ಬೆಂಗಳೂರು; ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ 7,000 ಲ್ಯಾಪ್‌ಟಾಪ್ ಖರೀದಿಸಿರುವ ಬೆನ್ನಲ್ಲೇ ಇದೀಗ ಪದವಿಪೂರ್ವ ಶಿಕ್ಷಣ ಮಂಡಳಿಯು ಸಹ 768 ಲ್ಯಾಪ್‌ಟಾಪ್ ಖರೀದಿಸಲು ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 60,000 ರು. ದರ ನಿಗದಿಗೊಳಿಸಿ ಒಟ್ಟಾರೆ 9.73 ಕೋಟಿ ರು ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮದಡಿಯಲ್ಲಿ ಪಿಯುಸಿ 2024ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಯ ಭಾಗವಾಗಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದರಲ್ಲಿ ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 60,000 ರು. ಎಂದು ಪಿಯು ಮಂಡಳಿಯೇ ದರ ನಿಗದಿಪಡಿಸಿದೆ.
ಪದವಿಪೂರ್ವ ಶಿಕ್ಷಣ ಮಂಡಳಿಯ ಉಪನಿರ್ದೇಶಕರು (ಶೈಕ್ಷಣಿಕ) ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2024ರ ಜನವರಿ 16ರಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೈಕಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ಹೆಸರಿನಲ್ಲಿ ಲ್ಯಾಪ್‌ಟಾಪ್ ವಿತರಣೆ ಯೋಜನೆ ಹಮ್ಮಿಕೊಂಡಿತ್ತು. ಪ.ಜಾತಿಯ ಪ್ರತಿ ವಿಭಾಗದ 5 ವಿದ್ಯಾರ್ಥಿಗಳಿಗೆ 15 ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಪ್ರತಿ ವಿಭಾಗದ 3 ವಿದ್ಯಾರ್ಥಿಗಳಿಗೆ ಒಟ್ಟು 09 ಲ್ಯಾಪ್‌ಟಾಪ್‌ಗಳನ್ನು ಬಹುಮಾನವಾಗಿ ನೀಡಲಿದೆ. ಇದಕ್ಕಾಗಿ ಪಿಯು ಮಂಡಳಿಯು ಕ್ರಿಯಾ ಯೋಜನೆ ರೂಪಿಸಿರುವುದು ಪ್ರಸ್ತಾವನೆಯಿಂದ ತಿಳಿದು ಬಂದಿದೆ.
ಒಟ್ಟು 32 ಶೈಕ್ಷಣಿಕ ಜಿಲ್ಲೆಗಳಲ್ಲಿ 2023-24ನೇ ಸಾಲಿಗೆ 768 ಲ್ಯಾಪ್‌ಟಾಪ್ ಖರೀದಿಸಲು ಪ್ರಸ್ತಾವಿಸಿದೆ. ಪ್ರತಿ ಲ್ಯಾಪ್‌ಟಾಪ್‌ಗೆ 60,000 ರು.ನಂತೆ ಎಸ್‌ಸಿಪಿ ಅಡಿಯಲ್ಲಿ 480 ಲ್ಯಾಪ್‌ಟಾಪ್‌ಗಳಿಗೆ 2.88 ಕೋಟಿ ರು., ಟಿಎಸ್‌ಪಿ ಅಡಿಯಲ್ಲಿ 288 ಲ್ಯಾಪ್‌ಟಾಪ್‌ಗಳಿಗೆ 1.72 ಕೋಟಿ ರು. ಒಟ್ಟಾರೆ 4.60 ಕೋಟಿ ರು. ಅನುದಾನ ಕೋರಿದೆ.
ಅದೇ ರೀತಿ 2024-25ನೇ ಸಾಲಿಗೆ ವಿಶ್ವಾಸ ಕಿರಣ ಯೋಜನೆಯಡಿಯಲ್ಲಿ 4.06 ಕೋಟಿ ರು, ಲ್ಯಾಪ್‌ಟಾಪ್ ಯೋಜನೆಯಡಿಯಲ್ಲಿ 2.88 ಕೋಟಿ ರು., ಸೇರಿ 6.98 ಕೋಟಿ ರು., (ಎಸ್‌ಸಿಪಿ), ಟಿಎಸ್‌ಪಿ ಅಡಿಯಲ್ಲಿ ವಿಶ್ವಾಸ ಕಿರಣ ಯೋಜನೆಯಡಿಯಲ್ಲಿ 1.08 ಕೋಟಿ ರು., ಲ್ಯಾಪ್‌ಟಾಪ್ ಯೋಜನೆಯಡಿಯಲ್ಲಿ 1.72 ಕೋಟಿ ರು. ಸೇರಿ ಒಟ್ಟಾರೆ 9.76 ಕೋಟಿ ರು. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆ ಕುರಿತು ಸಚಿವ ಮಧು ಬಂಗಾರಪ್ಪ ಅವರು ಇನ್ನಷ್ಟೇ ಚರ್ಚಿಸಬೇಕಿದೆ ಎಂದು ಗೊತ್ತಾಗಿದೆ.
ಪದವಿಪೂರ್ವ ಶಿಕ್ಷಣ ಮಂಡಳಿಯು ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 60,000 ರು. ದರ ಎಂದು ನಿಗದಿಪಡಿಸಿರುವುದು ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟಾಗಿದೆ. ಇದು ಸಾರ್ವಜನಿಕ ಟೀಕೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಲ್ಯಾಪ್‌ಟಾಪ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಲವಾಗಿ ಆರೋಪಿಸುತ್ತಲೇ ಬಂದಿದ್ದ ಕಾಂಗ್ರೆಸ್ ಪಕ್ಷವು ಇದೀಗ ತನ್ನದೇ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಮುಕ್ತ ಮತ್ತು ಆನ್‌ಲೈನ್ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಲ್ಯಾಪ್ ಟಾಪ್ ಖರೀದಿಸಿರುವುದು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿದೆ.
ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಬೆಳಗಾವಿ, ಕಲ್ಬುರ್ಗಿ, ಹಾಸನ, ಬೆಂಗಳೂರು-1, ಬೆಂಗಳೂರು-2 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ತಲಾ 1,400 ಲ್ಯಾಪ್‌ಟಾಪ್‌ಗಳಂತೆ ಒಟ್ಟು 7,000 ಲ್ಯಾಪ್‌ಟಾಪ್‌ಗಳನ್ನು 49.75 ಕೋಟಿ ರು. ದರದಲ್ಲಿ ಖರೀದಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಎಲ್-1 ಆಗಿ ಹೊರಹೊಮ್ಮಿದ್ದ ಕಂಪನಿಯು ನಮೂದಿಸಿದ್ದ ದುಪ್ಪಟ್ಟು ದರವನ್ನೇ ಅನುಮೋದಿಸುವ ಮೂಲಕ 23.15 ಕೋಟಿ ರು. ಹಗರಣಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
7,000 ಲ್ಯಾಪ್‌ಟಾಪ್ ಖರೀದಿ; ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 23 ಕೋಟಿ ರು. ಹಗರಣ
ಮಂಡಳಿಯು ನಿಗದಿಪಡಿಸಿದ್ದ ತಾಂತ್ರಿಕ ನಿರ್ದಿಷ್ಟತೆಗಳನ್ನೇ ಹೊಂದಿರುವ ಪ್ರತಿಷ್ಠಿತ ಕಂಪನಿಗಳು ತಲಾ ಲ್ಯಾಪ್‌ಟಾಪ್‌ಗೆ ಕನಿಷ್ಟ 27,999 ರು.ಗಳಿಂದ ಗರಿಷ್ಠ 35,999 ರು ವರೆಗೆ ದರ ನಿಗದಿಪಡಿಸಿದೆ.
ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿಗಳು ತಲಾ ಲ್ಯಾಪ್‌ಟಾಪ್ ಬೆಲೆಯನ್ನು ನಮೂದಿಸಿಲ್ಲ. ನೈನ್ ರಿಚ್ ಇನ್ಫೋಟೆಕ್ ಕಂಪನಿಯು ಒಟ್ಟಾರೆ 1,400 ಲ್ಯಾಪ್‌ಟಾಪ್‌ಗಳಿಗೆ 9,94,64,499 ರು. ಎಂದು ನಮೂದಿಸಿದೆ. ಇದರ ಪ್ರಕಾರ ತಲಾ ಲ್ಯಾಪ್‌ಟಾಪ್‌ಗೆ 71,046 ರು. ನಂತೆ 1,400 ಲ್ಯಾಪ್‌ಟಾಪ್‌ಗಳಿಗೆ 9,94,64,499 ರು ನಂತೆ 5 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 49.75 ಕೋಟಿ ರು. ಆಗಲಿದೆ. ಹನುಮಂತ ಪೂಜಾರಿ ಅವರು 2024ರ ಜನವರಿ 16ರಂದು ಖಾಸಗಿ ಕಂಪನಿಯೊಂದರಿಂದ ಪಡೆದಿರುವ ದರಪಟ್ಟಿ ಪ್ರಕಾರ ತಲಾ ಲ್ಯಾಪ್‌ಟಾಪ್‌ಗೆ 38,000 ರು. ಇದೆ.
ಈ ದರದ ಪ್ರಕಾರ 1,400 ಲ್ಯಾಪ್‌ಟಾಪ್‌ಗಳಿಗೆ 5.32 ಕೋಟಿ ರು. ನಂತೆ 7,000 ಲ್ಯಾಪ್‌ಟಾಪ್‌ಗಳಿಗೆ 26.60 ಕೋಟಿ ರು ಆಗಲಿದೆ. ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 33,046 ರು. ನಂತೆ ಒಟ್ಟಾರೆ 23.15 ಕೋಟಿ ರು. ಅಧಿಕ ದರ ಪಾವತಿಸಿ ಖರೀದಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ. 9,94,64,499 ರು. ನಮೂದಿಸಿ ಎಲ್-1 ಆಗಿರುವ ನೈನ್‌ರಿಚ್ ಇನ್ಫೋಟೆಕ್ ಕಂಪನಿ ಜತೆ ಮಂಡಳಿಯು 2023ರ ಆಗಸ್ಟ್ 11ರಂದು ಕರಾರು ಮಾಡಿಕೊಂಡಿದೆ. ಆಗಸ್ಟ್ 17ರಂದು ಪೂರೈಕೆ ಆದೇಶ ನೀಡಿದೆ.
ಲ್ಯಾಪ್‌ಟಾಪ್ ಖರೀದಿ ಸಂಬಂಧ ಕರೆದಿದ್ದ ಟೆಂಡರ್‍ನಲ್ಲಿ ಒಟ್ಟು ಮೂರು ಕಂಪನಿಗಳು ಭಾಗವಹಿಸಿದ್ದವು. ಅದರಲ್ಲಿ ನೈನ್ ರಿಚ್ ಇನ್ಫೋಟೆಕ್ ಕಂಪನಿಯು 9,94,64,499 ರು., ಎನ್ ಡಿ ಮ್ಯಾನೇಜ್‌ಮೆಂಟ್ 10,04,99,999 ರು., ವಾಂಟೇಜ್ ನೆಟ್‌ವರ್ಕ್ ಸಲ್ಯೂಷನ್ಸ್ 10,25,99,000 ರು.ಗಳನ್ನು ನಮೂದಿಸಿತ್ತು. ಆದರೆ ಈ ಮೂರು ಕಂಪನಿಗಳೂ ತಲಾ ಲ್ಯಾಪ್‌ಟಾಪ್ ದರವನ್ನು ನಮೂದಿಸಿರಲಿಲ್ಲ ಎಂಬುದು ನಡವಳಿಯಿಂದ ಗೊತ್ತಾಗಿದೆ.
ಹಿಂದಿನ ಸರ್ಕಾರದ ಅವಧಿಯ ಲ್ಯಾಪ್‌ಟಾಪ್ ಖರೀದಿಯಲ್ಲಾಗಿರುವುದೇನು?
ಈ ಪೈಕಿ 5,360 ಸಂಖ್ಯೆಯ ಲ್ಯಾಪ್‌ಟಾಪ್ ಖರೀದಿಗೆ ಕ್ರಿಯಾಯೋಜನೆಗೆ ಅನುಮೋದನೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ಪಡೆದುಕೊಂಡಿದೆ. ಲ್ಯಾಪ್‌ಟಾಪ್‌ವೊಂದಕ್ಕೆ 34,220 ರು.ದರದ ಪ್ರಕಾರ ಒಟ್ಟು 4.04 ಕೋಟಿ ರು.ಮೊತ್ತದಲ್ಲಿ 1,180 ಲ್ಯಾಪ್‌ಟಾಪ್‌ಗಳ ಖರೀದಿಸಲು ಅನುಮೋದನೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ 5,075 ಲ್ಯಾಪ್‌ಟಾಪ್‌ಗಳ ಖರೀದಿಗೆ ಅವಕಾಶ ಕಲ್ಪಿಸಿದೆಯಾದರೂ ಈ ಪೈಕಿ 1,084 ಲ್ಯಾಪ್‌ಟಾಪ್‌ಗಳನ್ನು ಮಾತ್ರ ಖರೀದಿಸಲು ಅಧಿಕಾರಿಗಳು ತಯಾರಿ ನಡೆಸಿದ್ದರು. ಇನ್ನು 3,991 ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು 2019-20ನೇ ಸಾಲಿಗೆ ಕ್ರಿಯಾಯೋಜನೆಗೆ ಅನುಮತಿ ಕೊಟ್ಟಲ್ಲಿ ಉಳಿತಾಯವಾಗಬಹುದಾದ ಒಟ್ಟು 11.95 ಕೋಟಿ ರು.ಗಳಿಂದ 3,991 ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಪ್ರಕ್ರಿಯೆ ನಡೆದಿತ್ತು.
ಕಾರ್ಯಾದೇಶಕ್ಕೆ ಸರ್ಕಾರದ ಅನುಮತಿಯೇ ಇರಲಿಲ್ಲ
ಲ್ಯಾಪ್‌ಟಾಪ್ ಖರೀದಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಟೆಂಡರ್ ದಾಖಲಾತಿಗಳನ್ನು ಪರಿಶೀಲಿಸಿದ್ದರು. ಇದರ ಪ್ರಕಾರ 2019ರ ಏಪ್ರಿಲ್ 27ರಂದು ಟೆಂಡರ್ ಆಹ್ವಾನಿಸಿದ್ದ ಇಲಾಖೆ, ಬಿಡ್ ಸಲ್ಲಿಸಲು 2019ರ ಮೇ 8 ಕೊನೆಯ ದಿನಾಂಕವೆಂದು ನಿಗದಿಪಡಿಸಿತ್ತು.
ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿ; ತುಂಡು ಗುತ್ತಿಗೆ ಹಿಂದಿದೆ ಅವ್ಯವಹಾರದ ವಾಸನೆ!
ರಾಜ್ಯದ ಒಟ್ಟು 8 ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ 9,52,41,000 ರು.ಮೊತ್ತದಲ್ಲಿ ಡೆಸ್ಕ್‌ಟಾಪ್ ಖರೀದಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ 25.00 ಲಕ್ಷ ರು.ಗಳ ಮಿತಿಯಲ್ಲಿ ಖರೀದಿಸಲು ಸರ್ಕಾರ ಹೊರಡಿಸಿರುವ ಆದೇಶವನ್ನೇ ತಾಂತ್ರಿಕ ಶಿಕ್ಷಣ ಇಲಾಖೆ ಗಾಳಿಗೆ ತೂರಿತ್ತು.