ಶೂನ್ಯ ಬಡ್ಡಿ ದರದಲ್ಲಿ ಸಾಲ; ಬೊಕ್ಕಸಕ್ಕೆ 117 ಕೋಟಿ ರು., ಹೊರೆ, ಬಡ್ಡಿ ಮನ್ನಾ ಯೋಜನೆಗೆ ಬೇಕು 260 ಕೋಟಿ

ಬೆಂಗಳೂರು; ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಕ್ಕೆ ವಿಧಿಸಿದ್ದ ಶೇಕಡ 3ರ ಬಡ್ಡಿ ದರವನ್ನು ಶೂನ್ಯಕ್ಕೆ ಇಳಿಸಲು ಸಲಹೆ ನೀಡಿರುವ ಸಹಕಾರ ಇಲಾಖೆಯು ಇದನ್ನು ಜಾರಿಗೊಳಿಸಿದರೆ ಪ್ರತೀ ವರ್ಷ 117 ಕೋಟಿ ರು. ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗಲಿದೆ ಎಂಬ ಲೆಕ್ಕಾಚಾರವನ್ನೂ ಮುಂದಿಟ್ಟಿದೆ.  

 

2024-25ನೇ ಸಾಲಿನ ಆಯವ್ಯಯದಲ್ಲಿ ಹೊಸ ಯೋಜನೆಗಳನ್ನು ಪ್ರಸ್ತಾವಿಸಿರುವ ಸಹಕಾರ ಇಲಾಖೆಯು ಈ ಕುರಿತು ವಿವರಣೆ ನೀಡಿದೆ.   ಶೂನ್ಯ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ಪಡೆದ ರೈತರ ಪೈಕಿ ಇನ್ನೂ 2.52 ಲಕ್ಷ ರೈತರು 3,900 ಕೋಟಿ ರು. ಸಾಲ ಮರು ಪಾವತಿಸಲು ಬಾಕಿ ಇರಿಸಿಕೊಂಡಿದ್ದಾರೆ.  

 

ಬರಗಾಲದ ಹಿನ್ನೆಲೆಯಲ್ಲಿ ಶೇ.3ರ ಬಡ್ಡಿ ದರವನ್ನು ಶೂನ್ಯಕ್ಕಿಳಿಸಿಲು ಪ್ರಸ್ತಾವಿಸಿರುವ ಸಹಕಾರ ಇಲಾಖೆಯು ಈ ಯೋಜನೆಯನ್ನು ಜಾರಿಗೊಳಿಸಿದರೆ ಸರ್ಕಾರದ ಬೊಕ್ಕಸಕ್ಕೆ 117 ಕೋಟಿ ರು ಹೊರೆ ಬೀಳಲಿದೆ ಎಂದು ಅಂಕಿ ಅಂಶಗಳನ್ನು ಒದಗಿಸಿದೆ. ಸಹಕಾರ ಇಲಾಖೆಯು ಸಲ್ಲಿಸಿರುವ ಈ ಪ್ರಸ್ತಾವನೆಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೇ ಸುಸ್ತಿದಾರರ ಸಾಲಗಳ ಮೇಲಿನ ಬಡ್ಡಿ ಮನ್ನಾ ಯೋಜನೆ ಅನುಷ್ಠಾನಗೊಳಿಸಲು 260 ಕೋಟಿ ರು. ಅನುದಾನ ಬೇಕಿದೆ ಎಂದು ಬೇಡಿಕೆ ಸಲ್ಲಿಸಿದೆ.

 

ಸಹಕಾರ ಬ್ಯಾಂಕುಗಳಲ್ಲಿರುವ ರೈತರ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಸಹಕಾರ  ಇಲಾಖೆಯು ಒದಗಿಸಿರುವ ಅಂದಾಜು ವೆಚ್ಚದ ಪಟ್ಟಿಯು ಮುನ್ನೆಲೆಗೆ ಬಂದಿದೆ.

 

ಪ್ರತೀ ವರ್ಷ ಶೂನ್ಯ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಯೋಜನೆ ಅಡಿಯಲ್ಲಿ 60,000 ರೈತರಿಗೆ 2,000 ಕೋಟಿ ರು.ಗಳನ್ನು ಪಿಕಾರ್ಡ್‌ ಬ್ಯಾಂಕ್‌ಗಳ ಮೂಲಕ ಒದಗಿಸಲು ಪ್ರಸ್ತಾವಿಸಿದೆ.   ಪ್ರತೀ ಜಿಲ್ಲೆಯ 2 ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಅಂಗಳದಲ್ಲಿ ಹೊಸದಾಗಿ ಉಗ್ರಾಣಗಳನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಲು ಇಲಾಖೆಯು ಪ್ರಸ್ತಾವಿಸಿದೆ. ಒಟ್ಟಾರೆ 64 ಟಿಎಪಿಸಿಎಂಸಿಗಳಿಗೆ ತಲಾ 1 ಕೋಟಿ ರು. ಮತ್ತು 4.50 ಕೋಟಿ ರು.ಗಳನ್ನು ಶೆ.7ರಷ್ಟು ಬಡ್ಡಿ ರಿಯಾಯಿತಿ ಘೋಷಿಸಲಿದೆ ಎಂದು ತಿಳಿದು ಬಂದಿದೆ.  

 

ಎಪಿಎಂಸಿಗಳಲ್ಲಿ ಸ್ಮಾರ್ಟ್‌ ಆಡಳಿತ ಕೇಂದ್ರಗಳನ್ನು ಸ್ಥಾಪಿಸಲಿದೆ. ಸದ್ಯ ಎಪಿಎಂಸಿಗಳಲ್ಲಿರುವ ತೂಕದ ಯಂತ್ರಗಳನ್ನು ಬದಲಾಯಿಸಿ ಡಿಜಿಟಲ್‌ ವ್ಯವಸ್ಥೆಗೊಳಪಡಿಸಲು 15 ಕೋಟಿ ರು.ಗಳನ್ನು ಒದಗಿಸಲಿದೆ. ರಾಯಚೂರುನಲ್ಲಿ 5 ಎಕರೆ ವಿಸ್ತೀರ್ಣದಲ್ಲ ಶೀತಲ ಗೃಹ ನಿರ್ಮಾಣ ಮಾಡಲು ಪ್ರಸ್ತಾವಿಸಿರುವುದು ಗೊತ್ತಾಗಿದೆ.   ಅದೇ ರೀತಿ ಯಲಬುರ್ಗಾ, ವಿಜಯಪುರ, ರಾಣೆಬೆನ್ನೂರು, ಬ್ಯಾಡಗಿ, ಗದಗ್‌ನಲ್ಲಿ ತಲಾ 10 ಕೋಟಿ ರು. ವೆಚ್ಚದಲ್ಲಿ ಒಟ್ಟಾರೆ 50 ಕೋಟಿ ರು. ವೆಚ್ಚದಲ್ಲಿ ಶೀತಲ ಗೃಹಗಳನ್ನು ನಿರ್ಮಿಸಲಿದೆ.

 

ಅಂತರಾಷ್ಟ್ರೀಯ ಮಟ್ಟದಲ್ಲಿ ಹೈಟೆಕ್‌ ಹೂವಿನ ಮಾರುಕಟ್ಟೆಯನ್ನು ಚಿಕ್ಕಬಳ್ಳಾಪುರದ ದೊಡ್ಡಮರಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರ್ಮಿಸಲಿದೆ. ಇದಕ್ಕಾಗಿ 25 ಕೋಟಿ ರು.ಗಳನ್ನು ಕಾಯ್ದಿರಿಸಲಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದೆ.  

 

ರೈತರ ಆತ್ಮಹತ್ಯೆ, ಬರ, ರೈತರ ಸಾಲಮನ್ನಾ ಕುರಿತಾದ ವಿಷಯಗಳು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ  ರಾಜ್ಯದ ಸಹಕಾರ ಸಂಘಗಳಲ್ಲಿ ಕೃಷಿ ಸಾಲ ಪಡೆದಿದ್ದ 31.65 ಲಕ್ಷ ರೈತರು 25,547.02 ಕೋಟಿ ರು. ಸಾಲ ಹೊರಬಾಕಿ ಹೊಂದಿದ್ದಾರೆ ಎಂಬ ಅಂಕಿ ಅಂಶಗಳನ್ನು ವಿಧಾನಸಭೆಗೆ ಮಂಡಿಸಲಾಗಿತ್ತು.  

 

ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲಿ ಈಗಾಗಲೇ ರಾಜ್ಯ ಸರ್ಕಾರವು ಸ್ಪಷ್ಟಪಡಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ರೈತರು ಪಡೆದಿರುವ 50 ಸಾವಿರ ಮತ್ತು 1 ಲಕ್ಷ ರು. ಸಾಲವನ್ನು ಮನ್ನಾ ಮಾಡುವ ಸಂಬಂಧ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ರೈತರಿಗೆ ಸಂಬಂಧಿಸಿದಂತೆ ನೀಡಿರುವ ಹಸಿರು ಪಟ್ಟಿಗೆ ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿತ್ತು.  

 

2023ರ ನವೆಂಬರ್‍‌ 20ರ ಅಂತ್ಯಕ್ಕೆ ಸಹಕಾರ ಸಂಘಗಳಲ್ಲಿ 29.75 ಲಕ್ಷ ರು. ರೈತರು 21,912.14 ಕೋಟಿ ರು.ಗಳ ಅಲ್ಪಾವಧಿ ಸಾಲ ಮತ್ತು 1.91 ಲಕ್ಷ ರೈತರು 3,634.88 ಕೋಟಿ ರು.ಗಳ  ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ಹೀಗೆ ಒಟ್ಟು 31.65 ಲಕ್ಷ ರು. ರೈತರು 25,547.02 ಕೋಟಿ ರ.ಗಳ ಕೃಷಿ ಸಾಲದ ಹೊರಬಾಕಿ ಹೊಂದಿರುತ್ತಾರೆ ಎಂಬ ಅಂಕಿ ಅಂಶಗಳನ್ನು ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ಸದನಕ್ಕೆ ಒದಗಿಸಿದ್ದರು. 

 

ರಾಜ್ಯದಲ್ಲಿ ಹೊಸದಾಗಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅಂದರೆ 2023ರ ಮೇ 20ರಿಂದ 2023ರ ನವೆಂಬರ್‍‌ 1ರವರೆಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಹಾಗೂ ಶೇ. 3ರ ಬಡ್ಡಿ ದರದಲ್ಲಿ  ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಿತ್ತು. ಈ ಪೈಕಿ 5.00 ಲಕ್ಷ ರು.ವರೆಗಿನ ಅಲ್ಪಾವಧಿ ಕೃಷಿ ಸಾಲವನ್ನು 2,372 ರೈತರಿಗೆ ವಿತರಿಸಿತ್ತು ಎಂದು ಮಾಹಿತಿ ಒದಗಿಸಿದ್ದರು.

 

ಕೃಷಿ ಸಾಲ; 25,547.02 ಕೋಟಿ ರು. ಹೊರಬಾಕಿ, ರೈತರ ಸಾಲಮನ್ನಾ ಪ್ರಸ್ತಾವವಿಲ್ಲವೆಂದ ಕಾಂಗ್ರೆಸ್‌ ಸರ್ಕಾರ

 

 

ಅಲ್ಪಾವಧಿ ಕೃಷಿ ಸಾಲ 1038085.94 ಲಕ್ಷ ರು., ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ 38160.32 ಲಕ್ಷ ರು., ಸೇರಿ ಒಟ್ಟು ಕೃಷಿ ಸಾಲ1076246.00 ಲಕ್ಷ ರು. ಸಾಲ ವಿತರಿಸಿದೆ.  

 

ಒಂದು ಲಕ್ಷ ರು. ಸಾಲಮನ್ನಾ ಯೋಜನೆಗೆ ಕೊಕ್ಕೆ; ಅನುದಾನ ಕೋರಿಕೆ ಪ್ರಸ್ತಾವನೆ ನೆನೆಗುದಿಗೆ

 

 

‘ಅಲ್ಲದೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ಹಸಿರು ಪಟ್ಟಿಗಳನ್ನು ಬಿಡುಗಡೆಗೊಳಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದಲೂ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿವೆ. ಮುಂಬರುವ ದಿನಗಳಲ್ಲಿ 18,965 ಸಂಖ್ಯೆಯ ರೈತರು ಹಸಿರು ಪಟ್ಟಿಗೆ ಸೇರುವುದರಿಂದ ಈ ಒಂದು ಪ್ರಕರಣದಲ್ಲಿ ಅನುದಾನ ಒದಗಿಸಿದ ಪಕ್ಷದಲ್ಲಿ ಬಹಳ ವರ್ಷಗಳವರೆಗೂ ಅನುದಾನ ಒದಗಿಸುತ್ತ ಇರಬೇಕಾಗುವುದು ಆದ್ದರಿಂದ 2021ರ ಮಾರ್ಚ್‌ 6ರಂದು ತಳೆದಿದ್ದ ನಿಲುವಿಗೇ ಬದ್ಧವಾಗಿರಬೇಕು,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿತ್ತು.

ಡಿಸಿಸಿ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಹಗರಣ: ರೈತರ ಸಾಲ ವಿತರಣೆಗಿಲ್ಲ ಹಣ!

 

 

ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ಪೈಪ್‌ಲೈನ್‌ ಪ್ರಕರಣಗಳನ್ನು ತೆರವುಗೊಳಿಸಿ ಈ ಯೋಜನೆಯನ್ನು ಮುಕ್ತಾಯಗೊಳಿಸಲು ನಿರ್ದೇಶಿಸಲಾಗಿತ್ತು. ಅಲ್ಲದೆ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗಿತ್ತು. ಹೀಗಾಗಿ ಈ ಯೋಜನೆಯನ್ನು ಪುನರ್‌ ತೆರೆಯುವ ಹಾಗೂ ಈ ಪ್ರಕರಣಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಪ್ರಮೇಯವೇ ಇಲ್ಲ ಎಂದು ಆರ್ಥಿಕ ಇಲಾಖೆಯು 2021ರ ಮಾರ್ಚ್‌ 6ರಂದು ಹಿಂಬರಹ ನೀಡಿತ್ತು.

 

 

ಸಾಲ ವಿತರಣೆಯಲ್ಲಿ ಕೋಟ್ಯಂತರ ರು. ಅಕ್ರಮ; ಕಲಬುರಗಿ ಡಿಸಿಸಿ ಬ್ಯಾಂಕ್‌ ಸೂಪರ್‌ಸೀಡ್‌?

 

 

2021ರ ಸೆ.7ರ ಹೊತ್ತಿಗೆ 20,697 ರೈತರ ಅರ್ಹತೆ ಗುರುತಿಸಲು ಬಾಕಿ ಇತ್ತು. ಇದರಲ್ಲಿ ಪ್ರಮುಖವಾಗಿ 12,237 ರೈತರ ಪಡಿತರ ಚೀಟಿಗಳು ರೈತರು ದಾಖಲೆ ಸಲ್ಲಿಸುವಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದತ್ತಾಂಶಕ್ಕೆ ತಾಳೆ ಇತ್ತು. ಆದರೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಶವು ಈ ಪಡಿತರ ಚೀಟಿಗಳನ್ನು ತಂತ್ರಾಂಶದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸರಿ ಇದೆ ಎಂದು ದೃಢೀಕರಿಸಿರಲಿಲ್ಲ.

the fil favicon

SUPPORT THE FILE

Latest News

Related Posts