ಪ್ಯಾನಿಕ್‌ ಬಟನ್‌ ಟೆಂಡರ್‍‌ ಅಕ್ರಮ; ಪ್ರಾಥಮಿಕ ತನಿಖೆ, ಶಿಸ್ತು ಕ್ರಮವಿಲ್ಲದೆಯೇ ಹೊಸ ಟೆಂಡರ್‍‌ಗೆ ಅನುಮೋದನೆ

ಬೆಂಗಳೂರು; ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ ಅಳವಡಿಕೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ 1,200 ಕೋಟಿ ರು. ಮೊತ್ತದ ಹಗರಣದ ಕುರಿತು ಪ್ರಾಥಮಿಕ ತನಿಖೆ  ನಡೆಸದೆಯೇ ಇದೀಗ  ಹೊಸದಾಗಿ  ಅಲ್ಪಾವಧಿ ಟೆಂಡರ್‍‌ ಕರೆಯಲು ಸಾರಿಗೆ ಇಲಾಖೆಯು  ಮುಂದಾಗಿರುವುದು  ಬಹಿರಂಗವಾಗಿದೆ.

 

ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಅತೀ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆಟೋರಿಕ್ಷಾ ಚಾಲಕರ ಯೂನಿಯನ್‌ ಸಂಘಟನೆಯೊಂದು ಪ್ರಾಥಮಿಕ ಸಾಕ್ಷ್ಯದ ಮೂಲಕ ನೀಡಿದ್ದ ದೂರಿನ ಕುರಿತೂ ಸಾರಿಗೆ ಇಲಾಖೆಯು ಪ್ರಾಥಮಿಕ ವಿಚಾರಣೆ ನಡೆಸಿಲ್ಲ. ಅಲ್ಲದೇ ಟೆಂಡರ್‍‌ನಲ್ಲಿ  ನಡೆದಿದೆ ಎನ್ನಲಾಗಿರುವ   ಲೋಪ ಮತ್ತು  ಅಕ್ರಮಗಳಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ  ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಅನುಮೋದನೆ ನೀಡಿಲ್ಲ.

 

ಹಾಗೆಯೇ  ಈ ಟೆಂಡರ್‍‌ಲ್ಲಿ ಭಾಗವಹಿಸಿದ್ದ ಎಲ್ಲಾ ಬಿಡ್‌ದಾರರು ಅನರ್ಹರಾಗಿದ್ದಾರೆ ಎಂಬ ವರದಿಯನ್ನೂ ಸಲ್ಲಿಸಲಾಗಿತ್ತು. ಈ ವರದಿ ಆಧರಿಸಿ ಒಂದೇ ಒಂದು ಕ್ರಮ ಜರುಗಿಸಲ್ಲ ಎಂದು ತಿಳಿದು ಬಂದಿದೆ.

 

ಈ ಎಲ್ಲಾ ಪ್ರಕ್ರಿಯೆಗಳ ಕುರಿತು ತನಿಖೆ ನಡೆಸಲು ಅಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಗೆ   ಅನುಮೋದಿಸುವ ಬದಲಿಗೆ  ಹೊಸದಾಗಿ ಅಲ್ಪಾವಧಿ ಟೆಂಡರ್‍‌ ಕರೆಯಲು ಮಾತ್ರ ಸಚಿವ ರಾಮಲಿಂಗಾರೆಡ್ಡಿ  ಅವರು ಅನುಮೋದನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

 

ಈ ಉಪಕರಣಗಳನ್ನು ಒಂದು ವರ್ಷದ ಅವಧಿಯೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರವು ನವೆಂಬರ್‌ನಲ್ಲಿಯೇ ಆದೇಶಿಸಿತ್ತು. ಅದರ ಪ್ರಕಾರ ಡಿ.1 ರಿಂದ ಇದು ಅನ್ವಯವಾಗಬೇಕಿತ್ತು. ಆದರೆ ಸರ್ಕಾರವು ದಿಢೀರ್‌ ಎಂದು ನವೆಂಬರ್‌ನಲ್ಲಿ ಹೊರಡಿಸಿದ್ದ  ಆದೇಶವನ್ನು ಮುಂದೂಡಿಕೆ ಮಾಡಿ ತಿದ್ದುಪಡಿ ಆದೇಶವನ್ನು ಹೊರಡಿಸಿತ್ತು.

 

ಆದರೀಗ 2024ರ ಜನವರಿ 16ರಂದು ಹೊಸದಾಗಿ ಅಲ್ಪಾವಧಿ ಟೆಂಡರ್‍‌ ಕರೆಯಲು ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ನಿರ್ದೇಶನ ನೀಡಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಸಾರ್ವಜನಿಕ ಸೇವಾ ವಾಹನಗಳಿಗೆ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ ಅಳವಡಿಕೆ ಯೋಜನೆಗೆ ಸಂಬಂಧಿಸಿದ ಟೆಂಡರ್‍‌ ಪರಿಶೀಲನಾ ಸಮಿತಿಯು ಇ-ಪ್ರೊಕ್ಯೂರ್‍‌ಮೆಂಟ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಎಲ್ಲಾ ಅರ್ಜಿದಾರರುಗಳ ದಾಖಲೆಗಳನ್ನು ಟೆಂಡರ್‍‌ನಲ್ಲಿ ನಿಗದಿಪಡಿಸಿದ್ದ ಮಾನದಂಡಗಳಿಗೆ ಅನುಸಾರವಾಗಿ ಪರಿಶೀಲಿಸಬೇಕು.

 

ಎಲ್ಲಾ ಬಿಡ್‌ದಾರರು ಅನರ್ಹರಾಗಿರುವುದಾಗಿ ವರದಿ ನೀಡಿರುವುದನ್ನು ಪರಿಶೀಲಿಸಿ, ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಟೆಂಡರ್‍‌ನ್ನು  ರದ್ದುಪಡಿಸಬೇಕು. ಕೇಂದ್ರ ಸರ್ಕಾರದ ನಿರ್ದೇಶನಗಳ ಅನ್ವಯ ವಿಎಲ್‌ಟಿ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಕೆ ಯೋಜನೆಯನ್ನು ತುರ್ತಾಗಿ ಕೈಗೊಳ್ಳಬೇಕು.

 

ಸಾರ್ವಜನಿಕ ಹಿತದೃಷ್ಟಿಯಿಂದ ಹೊಸದಾಗಿ ಅಲ್ಪಾವಧಿ ಟೆಂಡರ್‍‌ ಕರೆಯಲು ಸರ್ಕಾರದ ಅನುಮೋದನೆಯ ಪ್ರಸ್ತಾವನೆಗೆ ಅನುಮೋದಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಕಾರ್ಯದರ್ಶಿಯು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ದೆಹಲಿಯ ಬಸ್‌ ಹಾಗೂ ಟ್ಯಾಕ್ಸಿಗಳಲ್ಲಿ ಅಳವಡಿಸಿರುವ ಪ್ಯಾನಿಕ್‌ ಬಟನ್‌ಗಳಲ್ಲಿ ಆಪ್‌ ಸರ್ಕಾರ ದೊಡ್ಡ ಹಗರಣ ನಡೆಸಿದೆ ಎಂದು ಬಿಜೆಪಿಯು ಆರೋಪಿಸಿರುವ ನಡುವೆಯೇ ರಾಜ್ಯದಲ್ಲಿಯೂ ಇದೇ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ನೀಡಿರುವ ನಿರ್ದೇಶನದ ಹಿಂದೆಯೂ ಹಗರಣದ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ ಅಳವಡಿಕೆ ಸಂಬಂಧ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಅತೀ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆಟೋರಿಕ್ಷಾ ಚಾಲಕರ ಯೂನಿಯನ್‌ ಸಂಘಟನೆಯೊಂದು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನೀಡಿರುವ ದೂರು, ಹಗರಣ ನಡೆದಿದೆ ಎಂಬುದಕ್ಕೆ ಪ್ರಾಥಮಿಕ ಸಾಕ್ಷ್ಯವನ್ನು ಒದಗಿಸಿದಂತಾಗಿತ್ತು.

 

ಈ ಉಪಕರಣಗಳನ್ನು ಒಂದು ವರ್ಷದ ಅವಧಿಯೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರವು ನವೆಂಬರ್‌ನಲ್ಲಿಯೇ ಆದೇಶಿಸಿತ್ತು. ಅದರ ಪ್ರಕಾರ ಡಿ.1 ರಿಂದ ಇದು ಅನ್ವಯವಾಗಬೇಕಿತ್ತು. ಆದರೆ ಸರ್ಕಾರವು ದಿಢೀರ್‌ ಎಂದು ನವೆಂಬರ್‌ ಆದೇಶವನ್ನು ಮುಂದೂಡಿತ್ತು.

 

 

ಪ್ರಕರಣದ ಹಿನ್ನಲೆ

 

 

ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ ಸಾಧನಕ್ಕೆ ಜಿಎಸ್‌ಟಿ ಹೊರತುಪಡಿಸಿ 8,000 ರು ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ  ಸಗಟು ಮೂಲಕ ಖರೀದಿಸಿದರೆ ತಲಾ ಉಪಕರಣವು   4,000 ರು ದರದಲ್ಲಿ  ಸಿಗಲಿದೆ. ಆದರೂ  8,000 ರು   ದರ ನಿಗದಿಯಾಗಿದೆ. ಈ ದರವನ್ನು ಸರ್ಕಾರವು ನಿರ್ಧರಿಸಿಲ್ಲ. ಬದಲಿಗೆ ದೇಶದ ವಿವಿಧ ರಾಜ್ಯಗಳಲ್ಲಿರುವ ಕಂಪನಿಗಳು ನಿಗದಿಪಡಿಸಿ ನೀಡಿದ್ದ ದರವನ್ನೇ ಸರ್ಕಾರವು ಅನುಮೋದಿಸಿತ್ತು.  ಎಲ್ಲಿಯೂ ಕಂಪನಿಗಳೊಂದಿಗೆ ದರ ಸಂಧಾನ ನಡೆಸಿರಲಿಲ್ಲ ಎಂಬುದು ಗೊತ್ತಾಗಿದೆ.

ವಿಎಲ್‌ಟಿ, ಪ್ಯಾನಿಕ್‌ ಬಟನ್‌ ಅಳವಡಿಕೆ ಹಿಂದಿದೆ 1,200 ಕೋಟಿ ಹಗರಣ!; ರಾಜ್ಯದಲ್ಲೂ ದೆಹಲಿ ಮಾದರಿ ಅಕ್ರಮ?

 

ಆದರೆ 13 ಕಂಪನಿಗಳು ನಿಗದಿಪಡಿಸಿದ್ದ ದರವನ್ನೇ ಸರ್ಕಾರವು ಅನುಮೋದಿಸಿರುವುದರಿಂದ ರಾಜ್ಯದಲ್ಲಿರುವ ಅಂದಾಜು 30 ಲಕ್ಷ ವಾಹನಗಳ ಮಾಲೀಕರು ಹೆಚ್ಚುವರಿಯಾಗಿ 4,000 ರು. ತೆತ್ತಂತಾಗುತ್ತದೆ. ಇದರಿಂದ ಈ 13 ಕಂಪನಿಗಳಿಗೆ ಹೆಚ್ಚುವರಿಯಾಗಿ ಒಟ್ಟಾರೆಯಾಗಿ 1,200 ಕೋಟಿ ರು. ಆರ್ಥಿಕ ಲಾಭವಾಗಲಿದೆ ಎಂಬ ಆರೋಪವೂ ಕೇಳಿ ಬಂದಿದೆ.

 

ಅರ್ಹತೆ ಪಡೆದಿರುವ 13 ಕಂಪನಿಗಳ ಪಟ್ಟಿ

 

ಚೆನ್ನೈನ ಎಪಿಎಂ ಕಿಂಗ್ಸ್‌ಟ್ರಾಕ್‌ ಟೆಕ್ನಾಲಜೀಸ್‌, ಹೊಸದೆಹಲಿಯ ಅಟ್ಲಾಂಟ ಸಿಸ್ಟಂ ಪ್ರೈವೈಟ್‌ ಲಿಮಿಟೆಡ್‌, ಉತ್ತರ ಪ್ರದೇಶದ ನಿಪ್ಪಾನ್‌ ಆಡಿಯೋಟ್ರಾನಿಕ್ಸ್‌ ಪ್ರೈವೈಟ್‌ ಲಿಮಿಟೆಡ್‌, ಹರ್ಯಾಣದ ಆರ್‌ಡಿಎಂ ಎಂಟರ್‌ಪ್ರೈಸೆಸ್‌ ಪ್ರೈವೈಟ್‌ ಲಿಮಿಟೆಡ್‌, ಚಂಢೀಗಡ್‌ನ ಬ್ಲಾಕ್‌ ಬಾಕ್ಸ್‌ ಜಿಪಿಎಸ್‌ ಟೆಕ್ನಾಲಜಿ ಒಪಿಸಿ ಪ್ರೈವೈಟ್‌ ಲಿಮಿಟೆಡ್‌, ಹರ್ಯಾಣದ ಇಕೋಗ್ಯಾಸ್‌ ಇಂಪೆಕ್ಸ್‌ ಪ್ರೈವೈಟ್‌ ಲಿಮಿಟೆಡ್‌, ಕೇರಳದ ಮರ್ಸಿಡ್ಯಾಜ್‌ ಇಂಟರ್‌ನ್ಯಾ‍ಷನಲ್‌ ಪ್ರೈವೈಟ್‌ ಲಿಮಿಟೆಡ್‌, ಹೊಸ ದೆಹಲಿಯ ರೋಡ್‌ ಪಾಯಿಂಟ್‌ ಲಿಮಿಟೆಡ್‌ ಮತ್ತು ರೋಸ್‌ಮೆರ್ಟಾ ಆಟೋ ಟೆಕ್‌ ಪ್ರೈವೈಟ್‌ ಲಿಮಿಟೆಡ್‌, ಟ್ರಾನ್‌ಸೈಟ್‌ ಸಿಸ್ಟಂ ಪ್ರೈವೈಟ್‌ ಲಿಮಿಟೆಡ್‌, ವಾಲ್ಟಿ ಸೊಲ್ಯುಷನ್ಸ್‌ ಪ್ರೈವೈಟ್‌ ಲಿಮಿಟೆಡ್‌ ನ್ನು ಅರ್ಹ ಸಂಸ್ಥೆಗಳೆಂದು ಸರ್ಕಾರವು ಅಂಗೀಕರಿಸಿತ್ತು.

 

ಸಾರ್ವಜನಿಕ ಸೇವಾ ವಾಹನಗಳಿಗೆ ಜಿಪಿಎಸ್‌ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸುವ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಪಾತದ ಸಹಭಾಗಿತ್ವದಲ್ಲಿ ಅನುಮೋದನೆ ನೀಡಿ ಆದೇಶಿಸಿದೆ. ಈ ಯೋಜನೆಯನ್ನು 2035.90 ಲಕ್ಷ ರು. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ 2022ರ ನವೆಂಬರ್‌ 5ರಂದೇ ಆದೇಶಿಸಿತ್ತು.

 

 

ಸಾರ್ವಜನಿಕ ಸೇವಾ ವಾಹನಗಳಿಗೆ ಜಿಪಿಎಸ್‌ ಮತ್ತು ತುರ್ತು ಪ್ಯಾನಿಕ್‌ ಬಟನ್‌ ಸಾಧನ ಅಳವಡಿಸಲು ಜಿಎಸ್‌ಟಿ ಹೊರತುಪಡಿಸಿ 7,900 ರು. 8,000ರವರೆಗೆ ದರಗಳನ್ನು ನಿಗದಿಪಡಿಸಲು 13 ಕಂಪನಿಗಳು ಕೋರಿದ್ದವು. ಈ ಕುರಿತು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಅಧ್ಯಕ್ಷತೆಯಲ್ಲಿ 2023ರ ಅಕ್ಟೋಬರ್‌ 16ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಕಂಪನಿಗಳಿಂದ ಈ ಸಾಧನಗಳಿಗೆ ಸ್ಪರ್ಧಾತ್ಮಕ ದರವಾಗಿ 7,599 ರು. ನಿಗದಿಪಡಿಸಿರುವುದು ತಿಳಿದು ಬಂದಿದೆ.

 

 

ಈ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಸಾರಿಗೆ ಇಲಾಖೆಯು ಹೇಳಿತ್ತು. ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳನ್ನು ಅರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸಿದ ಸಮಯದಲ್ಲಿ ಜಿಪಿಎಸ್‌ ಮತ್ತು ಪ್ಯಾನಿಕ್‌ ಬಟನ್‌ ಸಾಧನ ಅಳವಡಿಸಿಉವ ಬಗ್ಗೆ ಖಚಿತಪಡಿಸಿಕೊಂಡು ಅರ್ಹತಾ ಪತ್ರ ನವೀಕರಿಸಬಹುದು ಎಂದು ತಿಳಿಸಿತ್ತು.

 

ರಾಜ್ಯದಲ್ಲಿ ಈ ಯೋಜನೆಯು ಪ್ರಾರಂಭವಾದಾಗಿನಿಂದ ಒಂದು ವರ್ಷದ ಅವಧಿಯಲ್ಲಿ ಅರ್ಹ ವಾಹನಗಳು ಜಿಪಿಎಸ್‌ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಿಕೊಳ್ಳಲು ಕಾಲಮಿತಿ ನಿಗದಿಪಡಿಸಿತ್ತು. ಸ್ಪರ್ಧಾತ್ಮಕ ದರ, ಒಂದು ವರ್ಷದ ಕಾಲಮಿತಿ 2023ರ ಡಿಸೆಂಬರ್‌ 1ರಿಂದ ಪ್ರಾರಂಭಿಸುವ ಅಂಶಗಳು ಒಳಗೊಂಡಂತೆ ರಾಜ್ಯದಲ್ಲಿನ ಸರಕು ಸಾಗಾಣಿಕೆ ವಾನಗಳಿಗೆ ಜಿಪಿಎಸ್‌ ಪ್ಯಾನಿಕ್‌ ಅಳವಡಿಕೆ ಕಾರ್ಯದ ಯೋಜನೆಯನ್ನು ಪ್ರಾರಂಭಿಸಲು ಸೂಕ್ತ ಆದೇಶ ಹೊರಡಿಸಲು ಕೋರಿತ್ತು.

 

ಅದರಂತೆ ಸಾರಿಗೆ ಇಲಾಖೆಯು 2023ರ ನವೆಂಬರ್‌ 23ರಂದು ಆದೇಶ ಹೊರಡಿಸಲಾಗಿದೆ. (ಟಿಡಿ 57 ಟಿಡಿಒ 2019) ಒಂದು ವರ್ಷದ ಅವಧಿಯೊಳಗೆ ಅಂದರೆ 2024ರ ನವೆಂಬರ್‌ 30ರ ಒಳಗಾಗಿ ಸರಕು ಸಾಗಾಣಿಕೆ ವಾಹನಗಳಿಗೆ ಜಿಪಿಎಸ್‌ ಪ್ಯಾನಿಕ್‌ ಬಟನ್‌ ಸಾಧನ ಅಳವಡಿಸಿಕೊಳ್ಳಲು ಕಾಲಮಿತಿ ನಿಗದಿಪಡಿಸಿ ಆದೇಶ ಹೊರಡಿಸಿತ್ತು.

 

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಈ ಯೋಜನೆಗಳಿಗೆ ಒಳಪಡುವ ವಾಹನಗಳನ್ನುಅ ರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸಿದ ಸಮಯದಲ್ಲಿ ಜಿಪಿಎಸ್‌ ಪ್ಯಾನಿಕ್‌ ಬಟನ್‌ ಸಾಧನ ಅಳವಡಿಸಿರುವಬಗ್ಗೆ ಕಡ್ಡಾಯವಾಗಿ ಖಚಿತಪಡಿಸಿಕೊಂಡು ಅರ್ಹತಾ ಪತ್ರ ನವೀಕರಿಸಬೇಕು ಎಂದು ಆದೇಶದಲ್ಲಿ ನಿರ್ದೇಶಿಸಿದ್ದನ್ನು ಸ್ಮರಿಸಬಹುದು.

 

‘ಪ್ಯಾನಿಕ್‌ ಬಟನ್‌ ಮತ್ತು ಜಿಪಿಎಸ್‌ ಸಿಸ್ಟಂ ಅಳವಡಿಸಲು ನೀಡಿರುವ ಆದೇಶವು ಪಾರದರ್ಶಕ ಕಾಯ್ದೆ ಉಲ್ಲಂಘನೆಯಾಗಿದೆ. ಇದು ಭ್ರಷ್ಟಾಚಾರಕ್ಕೆ ನಾಂದಿ ಹಾಡಿದೆ. ಈಗಾಗಲೇ ವಾಹನದಲ್ಲಿಯೇ ಜಿಪಿಎಸ್‌ ಟ್ರಾಕಿಂಗ್‌ನ್ನು ವಾಹನ ತಯಾರಿಕೆ ಕಂಪನಿಗಳೇ ಹಲವು ವಾಹನಗಳಲ್ಲಿ ಒದಗಿಸುತ್ತಿವೆ. ಅದನ್ನು ಹೊರತುಪಡಿಸಿ ಬೇರೆ ಇನ್ನೊಂದು ಜಿಪಿಎಸ್‌ ಖರೀದಿಸಲು ಹೇಳುತ್ತಿರುವುದು ವಾಹನ ಮಾಲೀಕರಿಗೆ ಹೆಚ್ಚಿನ ಹೊರೆಯಾಗಲಿದೆ, ‘ಎನ್ನುತ್ತಾರೆ ನಟರಾಜ್‌ ಶರ್ಮ

 

ಅದೇ ರೀತಿ ‘ಸಾರಿಗೆ ಇಲಾಖೆಯ ಬಳಿ ಪ್ಯಾನಿಕ್ ಬಟನ್‌ ನಿಯಂತ್ರಿಸಲು ಯಾವುದೇ ಮೂಲಭೂತ ಸೌಕರ್ಯ ಹಾಗೂ ಅದು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂಬ ಪ್ರದರ್ಶನ, ಮಾಹಿತಿಯೂ ಇಲ್ಲ. ಜಿಪಿಎಸ್‌ ಮತ್ತು ಪ್ಯಾನಿಕ್‌ ಸಿಸ್ಟಂ ಸಗಟು ಮಾರ್ಕೇಟ್‌ನಲ್ಲಿ ಕೇವಲ 4,000 ರು.ಗಳಿಂದ 4,500 ರು.ಗಳಿಗೆ ದೊರೆಯುತ್ತಿದೆ. ಆದರೆ ಈ ಸರ್ಕಾರವು 7,600 ರು. ಅಂದರೆ 3,100 ರು.ಗಳ ಹೆಚ್ಚಿನ ಹಣ ಪಾವತಿಸಲು ಹೇಳುತ್ತಿದೆ. ಈ ಹಣವನ್ನು ಮಾಲೀಕರು ಏಕ ಪಾವತಿಸಬೇಕು, 13 ಕಂಪನಿಗಳು ನೀಡಿರುವ ದರವನ್ನೇ ಒಪ್ಪಿಕೊಂಡಿರುವ ಸರ್ಕಾರವು ಯಾಕೆ ದರ ಸಂಧಾನ ಮಾಡಿಲ್ಲ,’ ಎಂದು ಪ್ರಶ್ನಿಸುತ್ತಾರೆ ಖಾಸಗಿ ಬಸ್‌ಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮಾ.

the fil favicon

SUPPORT THE FILE

Latest News

Related Posts