‘ದ ಪಾಲಿಸಿ ಫ್ರಂಟ್‌’ನ ವಾಣಿಜ್ಯ ಪ್ರಸ್ತಾವನೆ ಬಹಿರಂಗ; ವಾಟ್ಸಾಪ್‌ ಸಂಭಾಷಣೆ ಸೇರಿ 1.45 ಕೋಟಿ ವೆಚ್ಚ

ಬೆಂಗಳೂರು; ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಸಂಬಂಧ  ವಾಟ್ಸಾಪ್‌ ಸಂಭಾಷಣೆಗೆ 1.45 ಕೋಟಿ ರು. ಸೇರಿದಂತೆ ಒಟ್ಟಾರೆ 1.71 ಕೋಟಿ ರು. ವೆಚ್ಚವಾಗಲಿದೆ ಎಂದು ‘ದ ಪಾಲಿಸಿ ಫ್ರಂಟ್‌’  ಸಲ್ಲಿಸಿದ್ದ ವಾಣಿಜ್ಯ ಪ್ರಸ್ತಾವನೆಯು ಇದೀಗ ಬಹಿರಂಗವಾಗಿದೆ.

 

ಮನವಿಯೊಂದಿಗೆ ವಾಣಿಜ್ಯ ಪ್ರಸ್ತಾವನೆ (Commercial Proposal)ಯನ್ನಷ್ಟೇ ಸಲ್ಲಿಸಿದ್ದ ‘ದ ಪಾಲಿಸಿ ಫ್ರಂಟ್‌’, ಪೂರ್ವಾನುಭವದ ದಾಖಲೆ ಸಲ್ಲಿಸದೇ ಇರುವುದು ಸಹ  ಹಲವು ಅನುಮಾನಗಳಿಗೆ ಕಾರಣವಾಗಿದೆ.

 

ಹಾಗೆಯೇ ಮನವಿಯಲ್ಲಿ  ‘ದ ಪಾಲಿಸಿ ಫ್ರಂಟ್‌’ ಪಾಲುದಾರರು ಎಂಬ ಚಿಕ್ಕ ಸಹಿ ಇದೆ. ಆದರೆ ಈ ಸಹಿ ಯಾರದ್ದು ಎಂಬ ಬಗ್ಗೆ ತಿಳಿದು ಬಂದಿಲ್ಲ. ಅಲ್ಲದೇ ಪಾಲುದಾರರ ಪೂರ್ಣ ಹೆಸರೂ ಕೂಡ ಮನವಿಯಲ್ಲಿ ಇಲ್ಲ. ಹಿಂದಿನ 5 ವರ್ಷಗಳ ಆಡಿಟ್‌ ವರದಿ ಕೂಡ ಇಲ್ಲದಿರುವುದು ಮತ್ತಷ್ಟು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

2023ರ ಜುಲೈ 24ರಂದು ಸಲ್ಲಿಸಿದ್ದ ಮನವಿಗೆ ಕ್ಷಿಪ್ರಗತಿ ವೇಗ ದೊರಕಿದ್ದರ ಬೆನ್ನಲ್ಲೇ ಪೂರ್ವಾನುಭವವೂ ಸೇರಿದಂತೆ ಇನ್ನಿತರೆ ಸಂಗತಿಗಳು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ‘ದಿ ಫೈಲ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಆರ್ಥಿಕ ಇಲಾಖೆಯು ಒದಗಿಸಿರುವ 42 ಪುಟಗಳ ದಾಖಲೆಗಳಲ್ಲಿ ‘ದ ಪಾಲಿಸಿ ಫ್ರಂಟ್‌’ನ ವಾಣಿಜ್ಯ ಪ್ರಸ್ತಾವನೆ ಮತ್ತು ಮನವಿ ಮಾತ್ರ ಇದೆ. ಇದನ್ನು ಹೊರತುಪಡಿಸಿದರೆ ಈ ಸೇವೆಗಳ ಕುರಿತಾಗಿ ಪೂರ್ವಾನುಭವ ಹೊಂದಿರುವ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಮತ್ತು ಆರ್ಥಿಕ ಇಲಾಖೆಯ (ವೆಚ್ಚ-7) ಅಧಿಕಾರಿಗಳೂ ಸಹ ಇದರ ಬಗ್ಗೆ ಎಲ್ಲಿಯೂ ಚಕಾರ ಎತ್ತಿಲ್ಲ.

 

 

ಅಂದಾಜು ವೆಚ್ಚದ ವಿವರ

 

ವಾಟ್ಸಾಪ್‌ ಅಭಿವೃದ್ಧಿ,  ನಿಯೋಜನೆ, Bots ಗೆ 65.00 ಲಕ್ಷ ರು., ತಾಂತ್ರಿಕ ಮತ್ತು ಮೂಲಭೂತ ಸೌಕರ್ಯಗಳಿಗೆ 35.00 ಲಕ್ಷ ರು., ಜಿ ಎಸ್‌ ಟಿ 18.00 ಲಕ್ಷ ರು. ಸೇರಿ ಒಟ್ಟಾರೆ ಒಂದು ಬಾರಿಗೆ 1.18 ಕೋಟಿ ರು. ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ಗೊತ್ತಾಗಿದೆ.

 

 

ಪ್ರತಿ ತಿಂಗಳ ವೆಚ್ಚದ ವಿವರ

 

ಕಂಟೆಂಟ್‌ ಬರಹಗಾರರೂ ಸೇರಿದಂತೆ  35 ಮಂದಿಯನ್ನೊಳಗೊಂಡ ಮಾನವ ಸಂಪನ್ಮೂಲ ತಂಡಕ್ಕೆ 26.85 ಲಕ್ಷ ರು., ಕಂಟೆಂಟ್‌ ಕ್ರಿಯೇಷನ್‌, ಸಾಫ್ಟ್‌ವೇರ್‌ ಮತ್ತು ಹೊರಗುತ್ತಿಗೆಗೆ 53.15 ಲಕ್ಷ ರು. ಗಳಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿತ್ತು.

 

ಸೇವಾದಾರರಿಗೆ ವಾಸ್ತವಿಕ ವೆಚ್ಚ (ಇಂಟರ್‌ನೆಟ್‌ ವೇದಿಕೆ ಮತ್ತು ಸೇವೆಗಳಿಗೆ ಪ್ರತಿ ತಿಂಗಳು)

 

ಸೋಷಿಯಲ್‌ ಮೀಡಿಯಾ ಪ್ರಮೋಷನ್‌( ಫೇಸ್‌ಬುಕ್‌, ಇನ್ಸ್ಟಾಗ್ರಾಂ, ಯೂ ಟ್ಯೂಬ್‌, ಟ್ವಿಟ್ಟರ್‌)ಗೆ 25.00 ಲಕ್ಷ ರು., ಪ್ರೋಗ್ರಾಮ್ಯಾಟಿಕ್‌, ವೆಬ್‌ ಪೇಜ್‌ ಮತ್ತು ಮೊಬೈಲ್‌ ಆಡ್ಸ್‌ಗೆ 25.00 ಲಕ್ಷ ರು., ವಾಟ್ಸಾಪ್‌ ಕಾನ್‌ವರ್ಸೆಯೇಷನ್‌ಗೆ 20 ಲಕ್ಷ ರು. ಸೇರಿ  1.45 ಕೋಟಿ ರು, ಜಿಎಸ್‌ಟಿ 26.10 ಲಕ್ಷ ರು. ಸೇರಿ ಒಟ್ಟಾರೆ ತಿಂಗಳಿಗೆ 1.71 ಕೋಟಿ ರು ಆಗಲಿದೆ ಎಂದು ವಿವರಿಸಿತ್ತು.

 

ವೇತನ ವೆಚ್ಚ

 

10 ಮಂದಿ ಕಂಟೆಂಟ್‌ ಬರಹಗಾರರಿಗೆ ತಲಾ 71,000 ರು.ನಂತೆ ತಿಂಗಳಿಗೆ 7.10 ಲಕ್ಷ ರು., 6 ಮಂದಿ ಗ್ರಾಫಿಕ್‌ ಡಿಸೈನರ್ಸ್‌ಗೆ ತಲಾ 71,000 ರು.ನಂತೆ ಒಟ್ಟು 4.26 ಲಕ್ಷ ರು., 4 ಮಂದಿ ವಿಡಿಯೋ ಎಡಿಟರ್ಸ್‌ಗಳಿಗೆ ತಲಾ 71,000 ರು.ನಂತೆ 2.84 ಲಕ್ಷ ರು., ಇಬ್ಬರು ರೀಸರ್ಚರ್‌ಗಳಿಗೆ ತಲಾ 91,000 ರು.ನಂತೆ ತಿಂಗಳಿಗೆ 1.82 ಲಕ್ಷ ರು., ಕಂಟೆಂಟ್‌ ಹೆಡ್‌ಗೆ 91,000 ರು., ಕ್ರಿಯೇಟಿವ್‌ ಹೆಡ್‌ಗೆ 91,000 ರು., ಪ್ರೋಗ್ರಾಮ್‌ ಲೀಡ್‌ ಮಾಡುವ ಮೂವರಿಗೆ ತಲಾ 91,000 ರು.ನಂತೆ 2.73 ಲಕ್ಷ ರು., ಫ್ಯಾಕ್ಟ್‌ ಚೆಕ್‌ ಮಾಡುವ ಇಬ್ಬರಿಗೆ ತಲಾ 71,000 ರು.ನಂತೆ 1.42 ಲಕ್ಷ ರು., ಡಿಜಿಟಲ್‌ ಮಾರ್ಕೇಂಟಿಂಗ್‌ ಮಾಡುವ ಇಬ್ಬರಿಗೆ ತಲಾ 71,000 ರು.ನಂತೆ 1.42 ಲಕ್ಷ ರು., ಸೋಷಿಯಲ್ ಮೀಡಿಯಾ ಪೇಜ್‌ ನೋಡಿಕೊಳ್ಳುವ ಇಬ್ಬರಿಗೆ ತಲಾ 91,000 ರು.ನಂತೆ 1.82 ಲಕ್ಷ ರು., ಪ್ರಾಜೆಕ್ಟ್‌ ಮ್ಯಾನೇಜರ್‌ಗೆ 91,000 ರು. ವೆಚ್ಚವಾಗಲಿದೆ ಎಂದು ವಾಣಿಜ್ಯ ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

‘ಕಾರ್ಯಾದೇಶದಲ್ಲಿರುವ ವಿಳಾಸದಲ್ಲಿ ಕಚೇರಿಯೇ ಇಲ್ಲದ ಕಂಪನಿಗೆ, ಮಾಲೀಕರು ಯಾರು, ಪಾಲುದಾರರು ಯಾರು ಎಂಬುದೇ ಗೊತ್ತಿಲ್ಲದ ಕಂಪನಿಗೆ ತಿಂಗಳಿಗೆ ಕೋಟ್ಯಂತರ ರುಪಾಯಿಗಳನ್ನು ವೆಚ್ಚ ಮಾಡುತ್ತಿರುವುದು ಏಕೆ, ಇದೇ ಹಣದಲ್ಲಿ ಸರ್ಕಾರವು ತನ್ನದೇ ಸಂಪೂರ್ಣ ಘಟಕವನ್ನೇ ಆರಂಭಿಸಬಹುದು. ಭೌತಿಕ ಆಸ್ತಿಯನ್ನೂ ಸೃಜಿಸಬಹುದು. ಮತ್ತು, ವಾರ್ತಾ ಇಲಾಖೆಯಲ್ಲಿ ಸಾಮಾಜಿಕ ಜಾಲತಾಣ ಘಟಕವಿದ್ದರೂ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿರುವುದೇಕೆ, ಇದರ ಹಿಂದೆ ದೊಡ್ಡ ಮಟ್ಟದ ವ್ಯವಹಾರ ನಡೆದಿರಬಹುದು ಎಂದು ಅನುಮಾನಿಸುತ್ತಾರೆ,’ ಹೆಸರು ಹೇಳಲಿಚ್ಛಿಸದ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

 

ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮತ್ತು ಯುವ ನಿಧಿ ಯೋಜನೆಯೂ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದ ದಿನದಂದೇ ದ ಪಾಲಿಸಿ ಫ್ರಂಟ್‌ ಹೆಸರಿನ ನಿಗೂಢ ಕಂಪನಿಯು ವಾರ್ತಾ ಇಲಾಖೆಗೆ ಮನವಿ ಸಲ್ಲಿಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ ದಿನದಂದೇ ದ ಪಾಲಿಸಿ ಫ್ರಂಟ್‌ ಸಲ್ಲಿಸಿದ್ದ ಮನವಿಯನ್ನಾಧರಿಸಿ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ಅದೇ ದಿನದಂದೇ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೂ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

 

ಸುಳ್ಳು ಸುದ್ದಿಗಳ  ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್‌ ಎ ಮೂಲಕ ಕಾರ್ಯಾದೇಶ ಪಡೆದುಕೊಂಡಿರುವ ‘ದ ಪಾಲಿಸಿ ಫ್ರಂಟ್‌’ ಗೆ ಕಚೇರಿಯೇ ಇಲ್ಲ ಎಂಬ ಸಂಗತಿಯು ಚರ್ಚೆಗೆ ಗ್ರಾಸವಾಗಿತ್ತು.

7.20 ಕೋಟಿ ರು ಗುತ್ತಿಗೆ; ಕಾರ್ಯಾದೇಶದಲ್ಲಿರುವ ವಿಳಾಸದಲ್ಲಿ ‘ದ ಪಾಲಿಸಿ ಫ್ರಂಟ್‌’ ಕಚೇರಿಯೇ ಇಲ್ಲ

 

ಆಡಳಿತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿ ವಿಷಯ, ಮಾಹಿತಿಗಳು ಒಳಗೊಂಡಿದೆ ಎಂದು ಕುಂಟು ನೆಪವೊಡ್ಡಿ ‘ದ ಪಾಲಿಸಿ ಫ್ರಂಟ್‌’ ಗೆ ನೀಡಿರುವ ಗುತ್ತಿಗೆ ಸಂಬಂಧಿತ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಸರ್ಕಾರವು ನಿರಾಕರಿಸಿದ್ದು  ಚರ್ಚೆಗೆ ಗ್ರಾಸವಾಗಿತ್ತು.  ಈ ಕುರಿತು ಟ್ವೀಟ್‌ ಮಾಡಿದ್ದ  ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರು ಪಾರದರ್ಶಕತೆ ಇಲ್ಲದೆಯೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದ್ದರು.

ದ ಪಾಲಿಸಿ ಫ್ರಂಟ್‌ಗೆ ಗುತ್ತಿಗೆ; ಪಾರದರ್ಶಕತೆಯಿಲ್ಲದೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ?

 

ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿದ್ದ  4(ಜಿ) ವಿನಾಯಿತಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಲು ನಿರಾಕರಿಸಿರುವುದು ‘ದ ಪಾಲಿಸಿ ಫ್ರಂಟ್‌’ನ ಸುತ್ತ ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿತ್ತು.

‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ರು. ಮೊತ್ತದ ಗುತ್ತಿಗೆ; ಸಮಗ್ರ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ವಿಶೇಷವೆಂದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒದಗಿಸಿತ್ತು.  ಆದರೆ ಕೆಎಸ್‌ಎಂಸಿ ಅಂಡ್‌ ಎ ಕಂಪನಿಯು ತನ್ನ ಹಂತದಲ್ಲಿ ಇದೇ  ವಿಚಾರಕ್ಕೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿತ್ತು.  ಅದಷ್ಟೇ ಅಲ್ಲ,  ಕಡತವನ್ನು ಒದಗಿಸಲು ನಿರಾಕರಿಸುವ  ಮೂಲಕ ‘ದ ಪಾಲಿಸಿ ಫ್ರಂಟ್‌’  ಮತ್ತು ಅದರ ಹಿಂದಿರುವವರನ್ನು ರಹಸ್ಯವಾಗಿರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

 

ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್‌ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು.  ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.

SUPPORT THE FILE

Latest News

Related Posts