ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ; ಇನ್ನೂ ಜಾರಿಯಾಗದ ಅಧಿಸೂಚನೆ, ಇಲಾಖೆಗೆ ಮರಳಿದ ಕಡತ

ಬೆಂಗಳೂರು; ಕನ್ನಡ ಭಾಷೆಯ ಸಮಗ್ರ ವಿಧೇಯಕಕ್ಕೆ ವಿಧಾನಮಂಡಲದ ಉಭಯ ಸದನಗಳಿಂದ ಒಪ್ಪಿಗೆ ಪಡೆದಿದ್ದ  ಹಿಂದಿನ ಬಿಜೆಪಿ ಸರ್ಕಾರವು ವಿಧೇಯಕದ ಅಧಿನಿಯಮವನ್ನು ಅಧಿಸೂಚನೆ ಮೂಲಕ ಜಾರಿಗೊಳಿಸಿರಲಿಲ್ಲ ಎಂಬ ಅಂಶವು ಇದೀಗ ಬಹಿರಂಗಗೊಂಡಿದೆ.

 

ವಾಣಿಜ್ಯ ಮಳಿಗೆಗಳಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸುವ ಸಂಬಂಧ  ಈಗಿನ ಕಾಂಗ್ರೆಸ್‌ ಸರ್ಕಾರವು ಈ ವಿಧೇಯಕಕ್ಕೆ ತಿದ್ದುಪಡಿ ತರಲು ಹೊರಟಿದೆಯಾದರೂ ವಿಧೇಯಕದ ಅಧಿನಿಯಮಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಜಾರಿಗೊಳಿಸಿದ ನಂತರವಷ್ಟೇ  ವಿಧೇಯಕಕ್ಕೆ ತಿದ್ದುಪಡಿ ಮಾಡುವುದು ಸೂಕ್ತ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಇಲಾಖೆಯು ಅಭಿಪ್ರಾಯಪಟ್ಟಿರುವುದು ಗೊತ್ತಾಗಿದೆ.

 

2024ರ ಫೆ.28ರೊಳಗೆ ವಾಣಿಜ್ಯ ಮಳಿಗೆಗಳಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಲಾಗುವುದು ಎಂದು ಗಡುವು ನೀಡಿರುವ ಬೆನ್ನಲ್ಲೇ ಇದೀಗ ಈ ವಿಧೇಯಕದ ಅಧಿನಿಯಮಕ್ಕೆ ಅಧಿಸೂಚನೆಯನ್ನೇ ಹೊರಡಿಸಿಲ್ಲ ಎಂಬ ಅಂಶವು ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಯೊಂದು ‘ದಿ ಫೈಲ್‌’ಗೆ (ಸಂವ್ಯಶಾಇ 196 ಪಶಾರ 2023)  ಲಭ್ಯವಾಗಿದೆ.

 

ಕನ್ನಡ ಭಾಷೆಯ ಸಮಗ್ರ ವಿಧೇಯಕವನ್ನು ಹಿಂದಿನ ಬಿಜೆಪಿ ಸರ್ಕಾರವು ವಿಧಾನಮಂಡಲದ ಉಭಯ ಸದನಗಳಿಂದ ಒಪ್ಪಿಗೆ ಪಡೆದು ಅಧಿನಿಯಮವನ್ನು ರೂಪಿಸಿತ್ತೇ ವಿನಃ ಅದಕ್ಕೆ ಅಧಿಸೂಚನೆ ಹೊರಡಿಸಿರಲಿಲ್ಲ. ಹೀಗಾಗಿ ಈ ವಿಧೇಯಕಕ್ಕೆ ತಿದ್ದುಪಡಿ ತರುವ ಮುನ್ನ ಮೊದಲು ಅಧಿನಿಯಮ ಜಾರಿಗೆ ತಂದ ನಂತರ ಪ್ರಸ್ತಾಪಿತ ತಿದ್ದುಪಡಿಯನ್ನು ಮಾಡುವುದು ಸೂಕ್ತ ಕ್ರಮವಾಗಿರುತ್ತದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಇಲಾಖೆಯು ಅಭಿಪ್ರಾಯಿಸಿದೆ.

 

ವಿಧೇಯಕದ ಪ್ರಕರಣದ 17ನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರಗಳ ಅನುಮೋದನೆ ಮತ್ತು ಮಂಜೂರಾತಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ, ಆಸ್ಪತ್ರೆಗಳು, ಹೋಟೆಲ್‌ ಮುಂತಾದವುಗಳ ಹೆಸರನ್ನು ಪ್ರದರ್ಶಿಸುವ ನಾಮಫಲಕಗಳಲ್ಲಿ ಪ್ರಧಾನವಾಗಿ ಶೇ.60ರಷ್ಟು ಭಾಗ ಕನ್ನಡವನ್ನು ಮೇಲ್ಬಾಗದಲ್ಲಿ ಬಳಸಲು ಉದ್ದೇಶಿಸಿದೆ. ಈ ಸಂಬಂಧ ಸಚಿವರ ಅನುಮೋದನೆ ಪಡೆದು ಅಧ್ಯಾದೇಶ ಹೊರಡಿಸಲು ಸಹಮತಿ ಪಡೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾನೂನು ಇಲಾಖೆಗೆ ಕಡತ ಕಳಿಸಿತ್ತು.

 

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 (2023ರ ಕರ್ನಾಟಕ ಅಧಿನಿಯಮ ಸಂಖ್ಯೆ;13) ರ ಪ್ರಕರಣ 1ರ ಉಪ-ಪ್ರಕರಣ (2)ರಲ್ಲಿ ರಾಜ್ಯ ಸರ್ಕಾರವು ಅಧಿಸೂಚನೆ ಮೂಲಕ ಗೊತ್ತುಪಡಿಸುವ ದಿನಾಂಕದಿಂದ ಜಾರಿಗೆ ಬರಬೇಕು. ಮತ್ತು ಈ ಅಧಿನಿಯಮದ ಬೇರೆ ಬೇರೆ ಉಪಬಂಧಗಳಿಗಾಗಿ ಬೇರೆ ಬೇರೆ ದಿನಾಂಕಗಳನ್ನು ಗೊತ್ತುಪಡಿಸಬಹುದು. ಇದರ ಕರಡು ಅಧಿಸೂಚನಯನ್ನು ಭವಿಷ್ಯವರ್ತಿಯಾಗಿ ಗೊತ್ತುಪಡಿಸಬೇಕಾದ ದಿನಾಂಖವನ್ನು ನಮೂದಿಸಿ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಅದರ ಪ್ರತಿಯನ್ನು ಇಲಾಖೆಗೆ ಕಳಿಸಿಕೊಡಬೇಕು ಎಂದು 2023ರ ಅಕ್ಟೋಬರ್‍‌ 12ರಂದು ಕೋರಿತ್ತು.

 

‘ಆದರೆ ಈ ವಿಧೇಯಕದ ಅಧಿನಿಯಮವನ್ನು ಜಾರಿಗೆ ತಂದಿರುವ ಕುರಿತು ಮಾಹಿತಿಯನ್ನು ಕನ್ನಡ ಸಂಸ್ಕೃತಿ ಇಲಾಖೆಯು ಕಡತದಲ್ಲಿ ಇರಿಸಿಲ್ಲ. ಹೀಗಾಗಿ ಅಧಿನಿಯಮವನ್ನು ಜಾರಿಗೆ ತಂದ ನಂತರ ಪ್ರಸ್ತಾಪಿತ ತಿದ್ದುಪಡಿಯನ್ನು ಮಾಡುವುದು ಸೂಕ್ತ ಕ್ರಮವಾಗಿರುತ್ತದೆ,’ ಎಂದು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಯು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

ಪ್ರಸ್ತಾಪಿತ ವಿಧೆಯಕದ ಉಪಬಂಧಗಳು ಭಾರತ ಸಂವಿಧಾನದ ಅನುಚ್ಛೇಧ 345ರ ಅಡಿಯಲ್ಲಿ ಬರುತ್ತದೆ. ವಿಧೇಯಕದ ಉಪಬಂಧಗಳು ಜಾರಿಯಲ್ಲಿರುವ ಕೇಂದ್ರದ ಅಧಿನಿಯಮಗಳ ಉಪಬಂಧಗಳಿಗೆ ವ್ಯತಿರಿಕ್ತವಾಗುವುದು ಕಂಡುಬರದೇ ಇರುವುದರಿಂದ ವಿಧೇಯಕವನ್ನು ರಾಷ್ಟ್ರಾಧ್ಯಕ್ಷರ ಪರ್ಯಾಲೋಚನೆಗಾಗಿ ಕಾಯ್ದಿರಿಸುವ ಅಗತ್ಯತೆ ಕಂಡು ಬರುವುದಿಲ್ಲ ಎಂದೂ ಇಲಾಖೆಯು ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಮತ್ತು ಕರ್ನಾಟಕಕ್ಕೆ ಸೇರಿದ ಜನರ ಉನ್ನತಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇದೇ ಮೊದಲ ಬಾರಿಗೆ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದೇ ವಿಧೇಯಕದಲ್ಲಿ ರಾಜಭಾಷಾ ಆಯೋಗದ ರಚನೆ, ಖಾಸಗಿ ಕೈಗಾರಿಕೆ, ಕಾರ್ಯಸಂಸ್ಥೆಗಳಲ್ಲಿ ಕರ್ನಾಟಕಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿ ಕಲ್ಪಿಸಲು ಈ ವಿಧೇಯಕದ ಮೂಲಕ ಸಮಗ್ರ ಕಾನೂನು ತಂದಿದೆ.

 

ಶಿಕ್ಷಣದಲ್ಲಿ ಕನ್ನಡ ಭಾಷೆ, ನ್ಯಾಯಾಲಯಗಳಲ್ಲಿನ ಭಾಷೆ, ಭಾಷೆ ಅಭಿವೃದ್ಧಿಗಾಗಿ ತೆಗೆದುಕೊಳ್ಳಬೇಕಾದ ಸಾಮಾನ್ಯ ಕ್ರಮಗಳು, ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆ ಬಳಕೆ, ಕನ್ನಡ ಭಾಷೆಯ ಅಭಿವೃದ್ದಿಗಾಗಿ ಪೋತ್ಸಾಹಕಗಳು, ರಿಯಾಯಿತಿ, ತೆರಿಗೆ ಸೋಡಿ, ಉದ್ಯೋಗ ಪೋರ್ಟಲ್‌, ನಿಯಮಗಳ ರಚನಾಧಿಕಾರ ಕುರಿತು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ ಆಡಳಿತದಲ್ಲಿ ಕನ್ನಡ ಅನುಷ್ಠಾನ, ಸರ್ಕಾರದ ಆದೇಶ, ಸುತ್ತೋಲೆ, ಅಧಿಕೃತ ಜ್ಞಾಪನ ಪತ್ರಗಳಿಗೆ ಈ ವಿಧೇಯಕದಿಂದ ಕಾನೂನಿನ ಮಾನ್ಯತೆ ದೊರಕಿದಂತಾಗುತ್ತದೆ.

 

‘ಎಲ್ಲಾ ವಲಯಗಳಲ್ಲಿ ಕನ್ನಡದ ಅಭಿವೃದ್ಧಿಗಾಗಿ ಮತ್ತು ರಾಜ್ಯದ ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಹಾಗೂ ಕನ್ನಡ ಭಾಷೆಯ ಪ್ರಸಾರ ಮತ್ತು ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳುವುದು, ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸಂಬಂಧಿಸಿದ ಚಟುವಟಿಕೆಗಳನ್ನು ಸಮನ್ವಯಗೊಳಿಸುವುದಕ್ಕೆ ತೆರಿಗೆ ವಿನಾಯಿತಿ, ಸಹಾಯನುದಾನ ಪ್ರಯೋಜನ ಪಡೆಯುತ್ತಿರುವ ಖಾಸಗಿ ಕೈಗಾರಿಕೆ ಮತ್ತು ಕಾರ್ಯ ಸಂಸ್ಥೆಗಳಲ್ಲಿ ಕರ್ನಾಟಕಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಒಂದು ಸಮಗ್ರ ಕಾನೂನು ತರುವುದು ಅಗತ್ಯ,’ವಾಗಿದೆ ಎಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಧೇಯಕವನ್ನು ಸಮರ್ಥಿಸಿಕೊಂಡಿತ್ತು.

