ನಿವೃತ್ತ ಐಎಎಸ್‌ ಎಂ ಆರ್‍‌ ಶ್ರೀನಿವಾಸಮೂರ್ತಿ, ಅಶೋಕ್‌ ದಳವಾಯಿ ವಿರುದ್ಧ ಪ್ರಕರಣ; ವರದಿ ಕೇಳಿದ ಸರ್ಕಾರ

ಬೆಂಗಳೂರು; ಈಜುಕೊಳ ನಿರ್ಮಾಣದಲ್ಲಿ  ನಡೆದಿದೆ ಎನ್ನಲಾದ ವಿವಿಧ ರೀತಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿಗಳಿಬ್ಬರ ವಿರುದ್ಧದ ಪ್ರಕರಣದಲ್ಲಿ  ಲೋಕಾಯುಕ್ತ ಸಂಸ್ಥೆಯು 24 ವರ್ಷಗಳ ಹಿಂದೆ ನೀಡಿದ್ದ ವರದಿಗೆ ಈಗಿನ ಕಾಂಗ್ರೆಸ್‌ ಸರ್ಕಾರವು ಮರು ಜೀವ ನೀಡಿದೆ.

 

ಬಿಬಿಎಂಪಿಯಲ್ಲಿ ಅಂದು ಆಯುಕ್ತರಾಗಿ  ಕಾರ್ಯನಿರ್ವಹಿಸಿದ್ದ ಐಎಎಸ್‌ ಅಧಿಕಾರಿಗಳಾದ ಎಂ ಆರ್‍‌ ಶ್ರೀನಿವಾಸಮೂರ್ತಿ, ಅಶೋಕ್‌ ಎಂ ಆರ್‍‌ ದಳವಾಯಿ ಸೇರಿದಂತೆ ಮತ್ತಿತರ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಯು 2001-02ರಲ್ಲಿ  12(3) ವಿಚಾರಣೆ ವರದಿ ನೀಡಿತ್ತು. ಈ ವರದಿ ಆಧರಿಸಿ 24 ವರ್ಷಗಳಿಂದಲೂ ಹಿಂದಿನ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ.

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನಗರಾಭಿವೃದ್ಧಿ ಇಲಾಖೆಯಿಂದ ನಿರ್ದಿಷ್ಟ ಅಭಿಪ್ರಾಯಗಳ ವರದಿ ಕೇಳಿ ಪತ್ರವನ್ನು ಬರೆದಿದೆ.

 

ಈ ಸಂಬಂಧ 2023ರ ಡಿಸೆಂಬರ್‍‌ 4 ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು (ಸಂಖ್ಯೆ; ಸಿ ಆಸುಇ 619 ಸೆಅಸೆ 2013)  ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷವೆಂದರೇ ಲೋಕಾಯುಕ್ತ 12(3) ವರದಿಯಲ್ಲಿ ಹೆಸರಿಸಿರುವ ಐಎಎಸ್‌ ಅಧಿಕಾರಿ ಎಂ ಆರ್‍‌ ಶ್ರೀನಿವಾಸ ಮೂರ್ತಿ ಅವರನ್ನು ಈಗಿನ ಕಾಂಗ್ರೆಸ್‌ ಸರ್ಕಾರವು 16ನೇ ಹಣಕಾಸು ಆಯೋಗದ ಮುಂದೆ ತಾರ್ಕಿಕವಾಗಿ ಮೆಮೋರೆಂಡಮ್‌ ಸಿದ್ಧಪಡಿಸುವ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿದೆ.

 

ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾಗಿ ಲೋಕಾಯುಕ್ತ ಸಂಸ್ಥೆಯು 2001-02ರಲ್ಲಿ ನೀಡಿದ್ದ ವರದಿ ಆಧರಿಸಿ 2013ರವರೆಗೂ ಮತ್ತು 2013ರ ನಂತರ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ. 2013, 2020, 2021,2022, 2023ರವರೆಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪತ್ರ ಬರೆಯುವುದರಲ್ಲಿಯೇ ಕಾಲಹರಣ ಮಾಡಿರುವುದು ತಿಳಿದು ಬಂದಿದೆ.

 

ಪ್ರಕರಣದ ಹಿನ್ನೆಲೆ

 

ಬೆಂಗಳೂರಿನ ವಿಜಯನಗರ ಆರ್‍‌ಪಿಸಿ ಬಡಾವಣೆಯಲ್ಲಿ ಈಜುಕೊಳ ನಿರ್ಮಾಣವಾಗಿತ್ತು. ಇದರಲ್ಲಿ ಅಕ್ರಮಗಳು ನಡೆದಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು. 2001ರ ಜುಲೈ 1ರಿಂದ 2003ರ ಮೇ 31ರವರೆಗೆ ಬಿಬಿಎಂಪಿಯಲ್ಲಿ ಕಾಕರ್ಯನಿರ್ವಹಿಸಿದ ಕೆಲವು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು 2013ರ ಜುಲೈ 8ರಂದು ಲೋಕಾಯುಕ್ತ ಸಂಸ್ಥೆಯು 12(3) ವರದಿ ಸಲ್ಲಿಸಿತ್ತು.

 

ಈ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿ ಎಂ ಆರ್‍‌ ಶ್ರೀನಿವಾಸಮೂರ್ತಿ (ನಿವೃತ್ತ), ಮತ್ತೊಬ್ಬ ಐಎಎಸ್‌ ಅಧಿಕಾರಿ ಅಶೋಕ್‌ ಎಂ ಆರ್‍‌ ದಳವಾಯಿ ಅವರ ಪಾತ್ರದ ಬಗ್ಗೆ ವರದಿಯಲ್ಲಿ ವಿಸ್ತೃತವಾಗಿ ಹೇಳಲಾಗಿತ್ತು. ಲೋಕಾಯುಕ್ತ ಅಧಿನಿಯಮದ ಕಲಂ 12(3) ಅಡಿ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಆಡಳಿತ ಇಲಾಖೆಯ ನಿರ್ದಿಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಬೇಕು ಎಂದು 2013ರ ಆಗಸ್ಟ್‌ 24, ನವೆಂಬರ್‍ 5, 2014ರ ಅಕ್ಟೋಬರ್ 10, 2020ರ ಜೂನ್‌ 2, 2021ರ ಜಲೈ 15, 2021ರ ಸೆ.18, 2022ರ ಜುಲೈ 30, 2023ರ ಜುಲೈ 25 ರಂದು ಪತ್ರವನ್ನು ಬರೆದಿತ್ತು. ಅಲ್ಲದೇ ಹಲವು ನೆನಪೋಲೆಗಳನ್ನು ಬರೆದಿತ್ತು ಎಂಬುದು ಗೊತ್ತಾಗಿದೆ.

 

ಆದರೆ ನಗರಾಭಿವೃದ್ಧಿ ಇಲಾಖೆಯು ಇದುವರೆಗೂ ಯಾವುದೇ ನಿರ್ದಿಷ್ಟ ಅಭಿಪ್ರಾಯದೊಂದಿಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ 8ನೇ ನೆನಪೋಲೆಯನ್ನು 2023ರ ಡಿಸೆಂಬರ್ 4ರಂದು ಕಳಿಸಿರುವುದು ತಿಳಿದು ಬಂದಿದೆ.

 

ರಾಜ್ಯದ 6ನೇ ವೇತನ ಆಯೋಗದ ಅಧ್ಯಕ್ಷರೂ ಆಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಎಂ ಆರ್‍‌ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ಒಲವು ವ್ಯಕ್ತಪಡಿಸಿರುವುದು ಇದೀಗ ಬಹಿರಂಗವಾಗಿದೆ.
16ನೇ ಕೇಂದ್ರ ಹಣಕಾಸು ಆಯೋಗದ ಮುಂದೆ ರಾಜ್ಯ ಸರ್ಕಾರದ ಪರವಾಗಿ ತಾರ್ಕಿಕ ಮತ್ತು ನಿಖರ ಅಂಕಿ ಅಂಶಗಳೊಂದಿಗೆ ಮೆಮೊರೆಂಡಮ್‌ ಸಿದ್ಧಪಡಿಸುವ ಮಹತ್ತರ ಹೊಣೆಗಾರಿಕೆಯು ಎಂ ಆರ್‍‌ ಶ್ರೀನಿವಾಸಮೂರ್ತಿ ಅವರ ನೇತೃತ್ವದ ಸಮಿತಿ ಮೇಲಿದೆ.

 

16ನೇ ಹಣಕಾಸು ಆಯೋಗ; ರಾಜ್ಯದ ಆರ್ಥಿಕ ಪರಿಸ್ಥಿತಿ, ಸವಾಲು ಮನವರಿಕೆಗೆ ತಜ್ಞರ ನೇಮಕ?

 

‘ಹಿಂದಿನ 15ನೇ ಕೇಂದ್ರ ಹಣಕಾಸು ಆಯೋಗದ ವರದಿಯಿಂದ ಕರ್ನಾಟಕ ರಾಜ್ಯಕ್ಕೆ ದೊರಕಬೇಕಾದ ಪಾಲು ಸರಿಯಾದ ಪ್ರಮಾಣದಲ್ಲಿ ದೊರಕಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಬಹಳಷ್ಟು ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗಿದೆ. 15ನೇ ಹಣಕಾಸು ಆಯೋಗದ ವರದಿಯಿಂದ ಉಂಟಾಗಿರುವ ಅನ್ಯಾಯವು 16ನೇ ಕೇಂದ್ರ ಹಣಕಾಸು ಆಯೋಗದ ವರದಿಯಲ್ಲಿ ಮತ್ತೊಮ್ಮೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ,’ ಎಂದು ರಾಜ್ಯ ಸರ್ಕಾರವು ಇಂಗಿತ ವ್ಯಕ್ತಪಡಿಸಿತ್ತು.

the fil favicon

SUPPORT THE FILE

Latest News

Related Posts