ಹೊರರಾಜ್ಯದ ಅಕ್ಬರ್‌ ಎಂಬಾತನಿಂದ ರಾಜ್ಯದ ಸರ್ಕಾರಿ ವಾಹನ ಬಳಕೆ; ಬಹಿರಂಗವಾಗದ ಪರಿಶೀಲನಾ ವರದಿ

ಬೆಂಗಳೂರು; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ವಾಹನವನ್ನು ಹೊರ ರಾಜ್ಯದ ಖಾಸಗಿ ವ್ಯಕ್ತಿಯೊಬ್ಬರು ಬಳಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಾಸ್ತವಾಂಶದ ಪರಿಶೀಲನಾ ವರದಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ.

 

ಅಲ್ಪಸಂಖ್ಯಾತರ ಕಲ್ಯಾಣ  ಮತ್ತು ವಸತಿ ಸಚಿವರೊಂದಿಗೆ ಅನೇಕ ರೀಲ್ಸ್‌, ವಿಡಿಯೋ ಮಾಡಿದ್ದ ಖಾಸಗಿ ವ್ಯಕ್ತಿ ಅಕ್ಬರ್‍‌ ಎಂಬಾತ  ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಮತ್ತು ಈತ  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ್ದ ಸರ್ಕಾರಿ ವಾಹವನ್ನು ಬಳಸಿದ್ದ ಎಂಬ ಆರೋಪವೂ ಕೇಳಿ ಬಂದಿತ್ತು.

 

ಈ ಕುರಿತು ವಿಧಾನಸಭೆ ಸದಸ್ಯ ಸಮೃದ್ಧಿ ವಿ ಮಂಜುನಾಥ್‌ ಅವರು ನಿಯಮ 351ರ ಅಡಿಯಲ್ಲಿ ಮಂಡಿಸಿದ್ದ ಗಮನಸೆಳೆಯುವ ಸೂಚನೆ ಮಂಡಿಸಿದ್ದರು. ಇದಕ್ಕೆ  ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಬರ್‍‌ ಎಂಬಾತ ಬಳಸಿದ್ದ ಸರ್ಕಾರಿ ವಾಹನವು ರಾಜ್ಯ ಶಿಷ್ಟಾಚಾರ ಇಲಾಖೆಗೆ ಸಂಬಂಧಿಸಿದ್ದಲ್ಲ, ಬದಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದೆ ಎಂಬ ಮಾಹಿತಿ ಒದಗಿಸಿದ್ದರು.

 

ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ ಅಕ್ಬರ್‍‌ ಎಂಬಾತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿರುವ ವಾಹನವನ್ನು ಬಳಕೆ  ಮಾಡಿಕೊಂಡಿದ್ದಾರೆ ಎಂಬ ಆಪಾದನೆ ಕೇಳಿ ಬಂದಿತ್ತು.

 

ಗಮನ ಸೆಳೆಯುವ ಸೂಚನೆಯಲ್ಲೇನಿತ್ತು?

 

ಹೈದರಾಬಾದ್‌ ಮೂಲದ ಹಾಸ್ಯಭರಿತ ಹಾಗೂ ಇನ್ನಿತರೆ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ಮತ್ತು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ  ಅಕ್ಬರ್‍‌ ಬಿನ್‌ ತಬರ್ ಎಂಬ ವ್ಯಕ್ತಿ ಯಾವ ಆಧಾರದ ಮೇಲೆ ಸರ್ಕಾರದ ವಾಹನವನ್ನು ಕರ್ನಾಟಕ ರಾಜ್ಯದ ರಾಯಚೂರು, ಬೀದರ್‍‌ ಹಾಗೂ ಹೈದರಾಬಾದ್‌ನಲ್ಲಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಬೇಕು ಎಂದು ಸಮೃದ್ಧಿ ಮಂಜುನಾಥ್‌ ಅವರು ಸದನದ ಗಮನ ಸೆಳೆದಿದ್ದರು.

 

ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಸತಿ ಸಚಿವರ ಜೊತೆ ಅನೇಕ್‌ ರೀಲ್ಸ್‌ ಮತ್ತು ವಿಡಿಯೋಗಳು ಮತ್ತು ಫೋಟೋಗಳನ್ನು ತನ್ನ ಇನ್‌ಸ್ಟ್ರಾಗ್ರಾಂ ಹಾಗೂ ಫೇಸ್‌ಬುಕ್‌ ಖಾತೆಗಳಲ್ಲಿ ಹಾಕಿಕೊಂಡಿರುವ ಕಾರಣಕ್ಕೆ ಏನಾದರೂ ಇವರಿಗೆ ಸರ್ಕಾರಿ ವಾಹನ ಉಪಯೋಗಿಸಲು ಅವಕಾಶ ನೀಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆಯೇ ಎಂದು ಪ್ರಶ್ನೆ ಕೇಳಿದ್ದರು.

 

ಕರ್ನಾಟಕ ರಾಜ್ಯದವರಲ್ಲದ ಈ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಯಾವುದಾದರೂ ಸಾಂವಿಧಾನಿಕ ಹುದ್ದೆಯನ್ನು ನೀಡಲಾಗಿದೆಯೇ ಎಂಬುದರ ಸಂಪೂರ್ಣ ವಿವರ ನೀಡಬೇಕು ಎಂದು ಕೇಳಿದ್ದರು.

 

ರಾಜ್ಯ ಸರ್ಕಾರದ ವಾಹನ ಸಂಖ್ಯೆ ಕೆಎ-03-ಜಿ-1576 ವಾಹನದೊಂದಿಗೆ ಬೀದರ್‍‌ ಜಿಲ್ಲೆಯ ಬ್ರಿಮ್ಸ್‌ ಆಸ್ಪತ್ರೆಯ ಮುಂದೆ ಚಿತ್ರೀಕರಿಸಿ ಜಾಲತಾಣಗಳಾದ ಆತನ ಇನ್ಸ್‌ಟ್ರಾಗ್ರಾಂ ಹಾಗೂ ಫೇಸ್ಬುಕ್‌ ಖಾತೆಗಳ ಮೂಲಕ ರೀಲ್ಸ್‌ಗಳನ್ನು ಸಾರ್ವಜನಿಕವಾಗಿ ಹರಿಬಿಡಲು ಅವಕಾಶ ಮಾಡಿಕೊಟ್ಟವರು ಯಾರು ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಕೇಳಿದ್ದರು.

 

ಈ ರೀತಿ ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡಲ್ಲಿ ಗಮನಕ್ಕೆ ಬಂದ ತಕ್ಷಣ ಮುಖ್ಯಮಂತ್ರಿಯವರು (ಸಿಆಸುಇ 36 ಶಿವಾನಿ 2024ರಲ್ಲಿ) ಶಿಷ್ಟಾಚಾರ ನಿಯಮಗಳ ಅನ್ವಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು. ಈ ವ್ಯಕ್ತಿಯು ಸರ್ಕಾರಿ ವಾಹನ ಬಳಸಿಕೊಂಡು ವಿಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಟ್ಟಿರುವ ಬಗ್ಗೆ ಶಿಷ್ಟಾಚಾರ ನಿಯಮಗಳ ಅನ್ವಯ ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಎಂದು ಗಮನಸೆಳೆದಿದ್ದರು.

 

ಸಿಎಂ ನೀಡಿರುವ ಉತ್ತರದಲ್ಲೇನಿದೆ?

 

‘ಈ ಬಗ್ಗೆ ಪರಿಶೀಲಿಸಲಾಗಿದ್ದು ವಾಹನ ಸಂಖ್ಯೆ ಕೆಎ-03-ಜಿ-1576 ವಾಹನವು ಸಿಆಸುಇ (ರಾಜ್ಯ ಶಿಷ್ಟಾಚಾರ) ಇಲಾಖೆಗೆ ಸಂಬಂಧಿಸಿರುವುದಿಲ್ಲ. ಸದರಿ ವಾಹನವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿರುವುದರಿಂದ ವಾಸ್ತವಾಂಶವನ್ನು ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗುವುದು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿದ್ದಾರೆ.

 

ಸಚಿವ ಜಮೀರ್ ಅಹ್ಮದ್ ಖಾನ್ ಅವರು ವಿಶೇಷ ವಿಮಾನದಲ್ಲಿ ಇತ್ತೀಚೆಗೆ ನಡೆಸಿದ್ದ ಫೋಟೋ ಶೂಟ್ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಬಳಿಕ ಬೆಂಗಳೂರಿಗೆ ವಾಪಸ್ ಆಗುವ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಖಾಸಗಿ ವಿಶೇಷ ವಿಮಾನದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು.

 

ಆ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಬಿಜೆಪಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ ವ್ಯಕ್ತವಾಗಿತ್ತು. ಈ ವಿಡಿಯೋ ಟ್ವೀಟ್ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಜನರ ದುಡ್ಡು ಆಕಾಶದಲ್ಲಿ ಜಾತ್ರೆ ಎಂದು ಟೀಕಿಸಿದ್ದನ್ನು ಸ್ಮರಿಸಬಹುದು.

 

ಈ ಕುರಿತು ವಾಸ್ತವಾಂಶ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಉತ್ತರ ಒದಗಿಸಿ ಎರಡು ತಿಂಗಳಾದರೂ ಇಲಾಖೆಯು ಯಾವುದೇ ಮಾಹಿತಿಯನ್ನು  ಒದಗಿಸಿಲ್ಲ.

the fil favicon

SUPPORT THE FILE

Latest News

Related Posts