ಯುಯುಸಿಎಂಎಸ್‌ನಲ್ಲಿ ‘ವ್ಯಾಪಕ ಹಗರಣ’; ಸಿಐಡಿ ತನಿಖೆಗೆ ನಕಾರ, ಸಿಎಂ ಸೂಚನೆಯನ್ನೇ ಧಿಕ್ಕರಿಸಿದ ಇಲಾಖೆ

ಬೆಂಗಳೂರು; ಸಮಗ್ರ ವಿಶ್ವವಿದ್ಯಾಲಯದ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ(ಯುಯುಸಿಎಂಎಸ್‌) ತಂತ್ರಾಂಶವನ್ನು ವಿಶ್ವವಿದ್ಯಾಲಯಗಳು ಬಳಸದೇ ಇರುವುದು ಸೇರಿದಂತೆ ಇನ್ನಿತರೆ ವಿಚಾರಗಳಲ್ಲಿ ನಡೆದಿದೆ ಎನ್ನಲಾಗಿರುವ  ವ್ಯಾಪಕ  ಅಕ್ರಮಗಳ ಕುರಿತಾಗಿ ಸಿಐಡಿ ತನಿಖೆ  ನಡೆಸಲು ಉನ್ನತ ಶಿಕ್ಷಣ ಇಲಾಖೆಯು ನಿರಾಕರಿಸಿದೆ.

 

ಖಾಸಗಿ ತಂತ್ರಾಂಶ ಬಳಕೆ ಮಾಡಿರುವುದು ಸೇರಿದಂತೆ ಯುಯುಸಿಎಂಎಸ್‌ನಲ್ಲಿ ವ್ಯಾಪಕ ಹಗರಣ ನಡೆದಿದೆ. ಈ ಕುರಿತು ಸಿಐಡಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ಟಿಪ್ಪಣಿ ಹಾಕಿದ್ದರು. ಆದರೀಗ ಈ ಕುರಿತಾಗಿ ಸಿಐಡಿ ತನಿಖೆಯೇ ಅವಶ್ಯಕತೆ ಇಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಕಸದ ಬುಟ್ಟಿಗೆ ಎಸೆದಿದ್ದಾರೆ.

 

ಯುಯುಸಿಎಂಎಸ್‌ ಪ್ರಕರಣವು ವ್ಯಾಪಕ ಹಗರಣದಂತೆ ಕಂಡು ಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ತನಿಖೆಗೆ ವಹಿಸಿ 60 ದಿನದೊಳಗೆ ವರದಿ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಅವರು ಸೂಚಿಸಿದ್ದರೇ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ, ಸಿಐಡಿ ತನಿಖೆಯೇ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

 

ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಈ ನಡೆಯು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯನ್ನೇ ಧಿಕ್ಕರಿಸಿದಂತಿದೆ.

 

ಈ ಸಂಬಂಧ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಹಲವು ದಾಖಲಾತಿಗಳನ್ನು ಪಡೆದುಕೊಂಡಿದೆ.

 

ಸಿದ್ದರಾಮಯ್ಯರ ಟಿಪ್ಪಣಿಯಲ್ಲೇನಿದೆ?

 

ಉನ್ನತ ಶಿಕ್ಷಣ ಇಲಾಖೆಯಡಿಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಹೊಸ ತಂತ್ರಾಂಶ ಖರೀದಿ, ಅಭಿವೃದ್ಧಿ ಮತ್ತು ಲೈಸೆನ್ಸ್‌ ನವೀಕರಣಗಳನ್ನು ಕೈಗೆತ್ತಿಕೊಳ್ಳದೇ ಸರ್ಕಾರದಿಂದ ಅಭಿವೃದ್ಧಿಪಡಿಸಲಾಗಿರುವ ಯುಯುಸಿಎಂಎಸ್‌ ತಂತ್ರಾಂಶ ಬಳಕೆಗೆ ಸ್ಪಷ್ಟ ನಿರ್ದೇಶನವಿದೆ. ಆದರೂ ವಿಶ್ವವಿದ್ಯಾಲಯಗಳು, ಇಲಾಖೆಯ ಅಧಿಕಾರಿಗಳು ಕರ್ನಾಟಕ ಉಚ್ಛ ನ್ಯಾಯಾಲಯದ (ಪ್ರಕರಣ ಸಂಖ್ಯೆ 12468/2020) ಆದೇಶವನ್ನು ಉಲ್ಲಂಘಿಸಲಾಗುತ್ತಿದೆ.

 

ಖಾಸಗಿ ಕಂಪನಿಗಳ ಸೇವೆ ಪಡೆದುಕೊಂಡು 100ಕ್ಕೂ ಅಧಿಕ ಕೋಟಿ ರುಪಾಯಿ ಸರ್ಕಾರದ ಹಣದ ಪೋಲಾಗಲು ಕಾರಣರಾಗಿರುತ್ತಾರೆ. ಈ ಪ್ರಕರಣವು ನ್ಯಾಯಾಲಯದ ನಿಂದನೆ ಹಾಗೂ ಭ್ರಷ್ಟಾಚಾರದ ನಿಗ್ರಹದ ಕಾಯ್ದೆಯ ವ್ಯಾಪ್ತಿಗೆ ಬರುತ್ತಿದ್ದು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡು ದುರುಪಯೋಗವಾದ ಹಣ ವಸೂಲಿ ಮಾಡಲು ಅಗತ್ಯ ಕ್ರಮವಹಿಸಬೇಕು ಎಂದು ವಕೀಲ ಅವಿನಾಶ್‌ ಗೌಡ ಅವರು ಕೋರಿರುತ್ತಾರೆ.

 

‘ಪ್ರಕರಣದ ಕುರಿತು ಈ ಮೊದಲು ದೂರುಗಳು ಸ್ವೀಕೃತವಾಗಿದ್ದು ಯಾವುದೇ ಕ್ರಮಕೈಗೊಳ್ಳದಿರುವುದು ಕಂಡು ಬಂದಿರುತ್ತದೆ. ಇದೊಂದು ವ್ಯಾಪಕ ಹಗರಣದಂತೆ ಕಂಡುಬರುತ್ತಿದ್ದು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಸಿಐಡಿಗೆ ವಹಿಸಿ ತನಿಖೆ ನಡೆಸಿ 60 ದಿನದೊಳಗೆ ವರದಿ ಸಲ್ಲಿಸಬೇಕು,’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2024ರ ಜನವರಿ 2ರಂದು ಸೂಚಿಸಿದ್ದರು.

 

 

ಆದರೆ ಈ ಸೂಚನೆಯನ್ನು ಉನ್ನತ ಶಿಕ್ಷಣ ಇಲಾಖೆಯು ನೇರವಾಗಿ ಧಿಕ್ಕರಿಸಿದೆ. ಸಿಐಡಿ ತನಿಖೆಗೆ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ 9 ದಿನದೊಳಗೇ ಉನ್ನತ ಶಿಕ್ಷಣ ಇಲಾಖೆಯು ಸಿಐಡಿ ತನಿಖೆಗೆ ವಹಿಸುವ ಅವಶ್ಯಕತೆಯೇ ಇಲ್ಲ ಎಂದು ಪ್ರತಿಪಾದಿಸಿದೆ.

 

‘ಮುಖ್ಯಮಂತ್ರಿಗಳ ಕಚೇರಿ ಪತ್ರದನ್ವಯ ಯುಯುಸಿಎಂಎಸ್‌ ತಂತ್ರಾಂಶವನ್ನು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ತಂತ್ರಾಂಶವನ್ನು ಬಳಸಬಾರದೆಂಬ ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ ಖಾಸಗಿ ಕಂಪನಿಗಳ ಸೇವೆಗಳನ್ನು ಬಳಸಿಕೊಂಡಿರುವವರೆಂಬ ದೂರಿಗೆ ವಿಶ್ವವಿದ್ಯಾಲಯಗಳಿಂದ ಸವಿಸ್ತಾರ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಪಡೆಯಲಾಗುವುದು. ಹಾಗೂ ನ್ಯೂನತೆಗಳು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಈ ಹಂತದಲ್ಲಿ ಸಿಐಡಿ ತನಿಖೆಗೆ ವಹಿಸುವ ಅವಶ್ಯಕತೆ ಇರುವುದಿಲ್ಲ,’ ಎಂದು ಉನ್ನತ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ ಭಾಗ್ಯವಾನ್‌ ಅವರು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

 

2021-22ನೇ ಸಾಲಿನಲ್ಲಿ ಯುಯುಸಿಎಂಎಸ್‌ ನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಫಲಿತಾಂಶ ನೀಡಲಾಗಿದೆ. 2022-23ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪದವಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿದೆ.

 

2023-24ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ ಮತ್ತು ಅಂತಿಮ ಪದವಿಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಯುಯುಸಿಎಂಎಸ್‌ ಪರೀಕ್ಷಾ ಮಾಡ್ಯುಲ್‌ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈ ರೀತಿಯಲ್ಲಿ ಯುಯುಸಿಎಂಎಸ್‌ ತಂತ್ರಾಂಶವನ್ನು ಹಂತಹಂತವಾಗಿ ಉನ್ನತ ಶಿಕ್ಷಣ ಇಲಾಖೆಯಡಿಯ 30 ವಿಶ್ವವಿದ್ಯಾಲಯಗಳಲ್ಲಿ ಬಳಸಿಕೊಳ್ಳಲಾಗಿದೆ ಎಂದು ಭಾಗ್ಯವಾನ್‌ ಅವರು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯಡಿ 30 ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ 3,273 ಕಾಲೇಜುಗಳಲ್ಲಿನ ಸುಮಾರು 12 ಲಕ್ಷ ವಿದ್ಯಾರ್ಥಿಗಳು ಯುಯುಸಿಎಂಎಸ್‌ ತಂತ್ರಾಂಶದ ಮುಖಾಂತರವೇ ಪ್ರವೇಶಾತಿ, ಪರೀಕ್ಷೆ ಮತ್ತು ಶೈಕ್ಷಣಿಕ ಇತರೆ ವಿಭಾಗಗಳಲ್ಲಿನ ಆನ್‌ಲೈನ್‌ ಚಟುವಟಿಕೆ ನಡೆಸಲು ಬಳಸಲಾಗಿದೆ.

 

‘ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ (ಸಂಖ್ಯೆ ಮುಮಮಂ ಅ.ಕಾ/7078693/2024 ದಿನಾಂ 02.01.2024)ಯಲ್ಲಿ ಉತ್ತಮ ಯುಯುಸಿಎಂಎಸ್‌ ತಂತ್ರಾಂಶವಿದ್ದರೂ ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ವಿಶ್ವವಿದ್ಯಾಲಯಗಳು ಖಾಸಗಿ ತಂತ್ರಾಂಶಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಕಾರಣವೇ ಹೊರತು ಯುಯುಸಿಎಂಎಸ್‌ ಬಗ್ಗೆ ಯಾವುದೇ ಆಕ್ಷೇಪ ಎತ್ತಿರುವುದಿಲ್ಲ. ಈ ಅಂಶಗಳ ಹಿನ್ನೆಲೆಯಲ್ಲಿ ಯುಯುಸಿಎಂಎಸ್‌ನ್ನು ಬಲಪಡಿಸಲು ಸಚಿವ ಸಂಪುಟ ಅನುಮೋದನೆಗೆ ಕಳಿಸಿರುವ ಕರಡು ಸಚಿವ ಸಂಪುಟ ಟಿಪ್ಪಣಿಗೂ ಮುಖ್ಯಮಂತ್ರಿಗಳ ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳಿಗೂ ಸಂಬಂಧವಿರುವುದಿಲ್ಲ,’ ಎಂದು ಭಾಗ್ಯವಾನ್‌ ಅವರು ಸ್ಪಷ್ಟಪಡಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts