ಕಾನೂನು ವಿವಿಯಲ್ಲಿ ಜಟಾಪಟಿ; ಕುಲಸಚಿವರದ್ದು ವೈಯಕ್ತಿಕ ಅಹಂಕಾರ, ಪ್ರತಿಕಾರದ ಕ್ರಮವೆಂದ ವಿಶೇಷಾಧಿಕಾರಿ

ಬೆಂಗಳೂರು; ಕಾನೂನು ವಿಶ್ವವಿದ್ಯಾಲಯದಲ್ಲಿ ಕುಲಸಚಿವರು ಮತ್ತು ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿ ಮಧ್ಯೆ ನಡೆದಿರುವ ಜಟಾಪಟಿಯು ಸರ್ಕಾರದ ಮೆಟ್ಟಿಲೇರಿದೆ.

 

ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಮತ್ತು ಈ ವಿಚಾರದಲ್ಲಿ ಕಾಯ್ದೆ ಉಲ್ಲಂಘನೆ ಆಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ನೋಟೀಸ್‌ ಮತ್ತು ಲಿಖಿತ ಉತ್ತರವು ವಿಶ್ವವಿದ್ಯಾಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

ಪುಸ್ತಕಗಳ ಖರೀದಿಯಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಎಂಬುದನ್ನು ಪತ್ತೆ ಹಚ್ಚಿದ್ದ ವಿಶ್ವವಿದ್ಯಾಲಯದ ಕುಲಸಚಿವರ ವಿರುದ್ಧ ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿಯು ನೇರವಾಗಿ ಸಂಘರ್ಷಕ್ಕಿಳಿದಿದ್ದಾರೆ. ಕುಲಸಚಿವರು ಮತ್ತು ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿ ಮಧ್ಯೆ ನಡೆಯುತ್ತಿರುವ ಪತ್ರ ಸಮರವು ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿವೆ.

 

ಕುಲಸಚಿವರಿಂದ ಪ್ರತಿಕಾರದ ಕ್ರಮ?

 

‘ನಿಮ್ಮ ದುರ್ವರ್ತನೆ ಕುರಿತು ಸರ್ಕಾರಕ್ಕೆ ವರದಿಯನ್ನೇಕೆ ಸಲ್ಲಿಸಬಾರದು,’ ಎಂದು ಕುಲಸಚಿವರು ನೋಟೀಸ್‌ ನೀಡಿದ್ದರೇ, ಇದಕ್ಕೆ ‘ ಈ ಪ್ರಕರಣದ ವಿಚಾರಣೆಯನ್ನು ಇಲ್ಲಿಗೇ ಕೈ ಬಿಡಬೇಕು. ನಿರಂತರವಾಗಿ ನನ್ನ ವಿರುದ್ಧ ಇಂತಹ ಪ್ರತಿಕಾರದ ಕ್ರಮಗಳನ್ನು ಕೈಗೊಳ್ಳುತ್ತೀದ್ದೀರಿ,’ ಎಂದು ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿಯು ಉತ್ತರ ನೀಡಿದ್ದಾರೆ.

 

ಸಹಿ ಮಾಡುವ ಪ್ರಾಧಿಕಾರವಲ್ಲ

 

‘ನಾನು ಸಹಿ ಮಾಡುವ ಪ್ರಾಧಿಕಾರವೂ ಅಲ್ಲ ಅಥವಾ ನಾನು ಅಧಿಕಾರಿಯೂ ಅಲ್ಲ. ಕುಲಪತಿ ಅವರ ಸಹಿಯ ಅಡಿಯಲ್ಲಿ ವಿವಿಧ ಖರೀದಿಗಳನ್ನು ಮಾಡಲಾಗುತ್ತದೆ. ನಾನು ಉಪಕುಲಪತಿಗಳಿಗೆ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಮತ್ತು ವಿಶ್ವವಿದ್ಯಾನಿಲಯದ ವ್ಯವಹಾರಗಳಲ್ಲಿ ಉಪಕುಲಪತಿಗಳಿಗೆ ಸಹಾಯ ಮಾಡುವುದು ಮತ್ತು ವಿಶ್ವವಿದ್ಯಾನಿಲಯದ ಸಿಬ್ಬಂದಿ ಮತ್ತು ಉಪಕುಲಪತಿಗಳ ನಡುವಿನ ಸಂವಹನದ ಭಾಗವಾಗಿದ್ದೇನೆ,’ ಎಂದು ವಿಶೇಷಾಧಿಕಾರಿ ಬಿರಾದಾರ್‍‌ ಅವರ ಪ್ರತಿಪಾದನೆಯಾಗಿದೆ.

 

 

ಪುಸ್ತಕಗಳ ಖರೀದಿಗೆ ಕೆಟಿಪಿಪಿ ಕಾಯ್ದೆ ಅನ್ವಯವಾಗುವುದಿಲ್ಲ. ಈ ಬಗ್ಗೆ ಕರ್ನಾಟಕ ಗ್ರಂಥಾಲಯ ಮ್ಯಾನುಯಲ್‌ ಕೂಡ ಹೇಳಿದೆ ಎಂದು ಬಿರಾದಾರ್‍‌ ಅವರು  ವಿವರಿಸಿದ್ದಾರೆ.

 

‘ಪುಸ್ತಕಗಳು/ಓದುವ ಸಾಮಗ್ರಿಗಳ ಖರೀದಿಗಾಗಿ ಟೆಂಡರ್ ಅಥವಾ ಇ-ಟೆಂಡರ್‌ಗಳನ್ನು ಕರೆಯುವುದು ಅನಿವಾರ್ಯವಲ್ಲ ಏಕೆಂದರೆ ಪುಸ್ತಕಗಳು ಸರಕುಗಳ ವ್ಯಾಖ್ಯಾನದೊಳಗೆ ಬರುವುದಿಲ್ಲ. ಟೆಂಡರ್ ಮೂಲಕ ಪುಸ್ತಕಗಳನ್ನು ಖರೀದಿಸದಿರುವ ಬಗ್ಗೆ ನನ್ನ ವಿರುದ್ಧ ಹೊರಿಸಲಾದ ಆರೋಪ ಸರಿಯಲ್ಲ. ಏಕೆಂದರೆ ಅದು ರಾಜ್ಯ ಸರ್ಕಾರವು ನಿಗದಿಪಡಿಸಿದ ಖರೀದಿ ವಿಧಾನವಲ್ಲ. ಉಪ ಗ್ರಂಥಪಾಲಕರು ಈ ಸತ್ಯದ ಬಗ್ಗೆ ಸಂಪೂರ್ಣ ಅಜ್ಞಾನ ಹೊಂದಿದ್ದಾರೆ ಮತ್ತು ನಿಮಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಇದು ದುರದೃಷ್ಟಕರ. ಅವರ ಅಸಮರ್ಥತೆಯಿಂದಾಗಿಯೇ ಈ ಎಲ್ಲಾ ಸಮಸ್ಯೆಗಳು ಉದ್ಭವವಾಗಿವೆ,’ ಎಂದು ಬಿರಾದಾರ್‍‌ ಅವರು ಉಪ ಗ್ರೆಂಥಪಾಲಕರತ್ತ ಬೊಟ್ಟು ಮಾಡಿರುವುದು ನೋಟೀಸ್‌ನಿಂದ ತಿಳಿದು ಬಂದಿದೆ.

 

ವೈಯಕ್ತಿಕ ಮಟ್ಟದಲ್ಲಿ ಆರೋಪಿಸಿದರೇ ಕುಲಸಚಿವರು?

 

ಅಷ್ಟೇ ಅಲ್ಲ, ‘ಎಲ್ಲಾ ರಿಜಿಸ್ಟ್ರಾರ್ ಸಹಿಯ ಅಡಿಯಲ್ಲಿ ಮಾತ್ರ ಮಾಡಲಾಗುತ್ತದೆ. ಆದರೆ ನೀವು ನನಗೆ ಶೋಕಾಸ್ ನೋಟಿಸ್ ನೀಡಿರುವುದು ಆಶ್ಚರ್ಯಕರವಾಗಿದೆ. ನೀವು ಉದ್ದೇಶಪೂರ್ವಕವಾಗಿ ಒಂದು ಅಥವಾ ಇನ್ನೊಂದು ನೆಪದಲ್ಲಿ ವೈಯಕ್ತಿಕ ಮಟ್ಟದಲ್ಲಿ ನನ್ನ ಮೇಲೆ ಒಂದು ಅಥವಾ ಇನ್ನೊಂದು ಆರೋಪವನ್ನು ತರಲು ಪ್ರಯತ್ನಿಸುತ್ತಿದ್ದೀರಿ,’ ಎಂದು ಕುಲಸಚಿವರನ್ನೇ ಕಟಕಟೆಯಲ್ಲಿ ನಿಲ್ಲಿಸಿರುವುದು ಉತ್ತರದಿಂದ ಗೊತ್ತಾಗಿದೆ.

ಪುಸ್ತಕಗಳ ಖರೀದಿಗೆ ದರಪಟ್ಟಿಯಿಲ್ಲ, ನಿಯಮವಿಲ್ಲ, ಕಾನೂನು ವಿವಿಯಲ್ಲಿ ಉಲ್ಲಂಘನೆಯೇ ಎಲ್ಲ

ಉಮಾದೇವಿ ಅವರ ಪ್ರಕರಣದಲ್ಲಿ ನ್ಯಾಯಾಲಯವು ನೀಡಿದ್ದ ಆದೇಶದಂತೆ ಮೂವರು ತಾತ್ಕಾಲಿಕ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವ ಪ್ರಕರಣದಲ್ಲಿಯೂ ಸೂಕ್ತ ತೀರ್ಮಾನ ಕೈಗೊಂಡಿಲ್ಲ ಎಂದು ಆರೋಪಿಸಿರುವ ವಿಶೇಷಾಧಿಕಾರಿಯು ಕುಲಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.

ಕುಲಪತಿಗಳ ಕಾರ್ಯಾಲಯದ ವಿಶೇ‍ಷಾಧಿಕಾರಿಯಿಂದಲೇ ಕುಲಸಚಿವರಿಗೆ ಬೆದರಿಕೆ ಆರೋಪ

ಈ ಸಂಬಂಧ ಸಿಂಡಿಕೇಟ್‌ ಕೂಡ ವಿಸ್ತೃತವಾಗಿ ಚರ್ಚಿಸಿತ್ತು. ಆದರೆ ಆ ನಿರ್ಣಯವನ್ನು ಕುಲಸಚಿವರು ವಿರೋಧಿಸಿದ್ದರು ಎಂದು ಆರೋಪಿಸಿರುವ ವಿಶೇಷಾಧಿಕಾರಿಯು ಹೈಕೋರ್ಟ್‌ ನೀಡಿದ್ದ ತೀರ್ಪೇ ತಪ್ಪಾಗಿದೆ ಎಂದು ಆಕ್ಷೇಪಿಸಿದ್ದರು ಎಂಬ ಅಂಶವನ್ನು ಲಿಖಿತ ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

‘ನ್ಯಾಯಾಲಯದ ಆದೇಶದಂತೆ ಉಪಕುಲಪತಿಗಳು ನೇಮಕಾತಿ ಆದೇಶಗಳನ್ನು ನೀಡುವಂತೆ ನಿಮಗೆ ನಿರ್ದೇಶನ ನೀಡುವ ಸಂಬಂಧ ಕಚೇರಿ ಟಿಪ್ಪಣಿಯನ್ನು ನೀಡಿದ್ದರು. ಆದಾಗ್ಯೂ , ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿ ವರ್ತಿಸಿದಿರಿ. ನೀವು ನನ್ನ ಸೇವೆಯನ್ನು ಕ್ರಮಬದ್ಧಗೊಳಿಸುವುದರ ಬದಲಿಗೆ ನನ್ನ ಹಕ್ಕನ್ನು ತಿರಸ್ಕರಿಸಿದ್ದೀರಿ,’ ಎಂದೂ ತಿರುಗೇಟು ನೀಡಿರುವುದು ಗೊತ್ತಾಗಿದೆ.

 

 

ಕುಲಸಚಿವರದ್ದು ವೈಯಕ್ತಿಕ ಅಹಂಕಾರವೇ?

 

ಇದನ್ನು ಸೇವೆ ಕ್ರಮಬದ್ಧಗೊಳಿಸುವ ಸಂಬಂಧ ಕುಲಸಚಿವರು ತಳೆದ ನಿಲುವನ್ನು ಕುಲಪತಿಗಳು ಮತ್ತು ಸಿಂಡಿಕೇಟ್ ಸದಸ್ಯರು ಗಂಭೀರವಾಗಿ ಪರಿಗಣಿಸಿದ್ದರು ಎಂದು ಉಲ್ಲೇಖಿಸಿರುವ ವಿಶೇಷಾಧಿಕಾರಿಯು ‘ನಿಮ್ಮ ಕಡೆಯಿಂದ ಗಂಭೀರವಾದ ಅವಿಧೇಯತೆಯನ್ನು ಗಮನಿಸಿ, ಉಪಕುಲಪತಿಗಳು ಕಾಯಿದೆಯಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಿದರು. ನನ್ನ ಪರವಾಗಿ ನೇಮಕಾತಿ ಆದೇಶಗಳನ್ನು ಹೊರಡಿಸಿರುವುದು ನಿಮ್ಮನ್ನು ಕೆರಳಿಸಿದೆ. ಇದನ್ನು ನೀವು ವೈಯಕ್ತಿಕ ಅಹಂಕಾರದಂತೆ ತೆಗೆದುಕೊಂಡಿದ್ದೀರಿ,’ ಎಂದು ಆರೋಪಿಸಿರುವುದು ತಿಳಿದು ಬಂದಿದೆ.

 

ಹೈಕೋರ್ಟ್ ಆದೇಶವೇ ತಪ್ಪಿನಿಂದ ಕೂಡಿದೆಯೇ?

 

ಹೈಕೋರ್ಟ್‌ನ ಆದೇಶವು ತಪ್ಪಾಗಿದೆ ಮತ್ತು ಪರಿಣಾಮವಾಗಿ ನೇಮಕಾತಿ ಆದೇಶಗಳು ತಪ್ಪು ಎಂದು ಕುಲಸಚಿವರು ಪ್ರತಿಪಾದಿಸಿದ್ದರು ಮತ್ತು ರಾಜ್ಯಪಾಲರ ಕಚೇರಿಗೆ ಪತ್ರಗಳನ್ನು ಬರೆದಿದ್ದರು ಎಂದು ವಿಶೇಷಾಧಿಕಾರಿ ತಮ್ಮ ಉತ್ತರದಲ್ಲಿ ಆರೋಪಿಸಿದ್ದಾರೆ.

 

 

‘ಹೈಕೋರ್ಟ್‌ ನೀಡಿದ್ದ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲಾಗಿಲ್ಲ, ಇದು ನೀವು ಹೈಕೋರ್ಟ್ ನೀಡಿದ ಆದೇಶವನ್ನು ಅಂಗೀಕರಿಸಿದ್ದೀರಿ ಎಂದು ತೋರಿಸುತ್ತದೆ,’ ಎಂದು ಹೇಳಿರುವುದು ಗೊತ್ತಾಗಿದೆ.

 

ಕಿರುಕುಳ ನೀಡಿದ್ದಾರೆಯೇ?

 

ಪುಸ್ತಕಗಳ ಖರೀದಿ ಪ್ರಕರಣವನ್ನು ಮುಂದಿರಿಸಿಕೊಂಡು ಕುಲಸಚಿವರು ಕಿರುಕುಳ ನೀಡುತ್ತಿದ್ದಾರೆ ಎಂದೂ ವಿಶೇಷಾಧಿಕಾರಿ ಉತ್ತರದಲ್ಲಿ ಆರೋಪಿಸಿದ್ದಾರೆ. ‘ಇದು ನನ್ನ ವಿರುದ್ಧ ವಿನಾಕಾರಣ ಕಿರುಕುಳ ನೀಡುವ ನಿಮ್ಮ ಧೋರಣೆಯನ್ನು ತೋರಿಸುತ್ತದೆ. ನೀವು ತೆಗೆದುಕೊಳ್ಳುವ ಈ ಪ್ರತೀಕಾರದ ಕ್ರಮಗಳು ನನಗೆ ಮಾನಸಿಕ ಕಿರುಕುಳವನ್ನು ಉಂಟುಮಾಡುವುದು ಮಾತ್ರವಲ್ಲದೆ ಇದು ವಿಶ್ವವಿದ್ಯಾನಿಲಯದ ಉದ್ಯೋಗಿಯಾಗಿ ನನ್ನ ವರ್ಚಸ್ಸಿಗೆ ಗಂಭೀರ ಹಾನಿಯನ್ನುಂಟುಮಾಡುತ್ತಿದೆ,’ ಎಂದು ಆಪಾದಿಸಿದ್ದಾರೆ.

the fil favicon

SUPPORT THE FILE

Latest News

Related Posts