಇತ್ತೀಚಿನ ದಿನಗಳಲ್ಲಿ ಎಲ್ಲಾ ಇಂಧನಗಳು, ಕಚ್ಚಾ ಸಾಮಗ್ರಿಗಳು, ವೇತನ ಮತ್ತು ಇನ್ನಿತರೆ ಪೂರಕ ವಸ್ತುಗಳ ಹಾಗೂ ಸೇವೆಗಳ ಬೆಲೆ ಹೆಚ್ಚಾಗಿರುತ್ತದೆಯಲ್ಲದೆ ಕೊರತೆಯೂ ಇದೆ. ಸರ್ಕಾರದ ಶಾಲೆಗಳಲ್ಲಿ ಸುಮಾರು ಮೂರು ಲಕ್ಷ ಮಕ್ಕಳ ದಾಖಲಾತಿ ಹೆಚ್ಚಾಗಿರುತ್ತದೆ. ಆದ್ದರಿಂದ ಸಮವಸ್ತ್ರದ ಬಟ್ಟೆಯ ಪರಿಮಾಣವು ಸುಮಾರು 124 ಲಕ್ಷ ಮೀಟರ್‌ನಿಂದ 136 ಲಕ್ಷ ಮೀಟರ್‌ ಅಧಿಕವಾಗಿದೆ. 2021-22ನೇ ಸಾಲಿನ ಇ-ಟೆಂಡರ್‌ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ ದರವು ಅಂದಾಜು ದರಗಳಿಗಿಂತ ಶೇ. 17.41 ಕಡಿಮೆ ಇರುತ್ತದೆ. ಅಂದಾಜು ದರವು 47.00 ಕೋಟಿ ರು. ಆಗಿರುತ್ತದೆ,’ ಎಂದು ಅಧಿಕಾರಿಗಳು ವಿವರಿಸಿದ್ದರು.

 

2021-22ನೇ ಸಾಲಿನ ಮೊದಲನೆ ಜೊತೆ ಸಮವಸ್ತ್ರದ ಟೆಂಡರ್‌ ದರಗಳು ಅಂದಿನ ಸನ್ನಿವೇಶಗಳಿಗೆ (ಕೊರೋನ ಸಮಯ) ಸೀಮಿತವಾಗಿ ಕಡಿಮೆ ಆಗಿತ್ತು.  ಆದರೀಗ ಎರಡನೇ ಬಾರಿಗೆ ಕರೆಯಲಾಗಿದ್ದ ಅಲ್ಪಾವಧಿ ಟೆಂಡರ್‌ನಲ್ಲಿ ಹೊರಹೊಮ್ಮಿದ ಅಂತಿಮ ಟೆಂಡರ್‌ ದರಗಳು ಮತ್ತುಇನ್ನಿತರೆ ವೆಚ್ಚಗಳು ಸೇರಿ 99.15 ಕೋಟಿ ರು. ಆಗಿತ್ತು.  ಈ ಮೊತ್ತವು ಮಂಜೂರಾಗಿರುವ ಅನುದಾನಕ್ಕಿಂತ 7.30 ಕೋಟಿ ರು. ಹೆಚ್ಚುವರಿಯಾಗಿತ್ತು.

 

ಶಾಲಾರಂಭಕ್ಕೆ ಐದೇ ಐದು ದಿನ ಬಾಕಿ; ವಿದ್ಯಾರ್ಥಿಗಳಿಗೆ ದೊರಕದ ಸಮವಸ್ತ್ರ, ಟೆಂಡರ್‌ನಲ್ಲೇ ಕಾಲಹರಣ

 

‘2022-23ನೇ ಶೈಕ್ಷಣಿಕ ವರ್ಷವು 2022ರ ಮೇ 16ರಿಂದ ಪ್ರಾರಂಭವಾಗಲಿದ್ದು ಮಕ್ಕಳಿಗೆ ಸಮವಸ್ತ್ರ ಒದಗಿಸಲು ಕೂಡಲೇ ಕ್ರಮವಹಿಸಬೇಕಾಗಿದೆ. 2021-22ನೇ ಸಾಲಿನ ಎರಡನೆ ಜೊತೆ ಉಚಿತ ಸಮವಸ್ತ್ರ ಸರಬರಾಜಿಗೆ 99.15 ಕೋಟಿ ರು. ಭರಿಸಲು ಅರ್ಥಿಕ ಇಲಾಖೆ ಅನುಮೋದನೆ ಪಡೆಯಬಹುದಾಗಿದೆ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋರಿತ್ತು.

 

2021ರ ಡಿಸೆಂಬರ್‌ 31ರಂದು ಕರೆದಿದ್ದ ಟೆಂಡರ್‌ನಲ್ಲಿ ಅರವಿಂದ್‌ ಕೋಟ್ಸ್‌ ಇಂಡಿಯಾ ಲಿಮಿಟೆಡ್‌, ಪದಂಚಂದ್‌ ಮಿಲಾಪ್‌ಚಂದ್‌ಜೈನ್‌ ಭಾಗವಹಿಸಿದ್ದರು. ಇದರಲ್ಲಿ ಅರವಿಂದ್‌ ಕೋಟ್ಸ್‌ 2ನೇ ಮತ್ತು ಪದಂಚಂದ್‌ 3ನೇ ಬಿಡ್‌ದಾರರಾಗಿ ಹೊರಹೊಮ್ಮಿದ್ದರು. ಪ್ಯಾಕೇಜ್‌ 1 ಮತ್ತು 2ರ ಐಟಂ ಸಂಖ್ಯೆ 1,2 ಮತ್ತು 3ರ ಕನಿಷ್ಠ ದರಗಳಿಗೆ ಇಳಿಸಲು ಈ ಬಿಡ್‌ದಾರರು ಸಹಮತಿ ಸೂಚಿಸಿರಲಿಲ್ಲ.

 

ಹೀಗಾಗಿ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿದ್ದ 91.85 ಕೋಟಿ ರು.ಗೆ 7 ಲಕ್ಷ ಅಧಿಕ ಸೇರ್ಪಡೆಗೊಂಡು ಒಟ್ಟು 91.92 ಕೋಟಿ ರು. ಆಗಿತ್ತು. ಕೆಟಿಪಿಪಿ ಕಾಯ್ದೆ 2000 ನಿಯಮ 12(5)ರ ಪ್ರಕಾರ ಶೇ. 25ರಷ್ಟು ಹೆಚ್ಚುಕಡಿಮೆ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮೂರು ಪ್ಯಾಕೇಜ್‌ಗಳನ್ನು ಪದಂಚಂದ್‌ ಮಿಲಾಪ್‌ಚಂದ್‌ ಜೈನ್‌ ಅವರಿಗೆ ಒಟ್ಟು 71.55 ಕೋಟಿ ರು. ವೆಚ್ಚದಲ್ಲಿ ಸಮವಸ್ತ್ರ ಬಟ್ಟೆ ಒದಗಿಲು ಆದೇಶ ನೀಡಲು ಆಯುಕ್ತರು ಕೋರಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts