ರಾಮಮಂದಿರ ಜೀರ್ಣೋದ್ದಾರ, ಅಯೋಧ್ಯೆಯಲ್ಲಿ ವಸತಿಗೃಹ ನಿರ್ಮಾಣ; 200 ಕೋಟಿ ರು ಅನುದಾನಕ್ಕೆ ಪ್ರಸ್ತಾವ

ಬೆಂಗಳೂರು; ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆ ವಿಚಾರವು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿರುವ  ನಡುವೆಯೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿರುವ ಪುರಾತನ ರಾಮಮಂದಿರ ಜೀರ್ಣೋದ್ಧಾರಕ್ಕೆ 100 ಕೋಟಿ ರು. ಮೀಸಲಿಡಲಿದೆ.

 

ಅಲ್ಲದೇ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ನಿವೇಶನ ಹಂಚಿಕೆ ಮಾಡಿದರೆ 100 ಕೋಟಿ ರು ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಮಾಡಲಿದೆ. ರಾಜ್ಯದ ವಿವಿಧ ಮಠಗಳಿಗೆ ಸಹಾಯಧನ ರೂಪದಲ್ಲಿ 210.00 ಕೋಟಿ ರು. ಸೇರಿ ಇಲಾಖೆಯ ಇನ್ನಿತರೆ ಯೋಜನೆಗಳಿಗೆ ಒಟ್ಟಾರೆ 690.28 ಕೋಟಿ ರು.ಗಳನ್ನು ಅಂದಾಜಿಸಿದೆ.

 

ಇದೇ ಫೆಬ್ರುವರಿ-ಮಾರ್ಚ್‌ನಲ್ಲಿ ಮಂಡಿಸಲಿರುವ 2024-25ನೇ ಸಾಲಿನ ಆಯವ್ಯಯದಲ್ಲಿ ಪುರಾತನ ರಾಮ ಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ಬೃಹತ್‌ ವಸತಿ ಗೃಹ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಲಿದ್ದಾರೆ.

 

2024-25ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ರೂಪಿಸಿರುವ ಹೊಸ ಯೋಜನೆಗಳ ಪಟ್ಟಿಯಲ್ಲಿ ರಾಮ ಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣವೂ ಸೇರಿದೆ. ಈ ಕುರಿತು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೂ ಇಲಾಖೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಇಲಾಖೆಯು ಸಲ್ಲಿಸಿರುವ ಆಯವ್ಯಯ  ಪ್ರಸ್ತಾವನೆಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ನಗರದ ಮಹದೇವಪುರದಲ್ಲಿ ನಡೆದಿದ್ದ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಭಾಗಿಯಾಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ 100 ಕೋಟಿ ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣ ಮಾಡಲು ಉದ್ದೇಶಿಸಿರುವುದು ಕುತೂಹಲ ಮೂಡಿಸಿದೆ.

 

ಅಯೋಧ್ಯೆಯ ರಾಮಮಂದಿರ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಮತ ಯಾಚಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿಯೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸಹ ರಾಮಮಂದಿರಗಳ ಜೀರ್ಣೋದ್ದಾರಕ್ಕೆ 100 ಕೋಟಿ ರು.ಗಳನ್ನು ಬಜೆಟ್‌ನಲ್ಲಿ ಘೋಷಿಸಲಿರುವುದು ರಾಜಕೀಯ ವಲಯದಲ್ಲಿ ಚರ್ಚೆಯನ್ನು ಬಿರುಸುಗೊಳಿಸಲಿದೆ.

 

‘ರಾಜ್ಯದಲ್ಲಿ 100 ಪುರಾತನ ರಾಮ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ತಲಾ 1.00 ಕೋಟಿ ರು.ಗಳ ವೆಚ್ಚದಲ್ಲಿ ಒಟ್ಟು 100.00 ಕೋಟಿ ರು.ಗಳನ್ನು ಒದಗಿಸಲು ಉದ್ದೇಶಿಸಿದೆ. ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ನಿವೇಶನ ಹಂಚಿಕೆ ಮಾಡಿದರೆ ರಾಜ್ಯ ಸರ್ಕಾರವು 100. 00 ಕೋಟಿ ರು. ವೆಚ್ಚದಲ್ಲಿ ವಸತಿ ಗೃಹವನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ. ಈ ಎರಡೂ ಯೋಜನೆಗಳಿಗೆ ನಿಗದಿಗೊಳಿಸಿರುವ ಮೊತ್ತವು ಆರ್ಥಿಕ ಇಲಾಖೆಯ ಸೂಚಿಸಿರುವ ಮೊತ್ತದೊಳಗೇ ಇದೆ,’ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಹೊಸ ಯೋಜನೆಗಳನ್ನು ವಿವರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ನಿಗಮ, ದೇವಾಲಯ, ಕೊಪ್ಪಳ ಜಿಲ್ಲೆ ಹುಲಿಗೆಮ್ಮ ದೇವಾಲಯ ಅಭಿವೃದ್ಧಿಗಾಗಿ ಪ್ರಾಧಿಕಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ಪ್ರಾಧಿಕಾರವನ್ನು ರಚಿಸಲಾಗುವುದು ಎಂದು ಘೋಷಿಸಲಿದೆ. ಈ ಎರಡೂ ಪ್ರಾಧಿಕಾರಗಳ ರಚನೆಯು ಆಯವ್ಯಯದ ಘೋಷಣೆಯಾಗಿದೆ. ಸರ್ಕಾರದ ಸಂಚಿತ ನಿಧಿಯಿಂದ ಅನುದಾನವು ಅಗತ್ಯವಿರುವುದಿಲ್ಲ ಎಂದು ಇಲಾಖೆಯು ವಿವರಿಸಿರುವುದು ತಿಳಿದು ಬಂದಿದೆ.

 

ಉಳಿದಂತೆ ಮಾನಸ ಸರೋವರ ಭಕ್ತಾದಿಗಳಿಗೆ ನೆರವು ನೀಡಲು 2024-25ನೇ ಸಾಲಿನಲ್ಲಿ 3.00 ಕೋಟಿ ರು., ಚಾರ್‍‌ ಧಾಮ್‌ ಯಾತ್ರೆಗೆ 7.00 ಕೋಟಿ ರು., ಭಾರತ್‌ ಗೌರವ್‌ ಯೋಜನೆಯಡಿಯಲ್ಲಿ ಪ್ರಸಿದ್ಧ ಸ್ಥಳಗಳಿಗೆ ರೈಲು ಮೂಲಕ ಪ್ರವಾಸಕ್ಕೆ 13.31 ಕೋಟಿ ರು., ಕಾಶಿ ಯಾತ್ರಾರ್ಥಿಗಳಿಗೆ 15.00 ಕೋಟಿ ರು., ಸೇರಿ ಒಟ್ಟಾರೆ 38.31 ಕೋಟಿ ರು., ಬೇಕಾಗಬಹುದು ಎಂದು ಇಲಾಖೆಯು ಅಂದಾಜಿಸಿದೆ.

 

ಆರಾಧನಾ ಯೋಜನೆಗೆ 22.40 ಕೋಟಿ ರು., ರು., ಪರಿಶಿಷ್ಟ ಜಾತಿ ಉಪ ಯೋಜನೆಗೆ 22.40 ಕೋಟಿ, ಗಿರಿಜನ ಉಪ ಯೋಜನೆಗೆ 22.40 ಕೋಟಿ ರು., ಯಡಿಯೂರು ಅಭಿವೃದ್ಧಿಗೆ 20.00 ಲಕ್ಷ ರು., ಧಾರ್ಮಿಕ ಸ್ಥಳಗಳಲ್ಲಿ ಮೂಲಭೂತ ಹಾಗೂ ವಸತಿ ಸೌಕರ್ಯಗಳಿಗೆ 100.00 ಕೋಟಿ ರು.,

 

ರಾಜ್ಯದಲ್ಲಿನ ವಿವಿಧ ಮಠಗಳಿಗೆ 210.00 ಕೋಟಿ ರು., ಅಧಿಸೂಚಿತ ಸಂಸ್ಥೆಗಳ ನಿರ್ವಹಣೆಗೆ 20.00 ಕೋಟಿ ರು., ಸಹಾಯನುದಾನಕ್ಕೆ 250.00 ಕೋಟಿ ರು., ಪ್ರಾಕೃತ ಅಧ್ಯಯನ ಮತ್ತು ಸಂಶೋಧನೆ ಸಂಸ್ಥೆಗೆ 1.05 ಕೋಟಿ ರು., ನ್ಯಾಸ ಮತ್ತು ಉಂಬಳಿಗಳ ಮೇಲಿನ ಬಡ್ಡಿ 70.20 ಲಕ್ಷ ರ., ನಗದು ಧನ ಸಹಾಯ/ಪರಿಹಾರಕ್ಕೆ 81.75 ಲಕ್ಷ ರು., ಕರ್ನಾಟಕ ರಾಜ್ಯ ಛತ್ರ ತಿರುಮಲ, ತಿರುಪತಿ ನಿರ್ವಹಣೆಗೆ 2.00 ಕೋಟಿ ರು. ಸೇರಿ ಒಟ್ಟಾರೆ 690.28 ಕೋಟಿ ರು. ಅಂದಾಜಿಸಿರುವುದು ಗೊತ್ತಾಗಿದೆ.

 

ಹೊಸ ಯೋಜನೆಗಳ ಪಟ್ಟಿಯಲ್ಲಿ ಇಲಾಖೆಯಲ್ಲಿ ಕೇಂದ್ರೀಕೃತ ಕಾಲ್‌ ಸೆಂಟರ್‍‌ ಅಭಿವೃದ್ಧಿ ಮತ್ತು ನಿಯೋಜನೆ ಕುರಿತು ಪ್ರಸ್ತಾವಿಸಿದೆ. ಇದಕ್ಕಾಗಿ 5.95 ಕೋಟಿ ರು. ಅಂದಾಜಿಸಿದೆ. ದೇವಾಲಯಗಳು ಮತ್ತು ಅವುಗಳ ಸಂಬಂಧಿತ ಸರ್ಕಾರಿ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಸಂಭಾವ್ಯ ಮಾಹಿತಿ ಪ್ರಸಾರ ಮಾಡುವುದು ಇದರ ಉದ್ದೇಶವಾಗಿದೆ ಎಂದು ಇಲಾಖೆಯು ವಿವರಿಸಿದೆ.

 

ಹೆಚ್ಚುವರಿ ಬೇಡಿಕೆ

 

ದೇವಾಲಯಗಳು ಮತ್ತು ಸಂಸ್ಥೆಗಳಿಗೆ ಬಾಕಿ ಉಳಿಕೆ ಮೊತ್ತವನ್ನು ಹಂಚಿಕೆ ಮಾಡಲು 275.14. ಕೋಟಿ ರು. ಬೇಕು ಎಂದು ಹೆಚ್ಚುವರಿ ಬೇಡಿಕೆ ಪಟ್ಟಿಯಲ್ಲಿ ಸೇರಿಸಿದೆ. ಮಠಗಳು ಮತ್ತು ದೇವಾಲಯಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತಿದೆಯಾದರೂ ಹೆಚ್ಚಿನ ಅನುದಾನ ಬೇಡಿಕೆ ಪ್ರಸ್ತಾವನೆಗಳು ಸ್ವೀಕೃತವಾಗುತ್ತಿರುವ ಕಾರಣ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಇಲಾಖೆ ಕೋರಿರುವುದು ತಿಳಿದು ಬಂದಿದೆ.

 

ಹಿಂದಿನ ಬಿಜೆಪಿ ಸರ್ಕಾರವು ದೇವಾಲಯಗಳು ಮತ್ತು ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಆದೇಶಗಳನ್ನು ಹೊರಡಿಸಿತ್ತು. ಆದರೆ ಈ ಆದೇಶಗಳಿಗೆ ಆಡಳಿತಾತ್ಮಕ ಅನುಮೋದನೆ ಇರಲಿಲ್ಲ ಹಾಗೂ ಲೆಕ್ಕ ಶೀರ್ಷಿಕೆಯೂ ಇರಲಿಲ್ಲ. ಹೀಗಾಗಿ ಯಾವುದೇ ಅನುದಾನ ಬಿಡುಗಡೆ ಮಾಡದೇ ಇರುವ ದೇವಾಲಯಗಳು, ಸಂಸ್ಥೆಗಳಿಗೆ 140.45 ಕೋಟಿ ರು. ಹೆಚ್ಚುವರಿಯಾಗಿ ಬೇಕು ಎಂದು ಅಂದಾಜಿಸಿದೆ.

 

ಯಾವುದೇ ಆದಾಯವಿಲ್ಲದ ಸಿ ವರ್ಗದ ಒಟ್ಟು 121 ಮುಜುರಾಯಿ ದೇವಸ್ಥಾನಗಳ ಮಿತಿಗೊಳಪಟ್ಟು ಸಮಾನವಾಗಿ 15,000 ರು.ಗಳ ಸಹಾಯ ಅನುದಾನ ನೀಡುವ ಯೋಜನೆಗೆ 2024-25ನೇ ಸಾಲಿಗೆ 18.15 ಲಕ್ಷ ರು. ಬೇಕಿದೆ. ಹಾಗೆಯೇ ರಾಜ್ಯಾದ್ಯಂತ ಒಟ್ಟಾರೆ 545 ಸಂಸ್ಥೆಗಳಿವೆ. ಪ್ರಸ್ತುತ 121 ಮುಜುರಾಯಿ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ 424 ಸಂಸ್ಥೆಗಳಿಗೆ 15,000 ರು.ನಂತೆ 63.60 ಲಕ್ಷ ರು. ಅಗತ್ಯವಿದೆ. ಒಟ್ಟಾರೆ 81.75 ಲಕ್ಷ ರು. ಹೆಚ್ಚುವರಿ ಅನುದಾನ ಬೇಕಿದೆ ಎಂದು ಇಲಾಖೆಯು ಪ್ರಸ್ತಾವಿಸಿರುವುದು ಗೊತ್ತಾಗಿದೆ.

 

ಇನಾಂ ಜಮೀನುಗಳಿಗೆ ಪರಿಹಾರ ಧನವಾಗಿ ಒಟ್ಟು 26,000 ಸಂಸ್ಥೆಗಳಿಗೆ ತಸ್ತೀಕ್‌ ಅನುದಾನ ನೀಡಲು 156.91 ಕೋಟಿ ರು. ಅನುದಾನ ಬೇಕಿದೆ. ಹಿಂದಿನ ಸಾಲಿನಲ್ಲಿ ಕೋವಿಡ್‌ ಪರಿಹಾರ ಧನ ಪ್ಯಾಕೇಜ್‌ ಮೊತ್ತಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ 05 ಜಿಲ್ಲೆಗಳಿಗೆ ಬಾಕಿ ಪಾವತಿಗಾಗಿ 5.61 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಹೇಳಿದೆ.

 

ಇನಾಂಯೇತರ ಜಮೀನುಗಳಿಗೆ ಪರಿಹಾರ ಧನವಾಗಿ ಒಟ್ಟು 3,749 ಸಂಸ್ಥೆಗಳಿಗೆ ವರ್ಷಾಸನ ಅನುದಾನಕ್ಕಾಗಿ 22.67 ಕೋಟಿ ರು. ಬೇಕಿದೆ. ಹಿಂದಿನ ಸಾಲಿನಲ್ಲಿ ಈ ಸಂಬಂಧ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಬಾಕಿ ಪಾವತಿಗಾಗಿ 13.79 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಪ್ರಸ್ತಾವಿಸಿದೆ.

SUPPORT THE FILE

Latest News

Related Posts