 

‘ಭಾರತ ಸಂವಿಧಾನದ 346 ಮತ್ತು 347ನೇ ಅನುಚ್ಛೇಧಗಳೀಗೆ ಬಾಧಕವಾಗದಂತೆ ಕನ್ಡ ಭಾಷೆಯನ್ನು ರಾಜ್ಯದ ಎಲ್ಲಾ ಉದ್ದೇಶಗಳಿಗೆ ಬಳಸತಕ್ಕದ್ದು. ಭಾರತ ಸರ್ಕಾರ, ವಿದೇಶಿ ರಾಷ್ಟ್ರಗಳು, ಇತರ ರಾಜ್ಯಗಳು, ಉಚ್ಛ ನ್ಯಾಯಾಲಯ, ಸರ್ವೋಚ್ಛ ನ್ಯಾಯಾಲಯದೊಂದಿಗೆ ಪತ್ರ ವ್ಯವಹಾರಕ್ಕಾಗಿ ಹಾಗೂ ಕಾನೂನಿನ ಮೂಲಕ ಇಂಗ್ಲೀಷ್‌ ಭಾಷೆಯನ್ನು ಬಳಸಲೇಬೇಕಾದ ಯಾವುದೇ ಇತರ ಸಂದರ್ಭಗಳಲ್ಲಿ ಇಂಗ್ಲೀಷ್‌ ಭಾಷೆಯನ್ನು ಬಳಸಬಹುದು. ಭಾಷಾ ಅಲ್ಪಸಂಖ್ಯಾತರು ರಾಜ್ಯ ಸರ್ಕಾರದ ಸಚಿವಾಲಯದೊಂದಿಗೆ, ಇಲಾಖೆ ಮುಖ್ಯಸ್ಥರಗಳೊಂದಿಗೆ ಮತ್ತು ಇತರ ಸರ್ಕಾರಿ ಕಚೇರಿಗಳೊಂದಿಗೆ ಪತ್ರ ವ್ಯವಹಾರಕ್ಕಾಗಿ ತಮ್ಮ ಸ್ವಂತ ಭಾಷೆ ಅಥವಾ ಇಂಗ್ಲೀಷ್‌ ಭಾಷೆಯನ್ನು ಬಳಸಬಹುದು. ಅಂಥ ಸಂದರ್ಭಗಳಲ್ಲಿ ಪ್ರತ್ಯುತ್ತರಗಳು ಅವರವರ ಭಾಷೆಗಳಲ್ಲಿ ಅಥವಾ ಇಂಗ್ಲೀಷ್‌ ಭಾಷೆಯಲ್ಲಿ ಇರಬಹುದು,’ ಎಂಬ ಅಂಶವನ್ನು ವಿಧೇಯಕದಲ್ಲಿ ಸೇರಿಸಿತ್ತು.

 

ಕನ್ನಡವು ಸ್ಥಳೀಯ ಪ್ರಾಧಿಕಾರಗಳ ಅಧಿಕೃತ ಭಾಷೆಯಾಗಿರಬೇಕು ಎಂದು ವಿಧೇಯಕದಲ್ಲಿ ಸೇರಿಸಲಾಗಿದೆಯಲ್ಲದೆ ಕೇಂದ್ರ ಸರ್ಕಾರದ ಕಚೇರಿಗಳು, ಇತರೆ ರಾಜ್ಯ ಸರ್ಕಾರಗಳ ಕಚೇರಿಗಳು ಮತ್ತು ಮಹಾಲೇಖಪಾಲರ ಕಚೇರಿಗಳ ಜೊತೆ ಪತ್ರ ವ್ಯವಹಾರಗಳನ್ನು ನಡೆಸಲು ಇಂಗ್ಲೀಷ್‌ ಭಾಷೆಯನ್ನು ಬಳಸಬಹುದು ಎಂದೂ ಹೇಳಲಾಗಿತ್ತು.

 

ಭಾಷಾ ಅಲ್ಪಸಂಖ್ಯಾತರು ಸ್ಥಳೀಯ ಪ್ರಾಧಿಕಾರಗಳೊಂದಿಗೆ ಸಂವಹನಕ್ಕಾಗಿ ತಮ್ಮ ಭಾಷೆ ಅಥವಾ ಇಂಗ್ಲೀಷ್‌ ಭಾಷೆಯನ್ನು ಬಳಸಬಹುದು. ಮತ್ತು ಅಂಥ ಪ್ರಕರಣಗಳಲ್ಲಿ ಉತ್ತರಗಳು ಅವರವರ ಭಾಷೆ ಅಥವಾ ಇಂಗ್ಲೀಷ್‌ ಭಾಷೆಯಲ್ಲಿರಬಹುದು ಎಂದು ವಿವರಿಸಿತ್ತು.

 

ರಾಜಭಾಷಾ ಆಯೋಗ ಪುನರ್‌ ರಚನೆ

 

1963ರ ಕರ್ನಾಟಕ ರಾಜಭಾಷಾ ಅಧಿನಿಯಮದ 5ಎ ಪ್ರಕರಣಕ್ಕನುಸಾರವಾಗಿ ಅಧಿಕೃತ ಪಾಠಗಳನ್ನು ಸಿದ್ಧಪಡಿಸುವುದಕ್ಕಾಗಿ ಸರ್ಕಾರವು ಕಾಲಕಾಲಕ್ಕೆ ಕರ್ನಾಟಕ ರಾಜಭಾಷಾ (ವಿಧಾಯೀ) ಆಯೋಗದ ಬದಲಿಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಅಥವಾ ಶಾಸನ ರಚನಾ ಇಲಾಖೆ, ಕಾನೂನು ಇಲಾಖೆಯ ನಿವೃತ್ತ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜಭಾಷ ಆಯೋಗ ರಚಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಿತ್ತು.

 

 

ಅಲ್ಲದೆ ಭಾಷಾಂತರ ನಿರ್ದೇಶನಾಲಯವನ್ನು ಭಾಷಾಂತರ ಅಥವಾ ರಾಜಭಾಷ ಜಾರಿ ನಿರ್ದೇಶನಾಲಯ ಎಂದು ಮರುನಾಮಕರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕಂದಾಯ ವಿಭಾಗದಲ್ಲಿ ಭಾಷಾಂತರ ಮತ್ತು ರಾಜಭಾಷಾ ಜಾರಿ ನಿರ್ದೇಶನಾಲಯದ ವಿಭಾಗೀಯ ಕಚೇರಿ ಸ್ಥಾಪಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆ, ನಿರ್ದೇಶನಗಳ ಮೇರೆಗೆ ನಿಯತಕಾಲಿಕವಾಗಿ, ರಾಜಭಾಷೆಯ ಅನುಷ್ಠಾನದಲ್ಲಿ ಲೋಪ ದೋಷಗಳಾಗಿದ್ದಲ್ಲಿ ಸರ್ಕಾರ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು ಎಂದು ವಿಧೇಯಕದಲ್ಲಿ ವಿವರಿಸಿದೆ.

 

ಶಿಕ್ಷಣದಲ್ಲಿ ಕನ್ನಡ ಭಾಷೆ

 

ಕನ್ನಡ ಭಾಷಾ ಕಲಿಕೆ ಅಧಿನಿಯಮ 2015 (2015ರ ಕರ್ನಾಟಕ ಅಧಿನಿಯಮ 22)ಕ್ಕೆ ಬಾಧಕವಾಗದ್ಂತೆ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳು ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್‌ಗಳಲ್ಲಿ ಕನ್ನಡ ಭಾಷೆ ಕಲಿಸಬೇಕು. ಕರ್ನಾಟಕದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಮತ್ತು ಹೊರನಾಡು ಕನ್ನಡಿಗರಿಗೆ, ಗಡಿ ಕನ್ನಡಿಗರಿಗೆ ಉನ್ನತ ಶಿಕ್ಷಣದಲ್ಲಿ ರಾಜ್ಯ ಸರ್ಕಾರವು ಶೇಕಡವಾರು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂದು ವಿಧೇಯಕದಲ್ಲಿ ಹೇಳಿದೆ.

 

ಸಹಕಾರ ಸಂಘಗಳು, ರಾಜ್ಯ ಸರ್ಕಾರದ ಸಂಸ್ಥೆಗಳಲ್ಲಿನ ಉದ್ಯೋಗಕ್ಕಾಗಿ ಕನ್ನಡ ಭಾಷೆಯು ಅತ್ಯವಶ್ಯಕ ಭಾಷೆಯಾಗಿರಬೇಕು ಎಂಬ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆಯಲ್ಲದೆ ಉದ್ಯೋಗಕ್ಕೆ ನೇಮಕಾತಿ ಆಗುವ ಮುನ್ನ 10ನೇ ತರಗತಿಯ ಕನ್ನಡ ಪ್ರಥಮ ಭಾಷೆಗೆ ತತ್ಸಮಾನವಾದ, ಕರ್ನಾಟಕ ಲೋಕಸೇವಾ ಆಯೋಗದಿಂದ ಅಥವಾ ಸರ್ಕಾರದಿಂದ ಈ ಬಗ್ಗೆ ಅಧಿಸೂಚಿಸಲಾದ ಇತರ ಯಾವುದೇ ಏಜೆನ್ಸಿಯಿಂದ ನಡೆಸಲಾಗುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ಹೇಳಿದೆ.

 

ನ್ಯಾಯಾಲಯಗಳಲ್ಲಿನ ಭಾಷೆ

 

ಆಧೀನ ನ್ಯಾಯಾಲಯಗಳಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕನ್ನಡ ಭಾಷೆಯಲ್ಲಿ ತೀರ್ಪುಗಳನ್ನು ಉದ್ಘೋಷಿಸಲು ಕ್ರಮ ಕೈಗೊಳ್ಳುವ ಸಂಬಂಧ ಸರ್ಕಾರವು ಉಚ್ಛ ನ್ಯಾಯಾಲಯಕ್ಕೆ ಅಗತ್ಯವಾದ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಲಘು ವ್ಯಾಜ್ಯಗಳಲ್ಲಿ ಎಲ್ಲಾ ಆದೇಶಗಳೂ ಕನ್ನಡ ಭಾಷೆಯಲ್ಲಿಯೇ ಇರಬೇಕು. (ದಂಡ ಪ್ರಕ್ರಿಯಾ ಸಂಹಿತೆ 1973 (1974ರ ಕೇಂದ್ರ ಅಧಿನಿಯಮ 2)ರ 376ನೇ ಪ್ರಕರಣದ ವ್ಯಾಪ್ತಿಗೆ ಬರುವ ಪ್ರಕರಣಗಳು) ಅದೇ ರೀತಿ ಯಾವುದೇ ಇತರೆ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ ಸರ್ಕಾರದ ಅಧೀನದಲ್ಲಿನ ಎಲ್ಲಾ ಅರೆ ನ್ಯಾಯಿಕ ಪ್ರಾಧಿಕಾರಗಳ ಆದೇಶಗಳು ಅಥವಾ ತೀರ್ಪುಗಳು ಕನ್ನಡ ಭಾಷೆಯಲ್ಲಿರಬೇಕು ಎಂದಿದೆ.

 

 

 

ಭಾಷೆ ಅಭಿವೃದ್ಧಿ ಬಗ್ಗೆ ತೆಗೆದುಕೊಳ್ಳಬಹುದಾದ ಸಾಮಾನ್ಯ ಕ್ರಮ

 

ವಾಣಿಜ್ಯ ಕೈಗಾರಿಕೆಗಳು, ವ್ಯಾಪಾರ ಉದ್ಯಮ, ಟ್ರಸ್ಟ್‌, ಆಪ್ತ ಸಮಾಲೋಚನ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳ ಹೆಸರನ್ನು ಪ್ರದರ್ಶಿಸುವ ಫಲಕದ ಮೊದಲ ಅರ್ಧ ಭಾಗವು ಕನ್ನಡ ಭಾಷೆಯಲ್ಲಿರಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆಯಲ್ಲದೆ ರಸ್ತೆಗಳು, ಬಡಾವಣೆಗಳ ಹೆಸರೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು, ರಾಜ್ಯ ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾದ ಫಲಕಗಳಲ್ಲಿ ಪ್ರದರ್ಶಿಸುವ ವಿವರಗಳು ಸಹ ಕನ್ನಡ ಭಾಷೆಯಲ್ಲಿಯೇ ಇರತಕ್ಕದ್ದು ಎಂದು ಹೇಳಲಾಗಿದೆ.

 

ಹಾಗೆಯೆ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಪ್ರತಿಫಲವನ್ನು ಸ್ವೀಕರಿಸಿ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಕಲಾಗುವ ಪ್ರದರ್ಶನ ಫಲಕಗಳ ಮೊದಲ ಅರ್ಧಭಾಗದಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಅನುದಾನ, ರಿಯಾಯಿತಿಗಳನ್ನು ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಜಾಹೀರಾತುಗಳು, ರಸೀದಿಗಳು, ಬಿಲ್‌ಗಳು, ನೋಟೀಸ್‌, ರಾಜ್ಯದಲ್ಲಿ ಉತ್ಪಾದಿಸಿ ಮಾರಾಟ ಮಾಡಲಾಗುವ ಎಲ್ಲಾ ಕೈಗಾರಿಕಾ ಮತ್ತು ಇತರ ಉತ್ಪನ್ನಗಳಲ್ಲಿ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಗೆ ಸಂಬಂಧಿಸಿದಂತೆ ನಿರ್ದೇಶನಗಳೂ ಸೇರಿದಂತೆ ಇತರೆ ವಿಚಾರಗಳು ಕನ್ನಡ ಭಾಷೆಯಲ್ಲಿರಬೇಕು.

 

ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳು ಹೊರಡಿಸಿದ ಎಲ್ಲಾ ಟೆಂಡರ್‌ ಪ್ರಕಟಣೆಗಳು, ಜಾಹೀರಾತುಗಳು, ಅರ್ಜಿ ನಮೂನೆ, ಡಿಜಿಟಲ್‌ ನಮೂನೆ, ಪ್ರಮಾಣ ಪತ್ರಗಳು, ಅಧಿಸೂಚನೆಗಳು, ಕಾರ್ಯಕ್ರಮಗಳ ಕರಪತ್ರ, ಸೂಚನಾ ಪತ್ರ, ಸರ್ಕಾರಿ ಜಾಹೀರಾತುಗಳ ಅಳತೆಯ ಒಂದು ನಿಗದಿತ ಶೇಕಡವಾರು ಪ್ರಮಾಣವು ಸೇರಿದಂತೆ ಜಾಹೀರಾತುಗಳಲ್ಲಿ ಇಂಗ್ಲಿಷ್‌ ಭಾಷೆಯ ಬಳಕೆಯ ಅಗತ್ಯವಿರುವ ಕಡೆ ಹೊರತುಪಡಿಸಿ ಉಳಿದಂತೆ ಜಾಹೀರಾತುಗಳು ಕನ್ನಡ ಭಾಷೆಯಲ್ಲಿರಬೇಕು.

 

ಕನ್ನಡ ಭಾಷೆ ಸಮಗ್ರ ಅಭಿವೃದ್ಧಿಗೆ ವಿಧೇಯಕ; ಕಾನೂನಿನ ಮಾನ್ಯತೆಗೆ ಮುಂದಡಿಯಿಟ್ಟ ಪ್ರಾಧಿಕಾರ

 

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಕೆ

 

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಸಮರ್ಥ ಬಳಕೆಗಾಗಿ ಮುಕ್ತ ಲಭ್ಯತಾ ತಂತ್ರಾಂಶ ಮತ್ತು ಪರಿಕರಗಳನ್ನುಅಭಿವೃದ್ಧಿಪಡಿಸಬೇಕು. ಸರ್ಕಾರದ ವಿವಿಧ ಇಲಾಖೆಗಳು, ಸ್ಥಳೀಯ ಪ್ರಾಧಿಕಾರಗಳು, ಅರೆ ಸರ್ಕಾರಿ ಸಂಸ್ಥೆಗಳು, ಸಾರ್ವಜಿಕ ವಲಯ ಉದ್ಯಮಗಳು, ಸ್ವಾಯತ್ತ ಸಂಸ್ಥೆ, ಸಹಕಾರ ಸಂಘಗಳ ಜಾಲತಾಣಗಳಲ್ಲಿನ ಮಾಹಿತಿಯೂ ಸಹ ಕನ್ನಡ ಭಾಷೆಯಲ್ಲಿ ಯೂನಿಕೋಡ್‌ನಲ್ಲಿ ಲಭ್ಯವಾಗಿರಬೇಕು. ಹಾಗೂ ಅದರಲ್ಲಿ ಬಳಸಬೇಕಾದ ಯಾವುದೇ ಭಾಷೆಯನ್ನು ಆಯ್ಕೆ ಮಾಡುವುದಕ್ಕಾಗಿ ಜಾಲತಾಣವನ್ನು ಮಾರ್ಪಾಟುಗೊಳಿಸಬೇಕು.

 

 

ಉದ್ಯೋಗದಲ್ಲಿ ಮೀಸಲಾತಿ

 

ಪ್ರತಿಯೊಂದು ಕೈಗಾರಿಕೆ ಸಂಸ್ಥೆಯು ರಾಜ್ಯದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ 1ನೇ ತರಗತಿಯಿಂದ ಅರ್ಹತಾದಾಯಕ ಪರೀಕ್ಷೆಯ ಹಂತದವರೆಗೆ 7 ವರ್ಷಗಳಿಗಿಂತ ಕಡಿಮೆ ಇರದಂತೆ ವ್ಯಾಸಂಗ ಮಾಡಿರುವ ಕರ್ನಾಟಕ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ ತರಬೇತಿಗೆ ಅವಕಾಶ ಕಲ್ಪಿಸಬೇಕಕು. ಈ ಅಧಿನಿಯಮವು ಜಾರಿಯಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಒಬ್ಬ ಪ್ರತಿನಿಧಿಯನ್ನು ನೇಮಿಸಬೇಕು.

 

 

ಉದ್ಯೋಗ ಪೋರ್ಟಲ್‌

ರಾಜ್ಯ ಸರ್ಕಾರವೇ ಒಂದು ಉದ್ಯೋಗ ಪೋರ್ಟಲ್‌ನ್ನು ಸ್ಥಾಪಿಸಬೇಕು. ಇದರಲ್ಲಿ ಎಲ್ಲಾ ಸರ್ಕಾರಿ, ಸ್ಥಳೀಯ ಪ್ರಾಧಿಕಾರಗಳು, ಖಾಸಗಿ ಕೈಗಾರಿಕೆ ಸಂಸ್ಥೆಗಳು, ಏಜೆನ್ಸಿಯು ಭರ್ತಿ ಮಾಡಬೇಕಾದ ರಿಕ್ತ ಸ್ಥಾನಗಳುನ್ನು ಮತ್ತು ಅಂಥ ಉದ್ಯೋಗಕ್ಕಾಗಿ ಬೇಕಾಗಿರುವ ಕನ್ನಡ ಜ್ಞಾನದ ವಿವರಗಳನ್ನು ಕನ್ನಡದಲ್ಲಿಯೇ ಅಧಿಸೂಚಿಸಬೇಕು. ಒಂದು ವೇಳೆ ಈ ಅಧಿನಿಯಮವನ್ನು ಪಾಲಿಸದೇ ಇರುವುದನ್ನು ದುರ್ನಡತೆ ಎಂದು ಅರ್ಥೈಯಿಸಬೇಕು. ಇದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲನಾಗುವ ಯಾರೇ ಅಧಿಕಾರಿಯು, ಅಧಿಕೃತ ಅಧಿಕಾರಿಯು ನಿರ್ಧರಿಸಬಹುದಾದ ಶಿಕ್ಷೆಗೆ ಗುರಿಪಡಿಸಲು ಅವಕಾಶ ಕಲ್ಪಿಸಿರುವುದು ವಿಧೇಯಕದಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts