ಬೆಂಗಳೂರು; ಚುನಾವಣಾ ಬಾಂಡ್‌ಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿ(ಎಂಇಐಎಲ್) ಕರ್ನಾಟಕದ ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ ರಾಜ್ಯ ಅನಿಲ ನೀತಿಯಲ್ಲಿ ಅತೀ ದೊಡ್ಡ ಫಲಾನುಭವಿಯಾಗಿದೆ ಎಂದು ‘ದಿ ಫೈಲ್’ ಪ್ರಕಟಿಸಿದ್ದ ವರದಿಗೆ ಮೂಲಸೌಕರ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಎನ್ ಮಂಜುಳ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ನಗರ ಅನಿಲ ವಿತರಣಾ ಜಾಲದ ಅಭಿವೃದ್ದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ರೂಪಿಸಿರುವ ನೀತಿಯಿಂದಾಗಿ ಅನಿಲ ಆಧಾರಿತ ಕಂಪನಿಗಳಿಗೆ ಆಗಲಿರುವ ಆರ್ಥಿಕ ಲಾಭದ ಪೈಕಿ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿಗೆ 1,787 ಕೋಟಿ ರು.ನಷ್ಟು ಆರ್ಥಿಕ ಲಾಭವಾಗಲಿದೆ ಎಂದು ‘ದಿ ಫೈಲ್’ 2024ರ ಮಾರ್ಚ್ 16ರಂದು ವರದಿ ಪ್ರಕಟಿಸಿತ್ತು.
1,200 ಕೋಟಿ ಮೊತ್ತದ ಬಾಂಡ್ ಖರೀದಿಸಿದ್ದ ಮೇಘಾಗೂ ರಾಜ್ಯ ಅನಿಲ ನೀತಿಯಿಂದ 1,787 ಕೋಟಿ ಲಾಭ!
ಇಲಾಖೆಯ ಕಾರ್ಯದರ್ಶಿಯು ನೀಡಿರುವ ಸ್ಪಷ್ಟೀಕರಣದಲ್ಲಿ ಮೇಘಾ ಇಂಜಿನಿಯರಿಂಗ್ ಕಂಪನಿಗೆ ಆರ್ಥಿಕ ಲಾಭ ಆಗಲಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ನಿರ್ದಿಷ್ಟವಾಗಿ ಸ್ಪಷ್ಟಪಡಿಸಿಲ್ಲ. ಅಲ್ಲದೇ ‘ದಿ ಫೈಲ್’ ವರದಿಯಲ್ಲಿ ಎತ್ತಿರುವ ಯಾವ ಪ್ರಶ್ನೆಗಳಿಗೂ ಸ್ಪಷ್ಟೀಕರಣದಲ್ಲಿ ಉತ್ತರ ನೀಡಿಲ್ಲ. ಹಾಗೆಯೇ ನೂತನ ಅನಿಲ ನೀತಿಯಿಂದ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ ಅಗಾಧ ಪ್ರಮಾಣದ ಆರ್ಥಿಕ ಲಾಭ ಆಗುತ್ತಿಲ್ಲ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ದೃಢೀಕರಿಸಿರುವುದು ಕಂಡುಬಂದಿಲ್ಲ.
ಅದೇ ರೀತಿ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ ಇತರೆ ಸಂಸ್ಥೆಗಳಿಗಿಂತ ಅತೀ ಹೆಚ್ಚು ಲಾಭವಾಗಿರುವುದನ್ನೂ ಇಲಾಖೆಯು ನೀಡಿರುವ ಸ್ಪಷ್ಟೀಕರಣದಲ್ಲಿ ಅಲ್ಲಗಳೆದಿಲ್ಲ. ಬದಲಿಗೆ ದಿ ಫೈಲ್ ವರದಿಯಲ್ಲಿ ಉಲ್ಲೇಖಿಸದೇ ಇರುವ ರಾಜ್ಯ ಅನಿಲ ನೀತಿ, ಕೇಂದ್ರ ಸರ್ಕಾರದ ನಿರ್ದೇಶನ, ಪೈಪ್‌ಗಳ ಅಳವಡಿಕೆಯ ಪ್ರತಿ ಮೀಟರ್‍ಗೆ ನಿಗದಿಪಡಿಸಿರುವ ದರ, ಉತ್ತರ ಪ್ರದೇಶ ಸೇರಿದಂತೆ ಇನ್ನಿತರೆ ರಾಜ್ಯಗಳ ಮಾದರಿಗಳನ್ನು ಸ್ಪಷ್ಟೀಕರಣದಲ್ಲಿ ಉಲ್ಲೇಖಿಸಿದ್ದಾರೆ.
