ಅಲ್ಪಸಂಖ್ಯಾತರ ಸ್ಲಮ್‌, ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಯೋಜನೆ; ಪ್ರಗತಿಯಿಲ್ಲ, ಶೂನ್ಯ ಸಂಪಾದನೆಯೇ ಎಲ್ಲ

ಬೆಂಗಳೂರು; ರಾಜ್ಯದ   ಹನ್ನೊಂದು ಕಾರ್ಪೋರೇಷನ್‌ಗಳಲ್ಲಿ ಅಲ್ಪಸಂಖ್ಯಾತರ ಸ್ಲಮ್‌, ಕಾಲೋನಿ ಅಭಿವೃದ್ಧಿ ಯೋಜನೆ ಮತ್ತು ಅಲ್ಪಸಂಖ್ಯಾತರಿಗಾಗಿ ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಯೋಜನೆಗೆ 2024ರ ಜನವರಿ 22ರ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಪ್ರಮುಖ ಕಾರ್ಯಕ್ರಮಗಳೂ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳ ಪ್ರಗತಿ ಕುರಿತು 2024ರ ಜನವರಿ 25ರಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ ವಿವರಗಳನ್ನು  ಮಂಡಿಸಿದೆ.

 

ಮುಸ್ಲಿಂ ಸಮುದಾಯಕ್ಕೆ ನೀಡಲಾಗುವ ಅನುದಾನದ ಮೊತ್ತವನ್ನು 4 ರಿಂದ 10 ಸಾವಿರ ಕೋಟಿಗೆ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಹುಬ್ಬಳ್ಳಿಯ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಭರವಸೆಗೆ  ಸದನದ ಒಳಗೆ ಮತ್ತು ಹೊರಗೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು.  ಸಿಎಂ ನೀಡಿದ್ದ ಭರವಸೆಗೆ ಸಚಿವ ಜಮೀರ್‍‌ ಅಹ್ಮದ್‌ ಖಾನ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.  ಇದರ  ಬೆನ್ನಲ್ಲೇ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆಗೆ  ಆಯವ್ಯದಲ್ಲಿ ಘೋಷಣೆ, ಹಂಚಿಕೆ, ಬಿಡುಗಡೆ ಮತ್ತು ಜನವರಿ 22ರ ಅಂತ್ಯಕ್ಕೆ  ವೆಚ್ಚವಾಗಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

 

ಸಭೆಗೆ ಮಂಡಿಸಿದ್ದ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ ಒದಗಿಸಿದ್ದ 2,101.20 ಕೋಟಿ ರು. ಪೈಕಿ 2024ರ ಜನವರಿ 22ರ ಅಂತ್ಯಕ್ಕೆ 1,008.43 ಕೋಟಿ ರು. ಬಿಡುಗಡೆಯಾಗಿದೆ.ಇದರಲ್ಲಿ ಜನವರಿ 22ರ ಅಂತ್ಯಕ್ಕೆ ಖರ್ಚಾಗಿದ್ದು ಕೇವಲ 432.86 ಕೋಟಿಯಷ್ಟೇ. ಇದೇ ಫೆಬ್ರುವರಿಯ 16ರಂದು 2024-25ನೇ ಸಾಲಿನ ಆಯವ್ಯಯ ಮಂಡನೆಯಾಗುತ್ತಿದ್ದರೂ 2023-24ನೇ ಸಾಲಿಗೆ ಸಂಬಂಧಿಸಿದಂತೆ ಜನವರಿ ಅಂತ್ಯಕ್ಕೆ  ಬಿಡುಗಡೆಯಾಗಿದ್ದ ಅನುದಾನದಲ್ಲಿಯೇ ವೆಚ್ಚಕ್ಕೆ ಇನ್ನೂ 575.57 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

 

ವಿಶೇಷವೆಂದರೇ  ಆಯವ್ಯಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು  ಅಕ್ಟೋಬರ್‌ ಅಂತ್ಯಕ್ಕೆ 421.06 ಕೋಟಿಯಷ್ಟೇ ಬಿಡುಗಡೆ ಮಾಡಿತ್ತು.  ಅಕ್ಟೋಬರ್‍‌ ಅಂತ್ಯಕ್ಕೆ  ಒಟ್ಟು ಅನುದಾನಕ್ಕೆ ಶೇ.20ರಷ್ಟು ಮಾತ್ರ ಬಿಡುಗಡೆಯಾಗಿತ್ತು. ಇದರಲ್ಲಿ 303.58 ಕೋಟಿ ರು. ಖರ್ಚಾಗಿತ್ತು.

 

 

ಜನವರಿ 22ರ ಅಂತ್ಯಕ್ಕೆ 1,008.43 ಕೋಟಿ ರು. ಬಿಡುಗಡೆ ಮಾಡಿದೆ. ಅಕ್ಟೋಬರ್‍‌ ಮತ್ತು ಜನವರಿ 22ರ ಅಂತ್ಯರ ಮಧ್ಯೆ  129.28 ಕೋಟಿಯಷ್ಟೇ ಖರ್ಚಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಬಿಡುಗಡೆಯಾಗಿರುವ ಒಟ್ಟು ಅನುದಾನಕ್ಕೆ ಕೇವಲ ಶೇ.20.56ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಆಯವ್ಯಯದಲ್ಲಿ ಘೋಷಿಸಿದ್ದ ಒಟ್ಟು ಅನುದಾನಕ್ಕೆ ಶೇ.36.93ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

 

 

ರಾಜ್ಯದ 11 ಕಾರ್ಪೋರೇಷನ್‌ಗಳಲ್ಲಿ ಅಲ್ಪಸಂಖ್ಯಾತರ ಸ್ಲಮ್‌, ಕಾಲೋನಿ ಅಭಿವೃದ್ಧಿ ಯೋಜನೆಗೆ ಆಯವ್ಯಯದಲ್ಲಿ 200.00 ಕೋಟಿ ರು. ಅನುದಾನ ಒದಗಿಸಿತ್ತು. ಜನವರಿ 22ರ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ. ಅದೇ ರೀತಿ ಅಲ್ಪಸಂಖ್ಯಾತರಿಗಾಗಿ ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಯೋಜನೆಗಾಗಿ 50 ಕೋಟಿ ರು. ಅನುದಾನ ಒದಗಿಸಿತ್ತು. ಇದರಲ್ಲಿಯೂ ಜನವರಿ 22ರ ಅಂತ್ಯಕ್ಕೆ ನಯಾಪೈಸೆ ನೀಡಿಲ್ಲ. ಹೀಗಾಗಿ ಈ ಎರಡೂ ಮಹತ್ವದ ಕಾರ್ಯಕ್ರಮಗಳಲ್ಲಿ ಶೂನ್ಯ ಸಂಪಾದನೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮತ್ತು ಶುಲ್ಕ ಮರುಪಾವತಿಗೆ 160 ಕೋಟಿ ರು. ಅನುದಾನವಿತ್ತು. ಅಕ್ಟೋಬರ್‌ ಅಂತ್ಯಕ್ಕೆ  ಕೇವಲ 2.29 ಕೋಟಿ ರು ಮಾತ್ರ ಬಿಡುಗಡೆಯಾಗಿತ್ತು. ಇದರಲ್ಲಿ 0.10 ಕೋಟಿ ರು. ಮಾತ್ರ ವೆಚ್ಚವಾಗಿತ್ತು. ಜನವರಿ 22ರ ಅಂತ್ಯಕ್ಕೆ 50.63 ಕೋಟಿ ರು. ಬಿಡುಗಡೆ (ಶೇ.31.64) ಮಾಡಿದೆ. ಬಿಡುಗಡೆಗೆ ಇನ್ನೂ 103.37 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿರುವ 50.63 ಕೋಟಿ ರು.ನಲ್ಲಿ ವೆಚ್ಚ ಮಾಡಿರುವುದು 39.37 ಕೋಟಿ ರು. ಮಾತ್ರ. ವೆಚ್ಚಕ್ಕೆ ಇನ್ನೂ 11.26 ಕೋಟಿ ರು. ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.

 

ಹಾಗೆಯೇ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ 110 ಕೋಟಿ ರು. ಅನುದಾನ ಒದಗಿಸಿತ್ತು. ಅಕ್ಟೋಬರ್‌ ಅಂತ್ಯಕ್ಕೆ ಕೇವಲ 1.00 ಕೋಟಿ ರು ಮಾತ್ರ ಬಿಡುಗಡೆ ಮಾಡಿತ್ತು. ಜನವರಿ 22ರ ಅಂತ್ಯಕ್ಕೆ 29.18 ಕೋಟಿ ರು.   ಬಿಡುಗಡೆ ಮಾಡಿತ್ತು. ಬಿಡುಗಡೆಯಾಗಿರುವ ಅನುದಾನದಲ್ಲಿ 28.18 ಕೋಟಿ ರು. ವೆಚ್ಚ ಮಾಡಿರುವುದು ಗೊತ್ತಾಗಿದೆ.

 

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮಕ್ಕೆ  ರಾಜ್ಯದ ಅನುದಾನ 83 ಕೋಟಿ ಮತ್ತು ಕೇಂದ್ರದ ಅನುದಾನ 100 ಕೋಟಿ ರು ಸೇರಿ  ಒಟ್ಟು 183 ಕೋಟಿ ರು. ಅನುದಾನವಿತ್ತು. ಜನವರಿ 22ರ ಅಂತ್ಯಕ್ಕೆ ರಾಜ್ಯ ಸರ್ಕಾರವು 83.00 ಕೋಟಿ ರು. ನಲ್ಲಿ 15.55 ಕೋಟಿ ರು., ಕೇಂದ್ರ  ಸರ್ಕಾರವು 100 ಕೋಟಿ ರು.ನಲ್ಲಿ 23.34 ಕೋಟಿ ರು ಸೇರಿ ಒಟ್ಟಾರೆ 38.89 ಕೋಟಿ ರು. ಬಿಡುಗಡೆ ಮಾಡಿತ್ತು. ಬಿಡುಗಡೆ ಮಾಡಿದ್ದ 38.89 ಕೋಟಿ ರು.ಗಳನ್ನೂ ಇಲಾಖೆಯು ವೆಚ್ಚ ಮಾಡಿರುವುದು ಗೊತ್ತಾಗಿದೆ.  ಇದೇ ಪ್ರಧಾನ ಮಂತ್ರಿ ಜನವಿಕಾಸ ಕಾರ್ಯಕ್ರಮಕ್ಕೆ   ಅಕ್ಟೋಬರ್‌ ಅಂತ್ಯಕ್ಕೆ ನಯಾಪೈಸೆಯನ್ನೂ ನೀಡದೇ ಶೂನ್ಯ ಸಂಪಾದನೆ ಮಾಡಿತ್ತು.

 

ಅಲ್ಪಸಂಖ್ಯಾತರಿಗೆ ಅನುದಾನ; 2,101.20 ಕೋಟಿ ರು.ನಲ್ಲಿ ಬಿಡುಗಡೆ ಮಾಡಿದ್ದು ಕೇವಲ 421.60 ಕೋಟಿ

ಅಲ್ಪಸಂಖ್ಯಾತರ ಸಮುದಾಯದ ಎಂ ಫಿಲ್‌, ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಸಹಾಯ ಧನ ಒದಗಿಸಲು 6.0 ಕೋಟಿ ರು. ಆಯವ್ಯಯದಲ್ಲಿ ಒದಗಿಸಿಕೊಂಡಿತ್ತು. . ಅಕ್ಟೋಬರ್‌ ಅಂತ್ಯಕ್ಕೆ 2.33 ಕೋಟಿ ರು. ಮಾತ್ರ ವೆಚ್ಚವಾಗಿತ್ತು.  ಶುಲ್ಕ ಮರು ಪಾವತಿಗೆ ಸಂಬಂಧಿಸಿದಂತೆ 25 00 ಕೋಟಿ ರು. ಆಯವ್ಯಯದಲ್ಲಿ ಒದಗಿಸಿಕೊಂಡಿತ್ತಾದರೂ  ಅಕ್ಟೋಬರ್‌ ಅಂತ್ಯಕ್ಕೆ ಒಂದೇ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. 18,000 ವಿದ್ಯಾರ್ಥಿಗಳಿಗೆ  ಶುಲ್ಕ ಮರುಪಾವತಿ ಮಾಡಲು ವಾರ್ಷಿಕ ಗುರಿ ನೀಡಲಾಗಿತ್ತು.

 

ಇನ್ನು ಮೌಲಾನಾ ಆಜಾದ್‌ ಶಾಲೆ ಕಾಲೇಜು ನಿರ್ವಹಣೆ ಮತ್ತು ನೂತನ ಹಾಸ್ಟೆಲ್‌ಗಳಿಗೆಂದು 68.29 ಕೋಟಿ ರು. ಒದಗಿಸಿದೆ. ಇದರಲ್ಲಿ 43.55 ಕೋಟಿ ರು.ಬಿಡುಗಡೆ ಮಾಡಿದೆ. ಇದರಲ್ಲಿ 35.38 ಕೋಟಿ ರು. ವೆಚ್ಚವಾಗಿತ್ತು.  ವಿದ್ಯಾರ್ಥಿನಿಲಯಗಳು ಮತ್ತು ವಸತಿ ಶಾಲೆಗಳ ನಿರ್ವಹಣೆಗೆ 347.89 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿತ್ತು. ಇದರಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 181.42 ಕೋಟಿ ರು. ಮಾತ್ರ ಬಿಡುಗಡೆ ಮಾಡಿತ್ತು. . ಈ ಪೈಕಿ 123.12 ಕೋಟಿ ರು ವೆಚ್ಚ ಮಾಡಿತ್ತು.

 

ಶ್ರಮ ಶಕ್ತಿ ಸಾಲ ಯೋಜನೆ (ವೈಯಕ್ತಿಕ) ಯಡಿ 1,000 ವ್ಯಕ್ತಿಗಳಿಗೆ ಆರ್ಥಿಕ ನೆರವು ನೀಡಲು 5.00 ಕೋಟಿ ರು. ನೀಡಿದೆ. ಆದರೆ ಬಿಡಿಗಾಸೂ ನೀಡಿರಲಿಲ್ಲ. ಆದರೆ 11.01 ಕೋಟಿ ವೆಚ್ಚವಾಗಿದೆ ಎಂದು ತೋರಿಸಿತ್ತು.

the fil favicon

SUPPORT THE FILE

Latest News

Related Posts