4.8 ಕೋಟಿ ಮರಳಿಸಲು ಸುಧಾಕರ್‍‌ರಿಂದ ವಾಟ್ಸಾಪ್‌ ಕರೆ, ಸಂದೇಶ; ಸೊಪ್ಪು ಹಾಕದ ಮುನೀಶ್‌ ಮೌದ್ಗಿಲ್

ಬೆಂಗಳೂರು; ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ 4.8 ಕೋಟಿ ರು. ಹಣವನ್ನು ಮರಳಿಸಬೇಕು ಎಂದು  ಚಿಕ್ಕಬಳ್ಳಾಪುರ ಸಂಸದೀಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್‍‌ ಅವರು  ಎಂಸಿಸಿ ನೋಡಲ್‌ ಅಧಿಕಾರಿ ಮುನೀಶ್‌ ಮೌದ್ಗಿಲ್‌ ಅವರಿಗೆ ವಾಟ್ಸಾಪ್‌ ಕರೆ ಮಾಡಿ ಕೋರಿದ್ದರು.

 

ಮಾದಾವರ ಗೋವಿಂದಪ್ಪ ನಿವಾಸದ ಮೇಲೆ ಐ ಟಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದ 4.8 ಕೋಟಿ ರು.ಗಳನ್ನು ಮರಳಿಸಬೇಕು ಎಂದು  ಡಾ ಕೆ ಸುಧಾಕರ್‍‌ ಅವರು ವಾಟ್ಸಾಪ್‌ ಕರೆ ಮತ್ತು ಸಂದೇಶವನ್ನೂ  ಕಳಿಸಿ ಕೋರಿದ್ದರು ಎಂದು ತಿಳಿದು ಬಂದಿದೆ.  ಆದರೆ ಇದಕ್ಕೆ ಮುನೀಶ್‌ ಮೌದ್ಗಿಲ್‌ ಅವರು ಯಾವುದೇ ಸೊಪ್ಪು ಹಾಕಿರಲಿಲ್ಲ.

 

ಮಾದಾವಾರ ಗೋವಿಂದಪ್ಪ ಎಂಬುವರ ನಿವಾಸದಲ್ಲಿ 10 ಕೋಟಿ ರು. ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮುನೀಶ್‌ ಮೌದ್ಗಿಲ್‌ ಅವರಿಗೆ ಮಾಹಿತಿ ಬಂದಿತ್ತು. ಇದನ್ನು ಖಚಿತಪಡಿಸಿಕೊಳ್ಳಲು ಮತ್ತೊಬ್ಬ ಅಧಿಕಾರಿಗೆ ಮುನೀಶ್‌ ಮೌದ್ಗಿಲ್‌ ಅವರು ಸೂಚಿಸಿದ್ದರು. ಜಿಪಿಎಸ್‌ ಲೊಕೇಷನ್‌ ಸೇರಿದಂತೆ ಉಳಿದ ಮಾಹಿತಿ ಖಚಿತಪಡಿಸಿಕೊಂಡ ನಂತರ ಐಆರ್‍‌ಎಸ್‌ ಮತ್ತು ಐ ಟಿ ಅಧಿಕಾರಿಗಳು ದಾಳಿ ನಡೆದಿತ್ತು ಎಂಬುದು ಗೊತ್ತಾಗಿದೆ.

 

ಈ ವೇಳೆ ಮುನೀಶ್‌ ಮೌದ್ಗಿಲ್‌ ಅವರಿಗೆ ಸ್ವತಃ ಡಾ ಕೆ ಸುಧಾಕರ್‍‌ ಅವರೇ ವಾಟ್ಸಾಪ್‌ ಕರೆ ಮಾಡಿದ್ದಾರೆ. ಈ ಅಂಶವನ್ನು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿದೆ.

 

‘25.4.2024ರಂದು ಮಧ್ಯಾಹ್ನ 2.04 ಗಂಟೆಗೆ ಜಿಲ್ಲಾ ಎಂಸಿಸಿ ನೋಡಲ್‌ ಅಧಿಕಾರಿ ಮುನೀಶ್‌ ಮೌದ್ಗಿಲ್‌, ಐಎಎಸ್‌ ಅವರ 9448194915 ಸಂಖ್ಯೆಗೆ 9845204040 ಸಂಖ್ಯೆಯಿಂದ ವಾಟ್ಸಾಪ್‌ ಕರೆಯನ್ನು ಪಡೆದು. (WhatsApp ನಲ್ಲಿ ಶ್ರೀ ಸುಧಾಕರ್‍‌ ಎಂದು ಗುರುತಿಸಿದ್ದಾರೆ) ಇದಲ್ಲದೇ ಈ ಸಂಖ್ಯೆಗೆ ಮೂರು ವಾಟ್ಸಾಪ್‌ ಸಂದೇಶಗಳನ್ನೂ ಮುನೀಶ್‌ ಮೌದ್ಗಿಲ್‌ ಅವರು ಪಡೆದಿದ್ದರು,’ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

 

ಅಲ್ಲದೇ ‘Ps help will be great full to you,‘ ಎಂದು ಡಾ ಕೆ ಸುಧಾಕರ್‍‌ ಅವರು ವಾಟ್ಸಾಪ್‌ನಲ್ಲಿ ಮುನೀಶ್‌ ಮೌದ್ಗಿಲ್‌ ಅವರನ್ನು ಕೋರಿದ್ದರು. ಅದೇ ರೀತಿ ಮತ್ತೊಬ್ಬ ಅಧಿಕಾರಿ ಆನಂದ್‌ ರಟಕಲ್‌ ಅವರಿಗೂ ವಾಟ್ಸಾಪ್‌ ಸಂದೇಶವನ್ನು ಕಳಿಸಿದ್ದರು ಎಂಬುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

 

ಚಿಕ್ಕಬಳ್ಳಾಪುರ ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸುಧಾಕರ್‍‌ , ನೋಡಲ್‌ ಅಧಿಕಾರಿ ಮುನೀಶ್‌ ಮೌದ್ಗಿಲ್‌ ಅವರಿಗೆ ವಾಟ್ಸಾಪ್‌ ಮೆಸೇಜ್‌ನ ಸ್ಕ್ರೀನ್‌ ಶಾಟ್‌ ಮತ್ತು ವಾಟ್ಸಾಪ್‌ನಲ್ಲಿ ಬಂದ ಬಂದ ಫೋನ್‌ ಕರೆಯನ್ನೂ ದೂರಿನೊಂದಿಗೆ ಲಗತ್ತಿಸಿರುವುದು ಗೊತ್ತಾಗಿದೆ.

 

ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಿರುವ ಮೊಬೈಲ್‌ ಸಂಖ್ಯೆ 9845204040 ಯಾರಿಗೆ ಸೇರಿದೆ ಎಂದು ‘ದಿ ಫೈಲ್‌’ ತನಿಖಾ ತಂಡವು ಟ್ರೂ ಕಾಲರ್‍‌ ಮೂಲಕ ಪತ್ತೆ ಹಚ್ಚಿತ್ತು. ಇದರ ಪ್ರಕಾರ ಈ ಸಂಖ್ಯೆಯು ಡಾ ಕೆ ಸುಧಾಕರ್‍‌ ಅವರ ಹೆಸರಿನಲ್ಲಿರುವುದು ತಿಳಿದು ಬಂದಿದೆ.

 

 

ಸುಧಾಕರ್‍‌ ಅವರ ಆಪ್ತರು ಎನ್ನಲಾದ ಮಾದಾವರ ಗೋವಿಂದಪ್ಪ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ 4.8 ಕೋಟಿ ರು. ಮೌಲ್ಯದ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

 

ಡಾ ಕೆ ಸುಧಾಕರ್‍‌ ವಿರುದ್ದ ಆರ್‍‌ಪಿ ಕಾಯ್ದೆ 1951ರ ಅಡಿಯಲ್ಲಿ ಅನುಚಿತ ಪ್ರಭಾವ, ಲಂಚ ಮತ್ತು ಭ್ರಷ್ಟಾಚಾರದ ಪ್ರಯತ್ನಕ್ಕಾಗಿ ಕಲಂ 171 ಬಿ 171ಸಿ 171 ಇ, 171 ಎಫ್‌ ಭಾರತೀಯ ದಂಡ ಸಂಹಿತೆ ಹಾಗೂ ಕಲಂ 123 ಆರ್‍‌ಪಿ ಕಕಾಯ್ದೆ 1951ರ ರೀತಿ ಪ್ರಕರಣವನ್ನು ದಾಖಲಿಸಿಕೊಂಡಿರುವುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರೂ ಆಗಿರುವ ಗೋವಿಂದಪ್ಪನವರ ನೆಲಮಂಗಲದ ಮನೆಯಲ್ಲಿ ಹಣ ಇದೆ ಎಂದು ಖಚಿತಪಡಿಸಿಕೊಂಡ ನಂತರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 10 ಮಂದಿ ಐಟಿ ಅಧಿಕಾರಿಗಳ ತಂಡ ಮನೆಯನ್ನು ಪರಿಶೀಲಿಸಿದೆ ಎಂದು ಗೊತ್ತಾಗಿದೆ.

 

ದಾಳಿ ವೇಳೆ ಕೋಟ್ಯಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನಾಭರಣೆ ಪತ್ತೆಯಾಗಿದೆ. ನೋಟು ಎಣಿಕೆ ವೇಳೆ ಮನೆಯಲ್ಲಿ ದಾಖಲೆ ಇಲ್ಲದೆ ಬರೋಬ್ಬರಿ 4 ಕೋಟಿ 80 ಲಕ್ಷ ರೂ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts