ಗೌರಿ ಮೀಡಿಯಾ ಟ್ರಸ್ಟ್‌ಗೆ 15 ಲಕ್ಷ, ನ್ಯೂಸ್‌ ಪ್ಲಸ್‌ಗೆ 18 ಲಕ್ಷ; ಫ್ಯಾಕ್ಟ್‌ಚೆಕ್‌ಗೆ 4(ಜಿ) ಅಧಿಸೂಚನೆ ಬಹಿರಂಗ

ಬೆಂಗಳೂರು; ನಕಲಿ ಖಾತೆಗಳ ಮೂಲಕ ಫೇಕ್‌ ನ್ಯೂಸ್‌ಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವ ಸಂಬಂಧ ರಾಜ್ಯ ಗೃಹ ಇಲಾಖೆಯು ಈಗಾಗಲೇ  ಸ್ಥಾಪಿಸಿರುವ ಘಟಕಗಳನ್ನು ಬದಿಗೊತ್ತಿ  ಸುಳ್ಳು ಸುದ್ದಿ ಪತ್ತೆ, ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವ ಹೆಸರಿನಲ್ಲಿ  ರಾಜ್ಯ ಕಾಂಗ್ರೆಸ್‌ ಸರ್ಕಾರವು  3.19 ಕೋಟಿ ರು  ವೆಚ್ಚ ಮಾಡಲಿದೆ.

 

ಈ ಸಂಬಂಧ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಒಟ್ಟು 5 ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಈ  ಪೈಕಿ  ಗೌರಿ ಮೀಡಿಯಾ ಟ್ರಸ್ಟ್‌ ಕೂಡ ಒಂದಾಗಿದೆ. ಈ ಟ್ರಸ್ಟ್‌ಗೆ  15 ಲಕ್ಷ ರು ಗಳನ್ನು ನೀಡಲಿದೆ.

 

ರಾಜ್ಯದ  ಎಲ್ಲಾ ಜಿಲ್ಲೆಗಳಲ್ಲಿಯೂ ಗೃಹ ಇಲಾಖೆಯು  ಸಾಮಾಜಿಕ ಜಾಲತಾಣ ನಿಗಾ ಘಟಕಗಳನ್ನು  ಅತ್ಯಾಧುನಿಕ ಉಪಕರಣಗಳಿಂದ ಸಜ್ಜುಗೊಳಿಸಿದ್ದರೂ  ಫ್ಯಾಕ್ಟ್‌ಚೆಕ್‌ ಹೆಸರಿನಲ್ಲಿ 5 ಸಂಸ್ಥೆಗಳಿಂದ ಪಡೆಯಲಿರುವ ಸೇವೆಗಾಗಿ 3.19 ಕೋಟಿ ರು. ವೆಚ್ಚ ಮಾಡುತ್ತಿರುವುದು ಗೃಹ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

3 ತಿಂಗಳ ಅವಧಿಗೆ ರಾಜ್ಯದಲ್ಲಿ  ಐಡಿಟಿಯು ಘಟಕ ಸ್ಥಾಪಿಸಲು  5 ಸಂಸ್ಥೆಗಳ ಸೇವೆ ಪಡೆಯಲು ಕೆಟಿಪಿಪಿ ಕಾಯ್ದೆಯ ಕಲಂ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು  2024ರ ಮಾರ್ಚ್‌ 16ಂದು ಅಧಿಸೂಚನೆ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಲಾಜಿಕಲಿ ಇಂಡಿಯಾ ಕಂಪನಿಗೆ 1,15,50,000 ರು.,, ಟ್ರೈಲಿಕಾ 27,25,000 ರು., ಡಾಟಾ ಲೀಡ್ಸ್‌ ಗೆ 1,43,81,840 ರು., ಗೌರಿ ಮೀಡಿಯಾ ಟ್ರಸ್ಟ್‌ಗೆ 15.00 ಲಕ್ಷ ರು., ನ್ಯೂಸ್‌ಪ್ಲಸ್‌ (ಏನ್‌ ಸುದ್ದಿ.ಕಾಂ)ಗೆ 18,00,000 ರು. ಮೊತ್ತ ನಿಗದಿಪಡಿಸಿರುವುದು ಅಧಿಸೂಚನೆಯಿಂದ ತಿಳಿದು ಬಂದಿದೆ.

 

ವಿಶೇಷವೆಂದರೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾರಿಗೊಳಿಸಿರುವ 5 ಗ್ಯಾರಂಟಿಗಳ ಸಮೀಕ್ಷೆ ಕೈಗೊಂಡಿರುವ ಎಂ2ಎಂ ಕಂಪನಿಯ ಪಾಲುದಾರರಲ್ಲಿ ಒಬ್ಬರಾದ  ಸುನೀಲ್‌ ಶಿರಸಂಗಿ ಅವರು ಸಹ-ಸಂಸ್ಥಾಪಕರಾಗಿರುವ ನ್ಯೂಸ್‌ ಪ್ಲಸ್‌ (ಏನ್‌ ಸುದ್ದಿ)ನಿಂದಲೂ  ಫ್ಯಾಕ್ಟ್‌ಚೆಕ್‌ ಮಾಡಿಸಲಿದೆ. ಇದಕ್ಕಾಗಿ 18.00 ಲಕ್ಷ ರು.ಗಳನ್ನು ವೆಚ್ಚ ಮಾಡುತ್ತಿರುವುದು ಅಧಿಸೂಚನೆಯಿಂದ ಗೊತ್ತಾಗಿದೆ.

 

ಈ ಘಟಕವನ್ನು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಣಬ್‌ ಮೊಹಂತಿ ಅವರು ಮೇಲ್ವಿಚಾರಣೆ ನಡೆಸಲಿದ್ದಾರೆ.

 

ಐಡಿಟಿಯು ಘಟಕಕ್ಕೆ  ವಿವಿಧ ತಂಡಗಳು  ಆಸಕ್ತಿ ವ್ಯಕ್ತಪಡಿಸಿದ್ದವು. ಈ ಪೈಕಿ ಗೌರಿ ಮೀಡಿಯಾ ಟ್ರಸ್ಟ್‌ ಸೇರಿದಂತೆ ಒಟ್ಟು 5 ಸಂಸ್ಥೆ, ಕಂಪನಿಗಳನ್ನು ಸರ್ಕಾರವು ಆಯ್ಕೆ  ಮಾಡಿತ್ತು. ಈ ಪಟ್ಟಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಹ ಅನುಮೋದಿಸಿದ್ದರು.

 

ಲಾಜಿಕಲಿ ಇಂಡಿಯಾ, ಟ್ರೈಲಿಕಾ, ಡಾಟಾ ಲೀಡ್ಸ್‌ ಕಂಪನಿಗಳು ಫ್ಯಾಕ್ಟ್‌ ಚೆಕ್‌ ಮಾಡುವುದರಲ್ಲಿ ಸಾಕಷ್ಟು ಅನುಭವ ಹೊಂದಿದೆ. ಇದಕ್ಕಾಗಿ ಮೂಲ ಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನೂ ಹೊಂದಿರುವುದು ಈ ಕಂಪನಿಗಳ ಅಧಿಕೃತ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

 

ಖಾಸಗಿ ಸಂಘ ಸಂಸ್ಥೆಗಳ ಮೂಲಕ ಪರ್ಯಾಯವಾಗಿ ರಚಿಸಲು ಹೊರಟಿರುವ ಫ್ಯಾಕ್ಟ್‌ ಚೆಕ್‌  ಘಟಕಕ್ಕೆ ವಾರ್ಷಿಕ  7.50 ಕೋಟಿ ರು. ವೆಚ್ಚದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

 

ಫ್ಯಾಕ್ಟ್‌ ಚೆಕ್‌ ತಂಡಕ್ಕೆ ವಾರ್ಷಿಕ 50 ಲಕ್ಷ, ವಿಶ್ಲೇಷಣೆ ತಂಡಕ್ಕೆ 6 ಕೋಟಿ ಮತ್ತು ಮೂಲ ಸೌಕರ್ಯಕ್ಕೆ 1 ಕೋಟಿ ರು,  ಅದೇ ರೀತಿ ವಿಶ್ಲೇಷಣೆ ತಂಡಕ್ಕೆ ಮೂಲ ಸೌಕರ್ಯಗಳಿಗೆ 1 ಕೋಟಿ, ತಾಂತ್ರಿಕ ಪರವಾನಗಿಗೆ 2.5 ಕೋಟಿ ರು., ಮಾನವ ಸಂಪನ್ಮೂಲಕ್ಕೆ 1.5ಕೋಟಿ, ಕಾರ್ಯಕ್ರಮಗಳ ನಿರ್ವಹಣೆಗಾಗಿ 1.0 ಕೋಟಿ ರು. ಆಗಲಿದೆ ಎಂದು ವೆಚ್ಚದ ಮಾಹಿತಿಯು ಪ್ರಸ್ತಾವನೆಯಲ್ಲಿತ್ತು.

 

ಸೆಂಟರ್‍‌ ಅಫ್‌ ಎಕ್ಸ್‌ಲೆನ್ಸ್‌ ಸೈಬರ್‍‌ ಸೆಕ್ಯೂರಿಟಿಯ ಮುಖ್ಯಸ್ಥ ಕಾರ್ತಿಕ್‌ ಬಪ್ಪನಾಡು ಅವರು ಈ ಪ್ರಸ್ತಾವನೆಯನ್ನು ಪ್ರಾತ್ಯಕ್ಷಿಕೆಯೊಂದಿಗೆ ಸರ್ಕಾರಕ್ಕೆ ವಿವರಿಸಿದ್ದಾರೆ. ತಪ್ಪು ಮಾಹಿತಿ ಮತ್ತು ದುರ್ಮಾಹಿತಿಗಳ ನಡುವಿನ ವ್ಯತ್ಯಾಸದ ಕುರಿತು ಉದಾಹರಣೆಗಳನ್ನು ನೀಡಿತ್ತು.

 

‘ಆರಂಭದ ನಾಲ್ಕು ತಿಂಗಳವರೆಗೆ ಸದರಿ ಘಟಕವನ್ನು ಕಾರ್ಯಗತಗೊಳಿಸುವಲ್ಲಿ ಸಹಾಯವಾಗುವಲ್ಲಿ ಕೆ-ಟೆಕ್‌ ಸೆಂಟ್‌ ಆಫ್‌ ಎಕ್ಸಲೆನ್ಸ್‌ ಸೈಬರ್‍‌ ಸೆಕ್ಯೂರಿಟಿ , ಮಾಹಿತಿ ತಂತ್ರಜ್ಞಾನ ಇಲಾಖೆಯ ವತಿಯಿಂದ ಗೃಹ ಇಲಾಖೆಗೆ ತಾಂತ್ರಿಕ ಬೆಂಬಲ ನೀಡಲಾಗುವುದು. ಹಾಗೂ ಮುಂದಿನ ಹಂತವನ್ನು ಗೃಹ ಇಲಾಖೆಯೇ ಘಟಕದ ಕಾರ್ಯಾಚರಣೆ ಮುಂದುವರೆಸಲಿದೆ,’ ಎಂದು ಸಭೆಯಲ್ಲಿ ಮಾಹಿತಿ ಒದಗಿಸಿದ್ದರು.

 

ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣ ನಿಗಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ವಿಧಾನಸಭೆಗೆ ಉತ್ತರ ನೀಡಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಫೇಕ್‌ ನ್ಯೂಸ್‌ಗಳನ್ನು ಹರಡುವವರ ವಿರುದ್ಧ ರಾಜ್ಯ ಸರ್ಕಾರವು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ಹರೀಶ್‌ ಪೂಂಜಾ ಅವರು ನಿಯಮ 73 ಅಡಿಯಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು.

 

ಉತ್ತರದಲ್ಲೇನಿತ್ತು?

 

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ ಸ್ಥಾಪಿಸಲಾಗಿದೆ. ಈ ಎಲ್ಲಾ ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌ಗಳನ್ನು ಅತ್ಯಾಧುನಿಕ ಉಪಕರಣಗಳಿಂದ ಸಜ್ಜುಗೊಳಿಸಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.

 

ಈ ಘಟಕಗಳು ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್‌,   ಇನ್ಸ್ಟಾಗ್ರಾಂ, ಎಕ್ಸ್‌ (ಟ್ವಿಟ್ಟರ್‍‌) , ಯೂ ಟ್ಯೂಬ್‌ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುತ್ತಾರೆ.

 

ಯಾವುದಾದರೂ ಸುಳ್ಳು ಸುದ್ದಿ, ಪ್ರಚೋದನಾತ್ಮಕ ಸಂದೇಶ ಕಂಡುಬಂದಲ್ಲಿ ಕೂಡಲೇ ಆಯಾ ಘಟಕಗಳ ಮಟ್ಟದಲ್ಲಿಯೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈವರೆಗೆ ಒಟ್ಟು 155 ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.

 

ಬೆಂಗಳೂರು ನಗರದಲ್ಲಿ 60, ಮಂಗಳೂರು ನಗರದಲ್ಲಿ 25, ಬೆಳಗಾವಿ ನಗರದಲ್ಇ 8, ಕಲ್ಬುರ್ಗಿ ನಗರದಲ್ಲಿ 11, ಕೆಜಿಎಫ್‌ನಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 1, ಉತ್ತರ ಕನ್ನಡದಲ್ಲಿ 28, ವಿಜಯನಗರದಲ್ಲಿ 8, ಹಾವೇರಿಯಲ್ಲಿ 1, ಬಳ್ಳಾರಿಯಲ್ಲಿ 2, ಬೀದರ್‍‌ನಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ಸದನಕ್ಕೆ ಮಾಹಿತಿ ಒದಗಿಸಿದ್ದರು.

 

ಫ್ಯಾಕ್ಟ್ ಚೆಕ್ ಸಮಿತಿ ಕಾರ್ಯನಿರ್ವಹಣೆ ಹೇಗಿರುತ್ತದೆ?

 

ಫ್ಯಾಕ್ಟ್ ಚೆಕಿಂಗ್ ತಂಡ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲನೆ ನಡೆಸಲಿದೆ. ಹಾಗೂ ಸುದ್ದಿಯ ಮೂಲ ಪತ್ತೆಗೆ ಕೆಲಸ ಮಾಡಲಿದೆ. ವಿಶ್ಲೇಷಣಾ ತಂಡ ಸುಳ್ಳು ಮಾಹಿತಿಯ ಸೃಷ್ಟಿಯ ಬಗ್ಗೆ ಹಾಗೂ ಇದರ ಪರಿಣಾಮದ ಬಗ್ಗೆ ನಿಗಾ ಇಡಲಿದೆ. ಹಾಗೂ ಸುಳ್ಳು ಸುದ್ದಿಯ ಬಗ್ಗೆ ಪೂರ್ವ ಮಾಹಿತಿಯನ್ನು ನೀಡಲಿದೆ.

ಸುಳ್ಳು ಸುದ್ದಿ ವಿಶ್ಲೇಷಣೆಗೆ 6 ಕೋಟಿ ಸೇರಿ ಫ್ಯಾಕ್ಟ್‌ ಚೆಕ್‌  ಘಟಕಕ್ಕೆ ವಾರ್ಷಿಕ 7.50 ಕೋಟಿ ರು. ವೆಚ್ಚದ ಪ್ರಸ್ತಾವ

 

ಸಾಮರ್ಥ್ಯ ಬಲವರ್ಧನೆ ತಂಡ, ಸುಳ್ಳು ಸುದ್ದಿಯ ಬಗ್ಗೆ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಲಿದೆ. ಈ ಎಲ್ಲಾ ತಂಡಗಳ ಕಾರ್ಯ ನಿರ್ವಹಣೆಯನ್ನು ಮೇಲುಸ್ತುವಾರಿ ಸಮಿತಿ ವಹಿಸಲಿದೆ.

 

 

ಫ್ಯಾಕ್ಟ್ ಚೆಕ್ ಪ್ರಕ್ರಿಯೆ ಹೇಗೆ?

 

ಸಾರ್ವಜನಿಕರು ಸುಳ್ಳು ಸುದ್ದಿಯ ಬಗ್ಗೆ ದೂರು ನೀಡಬಹುದು ಹಾಗೂ ಫ್ಯಾಕ್ಟ್ ಚೆಕ್ ಏಜೆನ್ಸಿಗಳು ಸುಳ್ಳು ಸುದ್ದಿಯ ಬಗ್ಗೆ ಪರಿಶೀಲನೆ ನಡೆಸಲಿದೆ.

 

ದೂರು ಸಲ್ಲಿಕೆಯಾದ ಕೂಡಲೇ ಫ್ಯಾಕ್ಟ್ ಚೆಕ್ ಸಮಿತಿ ಪ್ರಾಥಮಿಕ ಪರಿಶೀಲನೆ ನಡೆಸಲಿದೆ. ಈ ಮಾಹಿತಿಯ ಸಾರ್ವಜನಿಕ ವಲಯದಲ್ಲಿ ಲಭ್ಯವಿದೆಯೇ ಎಂದು ಪರಿಶೀಲನೆ ನಡೆಸಲಿದೆ. ಇದು ಪೂರ್ಣಗೊಂಡ ಬಳಿಕ ಮೊದಲ ಹಂತದ ವಿಶ್ಲೇಷಣೆ ಮಾಡಲಿದೆ. ನಂತರ ಅಂತಿಮ ವರದಿಯನ್ನು ಸಲ್ಲಿಸಲಿದೆ.

 

ಈ ವರದಿಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಮೇಲುಸ್ತುವಾರಿ ಸಮಿತಿ ವಿಶ್ಲೇಷಣೆ ಮಾಡಲಿದೆ. ಸುಳ್ಳು ಸುದ್ದಿಯ ವಿರುದ್ಧ ಕಾನೂನು ಕ್ರಮದ ಅಗತ್ಯವಿದ್ದರೆ ಪೊಲೀಸ್ ದೂರು ದಾಖಲಿಸಲಿದೆ. ಹಾಗೂ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸಲಿದೆ ಎಂದು ಮಾಹಿತಿ ಒದಗಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts