ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ; ಜಿಲ್ಲಾ ಕಲ್ಯಾಣಾಧಿಕಾರಿಯ ಅಮಾನತುಗೊಳಿಸದೇ ಎತ್ತಂಗಡಿ

ಬೆಂಗಳೂರು; ತುಮಕೂರು ತಾಲೂಕಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದಿದ್ದ ಪ್ರಕರಣದಲ್ಲಿ ಇದೀಗ ಜಿಲ್ಲಾ ಕಲ್ಯಾಣಾಧಿಕಾರಿ ಗಂಗಪ್ಪ ಅವರನ್ನು ಸರ್ಕಾರವು ಎತ್ತಂಗಡಿ ಮಾಡಿ ಅಧಿಸೂಚನೆ ಹೊರಡಿಸಿದೆ.

 

ಜಿಲ್ಲಾ ಕಲ್ಯಾಣಾಧಿಕಾರಿಯು ತಮ್ಮ ಜವಾಬ್ದಾರಿಯನ್ನು ನಿಭಾಯಿಸದ ಕಾರಣ ತಾಲೂಕು ಕಲ್ಯಾಣಾಧಿಕಾರಿಗಳು ಸಿದ್ದಗಂಗಾ ಮಠದ ಅನಾಥಾಲಯದಿಂದ ಅಕ್ಕಿ ಸಾಲವನ್ನು ಪಡೆದು ಮರು ಹೊಂದಿಸಿ ವಿದ್ಯಾರ್ಥಿಗಳ ಹಸಿವು  ನೀಗಿಸಿದ್ದರು. ಆದರೆ  ಈ ಪ್ರಕರಣದಲ್ಲಿ ತಾಲೂಕು ಕಲ್ಯಾಣಾಧಿಕಾರಿಯನ್ನು ಸರ್ಕಾರವು  ಅಮಾನತುಗೊಳಿಸಿತ್ತು.  ಆದರೆ ಜಿಲ್ಲಾ ಕಲ್ಯಾಣಾಧಿಕಾರಿಯನ್ನು ಅಮಾನತುಗೊಳಿಸಿಲ್ಲ. ಬದಲಿಗೆ  ಅವರನ್ನು ಮಾತೃ ಇಲಾಖೆಯಾಗಿರುವ ಸಮಾಜ ಕಲ್ಯಾಣ ಇಲಾಖೆಗೆ ವರದಿ ಮಾಡಿಕೊಳ್ಳಲು ಸೂಚಿಸಿದೆ.  ಸರ್ಕಾರದ ಈ ಕ್ರಮವು ತಾಲೂಕು ಕಲ್ಯಾಣಾಧಿಕಾರಿಗಳ ವಲಯದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.

 

ತಾಲೂಕು ಕಲ್ಯಾಣಾಧಿಕಾರಿಯ ಅಮಾನತು ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳನ್ನೇ ಜಿಲ್ಲಾ ಕಲ್ಯಾಣಾಧಿಕಾರಿಗೆ ಜಾರಿ ಮಾಡಿರುವ  ನೋಟೀಸ್‌ನಲ್ಲಿಯೂ ಪುನರುಚ್ಛರಿಸಲಾಗಿತ್ತು. ಅಮಾನತು ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳಿಗೂ ಮತ್ತು ಜಿಲ್ಲಾ ಕಲ್ಯಾಣಾಧಿಕಾರಿಗೆ ಜಾರಿಗೊಳಿಸಿದ್ದ ನೋಟೀಸ್‌ನಲ್ಲಿರುವ ಅಂಶಗಳಿಗೂ ಸಾಮ್ಯತೆ ಇದೆ.  ಆದರೂ ಸಹ ಈ ಪ್ರಕರಣದಲ್ಲಿ ಕೇವಲ ತಾಲೂಕು ಕಲ್ಯಾಣಾಧಿಕಾರಿಯನ್ನು ಅಮಾನತುಗೊಳಿಸುವುದರಲ್ಲಿ ಆಯುಕ್ತರು   ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.  ಅಲ್ಲದೇ ಈ ಪ್ರಕರಣದಲ್ಲಿ   ಸಹಜ ನ್ಯಾಯ ತತ್ವವನ್ನೂ ಪಾಲಿಸಿಲ್ಲ ಎಂಬ ಅಭಿಪ್ರಾಯವೂ ತಾಲೂಕು ಕಲ್ಯಾಣಾಧಿಕಾರಿಗಳ ವಲಯದಿಂದ ಕೇಳಿ ಬಂದಿದೆ.

 

ಇದೀಗ ಗಂಗಪ್ಪ ಅವರನ್ನು ಮಾತೃ ಇಲಾಖೆಯಾದ  ಸಮಾಜ ಕಲ್ಯಾಣ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು 2024ರ ಫೆ 21ರಂದು  ಅಧಿಸೂಚನೆ ಹೊರಡಿಸಿದೆ. ಇವರ ಜಾಗಕ್ಕೆ ಕೋಲಾರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ  ಜಿಲ್ಲಾ ಕಲ್ಯಾಣಾಧಿಕಾರಿಯಾಧ ಸೋನಿಯಾ ವರ್ಣೇಕರ್‍‌ ವರನ್ನು ನಿಯೋಜಿಸಿದೆ.

 

ಗಂಗಪ್ಪ ಅವರಿಗೆ ನೀಡಿದ್ದ ನೋಟೀಸ್‌ನಲ್ಲೇನಿದೆ?

 

ಇಲಾಖಾ ವತಿಯಿಂದ ಸಹಾಯ ಧನ ಪಡೆದು ಕಾರ್ಯನಿರ್ವಹಿಸುತ್ತಿರುವ ಸಿದ್ದಗಂಗಾ ಮಠದ ಅನಾಥಾಲಯಕ್ಕೆ ಅಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿ ಪೈಕಿ ಅಕ್ಕಿಯನ್ನು ತುಮಕೂರು ತಾಲೂಕಿನ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಅವರ ಹಂತದಲ್ಲೇ ಪತ್ರ ವ್ಯವಹಾರದ ಮೂಲಕ ತಾಲೂಕಿನ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳ ಊಟೋಪಚಾರಕ್ಕೆ ಎರವಲು ಪಡೆಯಲಾಗಿರುತ್ತದೆ.

 

ಈ ರೀತಿ ಎರವಲು ಪಡೆಯಲಾಗಿದ್ದ ಪಡಿತರ ಅಕ್ಕಿಯ ದಾಸ್ತಾನು ವಿದ್ಯಾರ್ಥಿ ನಿಲಯದಲ್ಲಿ ಇದ್ದುದ್ದರಿಂದ ಹಾಗೂ ಸದರಿ ಅಕ್ಕಿಯನ್ನು ವಿದ್ಯಾರ್ಥಿ ನಿಲಯಗಳಲ್ಲಿ ಊಟೋಪಚಾರಕ್ಕೆ ಉಪಯೋಗಿಸುತ್ತಿದ್ದರಿಂದ ಅಕ್ಟೋಬರ್‍‌ 2023ರ ಮಾಹೆಯಿಂದ ಮಾರ್ಚ್‌ 2024 ಮಾಹೆಯವರಿಗೆ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಿರುವುದಿಲ್ಲ. ಪ್ರಸ್ತುತ ತುಮಕೂರು ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಲು ಹಾಗೂ ಸಿದ್ದಗಂಗಾ ಮಠದಿಂದ ಎರವಲು ಪಡೆಯಲಾಗಿದ್ದ ಅಕ್ಕಿಯನ್ನು ಹಿಂತಿರುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ತಿಳಿಸಿರುತ್ತದೆ.

 

ಪ್ರತಿ ವರ್ಷ ಇಲಾಖೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹಂಚಿಕೆಯಾಗುವ ಪಡಿತರ ಆಹಾರ ಪದಾರ್ಥಗಳನ್ನು ನಿಗದಿತ ಸಮಯದಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಎತ್ತುವಳಿ ಮಾಡುವ ಬಗ್ಗೆ ಪರಿಶೀಲಿಸಿ ಉಸ್ತುವಾರಿ ಮಾಡುವುದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದ್ದು ಪಡಿತರ ಅಕ್ಕಿ ಮತ್ತು ಗೋಧಿಯು ನಿಲಯಗಳೀಗೆ ನಿಗದಿತ ಸಮಯದೊಳಗೆ ಸರಬರಾಜು ಆಗಿರುವ ಬಗ್ಗೆ ನೀವು ಖಾತ್ರಿಪಡಿಸಿಕೊಂಡು ನಿಲಯಗಳ ನಿರ್ವಹಣೆಯು ಸಮರ್ಪಕವಾಗಿ ಆಗುತ್ತಿರುವ ಬಗ್ಗೆ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕಾಗಿರುವುದು ನಿಮ್ಮ ಆದ್ಯ ಜವಾಬ್ದಾರಿಯಾಗಿರುತ್ತದೆ.

 

ಆದರೆ ನೀವು ಇದನ್ನು ಪಾಲಿಸಿರುವುದಿಲ್ಲ. ಈ ನಿಮ್ಮ ಕರ್ತವ್ಯ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ಬಗ್ಗೆ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಏಕೆ ಶಿಫಾರಸ್ಸು ಮಾಡಬಾರದು ಎಂಬುದರ ಬಗ್ಗೆ ನಿಮ್ಮ ಲಿಖಿತ ಸಮಜಾಯಿಷಿಯನ್ನು ಈ ನೋಟೀಸ್‌ ಸ್ವೀಕರಿಸಿದ 3 ದಿನದೊಳಗಾಗಿ ಈ ಕಚೇರಿಗೆ ಸಲ್ಲಿಸಬೇಕು ಎಂದು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ ಎ ದಯಾನಂದ ಅವರು ಸೂಚಿಸಿರುವುದು ಗೊತ್ತಾಗಿದೆ.

 

‘ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿತರಾಗಿರುವ ಜಿಲ್ಲಾ ಕಲ್ಯಾಣಾಧಿಕಾರಿ ಗಂಗಪ್ಪ ಅವರನ್ನು ಅಮಾನತುಗೊಳಿಬೇಕಿತ್ತು. ಏಕೆಂದರೆ ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದಿರುವ ಪ್ರಕರಣದಲ್ಲಿ ಇವರು ಬೇಜವಾಬ್ದಾರಿ ಮತ್ತು ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಯುಕ್ತರು ನೋಟೀಸ್‌ನಲ್ಲೇ ವಿವರಿಸಿದ್ದಾರೆ. ಆದರೂ ಇವರನ್ನು ಅಮಾನತುಗೊಳಿಸದೆಯೇ ಮಾತೃ ಇಲಾಖೆಗೆ ವರ್ಗಾಯಿಸುವ ಮೂಲಕ ಅವರನ್ನು ರಕ್ಷಿಸಿದ್ದಾರೆ. ಸರ್ಕಾರ ಇಡೀ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ಒಪ್ಪಿಸಬೇಕು. ಜಿಲ್ಲೆಯಲ್ಲಿರುವ ಅಕ್ಕಿ ದಾಸ್ತಾನು ಮತ್ತು ಇದರ ನಿರ್ವಹಣೆ, ಹಣ ಬಿಡುಗಡೆ,  ಅನುದಾನ ಬಳಕೆ ಮಾಡಿರುವುದನ್ನು ಲೆಕ್ಕ ಪರಿಶೀಲನೆಗೆ ಒಪ್ಪಿಸಬೇಕು. ಕೇವಲ ತುಮಕೂರು ಮಾತ್ರವಲ್ಲ, ಇಡೀ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮಗ್ರ  ವಿದ್ಯಾರ್ಥಿ ನಿಲಯಗಳಲ್ಲಿಯೂ ಅಕ್ಕಿ ಸೇರಿದಂತೆ ಆಹಾರ ದಾಸ್ತಾನಿನ ಲಭ್ಯತೆ, ಆಹಾರ ಧಾನ್ಯ ಮತ್ತು ಅನುದಾನ ಬಿಡುಗಡೆ, ಬಳಕೆ ಕುರಿತೂ ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು,’ ಎಂದು  ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಆಗ್ರಹಿಸಿದ್ದಾರೆ.

 

ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ಕೊರತೆಯಾಗಿದ್ದರಿಂದ  ನಿಲಯ ಪಾಲಕರು ತುಮಕೂರಿನ ಸಿದ್ದಗಂಗಾ ಮಠದ ಅನಾಥಾಲಯಕ್ಕೆ ಮಂಜೂರಾಗಿದ್ದ ಅಕ್ಕಿಯನ್ನು ಸಾಲ ಪಡೆದಿದ್ದರು. ವಿದ್ಯಾರ್ಥಿ ನಿಲಯಗಳಿಗೆ ಮಾಸಿಕ ಬೇಡಿಕೆ ಪಟ್ಟಿಯಂತೆ ಅಕ್ಕಿ ಹಂಚಿಕೆಯಾಗಿರಲಿಲ್ಲ. ಜಿಲ್ಲೆಯ ಕೆಲವು ವಿದ್ಯಾರ್ಥಿ ನಿಲಯಗಳಿಗೆ  ಅಕ್ಕಿ ಹಂಚಿಕೆಯಾಗಿದ್ದರೂ  ಬಿಡುಗಡೆ ಮಾಡಿಲ್ಲ. ಹಲವು ವಿದ್ಯಾರ್ಥಿ ನಿಲಯಗಳಿಗೆ ಅಕ್ಕಿಯನ್ನು  ಎತ್ತುವಳಿ ಮಾಡಿಲ್ಲ. ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಅಕ್ಕಿ ಪರದಾಟಕ್ಕೆ ಮೂಲ ಕಾರಣ ಎನ್ನಲಾಗಿತ್ತು.

 

ಅಕ್ಕಿ ಹಂಚಿಕೆ, ಬಿಡುಗಡೆ, ಎತ್ತುವಳಿ ಪ್ರಮಾಣದ ಕುರಿತು ಉಸ್ತುವಾರಿ ಹೊತ್ತಿದ್ದ ಜಿಲ್ಲಾ ಕಲ್ಯಾಣಾಧಿಕಾರಿಯು ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ ಎಂದು ತಾಲೂಕು ಕಲ್ಯಾಣಾಧಿಕಾರಿಗಳೇ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರೊಂದಿಗಿನ ಮಾತುಕತೆಯಲ್ಲಿ ಬಹಿರಂಗಪಡಿಸಿದ್ದರು. ಈ ಆಡಿಯೋ ಮತ್ತು ಕೆಲವು ದಾಖಲೆಗಳನ್ನಾಧರಿಸಿ   ‘ದಿ ಫೈಲ್‌’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ವಿಧಾನಪರಿಷತ್‌ನ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರಕರಣದ ಕುರಿತು ಪ್ರಸ್ತಾವಿಸಿದ್ದರು.

 

 

ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ; ತಾಲೂಕು ಅಧಿಕಾರಿ ಅಮಾನತು, ಜಿಲ್ಲಾ ಕಲ್ಯಾಣಾಧಿಕಾರಿ ರಕ್ಷಣೆ?

ಇಲಾಖಾ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವರ್ಷಕ್ಕೆ ಎರಡು ಬಾರಿ ಅಂದರೆ ಏಪ್ರಿಲ್‌ ಹಾಗೂ ಅಕ್ಟೋಬರ್‍‌ ಮಾಹೆಗಳಲ್ಲಿ ಹಂಚಿಕೆಯಾಗುವ ಪಡಿತರ ಅಕ್ಕಿ ಹಾಗೂ ಗೋಧಿಯನ್ನು ನಿಗದಿತ ಸಮಯದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಎತ್ತುವಳಿ ಮಾಡಬೇಕಾಗಿರುವುದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದ್ದು ತುಮಕೂರು ತಾಲೂಕಿನ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಗೀತಮ್ಮ ಅವರು ಇದನ್ನು ಪಾಲಿಸಿರುವುದಿಲ್ಲ.

 

ಹಾಗೂ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ತುಮಕೂರು ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಎರವಲು ಪಡೆದಿರುವುದು ನಿಯಮಬಾಹಿರವಾದ ಕೆಲಸವಾಗಿರುತ್ತದೆ. ಈ ರೀತಿ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ತೋರಿರುವ ಹಿನ್ನೆಲೆಯಲ್ಲಿ ಇಲಾಖೆಯ ಆಯುಕ್ತ ಕೆ ಎ ದಯಾನಂದ ಅವರು   2024ರ ಫೆ.20ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

 

 

ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ಇಲ್ಲ, ಅನುದಾನವೂ ಬಂದಿಲ್ಲ; ಸಿದ್ದಗಂಗಾ ಮಠದಿಂದ ಸಾಲ ಪಡೆದ ವಾರ್ಡನ್‌ಗಳು

 

ಪ್ರತಿ ವಿದ್ಯಾರ್ಥಿಗೆ ದಿನವೊಂದಕ್ಕೆ  58 ರು.ನಂತೆ  ತಿಂಗಳಿಗೆ 1,750 ರು.ಗಳನ್ನು ಸರ್ಕಾರವು ವೆಚ್ಚ ಮಾಡುತ್ತಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ವಿದ್ಯಾರ್ಥಿನಿಲಯಗಳು ತಲಾ ಕೆ ಜಿ ಗೆ  6.50 ರು ನಿಂದ 7 ರು. ನಂತೆ ಅಕ್ಕಿ ಖರೀದಿಸುತ್ತವೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts