ಬೆಂಗಳೂರು; ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಸಹಕಾರ ತೋರುತ್ತಿರುವುದು ಇದೀಗ ಬಹಿರಂಗವಾಗಿದೆ.
ಆಯೋಗದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ನಡುವೆ ಶೀತಲ ಸಮರ ನಡೆಯುತ್ತಿರುವ ಹೊತ್ತಿನಲ್ಲಿಯೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆಯೋಗಕ್ಕೆ ಸಹಕರಿಸದೇ ಇರುವ ಸಂಗತಿಯು ಮುನ್ನೆಲೆಗೆ ಬಂದಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಂಜನಿಯರಿಂಗ್ ಕಾಲೇಜು, ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ, ಪಾಲಿಟೆಕ್ನಿಕ್, ಶಿಕ್ಷಣ ತರಬೇತಿ ಕೇಂದ್ರಗಳು, ಅನುದಾನರಹಿತ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಡಿಯಲ್ಲಿ ಬರುವ ಶಾಲಾ ಕಾಲೇಜಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಒಪ್ಪಿಗೆ ಪತ್ರ ನೀಡುತ್ತಿಲ್ಲ.
ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷೆ ಕೇಂದ್ರಗಳನ್ನು ಒದಗಿಸಲು ಸಹಕರಿಸುತ್ತಿಲ್ಲ ಎಂದು ಆಯೋಗದ ಕಾರ್ಯದರ್ಶಿ ಕೆ ಎಸ್ ಲತಾಕುಮಾರಿ ಅವರು 2023ರ ನವೆಂಬರ್ 22, ಡಿಸೆಂಬರ್‌ನಲ್ಲಿ ಹಲವು ಪತ್ರಗಳನ್ನು ಬರೆದಿದ್ದಾರೆ. ಈ ಪತ್ರಗಳ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಆಯೋಗದ ಕಾರ್ಯದರ್ಶಿಗಳು ಬರೆದಿದ್ದ ಪತ್ರಗಳನ್ನಾಧರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2024ರ ಜನವರಿ 25ರಂದು ಇಲಾಖೆಯ ಆಯುಕ್ತರು, ಹೆಚ್ಚುವರಿ ಆಯುಕ್ತರು, ನಿರ್ದೇಶಕರುಗಳಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಆಯೋಗದ ಕಾರ್ಯದರ್ಶಿ ಪತ್ರದಲ್ಲೇನಿದೆ?
ಆಯೋಗವು ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿರುವ ಶಾಲಾ ಕಾಲೇಜುಗಳನ್ನು ಉಪಕೇಂದ್ರಗಳನ್ನಾಗಿ ಗುರುತಿಸಿದೆ. ಈ ಸಂಸ್ಥೆಗಳಿಂದ ಒಪ್ಪಿಗೆ ಪಡೆದು ಅಭ್ಯರ್ಥಿಗಳನ್ನು ಹಂಚಿಕೆ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಬೇಕಾಗಿರುತ್ತದೆ. ಆದರೆ ಪ್ರಸ್ತುತ ಅಧಿಸೂಚನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.
ಆಯೋಗವು ಜಿಲ್ಲಾ ಕೇಂದ್ರಗಳ ಶಾಲಾ, ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರನ್ನು ಸಂಪರ್ಕಿಸಿತ್ತು. ಆದರೆ ಇವರುಗಳು ಪರೀಕ್ಷೆ ನಡೆಸಲು ಒಪ್ಪಿಗೆ ಪತ್ರ ನೀಡದೇ ಅಸಹಕಾರ ನೀಡುತ್ತಿದ್ದಾರೆ. ಹೀಗಾಗಿ ನಿಗದಿತ ಕಾಲ ಮಿತಿಯೊಳಗೆ ಪರೀಕ್ಷೆ ನಡೆಸಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಆಯೋಗದ ಕಾರ್ಯದರ್ಶಿಯು 2023ರ ನವೆಂಬರ್ 22ರಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.
ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದುರಾಚಾರ ಪ್ರಕರಣಗಳು ನಡೆಯುತ್ತಿರುವ ಅಂಶಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನ್ಯಾಯಯುತವಾಗಿ ಪಾರದರ್ಶಕತೆಯಿಂದ ಹಾಗೂ ಯಾವುದೇ ತೊಂದರೆಯಿಲ್ಲದೇ ಭ್ರಷ್ಟಾಚಾರ ಮುಕ್ತವಾಗಿ ನಡೆಸಬೇಕಾದ ಜವಾಬ್ದಾರಿ ಆಯೋಗದ ಮೇಲಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಸರ್ಕಾರಿ ಶಿಕ್ಷಣ ಸಂಸ್ಥೆಗಳೇ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅಸಹಕಾರ ನೀಡುತ್ತಿರುವುದು ಒಳ್ಳೆಯದಲ್ಲ. ಆದ್ದರಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಶಾಲಾ ಕಾಲೇಜಿನ ಮುಖ್ಯಸ್ಥರುಗಳಿಗೆ ಆಯೋಗದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಳನ್ನು ನಿರ್ವಹಿಸಲು ಪ್ರಥಮ ಆದ್ಯತೆಯಲ್ಲಿ ಒಪ್ಪಿಗೆ ಪತ್ರ ನೀಡಲು ನಿರ್ದೇಶಿಸಬೇಕು,’ ಎಂದು ಕಾರ್ಯದರ್ಶಿ ಲತಾಕುಮಾರಿ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಈ ಪತ್ರವನ್ನಾಧರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ರಾಜ್ಯದ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಆಯುಕ್ತರು, ಅಪರ ಆಯುಕ್ತರು, ನಿರ್ದೇಶಕರುಗಳಿಗೆ ಪತ್ರವನ್ನು ಬರೆದಿದ್ದಾರೆ.
‘ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಳನ್ನು ನಿರ್ವಹಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಒಪ್ಪಿಗೆ ಪತ್ರ ಆಯೋಗಕ್ಕೆ ನೀಡಬೇಕು. ಈ ಸಂಬಂಧ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು,’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಯು ನಿರ್ದೇಶಿಸಿದ್ದಾರೆ.