ಬೆಂಗಳೂರು; ರಾಜ್ಯದಲ್ಲಿರುವ ಪುರಾತನ ರಾಮಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣಕ್ಕೆ ಒಟ್ಟಾರೆ 200 ಕೋಟಿ ರು. ಮೊತ್ತದಲ್ಲಿ ಸರ್ಕಾರವು ಘೋಷಿಸಲಿರುವ ಹೊಸ ಯೋಜನೆಯು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಇದೇ ಫೆಬ್ರುವರಿಯಲ್ಲಿ ಮಂಡಿಸಲಿರುವ ಆಯವ್ಯಯದಲ್ಲಿ ಈ ಯೋಜನೆಯ ಘೋಷಣೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೂ ಸಮರ್ಥಿಸಿಕೊಂಡಿದೆ.
ರಾಮಮಂದಿರಗಳ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣಕ್ಕೆ 200 ಕೋಟಿ ರು ಮೊತ್ತದ ಯೋಜನೆಯನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರವು ಘೋಷಿಸಲಿದೆ ಎಂದು ‘ದಿ ಫೈಲ್-ವಾರ್ತಾಭಾರತಿ’ಯು ವರದಿ ಪ್ರಕಟಿಸಿತ್ತು.
ಈ ವರದಿಯು ರಾಜಕೀಯ ಅಂಗಳದಲ್ಲಿ ಬಿರುಸಿನ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ದಿ ಫೈಲ್‌ನ ಸಹಭಾಗಿ ವಾರ್ತಾಭಾರತಿ ಪ್ರಕಟಿಸಿದ್ದ ವರದಿಯನ್ನು ಹಂಚಿಕೊಂಡಿದೆ.
ಟ್ವೀಟ್‌ನಲ್ಲೇನಿದೆ?
‘ರಾಜ್ಯದ ಪುರಾತನ ರಾಮ ಮಂದಿರಗಳನ್ನು ಜೀರ್ಣೋದ್ದಾರ ಮಾಡಲು ಸರ್ಕಾರ 100 ಕೋಟಿ ಹಣ ಮೀಸಲಿಟ್ಟಿದೆ. ರಾಮ ಕರ್ನಾಟಕದಲ್ಲೂ ಇದ್ದಾನೆ, ಆಸ್ತಿಕರ ಭಕ್ತಿಗಾಗಿ.. ಕರ್ನಾಟಕದಲ್ಲಿನ ರಾಮನ ಭಕ್ತರು ಕರ್ನಾಟಕದಲ್ಲೇ ರಾಮನ ದರ್ಶನ, ಆಶೀರ್ವಾದ ಪಡೆಯಬಹುದು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಪುರಾತನ ದೇವಾಲಯಗಳನ್ನು ಜೀರ್ಣೋದ್ದಾರ ಮಾಡುವ ಕ್ರಮ ಕೈಗೊಂಡಿದೆ. ದೇವರು, ಧರ್ಮವೆಂದರೆ ನಮಗೆ ರಾಜಕೀಯದ ವಸ್ತುವಲ್ಲ, ನಂಬಿಕೆಗಳಿಗೆ, ಭಕ್ತಿಗೆ ಇರುವ ಆದ್ಯಾತ್ಮದ ಮಾರ್ಗವಷ್ಟೇ,’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಇದೇ ಫೆಬ್ರುವರಿ-ಮಾರ್ಚ್‌ನಲ್ಲಿ ಮಂಡಿಸಲಿರುವ 2024-25ನೇ ಸಾಲಿನ ಆಯವ್ಯಯದಲ್ಲಿ ಪುರಾತನ ರಾಮ ಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ಬೃಹತ್ ವಸತಿ ಗೃಹ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.
2024-25ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ರೂಪಿಸಿರುವ ಹೊಸ ಯೋಜನೆಗಳ ಪಟ್ಟಿಯಲ್ಲಿ ರಾಮ ಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣವೂ ಸೇರಿದೆ. ಈ ಕುರಿತು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೂ ಇಲಾಖೆ ಅಧಿಕಾರಿಗಳು ಚರ್ಚಿಸಿದ್ದಾರೆ. ಈ ಕುರಿತು ‘ದಿ ಫೈಲ್’ ಮತ್ತು ವಾರ್ತಾಭಾರತಿ’ ಜನವರಿ 24ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ರಾಮಮಂದಿರ ಜೀರ್ಣೋದ್ದಾರ, ಅಯೋಧ್ಯೆಯಲ್ಲಿ ವಸತಿಗೃಹ ನಿರ್ಮಾಣ; 200 ಕೋಟಿ ರು ಅನುದಾನಕ್ಕೆ ಪ್ರಸ್ತಾವ
ಬೆಂಗಳೂರು ನಗರದ ಮಹದೇವಪುರದಲ್ಲಿ ನಡೆದಿದ್ದ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭಾಗಿಯಾಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ 100 ಕೋಟಿ ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣ ಮಾಡಲು ಉದ್ದೇಶಿಸಿರುವುದು ಕುತೂಹಲ ಮೂಡಿಸಿತ್ತು.
‘ರಾಜ್ಯದಲ್ಲಿ 100 ಪುರಾತನ ರಾಮ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ತಲಾ 1.00 ಕೋಟಿ ರು.ಗಳ ವೆಚ್ಚದಲ್ಲಿ ಒಟ್ಟು 100.00 ಕೋಟಿ ರು.ಗಳನ್ನು ಒದಗಿಸಲು ಉದ್ದೇಶಿಸಿದೆ. ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ನಿವೇಶನ ಹಂಚಿಕೆ ಮಾಡಿದರೆ ರಾಜ್ಯ ಸರ್ಕಾರವು 100. 00 ಕೋಟಿ ರು. ವೆಚ್ಚದಲ್ಲಿ ವಸತಿ ಗೃಹವನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ. ಈ ಎರಡೂ ಯೋಜನೆಗಳಿಗೆ ನಿಗದಿಗೊಳಿಸಿರುವ ಮೊತ್ತವು ಆರ್ಥಿಕ ಇಲಾಖೆಯ ಸೂಚಿಸಿರುವ ಮೊತ್ತದೊಳಗೇ ಇದೆ,’ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಹೊಸ ಯೋಜನೆಗಳನ್ನು ವಿವರಿಸಿದೆ.
ಅದೇ ರೀತಿ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ನಿಗಮ, ದೇವಾಲಯ, ಕೊಪ್ಪಳ ಜಿಲ್ಲೆ ಹುಲಿಗೆಮ್ಮ ದೇವಾಲಯ ಅಭಿವೃದ್ಧಿಗಾಗಿ ಪ್ರಾಧಿಕಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ಪ್ರಾಧಿಕಾರವನ್ನು ರಚಿಸಲಾಗುವುದು ಎಂದು ಘೋಷಿಸಲಿದೆ. ಈ ಎರಡೂ ಪ್ರಾಧಿಕಾರಗಳ ರಚನೆಯು ಆಯವ್ಯಯದ ಘೋಷಣೆಯಾಗಿದೆ. ಸರ್ಕಾರದ ಸಂಚಿತ ನಿಧಿಯಿಂದ ಅನುದಾನವು ಅಗತ್ಯವಿರುವುದಿಲ್ಲ ಎಂದು ಇಲಾಖೆಯು ವಿವರಿಸಿರುವುದು ತಿಳಿದು ಬಂದಿದೆ.