ದ ಪಾಲಿಸಿ ಫ್ರಂಟ್‌ ಕಡತಕ್ಕೆ ಚಿರತೆ ವೇಗ; ಸಿಎಂ ಸಭೆ ನಡೆಸಿದ ದಿನದಂದೇ ಮನವಿ, ಅಂದೇ ಇಲಾಖೆಯಿಂದಲೂ ಪ್ರಸ್ತಾವನೆ

ಬೆಂಗಳೂರು; ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಲು ನಿಗೂಢವಾಗಿರುವ ದ ಪಾಲಿಸಿ ಫ್ರಂಟ್‌  ಸಲ್ಲಿಸಿದ್ದ ಪ್ರಸ್ತಾವನೆಯನ್ನೊಳಗೊಂಡ ಮನವಿಗೆ ಸರ್ಕಾರದ ಹಂತದಲ್ಲಿ ಒಂದೇ ದಿನದಲ್ಲೇ ಚಿರತೆ ವೇಗ ದೊರಕಿತ್ತು ಎಂಬುದು ಇದೀಗ ಬಹಿರಂಗವಾಗಿದೆ

 

ದ ಪಾಲಿಸಿ ಫ್ರಂಟ್‌ ಗೆ ಹೊರಗುತ್ತಿಗೆ ನೀಡಿರುವುದು ಈಗಾಗಲೇ ಹಲವು ಸಂಶಯಗಳಿಗೆ  ದಾರಿಮಾಡಿಕೊಟ್ಟಿದೆ. ಇದರ ನಡುವೆಯೇ ಹೊರಗುತ್ತಿಗೆ ಪಡೆಯುವ ಸಂಬಂಧ ಸಲ್ಲಿಸಿದ್ದ ಮನವಿ ಮತ್ತು ಪ್ರಸ್ತಾವನೆಗೆ 24 ಗಂಟೆಯೊಳಗೇ ಸರ್ಕಾರದ ಹಂತದಲ್ಲಿ ಬಿರುಸಿನ ಚಾಲನೆ ದೊರಕಿತ್ತು ಎಂಬುದನ್ನು ಸಾಬೀತುಪಡಿಸಲು ದಾಖಲೆಗಳನ್ನು ‘ದಿ ಫೈಲ್‌’ ಇದೀಗ ಬಹಿರಂಗಗೊಳಿಸುತ್ತಿದೆ.

 

 

ಶಕ್ತಿ  ಯೋಜನೆಯೂ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದ ದಿನದಂದೇ ದ ಪಾಲಿಸಿ ಫ್ರಂಟ್‌ ಹೆಸರಿನ ನಿಗೂಢ ಕಂಪನಿಯು ವಾರ್ತಾ ಇಲಾಖೆಗೆ ಮನವಿ ಸಲ್ಲಿಸಿತ್ತು.

 

ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ ದಿನದಂದೇ ದ ಪಾಲಿಸಿ ಫ್ರಂಟ್‌ ಸಲ್ಲಿಸಿದ್ದ ಮನವಿಯನ್ನಾಧರಿಸಿ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ಸ್ಥಳದಲ್ಲೇ ಪ್ರಕ್ರಿಯೆ ಆರಂಭಿಸಿದ್ದರು. ಮನವಿ, ಪ್ರಸ್ತಾವನೆ ಸ್ವೀಕರಿಸಿದ  ಅದೇ ದಿನದಂದೇ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೂ ಪ್ರಸ್ತಾವನೆಯನ್ನು ಸಲ್ಲಿಸಿದ್ದರು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಈ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದೆ.

 

ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡುವ ಸಂಬಂಧ ವಿಳಾಸವೇ ಇಲ್ಲದ ದ ಪಾಲಿಸಿ ಫ್ರಂಟ್‌ ಗೆ ತಿಂಗಳಿಗೆ 60 ಲಕ್ಷ ರು. ಪಾವತಿ ಮಾಡುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

 

ಅಲ್ಲದೇ ಪರಿಶಿಷ್ಟ ಉಪ ಯೋಜನೆ ಅನುದಾನವನ್ನು ಈ ಕಂಪನಿಗೆ ಹಂಚಿಕೆ ಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸ್ತಾಪಿಸಿದ್ದರ  ಬೆನ್ನಲ್ಲೇ ಮುಖ್ಯಮಂತ್ರಿ ಸಭೆ ನಡೆಸಿದ ದಿನದಂದೇ ದ ಪಾಲಿಸಿ ಫ್ರಂಟ್ ಕೂಡ  ಪ್ರಸ್ತಾವನೆ ಸಲ್ಲಿಸಿರುವುದು ಮುನ್ನೆಲೆಗೆ ಬಂದಿದೆ.

 

‘ದ ಪಾಲಿಸಿ ಫ್ರಂಟ್‌’ ಗೆ ಪರಿಶಿಷ್ಟ ಉಪ ಯೋಜನೆಯ ಅನುದಾನ ಹಂಚಿಕೆ; ದಾಖಲೆ ಬಹಿರಂಗ

 

2023ರ ಜುಲೈ 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಅದೇ ದಿನದಂದೇ ದ ಪಾಲಿಸಿ ಫ್ರಂಟ್‌ ವಾರ್ತಾ ಇಲಾಖೆಯ ಸರ್ಕಾರದ ಆಯುಕ್ತರಿಗೆ ಮನವಿಯನ್ನೂ ಸಲ್ಲಿಸಿತ್ತು.

 

ಮನವಿಯಲ್ಲೇನಿದೆ?

 

ಕರ್ನಾಟಕ ಸರ್ಕಾರವು ಜನರ ಕಲ್ಯಾಣಕ್ಕಾಗಿ ಖಾತರಿ ಯೋಜನೆಗಳು ಹಾಗೂ ಇನ್ನಿತರೆ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಈ ಯೋಜನೆಗಳ ಆರಂಭಿಕ ಮಾಹಿತಿಯನ್ನು ಪ್ರಸಾರ ಮಾಡುವುದು ಮುಖ್ಯವಾಗಿದೆ. ಈ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಯೋಜನೆಗಳ ಮಾಹಿತಿಯನ್ನು ತಲುಪಿಸುವುದು ಅಗತ್ಯವಾಗಿದೆ.

 

ಹಾಗೆಯೇ ಸರ್ಕಾರದ ಕಾರ್ಯಕ್ರಮಗಳ ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಪ್ರಸಾರ ಸಂಬಂಧ ನಮ್ಮ ಸಂಸ್ಥೆಯು ಉತ್ತಮ ಹೊಂದಿದ್ದು ಕರ್ನಾಟಕ ಸರ್ಕಾರದ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಬದ್ಧವಾಗಿದೆ ಎಂದು ಮಾಸಿಕ ವೆಚ್ಚದ ಪಟ್ಟಿ ಸಹಿತವಾಗಿ 2023ರ ಜುಲೈ 24ರಂದು ಮನವಿಯೊಂದಿಗೆ ನೀಡಿತ್ತು ಎಂಬುದು ತಿಳಿದು ಬಂದಿದೆ.

 

ಒಂದು ಬಾರಿ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ತಾಂತ್ರಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 1,18,00,000 ಹಾಗೂ ಇನ್ನುಳಿದಂತೆ ಪ್ರತಿ ತಿಂಗಳಿಗೆ 1,71,10,000 ರು.ಗಳು ವೆಚ್ಚವಾಗುತ್ತದೆ ಎಂದು ವೆಚ್ಚದ ಪಟ್ಟಿಯಲ್ಲಿ ವಿವರಿಸಿತ್ತು.

 

ಈ ಮನವಿಯನ್ನು ಸ್ವೀಕರಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ದ ಪಾಲಿಸಿ ಫ್ರಂಟ್‌ನಿಂದ ಸೇವೆ ಪಡೆಯಲು 4(ಜಿ) ವಿನಾಯಿತಿ ನೀಡಬೇಕು ಎಂದು 2023ರ ಜುಲೈ 24ರಂದೇ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

 

ವಿಶೇಷವೆಂದರೇ ಈ ಎಲ್ಲಾ ಪ್ರಕ್ರಿಯೆಗಳು ಒಂದೇ ದಿನದದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆದಿದ್ದವು.

 

‘ದ ಪಾಲಿಸಿ ಫ್ರಂಟ್‌’ ಬೆಂಗಳೂರು ಇವರ ಸೇವೆಯನ್ನು 2023-24ನೇ ಆರ್ಥಿಕ ವರ್ಷದಲ್ಲಿ ಆಗಸ್ಟ್‌ 2023ರಿಂದ ಮಾರ್ಚ್‌ 2024ರವರೆಗೆ ಹಾಗೂ 2024-25 ಮತ್ತು 2025-26ನೇ ಆರ್ಥಿಕ ವರ್ಷ ಸೇರಿದಂತೆ ಒಟ್ಟಾರೆ ಮೂರು ವರ್ಷಗಳಿಗೆ ಪಡೆಯಲು ಕರ್ನಾಟಕ ಪಾರದರ್ಶಕ ಅಧಿನಿಯಮದಡಿ 4(ಜಿ) ಅಡಿಯಲ್ಲಿ ವಿನಾಯಿತಿ ನೀಡಲು ಆರ್ಥಿಕ ಇಲಾಖೆಗೆ ಶಿಫಾರಸ್ಸು ಮಾಡಬೇಕು,’ ಎಂದು ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ಕೋರಿದ್ದರು.

 

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯ ಅನುದಾನವನ್ನೂ ಒಳಗೊಂಡಿರುವ ಲೆಕ್ಕ ಶೀರ್ಷಿಕೆಯಲ್ಲಿರುವ 50 ಕೋಟಿ ರು.ನಲ್ಲಿ 14.86 ಕೋಟಿ ರು.ಗಳನ್ನು ದ ಪಾಲಿಸಿ ಫ್ರಂಟ್‌ ಎಂಬ ನಿಗೂಢ ಕಂಪನಿಗೆ ಕೊಡಲು ಸಿದ್ದರಾಮಯ್ಯ ಅವರು ಸಚಿವರಾಗಿರುವ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು ಎಂಬುದನ್ನು ‘ದಿ ಫೈಲ್‌’ ಹೊರಗೆಡವಿತ್ತು.

 

ಸುಳ್ಳು ಸುದ್ದಿಗಳ  ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್‌ ಎ ಮೂಲಕ ಕಾರ್ಯಾದೇಶ ಪಡೆದುಕೊಂಡಿರುವ ‘ದ ಪಾಲಿಸಿ ಫ್ರಂಟ್‌’ ಗೆ ಕಚೇರಿಯೇ ಇಲ್ಲ ಎಂಬ ಸಂಗತಿಯು ಚರ್ಚೆಗೆ ಗ್ರಾಸವಾಗಿತ್ತು.

7.20 ಕೋಟಿ ರು ಗುತ್ತಿಗೆ; ಕಾರ್ಯಾದೇಶದಲ್ಲಿರುವ ವಿಳಾಸದಲ್ಲಿ ‘ದ ಪಾಲಿಸಿ ಫ್ರಂಟ್‌’ ಕಚೇರಿಯೇ ಇಲ್ಲ

 

ಆಡಳಿತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿ ವಿಷಯ, ಮಾಹಿತಿಗಳು ಒಳಗೊಂಡಿದೆ ಎಂದು ಕುಂಟು ನೆಪವೊಡ್ಡಿ ‘ದ ಪಾಲಿಸಿ ಫ್ರಂಟ್‌’ ಗೆ ನೀಡಿರುವ ಗುತ್ತಿಗೆ ಸಂಬಂಧಿತ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಸರ್ಕಾರವು ನಿರಾಕರಿಸಿದ್ದು  ಚರ್ಚೆಗೆ ಗ್ರಾಸವಾಗಿತ್ತು.  ಈ ಕುರಿತು ಟ್ವೀಟ್‌ ಮಾಡಿದ್ದ  ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರು ಪಾರದರ್ಶಕತೆ ಇಲ್ಲದೆಯೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದ್ದರು.

ದ ಪಾಲಿಸಿ ಫ್ರಂಟ್‌ಗೆ ಗುತ್ತಿಗೆ; ಪಾರದರ್ಶಕತೆಯಿಲ್ಲದೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ?

 

ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿದ್ದ  4(ಜಿ) ವಿನಾಯಿತಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಲು ನಿರಾಕರಿಸಿರುವುದು ‘ದ ಪಾಲಿಸಿ ಫ್ರಂಟ್‌’ನ ಸುತ್ತ ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿತ್ತು.

‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ರು. ಮೊತ್ತದ ಗುತ್ತಿಗೆ; ಸಮಗ್ರ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ವಿಶೇಷವೆಂದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒದಗಿಸಿತ್ತು.  ಆದರೆ ಕೆಎಸ್‌ಎಂಸಿ ಅಂಡ್‌ ಎ ಕಂಪನಿಯು ತನ್ನ ಹಂತದಲ್ಲಿ ಇದೇ  ವಿಚಾರಕ್ಕೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿತ್ತು.  ಅದಷ್ಟೇ ಅಲ್ಲ,  ಕಡತವನ್ನು ಒದಗಿಸಲು ನಿರಾಕರಿಸುವ  ಮೂಲಕ ‘ದ ಪಾಲಿಸಿ ಫ್ರಂಟ್‌’  ಮತ್ತು ಅದರ ಹಿಂದಿರುವವರನ್ನು ರಹಸ್ಯವಾಗಿರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಮುಕ್ತ  ಟೆಂಡರ್‍‌ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್‌’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

 

ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್‌ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು.  ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.

SUPPORT THE FILE

Latest News

Related Posts