ಇಲಾಖೆಯ ಕಾರ್ಯದರ್ಶಿ ನೀಡಿರುವ ಸ್ಪಷ್ಟೀಕರಣ
ಕೇಂದ್ರ ಸರ್ಕಾರ ತನ್ನ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿನ್‌ಜಿಆರ್‌ಬಿ) ನಗರಗಳಲ್ಲಿ ಅನಿಲ ವಿತರಣೆ ಜಾಲವನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಅಂದರೆ ಒಂದು ಅಥವಾ ಅದಕ್ಕಿಂತಲೂ ಹೆಚ್ಚು ಜಿಲ್ಲೆಗಳಲ್ಲಿ ರೂಪಿಸಲು ಹಲವು ಕಂಪನಿಗಳಿಗೆ ಜವಾಬ್ದಾರಿ ವಹಿಸಿದೆ. ನಗರ ಅನಿಲ ವಿತರಣೆ ಜಾಲವನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ/ಪಿಎನ್‌ಜಿಆರ್‌ಬಿ “ಭೌಗೋಳಿಕ ಪ್ರದೇಶ”ವನ್ನು ಅಧಿಸೂಚಿಸುತ್ತದೆ. ಮತ್ತು ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಸಿಜಿಡಿ ಕಂಪನಿಗಳನ್ನು ಕೇಂದ್ರ ಸರ್ಕಾರ ಮತ್ತು ಪಿಎನ್‌ಜಿಆರ್‌ಬಿ ಆಯ್ಕೆ ಮಾಡುತ್ತದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ನಗರ ಅನಿಲ ವಿತರಣೆ (ಸಿಜಿಡಿ) ಕಂಪನಿಗಳನ್ನು ವಿಶೇಷವಾಗಿ ಆಯ್ಕೆ ಮಾಡುತ್ತದೆ ಎಂದು ಸ್ಪಷ್ಟೀಕರಣ ನೀಡಿದೆ.
ನಗರ ಅನಿಲ ವಿತರಣೆ (ಸಿಜಿಡಿ) ಕಂಪನಿಗಳು ಅವರಿಗೆ ವಿತಣೆಯಾಗಿರುವ ಭೌಗೋಳಿಕೆ ಪ್ರದೇಶದಲ್ಲಿ(ಜಿಎ) ವಿತರಣಾ ಜಾಲವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊಂದಿರುತ್ತವೆ. ಕೊಳವೆ ನೈಸರ್ಗಿಕ ಅನಿಲ (ಪಿಎನ್‌ಜಿ)ನ್ನು ಮನೆಗಳಿಗೆ, ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಜೊತೆಗೆ ಸಾಂದ್ರೀಕೃತ ನೈಸರ್ಗಿ ಅನಿಲ (ಸಿಎನ್‌ಜಿ) ಕೇಂದ್ರಗಳ ಮೂಲಕ ವಾಹನಗಳಿಗೆ ಸಿಎನ್‌ಜಿ ಅನಿಲವನ್ನು ಸರಬರಾಜು ಮಾಡಲಾಗುವುದು.
ಕೇಂದ್ರ ಸರ್ಕಾರ ಮತ್ತು ಪಿಎನ್‌ಜಿಆರ್‌ಬಿಗಳು ಕರ್ನಾಟಕದಲ್ಲಿ ಈ ಕೆಳಗಿನ ಸ್ಥಳಗಳಲ್ಲಿ 18 ಭೌಗೋಳಿಕ ಪ್ರದೇಶಗಳನ್ನು ಗುರುತಿಸಿವೆ.
ಗೇಲ್ ಗ್ಯಾಸ್ ಲಿಮಿಟೆಡ್ (ಭಾರತ ಸರ್ಕಾರ ಪಿಎಸ್‌ಯು) ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (2ಜಿಎ), ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ (1 ಜಿ ಎ ), ಯುನಿಸನ್ ಎನ್ವಿರೋ ಪ್ರೈವೈಟ್ ಲಿಮಿಟೆಡ್ (1 ಜಿಎ), ಇಂಡಿಯನ್ ಆಯಿಲ್ ಅದಾನಿ ಗ್ಯಾಸ್ ಪ್ರೈವೈಟ್ ಲಿಮಿಟೆಡ್ ( 1 ಜಿ ಎ), ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (1 ಜಿಎ), ಮೇಘಾ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಪ್ರೈವೈಟ್ ಲಿಮಿಟೆಡ್ (4 ಜಿಎ), ಎಜಿಪಿ ಸಿಟಿ ಗ್ಯಾಸ್ ಪ್ರೈವೈಟ್ ಲಿಮಿಟೆಡ್ (6ಜಿಎ) ಕಂಪನಿಗಳ ಪಟ್ಟಿಯನ್ನು ಸ್ಪಷ್ಟೀಕರಣದಲ್ಲಿ ಇಲಾಖೆಯು ಒದಗಿಸಿದೆ.
ಇಲ್ಲಿ ಕೇಂದ್ರ ಸರ್ಕಾರದ ಮುಖ್ಯ ಪಾತ್ರ ಎಂದರೆ ಭೌಗೋಳಿಕ ಪ್ರದೇಶ (ಜಿಎ)ಗಳನ್ನು ಗುರುತಿಸುವುದು ಮತ್ತು ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಸಿಜಿಡಿ ಕಂಪನಿಗಳಿಗೆ ದೃಢೀಕರಣ ನೀಡುವುದಾಗಿದೆ. ಇಲ್ಲಿ ರಾಜ್ಯ ಸರ್ಕಾರದ ಪಾತ್ರ ಕೇವಲ ಅನಿಲ ಪೈಪ್ ಲೇನ್ ಅಳವಡಿಸುವುದು ಮಾತ್ರ. ಸಂಬಂಧಪಟ್ಟ ಕಂಪನಿಗಳೊಂದಿಗೆ ಸಹಕರಿಸುವುದು. ನೀತಿಗಳ ಮತ್ತಿತರ ಮೂಲಕ ಅನಿಲ ಬಳಕೆಯನ್ನು ಹೆಚ್ಚಿಸುವುದು. ಕರ್ನಾಟಕದಲ್ಲಿ ಸಿಜಿಡಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುವಂತೆ ಕ್ರಮ ವಹಿಸಲಿದೆ ಎಂದು ಸ್ಪಷ್ಟೀಕರಣದಲ್ಲಿ ಇಲಾಖೆಯು ತಿಳಿಸಿದೆ.
‘ರಾಜ್ಯದ ಸಿಜಿಡಿ ನೀತಿಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ಹಲವಾರು ಸಲಹೆಗಳನ್ನು ಪಡೆದಕೊಂಡಿದ್ದೇವೆ. ಇಲ್ಲಿನ ನೀತಿಯನ್ನು ಜಿಒಐ/ಪಿಎನ್‌ಜಿಆರ್‌ಬಿ ಅಂಗೀಕರಿಸಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಅಂದರೆ ಅಲ್ಲಿ ಅನಿಲ ಪೈಪ್‌ಲೈನ್‌ಗೆ ಪ್ರತಿ ಮೀಟರ್‌ಗೆ ರೂ.1 ನಿಗದಿ ಮಾಡಲಾಗಿದ್ದು ಅಲ್ಲಿಂದಲೂ ಸಲಹೆಗಳನ್ನು ಪಡೆದಿದ್ದೇವೆ,’ ಎಂದು ಸ್ಪಷ್ಟೀಕರಣದಲ್ಲಿ ಮಾಹಿತಿ ಒದಗಿಸಿದೆ.
ಜಿಒಐ/ಪಿಎನ್‌ಜಿಆರ್‌ಬಿ ಅಂಗೀಕರಿಸಿ ಕರಡು ವರದಿ ಆಧಾರದಲ್ಲಿ ಮತ್ತು ಇತ್ತೀಚೆಗೆ ನೀತಿಗಳನ್ನು ರೂಪಿಸಿದ ಉತ್ತರ ಪ್ರದೇಶ, ರಾಜಸ್ತಾನ ಮತ್ತಿತರ ರಾಜ್ಯಗಳಲ್ಲಿನ ಅನಿಲ ನೀತಿಗಳು ಎಲ್ಲವನ್ನೂ ಅಧ್ಯಯನ ಮಾಡಿ ರಾಜ್ಯದ ಅನಿಲ ವಿತಣೆ ಮತ್ತು (ಸಿಜಿಡಿ) ಜಾಲ ನೀತಿಯನ್ನು ರೂಪಿಸಲಾಗಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು ಈಗಾಗಲೆ ಮೀಟರ್‌ಗೆ ರೂ. 1 ನಿಗದಿಪಡಿಸಿವೆ. ಇದರೊಂದಿಗೆ ಅವರು ಅತಿ ವೇಗವಾಗಿ ಅನಿಲ ಕೊಳವೆಗಳನ್ನು ಅಳವಡಿಸುತ್ತಿದ್ದಾರೆ. ಉಳಿದಂತೆ ಎಪಿ, ತೆಲಂಗಾಣ ಮತ್ತು ಕೇರಳಗಳಲ್ಲಿ ಯಾವುದೇ ಪರವಾನಗಿ ಶುಲ್ಕ ಇಲ್ಲ. ಆದರೆ ಸುರಕ್ಷಾ ಕ್ರಮವಾಗಿ ಬ್ಯಾಂಕ್ ಗ್ಯಾರಂಟಿಯನ್ನು ಪಡೆಯುತ್ತಿದ್ದಾರೆ ಎಂದು ಸ್ಪಷ್ಟೀಕರಣದಲ್ಲಿ ಇಲಾಖೆಯು ವಿವರಿಸಿದೆ.
ರಾಜ್ಯದ ಸಿಜಿಡಿ ನೀತಿಯಂತೆ ನೀತಿಯನ್ನು ಸಿಜಿಡಿ ಕಂಪನಿಗಳೇ ರೂಪಿಸುತ್ತಿವೆ. ನೀತಿಯ 5ನೇ ಅಧ್ಯಾಯದಲ್ಲಿ ಸಿಜಿಡಿ ಕಂಪನಿ ಶೇ.50 ರಷ್ಟು ಬ್ಯಾಂಕ್ ಗ್ಯಾರಂಟಿಯನ್ನು ನೀಡಬೇಕೆಂದು ಹೇಳಿದ್ದೇವೆ. ಇದು ಕೊಳವೆಯ ಉದ್ದಕ್ಕೆ ಅನುಗುಣವಾಗಿ ನಿಗದಿಪಡಿಸಿರುವುದಾಗಿದೆ. ಜೊತೆಗೆ ಪೈಪ್‌ಲೆನ್‌ಗೆ ಮಣ್ಣು ಅಗೆಯುವುದು ಸೇರಿದಂತೆ ಇತರೆ ಕಾಮಗಾರಿಗಳಿಗೆ ಶೇ.30ರಷ್ಟು ಗ್ಯಾರಂಟಿಯಲ್ಲಿ ಸಿಡಿ ಕಂಪನಿಯೇ ಭರಿಸಬೇಕು. ಇದು ಸುರಕ್ಷಿತ ಕ್ರಮವಾಗಿದ್ದು ಸಿಜಿಡಿ ಕಂಪನಿಗಳು ಪೈಪ್‌ಲೈನ್ ಅಳವಡಿಸಿದ ನಂತರ ಅಗೆಯುವುದನ್ನು ಸರಿಪಡಿಸುತ್ತವೆ ಎಂಬ ಮಾಹಿತಿಯನ್ನು ಸ್ಪಷ್ಟೀಕರಣದಲ್ಲಿ ಒದಗಿಸಿದೆ.
ನೀತಿಯನ್ನು ರೂಪಿಸುವಾಗ ಮೂಲಸೌಕರ್ಯ ಅಭಿವೃದ್ಧಿ ಸಚಿವರು ಸಂಬಂಧಪಟ್ಟ ಸಿಜಿಡಿ ಕಂಪನಿಯೇ ಉಳಿತಾಯ ವೆಚ್ಚವನ್ನು ಗ್ರಾಹಕರಿಗೆ ನೀಡಬೇಕೆಂದು ಹೇಳಿದ್ದಾರೆ. ಈ ಮೇಲಿನ ಅಂಶವನ್ನು ನೀತಿ ನಿರೂಪಣೆಯ 6ನೇ ಅಧ್ಯಾಯದ 7ರಲ್ಲಿ ಸೇರಿಸಲಾಗಿದೆ. ಒಪ್ಪಿಗೆಯನ್ನು ಪಡೆದ ನಂತರ ಇತರೆ ಇಲಾಖೆಗಳ ಮತ್ತು ಸಚಿವ ಸಂಪುಟದ ಅನುಮೋದನೆ ಪಡೆದ ನಂತರ ನೀತಿಯನ್ನು ರೂಪಿಸಲಾಗಿದೆ. ಕಾರ್ಯದ ಗುತ್ತಿಗೆ ಪಡೆದಿರುವ ಎಲ್ಲ ಸಿಜಿಡಿಗಳು ಉಳಿಕೆ ಹಣವನ್ನು ಸಾರ್ವಜನಿಕರಿಗೆ ವರ್ಗಾಯಿಸುತ್ತವೆ. ಮತ್ತು ಸಿಎನ್‌ಜಿ ದರಗಳನ್ನು ರಾಜ್ಯದ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಸಾರ್ವಜನಿಕರಿಗೆ ವರ್ಗಾಯಿಸುತ್ತವೆ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.
ಕಾಮಗಾರಿ ಕೈಗೆತ್ತಿಕೊಂಡಿರುವ ಕೆಲಸದ ಆಧಾರದಲ್ಲಿ ಈ ಮೇಲಿನ 6ನೇ ಅಧ್ಯಾಯದ 7ನೇ ಅಂಶದಲ್ಲಿ ಕ್ಲಾಸ್‌ನಲ್ಲಿ ಸೇರಿಸಲಾಗಿದೆ. ಈ ಸಿಜಿಡಿ ನೀತಿಯನ್ನು 07.11.23ರಂದು ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರವು ಪ್ರಾಮಾಣಿಕವಾಗಿ ಮಿನಿಸ್ಟ್ರಿ ಆಫ್ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಮತ್ತು ಪೆಟ್ರೋಲಿಯಂ ಅಂಡ್ ನ್ಯಾಚುರಲ್ ಗ್ಯಾಸ್ ರೆಗ್ಯೂಲೇಟರಿ ಬೋರ್ಡ್‌ಗೆ 08.11.2023ರಂದು ಪತ್ರ ಬರೆದಿದೆ. ನ್ಯಾಚುರಲ್ ಗ್ಯಾಸ್ ಪೈಪ್‌ಲೇನ್‌ನಲ್ಲಿ ಉಳಿಯುವ ಸೌಲಭ್ಯವನ್ನು ಸಾರ್ವನಿಕರಿಗೆ ವರ್ಗಾವಣೆಯಾಗಬೇಕೆಂದು ಕೋರಿದೆ. ಇದರಲ್ಲಿ ಉಳಿಯುವ ಹಣವನ್ನು ಸಿಜಿಡಿ ಸೇರಿದಂತೆ ಯಾರೂ ಸಹ ಉಳಿಸಿಕೊಳ್ಳಬಾರದು ಅದು ಸಂಪೂರ್ಣವಾಗಿ ಸಾರ್ವಜನಿಕರಿಗೆ ಸೇರಬೇಕೆಂದು ಹೇಳಲಾಗಿದೆ ಎಂದು ಸ್ಪಷ್ಟೀಕರಣದಲ್ಲಿ ಇಲಾಖೆಯು ತಿಳಿಸಿದೆ.
ರಾಜ್ಯದಲ್ಲಿ ನೈಸರ್ಗಿಕ ಅನಿಲವನ್ನು ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಜತೆಗೆ ಅನಿಲ ಕೊಳವೆ ತೆಗೆದಾಗ ಆಗುವ ಹಳ್ಳಗಳನ್ನು ಸಿಜಿಡಿ ಕಂಪನಿಯೇ ಸರಿಪಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಿಜಿಡಿ ಕಂಪನಿಯದ್ದಾಗಿದೆ. ಸಿಜಿಡಿ ನೀತಿ ನಿರೂಪಣೆಯು ಸಾಮಾನ್ಯ ಜನರಿಗೇ ತಲುಪಬೇಕು. ರಾಜ್ಯಾದ್ಯಂತ ನೀತಿಯು ಸಮಾನವಾಗಿ ಎಲ್ಲರಿಗೂ ಅನ್ವಯವಾಗುವಂತೆ ರೂಪಿಸಲಾಗಿದೆ. ಈ ನೀತಿಯನ್ನು ರೂಪಿಸುವ ಉದ್ದೇಶವೇನೆಂದರೆ ಕೇಂದ್ರ ಸರ್ಕಾರದ ನಗರ ಅನಿಲ ಸರಬರಾಜು ಜಾಲವನ್ನು ಬೆಂಬಲಿಸುವುದಾಗಿದೆ ಎಂದು ಹೇಳಿದೆ.