ಬಿಎಂಎಸ್‌ ಖಾಸಗಿ ವಿಶ್ವವಿದ್ಯಾಲಯ ಅಧಿಸೂಚನೆ ಪ್ರಕಟ; ವಿವಾದವನ್ನು ಮೈಮೇಲೆ ಎಳೆದುಕೊಂಡಿತೇ?

ಬೆಂಗಳೂರು; ಬಿ ಎಂ ಶ್ರೀನಿವಾಸಯ್ಯ ಎಜುಕೇಷನಲ್‌ ಟ್ರಸ್ಟ್‌, ಸಂಸ್ಥೆ ಹೊಂದಿರುವ ಜಮೀನುಗಳ ಕುರಿತಾದ ದಾಖಲೆ ಹಾಗೂ ವರದಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯು ಸರ್ಕಾರಕ್ಕೆ ಸಲ್ಲಿಸದೇ ಇದ್ದರೂ ಸಹ ಬಿ ಎಂ ಎಸ್‌ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮೋದನೆ ನೀಡಿ  ಹೊರಡಿಸಿರುವ ಅಧಿಸೂಚನೆಯು ವಿವಾದಕ್ಕೆ ಕಾರಣವಾಗಿದೆ.

 

ಅಲ್ಲದೇ ಇಡೀ ಬಿಎಂಎಸ್‌ ಸಾರ್ವಜನಿಕ ಶಿಕ್ಷಣ ದತ್ತಿಯ ಟ್ರಸ್ಟ್‌ ಡೀಡ್‌ ತಿದ್ದುಪಡಿ ಹಾಗೂ ಅಜೀವ ಟ್ರಸ್ಟಿಯ ನೇಮಕಾತಿಯ ಪ್ರಸ್ತಾವನೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕುರಿತಾದ  ದೂರರ್ಜಿ ವಿಚಾರಣೆ ಲೋಕಾಯುಕ್ತದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಆದರೂ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರು ಬಿಎಂಎಸ್‌ ವಿಶ್ವವಿದ್ಯಾಲಯ ಸ್ಥಾಪಿಸಲು ಹೊರಡಿಸಿದ ಅಧಿಸೂಚನೆಗೆ  ಅನುಮೋದಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಇನ್ನು,  ಮೂಲಭೂತ ಸೌಕರ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ಇನ್ನಿತರೆ ಸೌಕರ್ಯಗಳಿಗೆ ಸಂಬಂಧಿಸಿದಂತೆ ತಪಾಸಣೆ ನಡೆಸಿದೆ ಎಂದು ಹೇಳಿ, ನಂತರ  ಒಂದೇ ತಿಂಗಳಲ್ಲಿ  ಬಿಎಂಎಸ್‌ ಆಡಳಿತ ಮಂಡಳಿಯು ಸರ್ಕಾರಕ್ಕೆ ಯಾವುದೇ ವರದಿಯನ್ನು  ಸಲ್ಲಿಸಿಲ್ಲ ಎಂದು  ಸಂಸದೀಯ ವ್ಯವಹಾರಗಳ ಇಲಾಖೆಗೆ ಉನ್ನತ ಶಿಕ್ಷಣ ಇಲಾಖೆಯು ಅನಧಿಕೃತ ಟಿಪ್ಪಣಿ ಹೊರಡಿಸಿರುವುದು ಸಹ ಅನುಮಾನಗಳಿಗೆ ಕಾರಣವಾಗಿದೆ.

 

ಹೀಗಾಗಿ ಬಿಎಂಎಸ್‌ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ  ತರಾತುರಿಯಲ್ಲಿ ಹೊರಡಿಸಿರುವ ಅಧಿಸೂಚನೆಯ ಹಿಂದೆ ಉನ್ನತ ಶಿಕ್ಷಣ ಇಲಾಖೆಯ ಸಚಿವ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ವಹಿಸಿರುವ  ಪಾತ್ರವು ಸಂಶಯಾಸ್ಪದವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಈ ಕುರಿತು ‘ದಿ ಫೈಲ್‌’ ಇಡೀ ಪ್ರಕರಣವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದೆ.

 

ವರ್ಷ ಕಳೆದರೂ ವರದಿ ಸಲ್ಲಿಸದ ಜಿಲ್ಲಾಧಿಕಾರಿ

 

ಬಿ ಎಂ ಶ್ರೀನಿವಾಸಯ್ಯ ಎಜುಕೇಷನಲ್‌ ಟ್ರಸ್ಟ್‌, ಸಂಸ್ಥೆಯು ಹೊಂದಿರುವ ಜಮೀನುಗಳ ಕುರಿತಾದ ದಾಖಲೆ ಮತ್ತು ವರದಿಯನ್ನು ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2022ರ ಡಿಸೆಂಬರ್‍‌ 12ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದಿದ್ದರು.

 

ಬೆಂಗಳೂರಿನ ಬಸವನಗುಡಿ ರಸ್ತೆಯಲ್ಲಿರುವ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ 15 ಎಕರೆ 3.72 ಗುಂಟೆ ಜಮೀನನ್ನು ಮೈಸೂರು ಸರ್ಕಾರದಿಂದ ಖರೀದಿಸಿದ ಹಾಗೂ ಬೆಂಗಳೂರು ಸಿಟಿ ಕಾರ್ಪೋರೇಷನ್‌ನಿಂದ ದಾನ ಪಡೆದ ಭೂಮಿಯಾಗಿದೆ ಎಂದು ಹೇಳಿತ್ತು. ಈ ಎರಡೂ ಪತ್ರಗಳ ನೈಜತೆ ಮತ್ತು ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ವಿವರದೊಂದಿಗೆ ಪರಿಶೀಲಿಸಿ ವಸ್ತುನಿಷ್ಠ ವರದಿ ನೀಡಬೇಕು ಮತ್ತು ಸದರಿ ಜಮೀನು ಪ್ರಸ್ತುತ ಸರ್ಕಾರಿ ಜಮೀನು, ಭೂಮಿ ಆಗಿಲ್ಲವೆಂಬ ಬಗ್ಗೆ ದಾಖಲೆ ನೀಡಬೇಕು ಎಂದು ಸೂಚಿಸಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಆವಲಹಳ್ಳಿಯಲ್ಲಿ ಸುಮಾರು 21 ಎಕರೆ 20 ಗುಂಟೆ ಜಮೀನನ್ನು ಹೊಂದಿರುವ ಪೈಕಿ ಇದರಲ್ಲಿ 12.25 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರದಿಂದ ಮಂಜೂರು ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದು ಪತ್ರದಲ್ಲಿ ನಿರ್ದೇಶಿಸಲಾಗಿತ್ತು.

 

ಬಿ ಎಂ ಶ್ರೀನಿವಾಸಯ್ಯ ಎಜುಕೇಷನಲ್‌ ಟ್ರಸ್ಟ್‌ ಹೊಂದಿರುವ 27 ಎಕರೆ ಜಮೀನಿನ ಒಡೆತನದ ಬಗ್ಗೆ ಕಂದಾಯ ದಾಖಲೆ ಪರಿಶೀಲಿಸಬೇಕು ಮತ್ತು ಅದರ ಕ್ರಮಬದ್ಧತೆ ಬಗ್ಗೆ ವರದಿ ನೀಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಪತ್ರದಲ್ಲಿ ಸೂಚಿಸಿದ್ದರು ಎಂಬುದು ತಿಳಿದು ಬಂದಿದೆ.

