ಬೆಂಗಳೂರು; ಜೋಕುಮಾರ ಕೆರೆ ಆಸ್ತಿ, ರಸ್ತೆ ಅತ್ರಿಕ್ರಮಣ ಮತ್ತು ಸಾರ್ವಜನಿಕ ಕೊಳವೆ ಬಾವಿಯನ್ನು ಸಾರ್ವಜನಿಕರಿಗೆ ಬಿಟ್ಟುಕೊಡದೇ ಕೇವಲ ತಮ್ಮ ಮಠಕ್ಕೆ ಉಪಯೋಗಿಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು ಎಂಬ ಗುರುತರವಾದ ಆರೋಪಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಅವರು ಗುರಿಯಾಗಿದ್ದರು ಎಂಬ ಪ್ರಕರಣ ಇದೀಗ ದಿಢೀರ್ ಎಂದು ಮುನ್ನೆಲೆಗೆ ಬಂದಿದೆ.
ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪ ಕಾರ್ಯದರ್ಶಿ ರಮೇಶ್ ಪಿ ಕೋನರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ವರದಿಯನ್ನೂ ನೀಡಿದ್ದರು. ಈ ವರದಿ ಆಧರಿಸಿ ಹಿಂದಿನ ಬಿಜೆಪಿ ಸರ್ಕಾರವು ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆಯ ಪ್ರಸ್ತಾವನೆಯನ್ನೇ ತಿರಸ್ಕರಿಸಿತ್ತು.
ಲೋಕಸಭೆ ಚುನಾವಣೆಗೆ ಪ್ರಹ್ಲಾದ್ ಜೋಷಿ ಅವರ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಅವರು ಸ್ಪರ್ಧಿಸಿರುವ ಹೊತ್ತಿನಲ್ಲೇ ಲೋಕಾಯುಕ್ತ ಪ್ರಕರಣವು ಮುನ್ನೆಲೆಗೆ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಕರಣ ಕುರಿತಾದ ಉಪ ಲೋಕಾಯುಕ್ತರ ಸಮಗ್ರ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದ ವಿವರ
ಮಠದ ಟ್ರಸ್ಟಿ ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಜಮೀನಿಗೆ ಅನುಕೂಲವಾಗುವಂತೆ ಮಾದಾಪುರದಿಂದ ಬಾಳೆಹೊಸೂರು ಕಡೆಗೆ ಹಾಗೂ ಯಲ್ಲಾಪುರದಿಂದ ಬಾಳೆಹೊಸೂರು ಕಡೆಗೆ ಬರುವ ರಸ್ತೆಯನ್ನು ಅತ್ರಿಕಮಣ ಮಾಡಿ ಅಲ್ಲಿ ಸಿಮೆಂಟ್ ಇಟ್ಟಿಗೆ ತಯಾರಿಸುತ್ತಿದ್ದರು. ಸಾರ್ವಜನಿಕ ಕೊಳವೆ ಬಾವಿಯನ್ನು ಸ್ವಾಮೀಜಿ ಸಾರ್ವಜನಿಕರಿಗೆ ಬಿಟ್ಟುಕೊಡದೇ ಕೇವಲ ತಮ್ಮ ಮಠಕ್ಕೆ ಉಪಯೋಗಿಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು ಎಂದು ಫಕಿರೇಶ್ ಎಂಬುವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಅಲ್ಲದೆ ರಾಜ್ಯ ಹೆದ್ದಾರಿಯನ್ನು ನಿರ್ಮಿಸಲು ಕೆರೆ ಒತ್ತುವರಿ ಮಾಡಲಾಗಿತ್ತು. ಆದರೆ ನ್ಯಾಯಾಲಯದ ಆದೇಶದಂತೆ ಹೆದ್ದಾರಿ ನಿರ್ಮಾಣ ಮಾಡಿರಲಿಲ್ಲ. ರಾಜ್ಯದ ಹೆದ್ದಾರಿ ನಂ 136ರಲ್ಲಿ ಮಠ ಕಟ್ಟಲಾಗಿತ್ತು. ರಾಜ್ಯ ಹೆದ್ದಾರಿ 136ರ ಕೆರೆಯಲ್ಲಿ ಉತ್ತರ-ದಕ್ಷಿಣ 75 ಹಾಗೂ ಪೂರ್ವ-ಪಶ್ಚಿಮ 750 ಅಡಿ ಅತಿಕ್ರಮಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಸಾರ್ವಜನಿಕ ಜೋಕುಮಾರನ ಕೆರೆ, ಗ್ರಾಮದ ಆಸ್ತಿಯಾಗಿದ್ದರೂ ಮಠದ ಸ್ವಾಮೀಜಿ ತಮ್ಮ ಹೆಸರಿಗೆ ಕೆರೆ ಆಸ್ತಿಯನ್ನು ಕಾನೂನು ಬಾಹಿರವಾಗಿತ್ತು ಪಡೆದಿದ್ದರು. ಹಾಗೆಯೇ ಸ್ವಾಮೀಜಿ ನಿರ್ದೇಶನದ ಮೇರೆಗೆ ಕಾನೂನುಬಾಹಿರವಾಗಿ ಮಠಕ್ಕೆ ಬಿಟ್ಟುಕೊಟ್ಟಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಈ ಪ್ರಕರಣದಲ್ಲಿ ಶಿರಹಟ್ಟಿ ತಾಲೂಕು ಪಿಡಬ್ಲ್ಯೂಡಿ ಜ್ಯೂನಿಯರ್ ಎಂಜಿನಿಯರ್ ಎಲ್ ಎ ಬಾಲಿ, ಪ್ರಭಾರ ತಹಶೀಲ್ದಾರ್ ಆಗಿದ್ದ ರಮೇಶ್ ಕೋನರೆಡ್ಡಿ (ಹಾಲಿ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ), ತಹಶೀಲ್ದಾರ್ ಆರ್ ಡಿ ಉಪ್ಪಿನ, ಬಾಳೆಹೊಸೂರು ಗ್ರಾಮ ಲೆಕ್ಕಿಗ ಕೆ ಎನ್ ಪಾಟೀಲ್, ರಾಜಸ್ವ ನಿರೀಕ್ಷಕ ಎಫ್ ಎನ್ ಹುಬ್ಬಳ್ಳಿ, ಭೂಮಾಪಕ ಯು ಕೆ ದಂಡಾಪುರ, ಪಿಡಿಒ ಎಂ ಎಸ್ ಲಕ್ಷ್ಮೇಶ್ವರ, ಪಿಡಬ್ಲ್ಯೂಡಿ ಎಇಇ ಎಲ್ ವೈ ಮಾಳೋಡೆ ಅವರ ವಿರುದ್ಧ ಕರ್ತವ್ಯಲೋಪ/ದುರ್ವರ್ತನೆ ಎಸಗಿದ್ದರು ಎಂದು ಆರೋಪಿಸಲಾಗಿತ್ತು.
ಈ ದೂರಿನ ಕುರಿತು ಉಪ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎನ್ ಆನಂದ್ ಅವರು ಲೋಕಾಯುಕ್ತ ಕಾಯ್ದೆ ಕಲಂ 9ರ ಅಡಿಯಲ್ಲಿ ತನಿಖೆ ನಡೆಸಿ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 12(3) ಅನ್ವಯ ವರದಿ ಸಲ್ಲಿಸಿದ್ದರು.
ವರದಿಯಲ್ಲೇನಿತ್ತು?
ತಹಶೀಲ್ದಾರ್ ವರದಿಯಂತೆ 1985-86ರ ನಂತರದಲ್ಲಿ ಗ್ರಾಮದ ಆಸ್ತಿ ಸಂಖ್ಯೆ 223/1 ಜೋಕುಮಾರನ ಕೆರೆ ಅಂದಾಜು 2 ಹೆಕ್ಟೇರ್ ಎಂದು ದಾಖಲಿಸಿದ್ದನ್ನು ತೆಗೆದು ಹಾಕಲಾಗಿತ್ತು. 1985-86ರ ಪೂರ್ವದಲ್ಲಿದ್ದಂತೆ ದಾಖಲಿಸಲು ದಿಂಗಾಲೇಶ್ವರ ಸ್ವಾಮಿಗಳು ಬಾಳೆಹೊಸೂರು ಗ್ರಾಮದ ಪಿಡಿಇಒ ಅವರಿಗೆ 2014ರ ಜುಲೈ 20ರಂದು ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ವರದಿ ಪ್ರಕಾರ 1985-86ರಿಂದ 2014ರವರೆಗೂ ಆಸ್ತಿ ಸಂಖ್ಯೆ 223ರಲ್ಲಿ ಆಸ್ತಿ ಸಂಖ್ಯೆ 223/1 ಜೋಕುಮಾರನ ಕೆರೆ ಅಂದಾಜು 2 ಹೆಕ್ಟೇರ್ ಎಂದು ದಾಖಲಾಗಿದೆ.
ಸುಮಾರು 28 ವರ್ಷಗಳವರೆಗೆ ಸತತವಾಗಿ ಗ್ರಾಮದ ಆಸ್ತಿ 223ರಲ್ಲಿ ಆಸ್ತಿ ಸಂ. 223/1 ಜೋಕುಮಾರನ ಕೆರೆ ಅಂದಾಜು 2 ಹೆಕ್ಟೇರ್ ಎಂದು ಇದೆ. ಸತತವಾಗಿ 28 ವರ್ಷಗಳವರೆಗೆ ದಾಖಲೆಯಲ್ಲಿದ್ದ ಆಸ್ತಿ ಸಂಖ್ಯೆ 223/1 ಜೋಕುಮಾರನ ಕೆರೆ ಅಂದಾಜು 2 ಹೆಕ್ಟೇರ್ ಎಂಬುದನ್ನು ಬಾಳೆಹೊಸೂರು ಗ್ರಾಮ ಪಂಚಾಯತ್ ಪಿಡಿಒ, 28 ವರ್ಷಗಳ ನಂತರ ಗ್ರಾಮ ಸಭೆಯಲ್ಲಿ ಚರ್ಚಿಸಿ ದಾಖಲಾತಿಯನ್ನು ತೆಗೆದು ಹಾಕಿದ್ದರು. ಅಖಂಡ 223 ಆಸ್ತಿಯು ಶ್ರೀ ಜಗದ್ಗುರು ದಿಂಗಾಲೇಶ್ವರ ಸಂಸ್ಥಾನ ಮಠ ಎಂದು ಠರಾವು ಪಾಸು ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.
ಈ ರೀತಿಯಾಗಿ ದಾಖಲೆಯಲ್ಲಿದ್ದ ಆಸ್ತಿಯನ್ನು ತೆಗೆದುಹಾಕುವುದು, ಮಠದ ಹೆಸರಿನಲ್ಲಿ ಆಸ್ತಿಯನ್ನು ವರ್ಗಾಯಿಸಿದಂತೆ ಆಗುತ್ತದೆ. ಅಂತಹ ಆಸ್ತಿ ವರ್ಗಾವಣೆಯನ್ನು ಕೇವಲ ಸಿವಿಲ್ ನ್ಯಾಯಾಲಯದ ಆದೇಶದನ್ವಯ ಮಾತ್ರ ಮಾರ್ಪಡಿಸಲು ಅವಕಾಶವಿದೆಯೆ ಹೊರತು ಗ್ರಾಮ ಸಭೆಯ ಠರಾವಿನ ಮೂಲಕ ಈ ಹಕ್ಕನ್ನು ಮಠದ ಹೆಸರಿಗೆ ವರ್ಗಾಯಿಸಲು ಅಥವಾ ತಿದ್ದುಪಡಿ ಮಾಡಲು ಗ್ರಾಮ ಪಂಚಾಯತ್‌ಗೆ ಯಾವುದೇ ಹಕ್ಕು ಇಲ್ಲ.
ಈ ರೀತಿ ಖಾತೆ ಬದಲಾವಣೆ ಮಾಡಿರುವುದು ಕಾನೂನುಬಾಹಿರವಾಗಿದೆ. ಅದೇ ರೀತಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಲಾಗಿದ್ದು ಎದುರುದಾರರು ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 19549/2011 ಮತ್ತು ಸಿಸಿಸಿ ಸಂ 2264/2011ರ ಅದೇಶಗಳಲ್ಲಿ ನೀಡಿದ್ದ ನಿರ್ದೇಶನವನ್ನೂ ಪಾಲಿಸಿಲ್ಲ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಹಿಂದಿನ ತಹಶೀಲ್ದಾರ್ ರಮೇಶ್ ಪಿ ಕೋನರೆಡ್ಡಿ ಸೇರಿದಂತೆ ಇತರ ಎದುರುದಾರರು ತಮ್ಮ ವಿರುದ್ಧದ ನಡವಳಿಯನ್ನು ಕೈಬಿಡಲು ಸೂಕ್ತ, ಸಮಂಜಸ, ಸಮಾಧಾನಕರ ಕಾರಣ ತೋರಿಸಿಲ್ಲ ಎಂದು ಉಪಲೋಕಾಯುಕ್ತರು ಅಭಿಪ್ರಾಯಿಸಿದ್ದರು.
ಕಡತದಲ್ಲಿರುವ ಸಂಗತಿಗಳು ಮತ್ತು ದಾಖಲಾತಿಗಳಿಂದ ಎರಡನೇ ಎದುರುದಾರ ರಮೇಶ್ ಪಿ ಕೋನರೆಡ್ಡಿ ಸೇರಿದಂತೆ 7, 10, 11ನೇ ಎದುರುದಾರರು ಸರ್ಕಾರಿ/ಸಾರ್ವಜನಿಕ ನೌಕರರಾಗಿ ಪರಿಪೂರ್ಣ ಪ್ರಾಮಾಣಿಕತೆ, ಸಂಪೂರ್ಣ ಕರ್ತವ್ಯ ನಿಷ್ಠತೆ ಮತ್ತು ಸರ್ಕಾರಿ ಸೇವಕರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡ ದುವರ್ತನೆ, ದುರ್ನಡತೆ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ವರದಿಯಲ್ಲಿ ಅಭಿಪ್ರಾಯಿಸಿದ್ದರು.
ಹೀಗಾಗಿ ಇವರ ವಿರುದ್ಧ ಇಲಾಖಾ ಶಿಸ್ತು ಕ್ರಮಕೈಗೊಳ್ಳಲು ಕರ್ನಾಟಕ ಲೋಕಾಯುಕ್ತ ಕಾಯಿದೆ ಕಲಂ 12(3) ಅಡಿ ಅಧಿಕಾರದಡಿಯಲ್ಲಿ ಕೆಸಿಎಸ್‌ಆರ್ ಇಯಮ 214(2)ಬಿ (i)ಅಡಿ ಇಲಾಖೆ ವಿಚಾರಣೆಗೆ ಅನುಮತಿ ನೀಡಿ ಲೋಕಾಯುಕ್ತ ಸಂಸ್ಥೆಗೆ ವಹಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಆನಂದ ಅವರು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
ಆದರೆ ಗದಗ್ ಜಿಲ್ಲಾಧಿಕಾರಿಯು ‘ಉಚ್ಛ ನ್ಯಾಯಾಲಯವು ಮನವಿದಾರರ ಅರ್ಜಿಗಳನ್ನು ವಜಾಗೊಳಿಸಿರುವುದರಿಂದ ಬಾದಿತರು ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 136 (i)(ii)ರಡಿ ಮೇಲ್ಮನವಿ ಪ್ರಾಧಿಕಾರದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿರುವ ಪ್ರಕರಣವಾಗಿರುತ್ತದೆ,’ ಎಂದು 2020ರ ಜನವರಿ 22ರಂದು ಅಭಿಪ್ರಾಯ ನೀಡಿದ್ದರು.
ಜೋಕುಮಾರನ ಕೆರೆಯ ಆಸ್ತಿಯನ್ನು ಜಗದ್ಗುರು ದಿಂಗಾಲೇಶ್ವರ ಸಂಸ್ಥಾನ ಮಠದ ಸ್ವಾಮೀಜಿ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿದ್ದ ಅಂದಿನ ತಹಶೀಲ್ದಾರ್ ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪ ಕಾರ್ಯದರ್ಶಿ ರಮೇಶ್ ಪಿ ಕೋನ ರೆಡ್ಡಿ ಅವರ ವಿರುದ್ಧದ ಇಲಾಖೆ ವಿಚಾರಣೆ ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸಲು ಸೂಕ್ತವಾಗಿಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವು ಅನುಮೋದಿಸಿತ್ತು. ಅಲ್ಲದೇ ಉಪ ಲೋಕಾಯುಕ್ತರ ಪ್ರಸ್ತಾವನೆಯನ್ನೇ ತಿರಸ್ಕರಿಸಿದ್ದರು.
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 8(1)(ಬಿ) ಅನ್ವಯ ಲೋಕಾಯುಕ್ತ, ಉಪ ಲೋಕಾಯುಕ್ತರು ಯಾವುದೇ ವಿಚಾರಣೆ ಅಥವಾ ತನಿಖೆ ನಡೆಸಲು ಅವಕಾಶ ಇಲ್ಲದ ಕಾರಣ ಪ್ರಕರಣವನ್ನು ಉಪಲೋಕಾಯುಕ್ತರಿಗೆ ವಹಿಸುವುದು ಸೂಕ್ತವಾಗಿರುವುದಿಲ್ಲ,’ ಎಂದು ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್ ಅಶೋಕ್ ಅವರು ಅಭಿಪ್ರಾಯಿಸಿದ್ದನ್ನು ಸ್ಮರಿಸಬಹುದು.