ಕ್ರಮಬದ್ಧವಾಗಿರದ ಕಂದಾಯ ದಾಖಲೆಗಳು; ತೋಟಗಾರಿಕೆ ಇಲಾಖೆಯಿಂದ ಕೈ ತಪ್ಪಲಿದೆಯೇ 1,659 ಎಕರೆ ?

ಬೆಂಗಳೂರು; ಕಳೆದ 50 ವರ್ಷಗಳಿಂದಲೂ ಸ್ವಾಧೀನದಲ್ಲಿರುವ ಅಭಿವೃದ್ಧಿಗೊಂಡಿರುವ ನರ್ಸರಿ ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಂದಾಯ ದಾಖಲಾತಿಗಳು ಕ್ರಮಬದ್ಧವಾಗಿರದ ಕಾರಣ 1,659.99 ಎಕರೆ ವಿಸ್ತೀರ್ಣದ ಜಮೀನುಗಳು ತೋಟಗಾರಿಕೆ ಇಲಾಖೆ ಕೈತಪ್ಪಲಿದೆ!

 

ಈ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್‌ ಅವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

 

ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಕ್ಷೇತ್ರ ಮತ್ತು ನರ್ಸರಿಗಳ ಜಮೀನಿನ ಪಹಣಿ, ಕಂದಾಯ ದಾಖಲಾತಿಗಳು ಕ್ರಮಬದ್ಧವಾಗಿಲ್ಲ. ಹೀಗಾಗಿ ಆ ಎಲ್ಲಾ ದಾಖಲೆಗಳನ್ನು  ಕ್ರಮಬದ್ಧಗೊಳಿಸಿ ಜಮೀನುಗಳ ಮಾಲೀಕತ್ವವನ್ನು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸುವ ಕುರಿತು ಇಲಾಖೆಗಳ ನಡುವೆ ಚರ್ಚೆ ಆರಂಭವಾಗಿದೆ. ಈ ಸಂಬಂಧ  2024ರ ಜನವರಿ 29ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೆಲವು ಕ್ಷೇತ್ರ ಮತ್ತು ನರ್ಸರಿಗಳ ಜಮೀನಿನ ಕಂದಾಯ ದಾಖಲಾತಿಗಳು ತೋಟಗಾರಿಕೆ ಇಲಾಖೆಯ ಹೆಸರಿನಲ್ಲಿ ಇಲ್ಲ. ಹೀಗಾಗಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದಲ್ಲದೇ ಕ್ಷೇತ್ರ ಮತ್ತು ನರ್ಸರಿಗಳ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಹೂಡಿದ ದಾವೆಗಳಿಗೆ ತೋಟಗಾರಿಕೆ ಇಲಾಖೆಯ ಹೆಸರಿನಲ್ಲಿ ಆರ್‍‌ಟಿಸಿ ಮತ್ತು ಇತರೆ ಕಂದಾಯ ದಾಖಲಾತಿಗಳೂ ಇಲ್ಲ. ಹೀಗಾಗಿ ನ್ಯಾಯಾಲಯಗಳಲ್ಲಿ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ವಾದ ಮಂಡಿಸಲು ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ ಎಂಬುದು ಪತ್ರದಿಂದ ಗೊತ್ತಾಗಿದೆ.

 

ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳು ಸ್ವಾಧೀನದಲ್ಲಿದ್ದರೂ ಸಹ ಈ ಜಮೀನುಗಳು ತೋಟಗಾರಿಕೆ ಇಲಾಖೆಯ ಹೆಸರಿನಲ್ಲಿ ದಾಖಲಾಗಿಲ್ಲ. ಕ್ಷೇತ್ರ ಮತ್ತು ನರ್ಸರಿಗಳನ್ನು ಒತ್ತುವರಿಯಿಂದ ಸಂರಕ್ಷಿಸಿಕೊಳ್ಳಲು ಚೈನ್‌ ಲಿಂಕ್‌, ಬೇಲಿ, ಕಾಂಪೌಂಡ್‌, ಗೋಡೆಗಳೂ ಇಲ್ಲ. ಕ್ಷೇತ್ರ ಮತ್ತು ನರ್ಸರಿಗಳ ಜಮೀನಿನ ಸರಹದ್ದು ಕೂಡ ಗುರುತಾಗಿಲ್ಲ. ಆದರೂ ತೋಟಗಾರಿಕೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.

 

‘ತೋಟಗಾರಿಕೆ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದೊಂದಿಗೆ ಜಮೀನಿನ ಕಂದಾಯ ದಾಖಲಾತಿಗಳು ತೋಟಗಾರಿಕೆ ಇಲಾಖೆಯ ಹೆಸರಿನಲ್ಲಿ ದಾಖಲಾಗುವುದು ಅತ್ಯವಶ್ಯಕವಿರುತ್ತದೆ,’ ಎಂದು ಶಾಲಿನಿ ರಜನೀಶ್‌ ಅವರು ಪತ್ರದಲ್ಲಿ ವಿವರಿಸಿದ್ದಾರೆ.

 

‘ಇದರಿಂದ ಅಂದಾಜು 50 ವರ್ಷಗಳಿಂದ ತೋಟಗಾರಿಕೆ ಇಲಾಖೆಯ ಸ್ವಾಧೀನದಲ್ಲಿದ್ದು ಅಭಿವೃದ್ಧಿಯಾಗಿರುವ ಕ್ಷೇತ್ರ ಮತ್ತು ನರ್ಸರಿಗಳ ಜಮೀನುಗಳ ಮಾಲೀಕತ್ವವನ್ನು ತೋಟಗಾರಿಕೆ ಇಲಾಖೆಗೆ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ,’ ಎಂದು ಶಾಲಿನಿ ರಜನೀಶ್‌ ಅವರು ಪತ್ರದಲ್ಲಿ ಆತಂಕವನ್ನು ವ್ಯಕ್ತಪಡಿಸಿರುವುದು ತಿಳಿದುಬಂದಿದೆ.

 

ಗೋಮಾಳ, ಗಾರಣ್ಯ, ಬಂಜರು, ಸರ್ಕಾರ ಎಂದು ನಮೂದಿಸಿರುವ ಸುಮಾರು 1,369.24 ಎಕರೆ ಸರ್ಕಾರಿ ಕೆರೆ ಕಟ್ಟೆ ಕೆರೆ ಅಂಗಳ ಎಂದು ಪಹಣಿಯಲ್ಲಿ ನಮೂದಿಸಿರುವ ಸುಮಾರು 90.26 ಎಕರೆ, ಪುರಸಭೆ, ನಗರಸಭೆ, ಗ್ರಾಮ ಪಂಚಾಯ್ತಿ ಎಂದು ಪಹಣಿಯಲ್ಲಿ ನಮೂದಿಸಿರುವ ಸುಮಾರು 40.25 ಎಕರೆ , ಇತರೆ ಇಲಾಖೆಗಳ ಹೆಸರಿನಲ್ಲಿ ಪಹಣಿಯಲ್ಲಿ ನಮೂದಾಗಿರುವ ಸುಮಾರು 160.27 ಎಕರೆ, ಖಾಸಗಿ ವ್ಯಕ್ತಿಗಳಹೆಸರಿನಲ್ಲಿ ನಮೂದಿಸಿರುವ ಸುಮಾರು 258.15 ಎಕರೆ ಜಮೀನಿನ ವಿವರಗಳನ್ನು ಕಂದಾಯ ಇಲಾಖೆಗೆ ಸರ್ವೆ ನಂಬರ್‍‌ ಸಹಿತವಾಗಿ ನಮೂದಿಸಿದೆ ಎಂದು ಗೊತ್ತಾಗಿದೆ.

 

ಇದಲ್ಲದೇ ತೋಟಗಾರಿಕೆ ಇಲಾಖೆಯ ಸ್ವಾಧೀನದಲ್ಲಿರುವ ಸುಮಾರು 994.12 ಎಕರೆ ಜಮೀನುಗಳ ಪಹಣಿಯಲ್ಲಿ ಅರಣ್ಯ ಎಂದು ನಮೂದಾಗಿದೆ. ‘ಅಂದಾಜು 50 ವರ್ಷಗಳಿದ ತೋಟಗಾರಿಕೆ ಇಲಾಖೆ ಸ್ವಾಧೀನದಲ್ಲಿರುವ ಈ ಜಮೀನುಗಳು ಈ ಹಿಂದೆಯೇ ಡಿ ನೋಟಿಫಿಕೇ‍ಷನ್‌ ಆಗಿರುವ ಸಾಧ್ಯತೆಗಳಿರುತ್ತವೆ. ಅಂತಹ ಡಿ ನೋಟಿಫಿಕೇಷನ್‌ ಆಗಿರುವ ಜಮೀನುಗಳ ಕಂದಾಯ ದಾಖಲಾತಿಗಳನ್ನು ತೋಟಗಾರಿಕೆ ಇಲಾಖೆಗೆ ವರ್ಗಾಯಿಸಿ ಕ್ರಮಬದ್ಧಗೊಳಿಸಿ ಪಹಣಿಯಲ್ಲಿ ತೋಟಗಾರಿಕೆ ಇಲಾಖೆ ಎಂದು ನಮೂದಿಸಲು ಅಗತ್ಯ ಕ್ರಮ ವಹಿಸಬೇಕಿದೆ,’ ಎಂದು ಪತ್ರದಲ್ಲಿ ಕೋರಿದ್ದಾರೆ.

 

ವಿವಿಧ ಉದ್ದೇಶಗಳಿಗಾಗಿ ಇತರೆ ಇಲಾಖೆಗಳಿಗೆ ತೋಟಗಾರಿಕೆ ಇಲಾಖೆಯ ಜಮೀನುಗಳನ್ನು ನೀಡಲಾಗಿರುತ್ತದೆ ಈ ಜಮೀನುಗಳಿಗೆ ಪರ್ಯಾಯ ಜಮೀನುಗಳನ್ನು ತೋಟಗಾರಿಕೆ ಇಲಾಖೆ ನೀಡಲು ಬಾಕಿ ಇವೆ ಎಂದು ತಿಳಿದು ಬಂದಿದೆ.

 

ತೋಟಗಾರಿಕೆ ಇಲಾಖೆಗೆ ಪರ್ಯಾಯವಾಗಿ ನೀಡಲು ಬಾಕಿ ಇರುವ ಜಮೀನುಗಳಿಗೆ ಬದಲಿಯಾಗಿ ತೋಟಗಾರಿಕೆ ಚಟುವಟಿಕೆಗಳಿಗೆ ಸೂಕ್ತವಾದ ವ್ಯಾಜ್ಯರಹಿತ ಸಮಾನ ಮೌಲ್ಯದ ಪರ್ಯಾಯ ಜಮೀನನ್ನು ಕಂದಾಯ ದಾಖಲಾತಿಗಳೊಂದಿಗೆ ತೋಟಗಾರಿಕೆ ಇಲಾಖೆಯ ಹೆಸರಿಗೆ ಕ್ರಮಬದ್ಧಗೊಳಿಸಲು ಅಗತ್ಯ ಕ್ರಮ ವಹಿಸುವ ಅವಶ್ಯಕತೆ ಇದೆ ಎಂದು ಗೊತ್ತಾಗಿದೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೋಟಗಾರಿಕೆ ಇಲಾಖೆ ಅಧೀನದಲ್ಲಿ ಒಟ್ಟು 413 ಕ್ಷೇತ್ರ ಮತ್ತು ನರ್ಸರಿಗಳು ಇರುತ್ತವೆ. ಈ ಕ್ಷೇತ್ರ ಮತ್ತುನರ್ಸರಿಗಳು ಸುಮಾರು 50 ವರ್ಷಗಳಿಂದ ತೋಟಗಾರಿಕೆ ಇಲಾಖೆಯ ಸ್ವಾಧೀನದಲ್ಲಿದೆ. ತೋಟಗಾರಿಕೆ ಬೆಳೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

 

ರೈತರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವಂಶಾವಳಿಗಳ ತಾಕುಗಳನ್ನು ಸ್ಥಾಪಿಸಿ ಅವುಗಳನ್ನು ಸಸ್ಯೋತ್ಪಾದನೆ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತಿದೆ. ಇಲ್ಲದೇ ತೋಟಗಾರಿಕೆ ಬೆಳೆಗಳ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ವಿವಿಧ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಕೇಂದ್ರ, ಜೈವಿಕ ಕೇಂದ್ರ, ವಿವಿಧ ಮುಖ್ಯ ತೋಟಗಾರಿಕೆ ಉತ್ಕೃಷ್ಣ ಕೇಂದ್ರಗಳನ್ನು ಸ್ಥಾಪಿಸಿದೆ.

Your generous support will help us remain independent and work without fear.

Latest News

Related Posts