ಬೆಂಗಳೂರು; ಮತೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಠ ಇಂತಿಷ್ಟು ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ಷರತ್ತನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ರದ್ದುಪಡಿಸಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.
ಈ ಕುರಿತು ಸೂಕ್ತ ಆದೇಶ ಹೊರಡಿಸಲು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವವನ್ನು ಮಂಡಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಪ್ರತಿಪಕ್ಷಗಳ ಟೀಕೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ಹೊಸ ಪ್ರಸ್ತಾವವು ಮುನ್ನೆಲೆಗೆ ಬಂದಿದೆ.
ವಿಶೇಷವೆಂದರೇ 2018ರಲ್ಲಿ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಗಳ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿದರೆ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಾಗಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಇದಕ್ಕೆ ಸಚಿವ ಸಂಪುಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೀಗ ಎರಡನೇ ಬಾರಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಈ ಷರತ್ತನ್ನು ತೆಗೆದುಹಾಕಲು ತೀರ್ಮಾನಿಸಿದೆ.
ಅದೇ ರೀತಿ ಅಲ್ಪಸಂಖ್ಯಾತರ ಸಮುದಾಯದ ಶಿಕ್ಷಣ ಸಂಸ್ಥೆಗಳನ್ನು ಘೋಷಿಸಲು ಇರುವ 2/3ರಷ್ಟು ಆಡಳಿತ ಮಂಡಳಿ ಸದಸ್ಯರನ್ನು ಹೊಂದಿರಬೇಕು ಎಂಬ ಷರತ್ತನ್ನು ಉಳಿಸಿಕೊಂಡು ಶೇಕಡ ಇಂತಿಷ್ಟು ವಿದ್ಯಾರ್ಥಿಗಳನ್ನು ಇರಬೇಕು ಎಂಬ ಷರತ್ತನ್ನು ತೆಗೆದು ಹಾಕಲು ಸರ್ಕಾರವು ತೀರ್ಮಾನಿಸಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಂಸ್ಥೆಗಳನ್ನಾಗಿ ಘೋಷಿಸಲು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ, ಆರೋಗ್ಯ ಕುಟುಂಬ ಕಲ್ಯಾಣ, ತಾಂತ್ರಿಕ ಶಿಕ್ಷಣ ಇಲಾಖೆಗಳಲ್ಲಿ ವಿಭಿನ್ನ ರೀತಿಯ ಷರತ್ತುಗಳನ್ನು ವಿಧಿಸಿದೆ. ವಿವಿಧ ಇಲಾಖೆಗಳು ವಿಧಿಸಿರುವ ಈ ಷರತ್ತುಗಳು, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ತೊಡಕಾಗಿತ್ತು.
ಅಲ್ಪಸಂಖ್ಯಾತರ ಸಂಸ್ಥೆಗಳನ್ನಾಗಿ ಘೋಷಿಸಲು ತೊಡಕಾಗಿರುವ ಷರತ್ತುಗಳನ್ನು ರದ್ದುಗೊಳಿಸಿ ಏಕರೂಪತೆ ತರಲು ಸರ್ಕಾರವು ನಿರ್ಧರಿಸಿದೆ ಎಂದು ಗೊತ್ತಾಗಿದೆ. ಷರತ್ತುಗಳನ್ನು ರದ್ದುಗೊಳಿಸಿ ಏಕರೂಪತೆಯ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2023ರ ಡಿಸೆಂಬರ್ 28ರಂದು ಪತ್ರ ಬರೆದಿದ್ದರು.
ಪತ್ರದಲ್ಲೇನಿದೆ?
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಇನ್ನಿತರ ಅಲ್ಪಸಂಖ್ಯಾತರ ಕ್ರಿಶ್ಚಿಯನ್, ಸಿಖ್, ಜೈನ್ ಮತ್ತು ಪಾರ್ಸಿ ಸಮುದಾಯದಲ್ಲಿ ಎರಡನೆಯ ಷರತ್ತಿನಂತೆ ಸಮದುಆಯದಲ್ಲಿ ನಮೂದಿಸಿರುವ ಪ್ರಮಾಣದಷ್ಟು ಅಭ್ಯರ್ಥಿಗಳು ಲಭ್ಯವಾಗಲು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಈ ಸಮುದಾಯದವರಿಗೆ ಅಲ್ಪಸಂಖ್ಯಾತರ ಸಂಸ್ಥೆಗಳನ್ನಾಗಿ ಘೋಷಿಸಲು ಎರಡನೇ ಷರತ್ತು ಸಡಿಲಿಸಲು ಬಗ್ಗೆ ಪರಿಶೀಲಿಸಬೇಕು. ಅಲ್ಪಸಂಖ್ಯಾತ ಸಂಸ್ಥೆಗಳನ್ನಾಗಿ ಅನುಕೂಲವಾಗುವಂತೆ ಇಲಾಖೆಯಿಂದ ಏಕರೂಪತೆಯ ಸರ್ಕಾರದ ಆದೇಶದ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಸೂಕ್ತ ಆದೇಶ ಹೊರಡಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ.
ಅದೇ ರೀತಿ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಮತ್ತು ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರೀಸ್ ಅವರೂ ಸಹ ಇಲಾಖೆಯನ್ನು ಕೋರಿದ್ದರು. ಈ ಕುರಿತು 2022ರ ಫೆ. 12ರಂದು ಸಭೆ ನಡೆಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಎರಡನೇ ಷರತ್ತಿನಲ್ಲೇನಿದೆ?
