ಬೆಂಗಳೂರು; ಪ್ರಾದೇಶಿಕ ನಿರ್ದೇಶಕರ ನೇಮಕಾತಿಯಲ್ಲಿ ಅಕ್ರಮಗಳು ನಡೆದಿದೆ ಎನ್ನಲಾಗಿರುವ ಪ್ರಕರಣದಲ್ಲಿ ನ್ಯಾಯಮೂರ್ತಿ ಭಕ್ತವತ್ಸಲ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನಾಧರಿಸಿ ಮುಕ್ತ ವಿಶ್ವವಿದ್ಯಾಲಯವು ಹಲವು ವರ್ಷಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಅಲ್ಲದೇ ನಿಯಮಬಾಹಿರವಾಗಿ ನೇಮಕವಾಗಿರುವ ಪ್ರಾದೇಶಿಕ ನಿರ್ದೇಶಕರನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರು ಹೊರಡಿಸಿದ್ದ ಆದೇಶವೂ ಪಾಲನೆಯಾಗಿಲ್ಲ. ಬದಲಿಗೆ ಪ್ರಾದೇಶಿಕ ನಿರ್ದೇಶಕರುಗಳಿಗೆ ಉನ್ನತ ಸ್ಥಾನ ಕರುಣಿಸುತ್ತಿದೆ.
ಇದಕ್ಕೆ ಚಾಮರಾಜನಗರ ಪ್ರಾದೇಶಿಕ ನಿರ್ದೇಶಕರಾಗಿರುವ ಮಹದೇವು ಅವರ ಪ್ರಕರಣವೇ ಸಾಕ್ಷಿ. ಮಹದೇವು ಅವರನ್ನು ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳ ಕಾರ್ಯಾಲಯಕ್ಕೆ ವಿಶೇಷಾಧಿಕಾರಿ ಹುದ್ದೆಗೆ ನೇಮಿಸಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಂತಾಗಿದೆ.
ಮಹದೇವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋದರ ಸಂಬಂಧಿ ಎಂಬ ಕಾರಣಕ್ಕೆ ವಿಶೇಷಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಅಲ್ಲದೇ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಚಾಮರಾಜನಗರದ ಪ್ರಾದೇಶಿಕ ಕೇಂದ್ರದಲ್ಲಿ ಮಹದೇವು ಅವರು ತಾತ್ಕಾಲಿಕ ಪ್ರಾದೇಶಿಕ ನಿರ್ದೇಶಕರಾಗಿದ್ದ ಅವಧಿಯಲ್ಲಿಯೇ ಪರೀಕ್ಷೆ ನಡೆಯುವ ಹಿಂದಿನ ದಿನವೇ ವಾಟ್ಸಾಪ್ ಮೂಲಕ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಎಫ್‌ಐಆರ್ 53/2023) ದಾಖಲಾಗಿದೆ. ಸದ್ಯ ಮೈಸೂರಿನ ಸಿಸಿಬಿ ಪೊಲೀಸ್ ಠಾಣೆಯಲ್ಲಿ ತನಿಖೆಯೂ ನಡೆಯುತ್ತಿದೆ.
ಈ ಪ್ರಕರಣವು ಇನ್ನೂ ತನಿಖಾ ಹಂತದಲ್ಲಿರುವ ಹೊತ್ತಿನಲ್ಲಿಯೇ ಮಹದೇವ ಅವರನ್ನು ಕುಲಪತಿಗಳ ಕಾರ್ಯಾಲಯಕ್ಕೆ ವಿಶೇಷಾಧಿಕಾರಿ ಹುದ್ದೆ ನೀಡಿರುವುದು ವಿಶ್ವವಿದ್ಯಾಲಯದ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರು 2024ರ ಫೆ.21ರಂದೇ ಆದೇಶ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಕುಲಪತಿಗಳ ಆದೇಶದನ್ವಯ ವಿಶ್ವವಿದ್ಯಾಲಯದ ಸುಸೂತ್ರ ಆಡಳಿತ ನಿರ್ವಹಣೆ ದೃಷ್ಟಿಯಿಂದ ಹಾಗೂ ಕುಲಪತಿಗಳ ಕಾರ್ಯಾಲಯದ ಕಾರ್ಯದೊತ್ತಡವನ್ನು ಸರಿದೂಗಿಸಲು ಮಹದೇವ ಅವರನ್ನು ಕುಲಪತಿಗಳ ಕಾರ್ಯಾಲಯಕ್ಕೆ ವಿಶೇಷಾಧಿಕಾರಿಯಾಗಿ ನೇಮಕ ಮಾಡಲಾಗಿದೆ,’ ಎಂದು ಕುಲಸಚಿವರು ಆದೇಶದಲ್ಲಿ ಹೇಳಿದ್ದಾರೆ.
ಅಲ್ಲದೇ ಬಳ್ಳಾರಿಯಲ್ಲಿನ ಪ್ರಾದೇಶಿಕ ಕೇಂದ್ರ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿಯೂ ಪರೀಕ್ಷಾ ಪುಸ್ತಕ ಮತ್ತು ಮೊಬೈಲ್ ಪೋನ್ ಬಳಸಿ ಸಾಮೂಹಿಕ ನಕಲು ಪ್ರಕರಣವೂ ನಡೆದಿತ್ತು. ಈ ಎರಡೂ ಪ್ರಕರಣಗಳಲ್ಲಿಯೂ ಪ್ರಾದೇಶಿಕ ಕೇಂದ್ರ ಮತ್ತು ಪರೀಕ್ಷಾ ಕೇಂದ್ರದ ನಿರ್ದೇಶಕರುಗಳು ಮತ್ತು ಪರೀಕ್ಷಾಂಗ ವಿಭಾಗದ ಕುಲಸಚಿವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಂದ್ರದ ಬೋಧಕ ಮತ್ತು ಬೋಧಕೇತರ ವರ್ಗವು ಒತ್ತಾಯಿಸಿತ್ತು.
ಆದರೆ ಉನ್ನತ ಶಿಕ್ಷಣ ಇಲಾಖೆಯಾಗಲೀ ವಿಶ್ವವಿದ್ಯಾಲಯವಾಗಲೀ ಈ ಬಗ್ಗೆ ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಬದಲಿಗೆ ಎಫ್‌ಐಆರ್ ಆಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂದೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಆಯಾ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಹಾಗೂ ಪರೀಕ್ಷಾಂಗ ಕುಲಸಚಿವರನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಹೇಳಿ ಕೈ ತೊಳೆದುಕೊಂಡಿತ್ತು.
ಈ ಸಂಬಂಧ 2023ರ ಡಿಸೆಂಬರ್ 1ರಂದು ನಡೆದಿದ್ದ ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಈ ಅಂಶವನ್ನು ದಾಖಲಿಸಿತ್ತು.
ಸಭೆ ನಡೆದ ಎರಡು ತಿಂಗಳೊಳಗೇ ಮುಕ್ತ ವಿವಿಯ ಸಿದ್ಧಪಾಠ ವಿಭಾಗಕ್ಕೆ ಮಹದೇವ ಅವರನ್ನು 2024ರ ಫೆ.3ರಂದು ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಆದೇಶ ಹೊರಬಿದ್ದ ಕೆಲವೇ ಕೆಲವು ದಿನಗಳಲ್ಲಿ ಮಹದೇವ ಅವರನ್ನು ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
‘ಚಾಮರಾಜನಗರ ಪ್ರಾದೇಶಿಕ ಕೇಂದ್ರದ ನಿರ್ದೇಶಕರನ್ನೂ ಒಳಗೊಂಡಂತೆ, ಪ್ರಾದೇಶಿಕ ಕೇಂದ್ರದಗಳಿಗೆ ನೇಮಕವಾಗಿರುವ ತಾತ್ಕಾಲಿಕ ಪ್ರಾದೇಶಿಕ ನಿರ್ದೇಶಕರನ್ನು ಮೈಸೂರಿನ ಕೇಂದ್ರ ಕಛೇರಿಯಲ್ಲಿ ಕೂರಿಸಿದಂತಾಗುತ್ತದೆ. ಪ್ರಾದೇಶಿಕ ಕೇಂದ್ರಗಳಿಗೆ ನೇಮಕವಾದ ಈ ತಾತ್ಕಾಲಿಕ ನಿರ್ದೇಶಕರುಗಳಿಗೆ ಕರಾಮುವಿಯ ಮೈಸೂರು ಕಚೇರಿಯಲ್ಲಿ ಏನು ಕೆಲಸ,’ ಎಂದು ಪ್ರಶ್ನಿಸುತ್ತಾರೆ ವಿಶ್ವವಿದ್ಯಾಲಯದ ಮತ್ತೊಬ್ಬ ಹಿರಿಯ ಪ್ರಾಧ್ಯಾಪಕ.