ಬೆಂಗಳೂರು; ಮತದಾರರಿಗೆ ಲಂಚ, ಆಮಿಷ ಮತ್ತು ಪ್ರಭಾವ ಬೀರಿದ್ದಾರೆ ಎಂಬ ಆರೋಪದಡಿಯಲ್ಲಿ ಚಿಕ್ಕಬಳ್ಳಾಪುರ ಸಂಸದೀಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಡಾ ಕೆ ಸುಧಾಕರ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮತದಾರರಿಗೆ ಆಮಿಷ ಮತ್ತು ಅನಗತ್ಯ ಪ್ರಭಾವ ಆರೋಪಕ್ಕಾಗಿ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಎಫ್‌ಐಆರ್ ಪ್ರತಿ ಮತ್ತು ಈ ಸಂಬಂಧ ಸಲ್ಲಿಕೆಯಾಗಿರುವ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸುಧಾಕರ್ ಅವರ ಆಪ್ತರು ಎನ್ನಲಾದ ಮಾದಾವರ ಗೋವಿಂದಪ್ಪ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ 4.8 ಕೋಟಿ ರು. ಮೌಲ್ಯದ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಡಾ ಕೆ ಸುಧಾಕರ್ ವಿರುದ್ದ ಆರ್‍ಪಿ ಕಾಯ್ದೆ 1951ರ ಅಡಿಯಲ್ಲಿ ಅನುಚಿತ ಪ್ರಭಾವ, ಲಂಚ ಮತ್ತು ಭ್ರಷ್ಟಾಚಾರದ ಪ್ರಯತ್ನಕ್ಕಾಗಿ ಕಲಂ 171 ಬಿ 171ಸಿ 171 ಇ, 171 ಎಫ್ ಭಾರತೀಯ ದಂಡ ಸಂಹಿತೆ ಹಾಗೂ ಕಲಂ 123 ಆರ್‍ಪಿ ಕಾಯ್ದೆ 1951ರ ರೀತಿ ಪ್ರಕರಣವನ್ನು ದಾಖಲಿಸಿಕೊಂಡಿರುವುದು ಎಫ್‌ಐಆರ್‍ನಿಂದ ತಿಳಿದು ಬಂದಿದೆ.
ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರೂ ಆಗಿರುವ ಗೋವಿಂದಪ್ಪನವರ ನೆಲಮಂಗಲದ ಮನೆಯಲ್ಲಿ ಹಣ ಇದೆ ಎಂದು ಖಚಿತಪಡಿಸಿಕೊಂಡ ನಂತರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 10 ಮಂದಿ ಐಟಿ ಅಧಿಕಾರಿಗಳ ತಂಡ ಮನೆಯನ್ನು ಪರಿಶೀಲಿಸಿದೆ ಎಂದು ಗೊತ್ತಾಗಿದೆ.
ದಾಳಿ ವೇಳೆ ಕೋಟ್ಯಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನಾಭರಣೆ ಪತ್ತೆಯಾಗಿದೆ. ನೋಟು ಎಣಿಕೆ ವೇಳೆ ಮನೆಯಲ್ಲಿ ದಾಖಲೆ ಇಲ್ಲದೆ ಬರೋಬ್ಬರಿ 4 ಕೋಟಿ 80 ಲಕ್ಷ ರೂ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದು ತಿಳಿದು ಬಂದಿದೆ.
ಮತದಾರರಿಗೆ ಲಂಚ ನೀಡಲು ಮತ್ತು ಚುನಾವಣಾ ಸಮಯದಲ್ಲಿ ದುರುಪಯೋಗಪಡಿಸಿಕೊಳ್ಳುವುದಕ್ಕಾಗಿ 10 ಕೋಟಿ ರು.ಗಳನ್ನು ಸಂಗ್ರಹಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ನೋಡಲ್ ಅಧಿಕಾರಿ ಐಎಎಸ್ ಮುನೀಶ್ ಮೌದ್ಗಿಲ್ ಅವರ ಮೊಬೈಲ್‌ಗೆ ದೂರು ಬಂದಿತ್ತು.
ಮೌದ್ಗಿಲ್ ಅವರ ಸೂಚನೆ ಮೇರೆಗೆ ಫ್ಲೈಯಿಂಗ್ ಸ್ಕ್ಯಾಡ್‌ನ ಅಧಿಕಾರಿ ದಶರಥ್ ವಿ ಕುಂಬಾರ್ ಎಂಬುವರು ಸ್ಥಳವನ್ನು ಪರಿಶೀಲಿಸಿ ಮಾಹಿತಿಯನ್ನು ಖಚಿತಪಡಿಸಿದ್ದರು. ಯಲಹಂಕ ವಿಧಾನಸಭೆ ಕ್ಷೇತ್ರದ ಎಂಸಿಸಿ ನೋಡಲ್ ಅಧಿಕಾರಿಗ ಮಾಹಿತಿ ನೀಡಲಾಗಿತ್ತು.
ನಂತರ ಆದಾಯ ತೆರಿಗೆ ಅಧಿಕಾರಿಗಳ ನೆರವಿನೊಂದಿಗೆ ಶೋಧ ನಡೆಸಲಾಗಿತ್ತು. ಈ ವೇಳೆ 4.8 ಕೋಟಿ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ಎಫ್‌ಐಆರ್‍ನಿಂದ ಗೊತ್ತಾಗಿದೆ.