 

ಆದರೆ ಈ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿಯು ವರ್ಷ ಕಳೆದರೂ ಈ ಸಂಬಂಧ ಯಾವುದೇ ವರದಿ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

 

ಉನ್ನತ ಶಿಕ್ಷಣ ಇಲಾಖೆಯ ಅನುಮಾನಸ್ಪದ ನಡೆ

 

ಖಾಸಗಿ ವಿಶ್ವವಿದ್ಯಾಲಯಗಳು ಹೊಂದಿರುವ ಮೂಲಭೂತ ಸೌಕರ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ಇನ್ನಿತರೆ ವಿವರಗಳನ್ನೊಳಗೊಂಡ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಂದಕುಮಾರ್‍‌ ಅವರು 2023ರ ಜುಲೈ 17ರಂದು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಗೆ ಅನಧಿಕೃತ ಟಿಪ್ಪಣಿ ಹೊರಡಿಸಿದ್ದರು. ಇದೇ ಟಿಪ್ಪಣಿಯಲ್ಲಿ ಬಿಎಂಎಸ್‌ ವಿಶ್ವವಿದ್ಯಾಲಯದ ಹೆಸರೂ ಕೂಡ ಇತ್ತು.

 

ಆದರೆ ಉನ್ನತ ಶಿಕ್ಷಣ ಇಲಾಖೆಯು 2023ರ ಡಿಸೆಂಬರ್‍‌ 13ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ 2023ರ ಜುಲೈ 4ರಂದೇ ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ ಮೂಲಭೂತ ಸೌಕರ್ಯ ಹೊಂದಿದೆ ಮತ್ತು ಈ ಸಂಬಂಧ ವರದಿಯನ್ನೂ ಸಲ್ಲಿಸಿದೆ ಎಂದು ಉಲ್ಲೇಖಿಸಿದೆ.

 

ಅಧಿಸೂಚನೆ ಪ್ರಕಾರ ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಹೊಂದಿದೆ ಎಂದು ತಪಾಸಣೆ ಮತ್ತು ವರದಿ ಸಲ್ಲಿಸಿದೆ ಎಂದಾದ ಮೇಲೆ ಮೂಲಭೂತ ಸೌಕರ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ಇನ್ನಿತರೆ ವಿವರಗಳನ್ನೊಳಗೊಂಡ ಪ್ರಸ್ತಾವನೆಗಳನ್ನು ಬಿಎಂಎಸ್‌ ಟ್ರಸ್ಟ್‌  ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು  2023ರ ಜುಲೈ 17ರಂದು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಗೆ  ಅನಧಿಕೃತ ಟಿಪ್ಪಣಿ ಬರೆದಿದ್ದೇಕೆ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

 

ಈ ಪ್ರಕ್ರಿಯೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ನಡೆಯೇ ಅನುಮಾನಸ್ಪದವಾಗಿರುವುದು ಮೇಲಿನ ಎರಡೂ ಬೆಳವಣಿಗೆಗಳಿಂದ ಕಂಡು ಬಂದಿದೆ.

 

ಬಿಎಂಎಸ್‌ ಎಜುಕೇಷನಲ್ ಟ್ರಸ್ಟ್‌ ಸ್ಥಾಪಿಸಲು ಉದ್ದೇಶಿಸಿರುವ ಖಾಸಗಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಧಿಸೂಚನೆಯ ಸುತ್ತ ಇಷ್ಟೆಲ್ಲಾ ಅನುಮಾನಸ್ಪದ ಚಟುವಟಿಕೆಗಳು ನಡೆದಿದ್ದರೂ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರು 2023ರ ಸೆ 9ರಂದೇ ಅಧಿಸೂಚನೆಗೆ ಅನುಮೋದನೆ ನೀಡಿರುವುದು ಸಂಶಯಗಳಿಗೆ ಕಾರಣವಾಗಿದೆ.

 

ಸಚಿವರ ಅನುಮೋದನೆ ಪಡೆದ 2 ತಿಂಗಳಲ್ಲೇ ಅಂದರೆ 2023ರ ಡಿಸೆಂಬರ್‍‌ 13ರಂದು ಬಿಎಂಎಸ್‌ ಖಾಸಗಿ ವಿಶ್ವವಿದ್ಯಾಲಯದ ಅಧಿಸೂಚನೆಯು ಹೊರಬಿದ್ದಿದೆ.

 

ಅಂದಾಜು 2,000 ಕೋಟಿಗೂ ಹೆಚ್ಚು ಸಂಪತ್ತು ಹೊಂದಿರುವ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್‌ ಸಾರ್ವಜನಿಕ ಶಿಕ್ಷಣ ದತ್ತಿಯ ಟ್ರಸ್ಟ್‌ ಡೀಡ್‌ ತಿದ್ದುಪಡಿ ಹಾಗೂ ಅಜೀವ ಟ್ರಸ್ಟಿಯ ನೇಮಕಾತಿಯ ಪ್ರಸ್ತಾವನೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರಸಮಿತಿಯು  ನೀಡಿದ್ದ ದೂರು ಲೋಕಾಯುಕ್ತದಲ್ಲಿ ಈಗಲೂ  ತೆವಳುತ್ತಿದೆ. ಈ  ನಡುವೆಯೇ ಬಿಎಂಎಸ್‌ ವಿಶ್ವವಿದ್ಯಾಲಯ ಕಾಯ್ದೆ 2023 ರೂಪಿಸುವ ಉದ್ದೇಶದಿಂದ ತರಾತುರಿಯಲ್ಲಿ  ಹಿಂದಿನ  ಬಿಜೆಪಿ ಸರ್ಕಾರವು  ಮಸೂದೆ ಮಂಡಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು.

 

ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರು ಬಿಎಂಎಸ್‌ ಟ್ರಸ್ಟ್‌ ಡೀಡ್‌ ತಿದ್ದುಪಡಿ ಪ್ರಸ್ತಾವನೆ ತಿರಸ್ಕೃತಗೊಳಿಸಿದ್ದರು. ಹಾಲಿ ಬಿಜೆಪಿ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಇದೇ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು. ಈ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು 2022ರ ಅಕ್ಟೋಬರ್‌ 18ರಂದು ನೀಡಿದ್ದ ದೂರು ಇದುವರೆಗೂ ಅಪರ ವಿಚಾರಣಾಧಿಕಾರಿಗಳು (11) (LOK/BCD/4174/2022) ಬಳಿ ಇದೆ. ಈ ಅರ್ಜಿ ವಿಚಾರಣೆಯು 2024ರ ಜನವರಿ 9ಕ್ಕೆ ನಿಗದಿಯಾಗಿದೆ.

ಬಿಎಂಎಸ್‌ ಖಾಸಗಿ ವಿವಿ; ಮಸೂದೆ ಹಿಂದೆ ನೀತಿ ಭ್ರಷ್ಟಾಚಾರ ಆರೋಪ 3 ತಿಂಗಳಾದರೂ ನಡೆಯದ ಲೋಕಾ ವಿಚಾರಣೆ

 

ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಕುಮಾರನಾಯಕ್‌ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಹಾಲಿ ಉಪ ಕಾರ್ಯದರ್ಶಿ ವೆಂಕಟೇಶಯ್ಯ (ಹಿಂದಿನ ಅಧೀನ ಕಾರ್ಯದರ್ಶಿ) ಕಡತದಲ್ಲಿದ್ದ ಲಿಖಿತ ಆಕ್ಷೇಪಣೆಗಳನ್ನು ಕಸದಬುಟ್ಟಿಗೆ ಎಸೆದಿದ್ದರು. ಅಲ್ಲದೆ 2019ರಲ್ಲಿ (ED 124TEC P1 2018) ಕಡತವನ್ನು ತೆರೆದಿದ್ದರು.

 

ಹಾಗೆಯೇ ಈ ಕಡತವನ್ನು 2020ರ ಮಾರ್ಚ್‌ 17ರಂದು ಉನ್ನತ ಶಿಕ್ಷಣ ಸಚಿವರ ಕಚೇರಿಗೆ ರವಾನಿಸಲಾಗಿದೆ. ಬಳಿಕ ಒಂದು ವರ್ಷದ ನಂತರ ಅಂದರೆ ಯಡಿಯೂರಪ್ಪ ಅವರ ಅಧಿಕಾರದ ಕೊನೆಯ ದಿನಗಳಲ್ಲಿ ಈ ಕಡತಕ್ಕೆ ( ED 124TEC P1 2018) ಅನುಮೋದನೆ ಪಡೆದುಕೊಂಡಿದ್ದರು.

 

ಕಾನೂನುಬಾಹಿರವೆಂದು ಹೇಳಲಾಗಿರುವ ಪ್ರಸ್ತಾವನೆಯನ್ನು ಬಿಎಂಎಸ್‌ ಶಿಕ್ಷಣ ದತ್ತಿಯ ಟ್ರಸ್ಟಿಗಳಾದ ರಾಗಿಣಿ ನಾರಾಯಣ್‌, ಪಿ ದಯಾನಂದ ಪೈ, ಮದನಗೋಪಾಲ್‌ (ನಿವೃತ್ತ ಐಎಎಸ್‌ ) ಅವಿರಾಮ್‌ ಶರ್ಮಾ (ರಾಗಿಣಿ ನಾರಾಯಣ್‌ ತಂಗಿ ಮಗ) ಹಾಗೂ ಸರ್ಕಾರದ ನಾಮನಿರ್ದೇಶಿತ ಟ್ರಸ್ಟಿಗಳಿಂದ ತಿದ್ದುಪಡಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಕುರಿತು ‘ದಿ ಫೈಲ್‌’ 2022ರ ಸೆಪ್ಟಂಬರ್‌ 22ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಬಿಎಂಎಸ್‌ ಶಿಕ್ಷಣ ದತ್ತಿ; ಹೆಚ್‌ಡಿಕೆ ತಿರಸ್ಕರಿಸಿದ್ದ ಟ್ರಸ್ಟ್‌ಡೀಡ್‌ ತಿದ್ದುಪಡಿ ಪ್ರಸ್ತಾವನೆಗೆ ಅನುಮೋದನೆ

ಶಿಕ್ಷಣ ದತ್ತಿಯ ಟ್ರಸ್ಟ್‌ ಡೀಡ್‌ ತಿದ್ದುಪಡಿಗಾಗಲೀ, ಟ್ರಸ್ಟಿಗಳ ನೇಮಕಾತಿಯಾಗಲೀ ಮಾಡಲು ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. ಈ ವಿಷಯಗಳು ಸಿವಿಲ್‌ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುತ್ತವೆ. ಹಾಗಿದ್ದರೂ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಕಾರ್ಯವ್ಯಾಪ್ತಿ ಮೀರಿ ಅಧಿಕಾರ ದುರ್ಬಳಕೆಪಡಿಸಿಕೊಂಡು ಸಾರ್ವಜನಿಕ ದತ್ತಿಯನ್ನು ಖಾಸಗಿ ದತ್ತಿಯನ್ನಾಗಿ ಪರಿವರ್ತಿಸಲು ನೆರವಾಗಿರುವುದು (ಸರ್ಕಾರದ ಪತ್ರ ED 128 TEC 2018, 31-03-2021) ಸ್ಪಷ್ಟವಾಗಿದೆ. ಹಾಗೆಯೇ ಈ ಪತ್ರದ ಬಗ್ಗೆ ಹಲವಾರು ಲಿಖಿತ ದೂರುಗಳಿದ್ದರೂ ಸರ್ಕಾರವು ಯಾವುದೇ ಕ್ರಮತೆಗೆದುಕೊಂಡಿರಲಿಲ್ಲ.

 

ಬಿಎಂಎಸ್‌ ಶಿಕ್ಷಣ ದತ್ತಿ ಅಡಿಯಲ್ಲಿರುವ ಎರಡು ಅನುದಾನಿತ ಸಂಸ್ಥೆಗಳಿಗೆ ಸರ್ಕಾರವು 1952ರಿಂದ ಇಲ್ಲಿಯವರೆಗೆ ಸುಮಾರು 800 ಕೋಟಿ ರು ಗೂ ಅಧಿಕ ಅನುದಾನ ನೀಡಿದೆ. ಹೈಕೋರ್ಟ್‌ (ಮೊಕದ್ದಮೆ ಸಂಖ್ಯೆ RFA 788/2009) ಮಾಡಿದ್ದ ಆದೇಶದ ಪ್ರಕಾರ ಬಿಎಂಎಸ್‌ ಶಿಕ್ಷಣ ದತ್ತಿಗೆ ಟ್ರಸ್ಟಿಗಳ ನೇಮಕಾತಿ ಬಗ್ಗೆ ನಿರ್ದಿಷ್ಟ ನಿಯಮಾವಳಿಗಳನ್ನು ಸೂಚಿಸಿದೆ. ಮತ್ತು ಬಿಎಂಎಸ್‌ ಶಿಕ್ಷಣ ದತ್ತಿಯು ಆದಾಯ ತೆರಿಗೆ ಇಲಾಖೆಯಿಂದ 80 ಜಿ ವಿನಾಯಿತಿ ಹೊಂದಿರುವುದರಿಂದ ಯಾವುದೇ ಟ್ರಸ್ಟ್ ಡೀಡ್‌ಗೆ ತಿದ್ದುಪಡಿಯಾಗಲೀ ಅಥವಾ ಟ್ರಸ್ಟಿಗಳ ನೇಮಕಾತಿಯಾಗಲೀ ಆದಾಯ ತೆರಿಗೆ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಇದನ್ನು ಪಡೆದಿಲ್ಲ ಎಂದು ದೂರಿನಲ್ಲಿ ಆರೋಪಿಸಿದೆ.

 

ದಯಾನಂದ ಪೈ ಮತ್ತು ರಾಗಿಣಿ ನಾರಾಯಣ ಅವರು ಬಿಎಂಎಸ್‌ ಶಿಕ್ಷಣ ಸಂಸ್ಥೆಯ ಸಂಪೂರ್ಣ ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರ ಬೆಂಬಲವಿದೆ ಮತ್ತು ಹಿಂದಿನ ಮುಖ್ಯಮಂತ್ರಿಯವರ ಅವಧಿಯಲ್ಲಿ ಕಾಣದ ಕೈಗಗಳು ಟ್ರಸ್ಟಿಗಳ ಬದಲಾವಣೆಗೆ ಸಂಬಂಧಿಸಿದಂತೆ ಕಡತಕ್ಕೆ ಸಹಿ ಹಾಕಿಸಿಕೊಂಡಿವೆ. ಭಾರೀ ಅಕ್ರಮ ನಡೆದಿರುವುದರಿಂದ ಟ್ರಸ್ಟ್‌ ಮತ್ತು ಟ್ರಸ್ಟ್‌ನ ಎಲ್ಲಾ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಸದನದಲ್ಲಿ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಿದ್ದನ್ನು ಸ್ಮರಿಸಬಹುದು.

ಬಿಎಂಎಸ್‌ ಟ್ರಸ್ಟ್‌ಡೀಡ್‌ ತಿದ್ದುಪಡಿ; ಅಧಿವೇಶನದಲ್ಲಿ ಬಹಿರಂಗಗೊಳ್ಳುವ ಮುನ್ನವೇ ಹೊರಗೆಳೆದಿದ್ದು ‘ದಿ ಫೈಲ್‌’

ಬಿಎಂಎಸ್‌ ಎಜುಕೇ‍ಷನಲ್‌ ಟ್ರಸ್ಟ್‌ ಕುರಿತಾಗಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದ್ದರೂ ಸಹ ಈಗಿನ ಕಾಂಗ್ರೆಸ್‌ ಸರ್ಕಾರವು ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿರುವುದು ಸಾಕಷ್ಟು ವಿವಾದಕ್ಕೆ ದಾರಿಮಾಡಿಕೊಡುವ ಸಾಧ್ಯತೆಗಳಿವೆ.

SUPPORT THE FILE

Latest News

Related Posts