ಅಲ್ಪಸಂಖ್ಯಾತ ಸಂಸ್ಥೆ ಎಂದು ಘೋಷಿಸಲು ಆ ಶಾಲೆಗಳು ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ ಶೇ.25ರಷ್ಟು ಆಯಾ ಭಾಷಾ/ಆಯಾ ಮತೀಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ಷರತ್ತು ವಿಧಿಸಿದೆ.
ಷರತ್ತು ತೆಗೆಯಲು ಸರ್ಕಾರದ ಸಮರ್ಥನೆ
2011ನೇ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಸಮುದಾಯದವರ ಒಟ್ಟು ಜನಸಂಖ್ಯೆ 96.01 ಲಕ್ಷ (ಶೇ 16.28) ಇದೆ. ಇದರಲ್ಲಿ ಮುಸ್ಲಿಂ ಜನಸಂಖ್ಯೆ 78.94 ಲಕ್ಷ (ಶೇ.82.25), ಕ್ರಿಶ್ಚಿಯನ್ 11.43 ಲಕ್ಷ (ಶೇ. 11.92), ಸಿಖ್ ಜನಸಂಖ್ಯೆ 0.28 ಲಕ್ಷ (ಶೇ.0.24) ಬೌದ್ಧ ಜನಸಂಖ್ಯೆ 0.95 ಲಕ್ಷ (ಶೇ.0.98), ಜೈನ ಸಂಖ್ಯೆ 4.40 ಲಕ್ಷ (ಶೇ.4.60) ಮತ್ತು ಪಾರ್ಸಿ ಜನಸಂಖ್ಯೆ 0.011 ಲಕ್ಷ (ಶೇ.0.01) ಅಲ್ಪಸಂಖ್ಯಾತರ ಪ್ರಮಾಣದಲ್ಲಿದೆ.
ರಾಜ್ಯದಲ್ಲಿನ ಒಟ್ಟು ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆಯ ಪ್ರಮಾಣವು ತುಂಬಾ ಕಡಿಮೆ ಇದೆ. ಹೀಗಾಗಿ ಅಲ್ಪಸಂಖ್ಯಾತರ ಸಮುದಾಯದವರು ನಡೆಸುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಲಿ ಜಾರಿಯಲ್ಲಿರುವ ನಿಯಮ/ಆದೇಶದಲ್ಲಿ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳು ಲಭ್ಯವಾಗಲು ಕಷ್ಟಕರವಾಗಿದೆ.
ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಇಲಾಖೆಗಳು ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಶೇಕಡವಾರು ಪ್ರಮಾಣ ಪರಿಷ್ಕರಿಸಬೇಕಾಗಿದೆ. ಹೀಗಾಗಿ ಅಲ್ಪಸಂಖ್ಯಾತರ ಸಮುದಾಯದವರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಸಂಸ್ಥೆಗಳನ್ನಾಗಿ ಘೋಷಿಸಲು ಇರುವ ಷರತ್ತುಗಳಲ್ಲಿ ಇಲಾಖೆಗಳು ಜಾರಿಗೊಳಿಸಿರುವ ನಿಯಮ, ಆದೇಶಗಳಲ್ಲಿ ಎರಡನೇ ಷರತ್ತನ್ನು ರದ್ದುಪಡಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸುವುದು ಸೂಕ್ತವಾಗಿದೆ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಸರ್ಕಾರವು ಸಮರ್ಥಿಸಿಕೊಂಡಿರುವುದು ತಿಳಿದು ಬಂದಿದೆ.
ಯಾವುದೇ ಷರತ್ತು ವಿಧಿಸದೆ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ‘ಅಲ್ಪಸಂಖ್ಯಾತ ಸ್ಥಾನಮಾನ’ ನೀಡಬೇಕು ಎಂದು ಶಿಕ್ಷಣ ಸಂಸ್ಥೆಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದವು. ಸಂವಿಧಾನದ ಪರಿಚ್ಛೇದ 30(1), ರಾಷ್ಟ್ರೀಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಆಯೋಗ ಹಾಗೂ ಸುಪ್ರೀಂಕೋರ್ಟ್‌ನ ತೀರ್ಪುಗಳ ಅನ್ವಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರಗಳು ಯಾವುದೇ ನಿರ್ಬಂಧ ವಿಧಿಸುವ ಹಾಗಿಲ್ಲ. ಆದರೆ, ರಾಜ್ಯ ಸರಕಾರ ಹಲವು ನಿರ್ಬಂಧ ವಿಧಿಸುವ ಮೂಲಕ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ,”ಎಂದು ಆಕ್ರೋಶ ವ್ಯಕ್ತಪಡಿಸಿದ್ದವು.
2012ರಲ್ಲಿ ಅಂದಿನ ಸರಕಾರ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳು ಆಯಾ ಸಮುದಾಯಕ್ಕೆ ಸೇರಿದ ಶೇ.75ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ ಮಾತ್ರ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಾಗಿ ಷರತ್ತು ವಿಧಿಸಿತ್ತು. ನಂತರ 2014ರಲ್ಲಿ ಕಾಂಗ್ರೆಸ್ ಸರಕಾರ ಈ ನಿಯಮಗಳಿಗೆ ತಿದ್ದುಪಡಿ ತಂದು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂಬ ಮಾನ್ಯತೆ ಪಡೆಯಲು ಆಯಾ ಸಮುದಾಯದ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು,” ಎಂದು ಕಡ್ಡಾಯಗೊಳಿಸಿತ್ತು.
2018ರ ಮಾ.19ರಂದು ಅಲ್ಪಸಂಖ್ಯಾತರ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿದರೆ, ಅಂತಹ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಾಗಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಸಂಪುಟದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಅಧಿಸೂಚನೆ ಹಿಂಪಡೆಯಲು ಮುಂದಾಗಿದ್ದರೂ, ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.