ಬೆಂಗಳೂರು; ವಿದ್ಯಾರ್ಥಿಗಳಿಂದ ಕ್ಯಾಪಿಟೇಷನ್ ಶುಲ್ಕವೂ ಸೇರಿದಂತೆ ಇನ್ನಿತರೆ ಶುಲ್ಕಗಳನ್ನು ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಪಡೆಯುತ್ತಿರುವ ಆರೋಪವೂ ಸೇರಿದಂತೆ ಇನ್ನಿತರೆ ಉಲ್ಲಂಘನೆಗಳನ್ನು ಸಾಬೀತುಪಡಿಸಿ ತನಿಖಾ ತಂಡವು ನೀಡಿದ್ದ ವರದಿ ಆಧರಿಸಿ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ರಾಜ್ಯ ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಕ್ಯಾಪಿಟೇಷನ್ ಶುಲ್ಕ ಮತ್ತು ಸ್ಟಡಿ ಮೆಟಿರಿಯಲ್ಸ್‌ಗಳಿಗಾಗಿ ಶುಲ್ಕ ಪಡೆದಿರುವುದನ್ನು ತನಿಖಾ ತಂಡವು ದೃಢಪಡಿಸಿತ್ತು. ಆದರೆ ಈ ವರದಿಯನ್ನಾಧರಿಸಿ ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಸಚಿವ ಬಿ ಸಿ ನಾಗೇಶ್ ಅವರು ಈ ಬಗ್ಗೆ ಯಾವುದೇ ಕ್ರಮವನ್ನು ವಹಿಸಿರಲಿಲ್ಲ.
ತನಿಖಾ ತಂಡವು ನೀಡಿದ್ದ ವರದಿ ಮತ್ತು ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನೂ ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ ಎಂದು ರಮೇಶ್ ಬೆಟ್ಟಯ್ಯ ಎಂಬುವರು ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಕುಸುಮಾಕುಮಾರಿ ನೇತೃತ್ವದ ತಂಡವು 2021ರ ಜನವರಿ 27 ಮತ್ತು ಜನವರಿ 29ರಂದು ವಿಚಾಋಣೆ, ತನಿಖೆ ನಡೆಸಿತ್ತು. 2021ರ ಮಾರ್ಚ್ 20ರಂದು 18 ಪುಟಗಳ ವರದಿ ಮತ್ತು 403 ಪುಟಗಳ ಪೂರಕ ದಾಖಲೆಗಳನ್ನೊಳಗೊಂಡ ತನಿಖಾ ವರದಿ ಸಲ್ಲಿಸಿತ್ತು.
ತನಿಖಾ ವರದಿ ಆಧರಿಸಿ 2023ರ ಜನವರಿಯಿಂದ ಫೆಬ್ರುವರಿವರೆಗೆ ಯಾವುದೇ ಕ್ರಮವಹಿಸಿರಲಿಲ್ಲ. ವರದಿ ಆಧರಿಸಿ ಕ್ರಮ ಕೈಗೊಳ್ಳುವ ಸಂಬಂಧ 2023ರ ಜೂನ್ 8ರ ನಂತರ ಕ್ರಮಕ್ಕೆ ಮುಂದಾಗಿತ್ತು.
‘ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದು ಮತ್ತು ಇಲಾಖಾ ದಾಖಲಾತಿ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ತನಿಖಾ ತಂಡದ ವರದಿ ಅನ್ವಯ ದೃಢಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿರುತ್ತದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್ 39ರ ಅನ್ವಯ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯುವ ಬಗ್ಗೆ ಕ್ರಮ ಜರುಗಿಸಬಹುದು,’ ಎಂದು 2023ರ ಜೂನ್ 12ರಂದು ಟಿಪ್ಪಣಿ ಹಾಳೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಉಲ್ಲೇಖಿಸಿತ್ತು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಮಾನ್ಯತೆ ಹಿಂಪಡೆಯುವ ಸಂಬಂಧ ಅನುಮತಿ ಕೋರಿ ಇಲಾಖೆಯು ಸಲ್ಲಿಸಿದ್ದ ಕಂಡಿಕೆಗೆ ಸಚಿವ ಮಧು ಬಂಗಾರಪ್ಪ ಅವರು 2023ರ ನವೆಂಬರ್ 3ರಂದು ಅನುಮೋದಿಸಿದ್ದರು ಎಂಬುದು ಗೊತ್ತಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸರ್ಕಾರವು ನೀಡುತ್ತಿದ್ದ ಶಿಷ್ಯ ವೇತನವನ್ನು ಆಳ್ವಾಸ್ ಪದವಿಪೂರ್ವ ಕಾಲೇಜು, ಆಳ್ವಾಸ್ ಎಜುಕೇಷನ್ ಫೌಂಡೇಷನ್‌ನ ಖಾತೆಗೆ ಜಮಾ ಮಾಡುತ್ತಿತ್ತು.
ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಶಿಷ್ಯವೇತನ; ಆಳ್ವಾಸ್ ಎಜುಕೇಷನ್ ಫೌಂಡೇಷನ್‌ಗೆ ನೇರ ಜಮಾ
ಪ್ರಥಮ ಮತ್ತು ದ್ವಿತೀಯ ಪದವಿಪೂರ್ವ ಪ್ರವೇಶಕ್ಕೆ ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಶುಲ್ಕ ಪಡೆದಿದೆ ಎಂದು ರಮೇಶ್ ಬೆಟ್ಟಯ್ಯ ಎಂಬುವರು 2020ರ ಫೆ.7ರಂದು ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ತನಿಖೆ ನಡೆಸಲು ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಉಪ ನಿರ್ದೇಶಕರಾದ ಕುಸುಮಾಕುಮಾರಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿತ್ತು.
ಆಳ್ವಾಸ್ ಪದವಿ ಪೂರ್ವ ಕಾಲೇಜು 2016-17ನೇ ಸಾಲಿನ ದಾಖಲಾತಿ ಮಾರ್ಗಸೂಚಿ ಮತ್ತು ಶುಲ್ಕಗಳ ಪಟ್ಟಿಯನ್ನು ತನಿಖಾ ತಂಡವು ಪರಿಶೀಲಿಸಿದೆ. ಇದರ ಪ್ರಕಾರ ಪ್ರಥಮ ಪಿಯುಸಿ ಪ್ರವೇಶ ಶುಲ್ಕ, ಬೋಧನಾ ಶುಲ್ಕ ಸೇರಿದಂತೆ ಇನ್ನಿತರೆ ಶುಲ್ಕಗಳೆಂದು 1,252 ರು. ಎಂದು ಸರ್ಕಾರವು ನಿಗದಿಪಡಿಸಿತ್ತು. ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಒಟ್ಟಾರೆ 19,900 ರು.ಗಳನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಿರುವುದನ್ನು ತನಿಖಾ ತಂಡವು ಹೊರಗೆಡವಿತ್ತು. ವರದಿಯಿಂದ ತಿಳಿದು ಬಂದಿದೆ.
ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಪ್ರಥಮ ಪಿಯುಸಿ ತಲಾ ವಿದ್ಯಾರ್ಥಿಯಿಂದ 18,64 ರು . ವಸೂಲು ಮಾಡಿತ್ತು. ಅಲ್ಲದೇ ಇಲಾಖೆ ನಿಗದಿಪಡಿಸಿರುವ ಶುಲ್ಕಗಳ ಜತೆಯಲ್ಲಿಯೇ ಪ್ರಥಮ ಪಿಯುಸಿ ತಲಾ ವಿದ್ಯಾರ್ಥಿಯಿಂದ 4,000 ರು. ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದು ತನಿಖಾ ವರದಿಯು ಬಹಿರಂಗಗೊಳಿಸಿತ್ತು.
ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಕ್ಯಾಪಿಟೇಷನ್ ಶುಲ್ಕ ವಸೂಲಿ ಸಾಬೀತು; ತನಿಖಾ ವರದಿ ಬಹಿರಂಗ
ದ್ವಿತೀಯ ಪಿಯುಸಿ ತರಗತಿಗಳ ವಿದ್ಯಾರ್ಥಿಗಳಿಗೆ ಸರ್ಕಾರವು 1,252 ರು. ನಿಗದಿಪಡಿಸಿತ್ತು. ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಒಟ್ಟಾರೆ 49,000 ರು ವಸೂಲಿ ಮಾಡಿತ್ತು. ಪ್ರಥಮ ಪಿಯುಸಿಯಲ್ಲಿ ಕ್ಯಾಪಿಟಲ್ ಫೀ ಎಂದು 14,494 ರು.ವಸೂಲು ಮಾಡಿದ್ದರೆ ದ್ವಿತೀಯ ಪಿಯುಸಿಗೆ 15,400 ರು. ವಸೂಲಿ ಮಾಡಿತ್ತು.
ಪ್ರಥಮ ಪಿಯುಸಿಯಲ್ಲಿ ಪಠ್ಯಪುಸ್ತಕಗಳಿಗೆ ಶುಲ್ಕ ವಸೂಲು ಮಾಡದ ಆಳ್ವಾಸ್ ಶಿಕ್ಷಣ ಸಂಸ್ಥೆಯು ದ್ವಿತೀಯ ಪಿಯುಸಿಗೆ 4,250 ರು. ವಸೂಲು ಮಾಡಿತ್ತು. ಇಲಾಖೆ ಮಾರ್ಗಸೂಚಿಗಳ ಪ್ರಕಾರ ದ್ವಿತೀಯ ಪಿಯುಸಿಗೆ 1,252 ರು. ಒಟ್ಟಾರೆ ಶುಲ್ಕ ನಿಗದಿಪಡಿಸಿತ್ತು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಒಟ್ಟಾರೆಯಾಗಿ 49,000 ರು. ವಸೂಲಿ ಮಾಡಿದೆ. ಇಲಾಖೆಯು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ತಲಾ ವಿದ್ಯಾರ್ಥಿಯಿಂದ 47,748 ರು. ವಸೂಲು ಮಾಡಿರುವುದು ತನಿಖಾ ತಂಡದ ತಪಾಸಣೆಯಿಂದ ಬಹಿರಂಗವಾಗಿತ್ತು.