ಬೆಂಗಳೂರು; ಸಿದ್ದಗಂಗಾ ಮಠದ ಅನಾಥಾಲಯದಿಂದ ಅಕ್ಕಿ ಸಾಲ ಪಡೆದು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಅಕ್ಕಿ ಪೂರೈಕೆ ಮಾಡಿದ್ದ ಪ್ರಕರಣದಲ್ಲಿ ತುಮಕೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಸರ್ಕಾರ, ಜಿಲ್ಲಾ ಕಲ್ಯಾಣಾಧಿಕಾರಿಯ ರಕ್ಷಣೆಗಿಳಿದಿದೆ ಎಂಬ ಆರೋಪ ಕೇಳಿ ಬಂದಿದೆ.
ತುಮಕೂರು ಜಿಲ್ಲೆಯ ಬಹುತೇಕ ವಿದ್ಯಾರ್ಥಿ ನಿಲಯಗಳಿಗೆ ಅಕ್ಕಿ ಹಂಚಿಕೆ ಮಾಡುವಲ್ಲಿ ಹಿಂದುಳಿದ ವರ್ಗಗಳ ಇಲಾಖೆಯು ವಿಫಲವಾಗಿತ್ತು. ಈ ಪ್ರಕರಣದಲ್ಲಿ ಜಿಲ್ಲಾ ಕಲ್ಯಾಣಾಧಿಕಾರಿಯ ಬೇಜವಾಬ್ದಾರಿ ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ ಕೇವಲ ತಾಲೂಕು ಕಲ್ಯಾಣಾಧಿಕಾರಿಯನ್ನಷ್ಟೇ ಅಮಾನತುಗೊಳಿಸಿರುವ ಸರ್ಕಾರವು 2024ರ ಫೆ.20ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ಕೊರತೆಯಾಗಿದ್ದರಿಂದ ನಿಲಯ ಪಾಲಕರು ತುಮಕೂರಿನ ಸಿದ್ದಗಂಗಾ ಮಠದ ಅನಾಥಾಲಯಕ್ಕೆ ಮಂಜೂರಾಗಿದ್ದ ಅಕ್ಕಿಯನ್ನು ಸಾಲ ಪಡೆದಿದ್ದರು. ವಿದ್ಯಾರ್ಥಿ ನಿಲಯಗಳಿಗೆ ಮಾಸಿಕ ಬೇಡಿಕೆ ಪಟ್ಟಿಯಂತೆ ಅಕ್ಕಿ ಹಂಚಿಕೆಯಾಗಿರಲಿಲ್ಲ. ಜಿಲ್ಲೆಯ ಕೆಲವು ವಿದ್ಯಾರ್ಥಿ ನಿಲಯಗಳಿಗೆ ಅಕ್ಕಿ ಹಂಚಿಕೆಯಾಗಿದ್ದರೂ ಬಿಡುಗಡೆ ಮಾಡಿಲ್ಲ. ಹಲವು ವಿದ್ಯಾರ್ಥಿ ನಿಲಯಗಳಿಗೆ ಅಕ್ಕಿಯನ್ನು ಎತ್ತುವಳಿ ಮಾಡಿಲ್ಲ. ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಅಕ್ಕಿ ಪರದಾಟಕ್ಕೆ ಮೂಲ ಕಾರಣ ಎನ್ನಲಾಗಿತ್ತು.
ಅಕ್ಕಿ ಹಂಚಿಕೆ, ಬಿಡುಗಡೆ, ಎತ್ತುವಳಿ ಪ್ರಮಾಣದ ಕುರಿತು ಉಸ್ತುವಾರಿ ಹೊತ್ತಿದ್ದ ಜಿಲ್ಲಾ ಕಲ್ಯಾಣಾಧಿಕಾರಿಯು ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ ಎಂದು ತಾಲೂಕು ಕಲ್ಯಾಣಾಧಿಕಾರಿಗಳೇ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರೊಂದಿಗಿನ ಮಾತುಕತೆಯಲ್ಲಿ ಬಹಿರಂಗಪಡಿಸಿದ್ದರು. ಈ ಆಡಿಯೋ ಮತ್ತು ಕೆಲವು ದಾಖಲೆಗಳನ್ನಾಧರಿಸಿ ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ವಿಧಾನಪರಿಷತ್‌ನ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರಕರಣದ ಕುರಿತು ಪ್ರಸ್ತಾವಿಸಿದ್ದರು.
ಸದನದಲ್ಲಿ ಸರ್ಕಾರಕ್ಕೆ ಆಗಿದ್ದ ಮುಜುಗರದಿಂದ ಪಾರಾಗಲು ಇಲಾಖೆಯು ಕೆಳ ಹಂತದ ಅಧಿಕಾರಿಗಳನ್ನಷ್ಟೇ ತರಾಟೆಗೆ ತೆಗೆದುಕೊಂಡಿತ್ತು. ಆದರೆ ಜಿಲ್ಲಾ ಕಲ್ಯಾಣಾಧಿಕಾರಿಗೆ ಕೇವಲ ನೋಟೀಸ್ ನೀಡಿ ಕೈ ತೊಳೆದುಕೊಂಡಿತ್ತು. ಆದರೀಗ ಈ ಪ್ರಕರಣದಲ್ಲಿ ತಾಲೂಕು ಕಲ್ಯಾಣಾಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವುದು ಜಿಲ್ಲಾ ಕಲ್ಯಾಣಾಧಿಕಾರಿಯನ್ನು ಈ ಪ್ರಕರಣದಲ್ಲಿ ರಕ್ಷಣೆಗಿಳಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಮಾನತು ಆದೇಶದಲ್ಲೇನಿದೆ?
ಸಿದ್ದಗಂಗಾ ಮಠದ ಅನಾಥಾಲಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿ ಪೈಕಿ ಅಕ್ಕಿಯನ್ನು ತುಮಕೂರು ತಾಲೂಕಿನ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಅವರ ಹಂತದಲ್ಲೇ ಪತ್ರ ವ್ಯವಹಾರದ ಮೂಲಕ ತಾಲೂಕಿನ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳ ಊಟೋಪಾಚರಕ್ಕೆ ಎರವಲು ಪಡೆಯಲಾಗಿರುತ್ತದೆ.
ಈ ರೀತಿ ಎರವಲು ಪಡೆಯಲಾಗಿದ್ದ ಪಡಿತರ ಅಕ್ಕಿಯ ದಾಸ್ತಾನು ವಿದ್ಯಾರ್ಥಿ ನಿಲಯದಲ್ಲಿ ಇದ್ದುದ್ದರಿಂದ ಹಾಗೂ ಸದರಿ ಅಕ್ಕಿಯನ್ನು ವಿದ್ಯಾರ್ಥಿ ನಿಲಯಗಳಲ್ಲಿ ಊಟೋಪಚಾರಕ್ಕೆ ಉಪಯೋಗಿಸುತ್ತಿದ್ದುದ್ದರಿಂದ ಅಕ್ಟೋಬರ್ 2023ರ ಮಾಹೆಯಿಂದ ಮಾರ್ಚಿ 2024 ಮಾಹೆಯವರೆಗೆ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಿರುವುದಿಲ್ಲ.
ಪ್ರಸ್ತುತ ತುಮಕೂರು ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಲು ಹಾಗೂ ಸಿದ್ದಗಂಗಾ ಮಠದಿಂದ ಎರವಲು ಪಡೆಯಲಾಗಿದ್ದ ಅಕ್ಕಿಯನ್ನು ಹಿಂತಿರುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ವರದಿ ಮಾಡಿದ್ದರು.
ಇಲಾಖಾ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವರ್ಷಕ್ಕೆ ಎರಡು ಬಾರಿ ಅಂದರೆ ಏಪ್ರಿಲ್ ಹಾಗೂ ಅಕ್ಟೋಬರ್ ಮಾಹೆಗಳಲ್ಲಿ ಹಂಚಿಕೆಯಾಗುವ ಪಡಿತರ ಅಕ್ಕಿ ಹಾಗೂ ಗೋಧಿಯನ್ನು ನಿಗದಿತ ಸಮಯದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಎತ್ತುವಳಿ ಮಾಡಬೇಕಾಗಿರುವುದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದ್ದು ತುಮಕೂರು ತಾಲೂಕಿನ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಗೀತಮ್ಮ ಅವರು ಇದನ್ನು ಪಾಲಿಸಿರುವುದಿಲ್ಲ.
ಹಾಗೂ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ತುಮಕೂರು ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಎರವಲು ಪಡೆದಿರುವುದು ನಿಯಮಬಾಹಿರವಾದ ಕೆಲಸವಾಗಿರುತ್ತದೆ. ಈ ರೀತಿ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ತೋರಿರುವ ಹಿನ್ನೆಲೆಯಲ್ಲಿ ಇಲಾಖೆಯ ಆಯುಕ್ತ ಕೆ ಎ ದಯಾನಂದ ಅವರು 2024ರ ಫೆ.20ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
‘ಜನವರಿಯಿಂದ ಮಾರ್ಚ್‌ವರೆಗೆ ಅಕ್ಕಿಗಾಗಿ ಬೇಡಿಕೆ ಪಟ್ಟಿ ಸಲ್ಲಿಸಿದ್ದೆವು. ಇನ್ನೂ ಅಲಾಟ್‌ಮೆಂಟ್ ಆಗಿಲ್ಲ. ವೇಯ್ಟ್ ಮಾಡುತ್ತಿದ್ದೇವೆ. ಹೆಡ್ ಆಫೀಸ್‌ನಿಂದ ಇನ್ನೂ ಅನುದಾನ ಬಂದಿಲ್ಲ. ನಮ್ಮ ತಾಲೂಕಲ್ಲಿ ಹಣವಿಲ್ಲ. ಇದು ನಮ್ಮ ತಾಲೂಕಿನಲ್ಲಷ್ಟೇ ಅಲ್ಲ, ಇಡೀ ರಾಜ್ಯದ ಪರಿಸ್ಥಿತಿಯೂ ಇದೇ ರೀತಿ ಇದೆ,’ ಎಂದು ತಾಲೂಕು ಮಟ್ಟದ ಅಧಿಕಾರಿಯೊಬ್ಬರು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರೊಂದಿಗೆ ನಡೆದ ಮಾತುಕತೆ ವೇಳೆಯಲ್ಲಿ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದರು.
ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ಇಲ್ಲ, ಅನುದಾನವೂ ಬಂದಿಲ್ಲ; ಸಿದ್ದಗಂಗಾ ಮಠದಿಂದ ಸಾಲ ಪಡೆದ ವಾರ್ಡನ್‌ಗಳು
ಪ್ರತಿ ವಿದ್ಯಾರ್ಥಿಗೆ ದಿನವೊಂದಕ್ಕೆ 58 ರು.ನಂತೆ ತಿಂಗಳಿಗೆ 1,750 ರು.ಗಳನ್ನು ಸರ್ಕಾರವು ವೆಚ್ಚ ಮಾಡುತ್ತಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ವಿದ್ಯಾರ್ಥಿನಿಲಯಗಳು ತಲಾ ಕೆ ಜಿ ಗೆ 6.50 ರು ನಿಂದ 7 ರು. ನಂತೆ ಅಕ್ಕಿ ಖರೀದಿಸುತ್ತವೆ ಎಂದು ತಿಳಿದು ಬಂದಿದೆ.
ಅಕ್ಕಿ ಕೊರತೆಯಾಗಿರುವ ವಿದ್ಯಾರ್ಥಿ ನಿಲಯಗಳ ಪಟ್ಟಿ
ತುಮಕೂರು ನಗರದ ರೇಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯಗಳು,
ಶಿರಾ ಗೇಟ್ ಸಮೀಪದ ಸಾಯಿ ಬಡಾವಣೆಯಲ್ಲಿರುವ ತಾಲೂಕಿನ ವಿದ್ಯಾರ್ಥಿ ನಿಲಯ,
ದಿಬ್ಬೂರು, ಕ್ಯಾತ್ಸಂದ್ರದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನು ಇಲ್ಲ ಎಂಬುದು ತಿಳಿದು ಬಂದಿದೆ.
ಉಳಿದಂತೆ ಹಲವು ವಿದ್ಯಾರ್ಥಿ ನಿಲಯಗಳಲ್ಲಿ ಈ ತಿಂಗಳಿಗಷ್ಟೇ ಅಕ್ಕಿ ದಾಸ್ತಾನು ಇದೆ. ಇನ್ನೂ ವಿದ್ಯಾರ್ಥಿನಿಲಯಗಳಿಗೆ ಅಕ್ಕಿ ಪೂರೈಕೆಯಾಗಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಈ ವಿದ್ಯಾರ್ಥಿ ನಿಲಯಗಳಲ್ಲಿನ 1,220 ವಿದ್ಯಾರ್ಥಿಗಳ ಊಟಕ್ಕೆ ಅಕ್ಕಿ ಇಲ್ಲದಂತಾಗಿತ್ತು.
‘ಸದರಿ ಪ್ರಕರಣದಲ್ಲಿ ಭ್ರಷ್ಟಾಚಾರದ ಮುಖ್ಯ ಕಿಂಗ್‌ಪಿನ್ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯನ್ನು ರಕ್ಷಣೆ ಮಾಡಲು ಕೇವಲ ಕೆಳ ಹಂತದ ಅಧಿಕಾರಿಯ ಬಲಿಪಶು ಮಾಡಲಾಗಿದೆ. ಇದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿದೆ. ಇಡೀ ಪ್ರಕರಣದ ಹಿಂದೆ ಜಿಲ್ಲಾ ಕಲ್ಯಾಣಾಧಿಕಾರಿಯ ಲಂಚಗುಳಿತನವಿದೆ. ಲಂಚ ಕೊಟ್ಟವರಿಗಷ್ಟೇ ಅಕ್ಕಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಸಂಬಂಧ ನಮ್ಮ ಬಳಿ ಅಧಿಕೃತ ಸಾಕ್ಷ್ಯ, ಪುರಾವೆಗಳಿವೆ. ಲಂಚ ನೀಡದ ಪ್ರಾಮಾಣಿಕ ಅಧಿಕಾರಿಗಳು ಮಕ್ಕಳ ಹಸಿವನ್ನು ನೀಗಿಸಲು ಅನಿವಾರ್ಯವಾಗಿ ಬೇರೆ ದಾರಿಯಿಲ್ಲದೆಯೇ ಸಿದ್ದಗಂಗಾ ಮಠದ ಅನಾಥಾಲಯಕ್ಕೆ ಹಂಚಿಕೆಯಾಗಿದ್ದ ಅಕ್ಕಿಯನ್ನು ಸಾಲದ ರೂಪದಲ್ಲಿ ಪಡೆದಿದ್ದರು. ಪ್ರಕರಣವು ವಿಧಾನಪರಿಷತ್‌ನಲ್ಲಿ ಚರ್ಚೆ ಆಗುತ್ತಿದ್ದಂತೆ ಬೆಳಗಿನ ಜಾವ ಐದು ಗಂಟೆಗೇ ಜಿಲ್ಲಾ ಕಲ್ಯಾಣಾಧಿಕಾರಿಯೇ ಹಣ ಬಿಡುಗಡೆ ಮಾಡಲು ಕ್ರಮವಹಿಸಿದ್ದಾರೆ. ಇದಕ್ಕೂ ನಮ್ಮ ಬಳಿ ಸಾಕ್ಷ್ಯಗಳಿವೆ. ಈ ಪ್ರಕರಣದಲ್ಲಿ ಜಿಲ್ಲಾ ಮಟ್ಟದ ಕಲ್ಯಾಣಾಧಿಕಾರಿಯಿಂದ ಹಿಡಿದು ಇಲಾಖೆ ಸಚಿವರವರೆಗೆ ಭ್ರಷ್ಟಾಚಾರದ ಜಾಲವಿದೆ. ತಾಲೂಕು ಮಟ್ಟದ ಕಲ್ಯಾಣಾಧಿಕಾರಿಗಳು ನಿಜಕ್ಕೂ ಇದರಲ್ಲಿ ಭಾಗಿಯಾಗಿದ್ದರೇ ಅಮಾನತು ಮಾಡಿದರೇ ತಪ್ಪಿಲ್ಲ. ಆದರೆ ಇಡೀ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಜಿಲ್ಲಾ ಕಲ್ಯಾಣಾಧಿಕಾರಿ ವಿರುದ್ಧ ಒಂದೇ ಒಂದು ಕ್ರಮ ಕೈಗೊಳ್ಳದೇ, ಪ್ರಕರಣವನ್ನು ತನಿಖೆಗೊಳಪಡಿಸದೆಯೇ ತಾಲೂಕು ಕಲ್ಯಾಣಾಧಿಕಾರಿಯನ್ನು ಅಮಾನತುಗೊಳಿಸಿರುವ ಕ್ರಮ ಸರಿಯಲ್ಲ. ಜಿಲ್ಲಾ ಕಲ್ಯಾಣಾಧಿಕಾರಿಯನ್ನೂ ಸಹ ಅಮಾನತುಗೊಳಿಸಬೇಕು, ‘ ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಆಗ್ರಹಿಸಿದ್ದಾರೆ.