ಬೆಂಗಳೂರು; ತಾಲೂಕುಗಳ ಮರುನಾಮಕರಣಕ್ಕೆ ಮುಂದಡಿಯಿಟ್ಟಿರುವ ಈಗಿನ ಕಾಂಗ್ರೆಸ್ ಸರ್ಕಾರವು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕನ್ನು ಚನ್ನಮ್ಮನ ಕಿತ್ತೂರು ತಾಲೂಕು ಎಂದು ಮರು ನಾಮಕರಣ ಮಾಡಲು ಮುಂದಾಗಿದೆ.
ಕಿತ್ತೂರು ತಾಲೂಕನ್ನು ಚನ್ನಮ್ಮನ ಕಿತ್ತೂರು ತಾಲೂಕು ಎಂದು ಮರು ನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯವೂ ಸಹ 2023ರ ಡಿಸೆಂಬರ್ 22ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಚನ್ನಮ್ಮನ ಕಿತ್ತೂರು ತಾಲೂಕು ಎಂದು ಬದಲಾವಣೆ ಮಾಡಲು ಯಾವುದೇ ಅಭ್ಯಂತರವಿಲ್ಲವೆಂದು ಹೇಳಿದೆ.
ಇದರ ಬೆನ್ನಲ್ಲೇ ಕಂದಾಯ ಇಲಾಖೆಯು ಸಹ ಮರುನಾಮಕರಣಗೊಳಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿದೆ. ಇದಕ್ಕೆ ಸಚಿವ ಕೃಷ್ಣಬೈರೇಗೌಡ ಅವರು ಅನುಮೋದನೆ ನೀಡಿರುವುದು ಗೊತ್ತಾಗಿದೆ.
ಮುಂಬೈ ಕರ್ನಾಟಕ ಎಂದು ಕರೆಯಲಾಗುತ್ತಿರುವ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಪ್ರದೇಶಗಳನ್ನು ‘ಕಿತ್ತೂರು ಕರ್ನಾಟಕ’ ಪ್ರದೇಶ ಎಂದು ಮರು ನಾಮಕರಣ ಮಾಡಲು ಹಿಂದಿನ ಬಿಜೆಪಿ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು.
ಈಗಿನ ಕಾಂಗ್ರೆಸ್ ಸರ್ಕಾರವು ಕಿತ್ತೂರು ತಾಲೂಕನ್ನು ಮಾತ್ರ ಚನ್ನಮ್ಮನ ಕಿತ್ತೂರು ತಾಲೂಕು ಎಂದು ಮರು ನಾಮಕರಣಗೊಳಿಸಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸದ್ಯದಲ್ಲೇ ನಡೆಯಲಿರುವ ಸಚಿವ ಸಂಪುಟಕ್ಕೆ ಕಂದಾಯ ಇಲಾಖೆಯು ತನ್ನ ವಿಸ್ತೃತ ಪ್ರಸ್ತಾವನೆ (ಕಂಇ88 ಆರ್‍ಇಹೆಚ್ 2021) ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಇಲಾಖೆಯ ಸಮರ್ಥನೆ
18ನೇ ಶತಮಾನದ ಅವಧಿಯಲ್ಲಿ ಕಿತ್ತೂರು ಸಂಸ್ಥಾನವನ್ನು ರಾಣಿ ಚನ್ನಮ್ಮ ಆಳ್ವಿಕೆ ನಡೆಸಿದ್ದರು. ಕಿತ್ತೂರು ಸಂಸ್ಥಾನದ ಸ್ವಾತಂತ್ರಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿ ವೀರ ಮರಣ ಹೊಂದಿದ್ದರು. ಈ ಘಠನೆಯು ಭಾರತದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಅಂದಿನಿಂದ ಕಿತ್ತೂರನ್ನು ರಾಣಿ ಚನ್ನಮ್ಮರೊಂದಿಗೆ ಗುರುತಿಸಲಾಗಿರುವ ಐತಿಹಾಸಿಕ ಕಾರಣಗಳಿಂದಾಗಿ ಕಿತ್ತೂರನ್ನು ಚನ್ನಮ್ಮನ ಕಿತ್ತೂರು ಎಂದು ರೂಢಿಯಲ್ಲಿ ಕರೆಯಲಾಗುತ್ತಿದೆ ಎಂದು ವಿವರಿಸಲಾಗಿದೆ.
ಕಿತ್ತೂರು ಎಂದು ಕರೆಯಲ್ಪಡುತ್ತಿರುವ ಹಲವು ಗ್ರಾಮ, ಪಟ್ಟಣಗಳೂ ಇವೆ. ಚೆನ್ನಮ್ಮನ್ನ ಕಿತ್ತೂರು ಎಂದು ನಾಮಕರಣ ಮಾಡಿದರೆ ಕಿತ್ತೂರು ತಾಲೂಕನ್ನು ಗುರುತಿಸಲು ಅನುಕೂಲವಾಗಲಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕನ್ನು ಚನ್ನಮ್ಮನ ಕಿತ್ತೂರು ತಾಲೂಕು ಎಂದು ಮರು ನಾಮಕರಣ ಮಾಡಲು ಉದ್ದೇಶಿಸಿದೆ ಎಂದು ಕಂದಾಯ ಇಲಾಖೆಯು ಸಮರ್ಥಿಸಿಕೊಂಡಿದೆ.
ಕಿತ್ತೂರು ತಾಲೂಕನ್ನು ಚನ್ನಮ್ಮನ ಕಿತ್ತೂರು ತಾಲೂಕು ಎಂದು ಮರು ನಾಮಕರಣ ಮಾಡುವ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಅವರು 20022ರ ಜುಲೈ 30ರಂದೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಚನ್ನಮ್ಮನ ಕಿತ್ತೂರು ತಾಲೂಕು ಘೋಷಣೆಯ ಗೆಜೆಟ್ ಅಧಿಸೂಚನೆ ಪ್ರಕಟವಾಗಿ 10 ವರ್ಷಗಳ ಕಳೆದಿದೆ. ತಹಶೀಲ್ದಾರ್ ಹುದ್ದೆ ಸೃಜನೆಯಾಗಿ ಏಳು ವರ್ಷ ಆಗಿದೆ. ಆದರೆ ಹಲವು ಇಲಾಖೆಗಳ ಕಚೇರಿಗಳು ಇನ್ನೂ ಕಿತ್ತೂರಿನತ್ತ ಮುಖ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಡಿ ಬಿ ಇನಾಮದಾರ ಶಾಸಕರಿದ್ದಾಗ ಕಿತ್ತೂರಿಗೆ ಆಡಳಿತ ಸೌಧ ಮಂಜೂರಾಗಿತ್ತು. 10 ಕೋಟಿ ರು. ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಾಣವಾಗಿದೆ.
ಕಿತ್ತೂರು ಉತ್ಸವದ ಕೊಡುಗೆಯಾಗಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಐತಿಹಾಸಿಕ ಕಿತ್ತೂರನ್ನು ತಾಲೂಕು ಕೇಂದ್ರವೆಂದು ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಘೋಷಿಸಿದ್ದರು. ತಾಲೂಕು ಸ್ಥಾನಮಾನವನ್ನು ಪಡೆಯುವ ಮೂಲಕ ಕಿತ್ತೂರು, ರಾಜ್ಯದ 177ನೇ ಹಾಗೂ ಬೆಳಗಾವಿ ಜಿಲ್ಲೆಯ 11 ನೇ ತಾಲೂಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಿತ್ತೂರನ್ನು ಐತಿಹಾಸಿಕ ಹಿನ್ನೆಲೆಯ ಆಧಾರದ ಮೇಲೆ ತಾಲೂಕು ಎಂದು ಗುರುತಿಸಲಾಗಿತ್ತು.